ರಕ್ಷಣೆ ಕೋರಿ ಎಸ್​ಪಿ ಕಚೇರಿಗೆ ಬಂದ ಅನ್ಯಕೋಮಿನ ಪ್ರೇಮಿಗಳು; ಪೊಲೀಸರ ಎದುರೇ ಸಂಬಂಧಿಕರಿಂದ ಹಲ್ಲೆ

ಪೊಲೀಸರ ಎದುರೇ ನಮಗೆ ಹಲ್ಲೆ ಮಾಡಿದ್ದಾರೆ. ನಮಗೆ ಇನ್ನಷ್ಟು ಜೀವ ಭಯ ಹೆಚ್ಚಾಗಿದೆ  ಎಂದು ಪ್ರೇಮಿಗಳಾದ ನವೀನ್ ಹಾಗೂ ಮಹಜಬಿನ್ ಅಳಲು ತೋಡಿಕೊಂಡಿದ್ದಾರೆ. ಪ್ರೇಮಿಗಳು ರಕ್ಷಣೆ ಕೋರಿ ಕಚೇರಿಗೆ ಬಂದಿದ್ದಾರೆ. ರಕ್ಷಣೆ ಕೊಡಲಾಗುವುದು. ಕಚೇರಿಯಲ್ಲಿ ಹಲ್ಲೆ ಮಾಡಿದ್ದು ಗೊತ್ತಿಲ್ಲ ಎನ್ನುತ್ತಾರೆ ಎಸ್ಪಿ ಲೋಕೇಶ್ ಜಗಲಾಸರ.

ಎಸ್​ಪಿ ಕಚೇರಿಯಲ್ಲಿ ಯುವತಿ ಮೇಲೆ ಹಲ್ಲೆ ಮಾಡುತ್ತಿರುವುದು.

ಎಸ್​ಪಿ ಕಚೇರಿಯಲ್ಲಿ ಯುವತಿ ಮೇಲೆ ಹಲ್ಲೆ ಮಾಡುತ್ತಿರುವುದು.

  • Share this:
ಬಾಗಲಕೋಟೆ (ಫೆ,26): ಬಾಗಲಕೋಟೆಯಲ್ಲಿ ಅನ್ಯಕೋಮಿನ ಯುವಕನೊಂದಿಗೆ ಪ್ರೇಮ ವಿವಾಹವಾದ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಬಂದಿದ್ದ ಯುವತಿಗೆ ಆಕೆಯ ಸಂಬಂಧಿಕರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸರ ಎದುರಲ್ಲೇ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಯಾವುದೇ ಜಾತಿ, ಧರ್ಮ ಪ್ರೀತಿ ಎದುರು ಎಲ್ಲವೂ ಶೂನ್ಯ ಎಂಬುದಕ್ಕೆ ಇಲ್ಲಿನ ಅನ್ಯಕೋವಿಗೆ ಸೇರಿದ ಪ್ರೇಮಿಗಳೆ ಸಾಕ್ಷಿ.

ಬಾಗಲಕೋಟೆಯ ನವನಗರದ ಸೆಕ್ಟರ್ ನಂ44 ರ  24ವರ್ಷದ  ನವೀನ ಭಜಂತ್ರಿ  19ವರ್ಷದ  ಮಹಜಬಿನ್ ಮಂಟೂರು ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ನವೀನ್  ಭಜಂತ್ರಿ ಐಟಿಐ ಮುಗಿಸಿ, ಖಾಸಗಿ ಬ್ಯಾಂಕ್ ವೊಂದರಲ್ಲಿ ನೌಕರ. ಯುವತಿ ಮಹಜಬಿನ್ ಪಿಯುಸಿ ಓದಿದ್ದಾರೆ. ನವನಗರದಲ್ಲಿ ಅಕ್ಕಪಕ್ಕ ಮನೆಗಳು ಇವರಿಬ್ಬರ ಮಧ್ಯೆ ಸ್ನೇಹ ಬೆಳೆದು, ಸ್ನೇಹ ಪ್ರೀತಿಗೆ ತಿರುಗಿದೆ. ಕಳೆದ 7ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಈಚೆಗೆ 1 ವರ್ಷದ ಹಿಂದೆ ಯುವತಿ ಮನೆಯವರಿಗೆ ಇವರಿಬ್ಬರ ಪ್ರೀತಿ ಗೊತ್ತಾಗಿ ವಿರೋಧಿಸಿದ್ದಾರೆ. ಬಳಿಕ ಯುವತಿಗೆ ಬೇರೆ ಕಡೆ ಮದುವೆ ಮಾಡಿಕೊಡಲು ಮುಂದಾಗಿದ್ದಾರೆ. ಹೀಗಾಗಿ ಇವರಿಬ್ಬರು ಫೆ. 16ರಂದು ನಗರದ ಹೊರವಲಯದಲ್ಲಿರುವ ಮಲ್ಲಯ್ಯನ ಗುಡಿಯಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ ಜೋಡಿಗಳು ಇವತ್ತು ಬೆಳಿಗ್ಗೆ ರಕ್ಷಣೆ ಕೋರಿ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದಾರೆ. ಈ ವೇಳೆ ಯುವತಿ ತಂದೆ ಸಲೀಂ ಸಹೋದರ ಅಹ್ಮದ್  ಅಲಿ ಕಚೇರಿಗೆ ಆಗಮಿಸಿ ಪೊಲೀಸರ ಎದುರೇ ಮಹಜಬಿನ್ ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಅಲ್ಲದೇ ಪ್ರೇಮಿ ನವೀನ್ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದಾರೆ.

ಇದನ್ನು ಓದಿ: ನೀರವ್ ಮೋದಿ ಬಂಧಿಸಿಡಲು ಸಿದ್ಧವಾಗಿದೆ ಮುಂಬೈನ ಅರ್ಥರ್ ರಸ್ತೆಯ ಜೈಲಿನ ವಿಶೇಷ ಕೊಠಡಿ

ಬಳಿಕ ಎಸ್ಪಿ ಲೋಕೇಶ್ ಜಗಲಾಸರ ಭೇಟಿ ಮಾಡಿದ ಪ್ರೇಮಿಗಳು ರಕ್ಷಣೆ ಕೋರಿ, ವಿವಾಹ ನೋಂದಣಿ ಮಾಡಿಸಲು ಅವಕಾಶ ಮಾಡಿಕೊಡಬೇಕು. ನಮಗೆ ಜೀವ ಬೆದರಿಕೆಯಿದೆ, ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕಚೇರಿ ಹೊರಗೆ ಬಂದ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಅವರಿಗೆ ಮಗಳನ್ನು ನಮ್ಮೊಂದಿಗೆ ಕಳುಹಿಸಿ ಎಂದು ಪೋಷಕರು ಬೇಡಿಕೊಂಡಿದ್ದಾರೆ. ಅವರಿಬ್ಬರು ವಯಸ್ಕರು, ಪ್ರೀತಿಸಿ ಮದುವೆಯಾಗಿದ್ದಾರೆ ಎಂದು ಎಸ್​ಪಿ ಹೇಳಿದಾಗ ಯುವತಿಗೆ ಕೊಲೆ ಬೆದರಿಕೆ ಹಾಕಿ, ಎಸ್ಪಿ ಕಾಲಿಗೆ ಬಿದ್ದು ಕೈಮುಗಿದು  ಗೋಳಾಡಿದ ಘಟನೆ ನಡೆಯಿತು.

ಇನ್ನು ಪೊಲೀಸರು ನವಜೋಡಿಯನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ನವನಗರ ಪೊಲೀಸ್ ಠಾಣೆಯಲ್ಲಿ ರಕ್ಷಣೆ ನೀಡಿದ್ದಾರೆ. ನಾವಿಬ್ಬರೂ ಪ್ರೀತಿಸಿ ಮದುವೆಯಾಗಿದ್ದೇವೆ. ನಮಗೆ ಜೀವ ಬೆದರಿಕೆಯಿದೆ. ನಮಗೆ ರಕ್ಷಣೆ ಬೇಕು. ರಿಜಿಸ್ಟರ್ ಮದುವೆಯಾಗಲು ಅವಕಾಶ ಕೊಡಬೇಕು. ಪೊಲೀಸರ ಎದುರೇ ನಮಗೆ ಹಲ್ಲೆ ಮಾಡಿದ್ದಾರೆ. ನಮಗೆ ಇನ್ನಷ್ಟು ಜೀವ ಭಯ ಹೆಚ್ಚಾಗಿದೆ  ಎಂದು ಪ್ರೇಮಿಗಳಾದ ನವೀನ್ ಹಾಗೂ ಮಹಜಬಿನ್ ಅಳಲು ತೋಡಿಕೊಂಡಿದ್ದಾರೆ. ಪ್ರೇಮಿಗಳು ರಕ್ಷಣೆ ಕೋರಿ ಕಚೇರಿಗೆ ಬಂದಿದ್ದಾರೆ. ರಕ್ಷಣೆ ಕೊಡಲಾಗುವುದು. ಕಚೇರಿಯಲ್ಲಿ ಹಲ್ಲೆ ಮಾಡಿದ್ದು ಗೊತ್ತಿಲ್ಲ ಎನ್ನುತ್ತಾರೆ ಎಸ್ಪಿ ಲೋಕೇಶ್ ಜಗಲಾಸರ.
Published by:HR Ramesh
First published: