• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ವಿದ್ಯಾ-ಇರ್ಷಾದ್ ಮದುವೆಗೆ ‘ಧರ್ಮ’ಸಂಕಟ; ಮಧ್ಯರಾತ್ರಿ ಕಾಣೆಯಾದ ಪ್ರೇಮಿಗಳ ದುರಂತ ಅಂತ್ಯ!

ವಿದ್ಯಾ-ಇರ್ಷಾದ್ ಮದುವೆಗೆ ‘ಧರ್ಮ’ಸಂಕಟ; ಮಧ್ಯರಾತ್ರಿ ಕಾಣೆಯಾದ ಪ್ರೇಮಿಗಳ ದುರಂತ ಅಂತ್ಯ!

ವಿದ್ಯಾ-ಇರ್ಷಾದ್

ವಿದ್ಯಾ-ಇರ್ಷಾದ್

ಥೇಟ್​ ಸಿನಿಮಾ ರೀತಿ ತರಾತುರಿಯಲ್ಲಿ ವಿದ್ಯಾಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯಿಸಿದ್ದರು. ನನಗೆ ಈ ಮದುವೆ ಬೇಡ, ಇರ್ಷಾದ್​ಗೆ ಮನಸ್ಸು ಕೊಟ್ಟಾಗಿದೆ ಎಂದು ವಿದ್ಯಾ ಎಷ್ಟೇ ಗೋಳಾಡಿದ್ರು ಹೆತ್ತವರು ಕೇಳಲಿಲ್ಲ.

  • Share this:

    ಹಾವೇರಿ : ಅವರಿಬ್ಬರದ್ದು ಮೂರು ವರ್ಷಗಳ ಪ್ರೀತಿ. ವಯಸ್ಸು 20 ದಾಟುವ ಮುನ್ನವೇ ಬದುಕಿನ ಕೊನೆಯವರೆಗೂ ಜೊತೆಯಾಗಿ ಬಾಳುವ ಕನಸು ಕಂಡಿದ್ದರು. ಆದರೆ ಅಂತರ್​ ಮತೀಯ ಪ್ರೇಮ ಮೂರೇ ವರ್ಷಗಳಲ್ಲೇ ದುರಂತ ಅಂತ್ಯ ಕಂಡಿದೆ. ಕೊನೆಯವರೆಗೆ ಜೊತೆಯಾಗಿರಬೇಕು ಅಂದುಕೊಂಡವರು ಜೊತೆಯಾಗಿ ಸಾವಿನ ಮನೆ ಸೇರಿದ್ದಾರೆ. ಮಗಳ ಪ್ರೀತಿಯನ್ನು ಒಪ್ಪದೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ಮಾಡಿದ ಹೆತ್ತವರು ಈಗ ಮಗಳ ಹೆಣದ ಎದುರು ಕಣ್ಣೀರಿಡುತ್ತಿದ್ದಾರೆ. 2 ಕುಟುಂಬಗಳನ್ನು ಬೆಸೆಯಬೇಕಿದ್ದ ಪ್ರೀತಿ ಎರಡು ಮನೆಗಳನ್ನು ಸೂತಕವಾಗಿಸಿದೆ. ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಯುವ ಪ್ರೇಮಿಗಳು ಮದುವೆಯಾಗಲು ಸಾಧ್ಯವಾಗದೆ ಮಸಣ ಸೇರಿದ್ದಾರೆ.


    ಈ ದುರಂತ ಪ್ರೇಮ ಕಥೆಯ ನಾಯಕ 23 ವರ್ಷದ ಇರ್ಷಾದ್​, ದುರಂತ ನಾಯಕಿ 22 ವರ್ಷದ ವಿದ್ಯಾಶ್ರೀ. ಇಬ್ಬರು ಒಂದೇ ಗ್ರಾಮದವರು. ವಿದ್ಯಾ ಬಿಕಾಂ ಪದವಿ ಓದಿದ್ದರೆ, ಇರ್ಷಾದ್​ ಡಿಪ್ಲೋಮಾ ಇನ್ ವೆಟರ್ನರಿ ಕೋರ್ಸ್ ಮುಗಿಸಿದ್ದ. ಕಾಲೇಜ್​ಗೆ ಹೋಗುವ ದಿನಗಳಲ್ಲೇ ಇಬ್ಬರ ಮಧ್ಯೆ ಪ್ರೀತಿ ಚಿಗರೊಡೆದಿತ್ತು. ಓದು ಮುಗಿಸಿ, ಹೆತ್ತವರನ್ನು ಒಪ್ಪಿಸಿ ಸುಂದರ ಬದುಕು ಕಟ್ಟಿಕೊಳ್ಳುವ ಆಸೆಯಲ್ಲಿದ್ದರು. ಟಿನೇಜ್​ನಲ್ಲಿ ಕಂಡಿದ್ದ ಕನಸು ಓದು ಮುಗಿಸಿ ಮನೆಯವರಿಗೆ ಮುಟ್ಟುವಷ್ಟರಲ್ಲಿ ವಾಸ್ತವ ಬೇರೆಯದ್ದೇ ಆಗಿತ್ತು. ವಿದ್ಯಾ-ಇರ್ಷಾದ್​ ಇಬ್ಬರ ಪ್ರೀತಿಗೆ ಧರ್ಮ ಅಡ್ಡ ಬಂದಿತ್ತು.


    ಮುಸ್ಲಿಂ ಯುವಕ ಇರ್ಷಾದ್​ಗೆ ಮಗಳನ್ನು ಕೊಟ್ಟು ಮದುವೆ ಮಾಡಲು ವಿದ್ಯಾ ಮನೆಯವರು ಬಿಲ್​ಕುಲ್​ ಒಪ್ಪಲಿಲ್ಲ. ಯುವ ಪ್ರೇಮಿಗಳು ಹೆತ್ತವರನ್ನು ಒಪ್ಪಿಸಲು ಹರಸಾಹಸಪಟ್ಟಿದ್ದರು. ಪ್ರೇಮಿಗಳ ಯಾವ ಒತ್ತಾಯಕ್ಕೂ ವಿದ್ಯಾಳ ಕುಟುಂಬ ಒಪ್ಪಲೇ ಇಲ್ಲ. ಥೇಟ್​ ಸಿನಿಮಾ ರೀತಿ ತರಾತುರಿಯಲ್ಲಿ ವಿದ್ಯಾಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯಿಸಿದ್ದರು. ನನಗೆ ಈ ಮದುವೆ ಬೇಡ, ಇರ್ಷಾದ್​ಗೆ ಮನಸ್ಸು ಕೊಟ್ಟಾಗಿದೆ ಎಂದು ವಿದ್ಯಾ ಎಷ್ಟೇ ಗೋಳಾಡಿದ್ರು ಪ್ರಯೋಜನವಾಗಲಿಲ್ಲ. ಮಗಳ ಕಣ್ಣೀರನ್ನು ಕಣ್ಣೆತ್ತಿಯೂ ನೋಡದ ವಿದ್ಯಾ ಮನೆಯವರು ಮದುವೆಗೆ ಮುಂದಾಗಿದ್ದರು.


    ವಿದ್ಯಾಗೆ ಬೇರೊಬ್ಬ ಯುವಕನನ್ನು ನಿಶ್ಚಯಿಸಿದ್ದ ಕುಟುಂಬದವರು ಕೆಲವೇ ದಿನಗಳ ಹಿಂದೆ ಎಂಗೇಜ್​ಮೆಂಟ್​ ಕೂಡ ಮಾಡಿ ಮುಗಿಸಿದ್ದರು. ಅಲ್ಲಿಯವರೆಗೂ ಹೇಗಾದರೂ ಮಾಡಿ ಪೋಷಕರನನ್ನು ಒಪ್ಪಿಸೋಣ ಅಂದುಕೊಂಡಿದ್ದ ಪ್ರೇಮಿಗಳಿಗೆ ಭ್ರಮನೀರಸವಾಗಿದೆ. ನಾವು ಒಂದಾಗಿ ಬಾಳಲು ಇನ್ಯಾವ ದಾರಿಯೂ ಇಲ್ಲ ಎನಿಸಿದೆ. ಆಗಲೇ ಇಬ್ಬರು ಒಂದು ದೊಡ್ಡ ತಪ್ಪು ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಾರೆ.


    ಏ.24ರ ರಾತ್ರಿ 1 ಗಂಟೆ ಸಮಯದಲ್ಲಿ ವಿದ್ಯಾ ಮನೆಯಲ್ಲಿ ಇರದಿರೋದು ಕುಟುಂಬದ ಗಮನಕ್ಕೆ ಬರುತ್ತೆ. ಬೆಳಗಿನ ಜಾವದವರೆಗೆ ಹುಡುಕಾಡಿದ ಹೆತ್ತವರು ಬೆಳಗ್ಗೆ ಹಾವೇರಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಮಹಿಳಾ ಠಾಣೆ ಸಿಪಿಐ ಚಿದಾನಂದ, ಗ್ರಾಮೀಣ ಠಾಣೆ ಸಿಪಿಐ ನಾಗಮ್ಮ ಹಾಗೂ ಪಿಎಸ್ಐ ಮಂಜುನಾಥ ನೇತೃತ್ವದ ಪೊಲೀಸರ ತಂಡ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಯುವತಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿಕೊಂಡ ಪೊಲೀಸರು ಮಾಹಿತಿ ಕಲೆ ಹಾಕಲು ಮುಂದಾದಾಗಲೇ ಮಹತ್ವದ ಸುಳಿವು ಸಿಕ್ಕಿತ್ತು. ವಿದ್ಯಾಳ ಪ್ರೇಮಿ ಇರ್ಷಾದ್​ ಕೂಡ ಕಾಣೆಯಾಗಿದ್ದ. ಇದೊಂದು ಲವ್​ ಕೇಸ್​, ಇಬ್ಬರು ವಯಸ್ಕರಾಗಿದ್ದು ಓಡಿ ಹೋಗಿರುತ್ತಾರೆ ಎಂದು ಪೊಲೀಸರು ಭಾವಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸಾವಿನ ವಾಸನೆ ಪೊಲೀಸರ ಮೂಗಿಗೆ ಬಡಿಯಲಾರಂಭಿಸಿತ್ತು.


    ಇದನ್ನೂ ಓದಿ: ‘ಕರಿಯಾ’ ಐ ಲವ್ ಯೂ ಅಂದವಳು ಕೊಲೆಯಾದಳು; ಗಂಡ ಬಿಟ್ಟೋದ, ಹಳೆ ಬಾಯ್​​ಫ್ರೆಂಡ್​ ಯಮನಾದ!


    ನಾಗನೂರು ಗ್ರಾಮದ ಬಳಿ ಇರುವ ಜಮೀನೊಂದರಲ್ಲಿ ಎರಡು ಶವಗಳು ಪತ್ತೆಯಾಗಿರುವ ಮಾಹಿತಿ ಬಂದಿತ್ತು. ಸ್ಥಳಕ್ಕೆ ಬಂದ ಪೊಲೀಸರಿಗೆ ಕಂಡಿದ್ದು ವಿದ್ಯಾ ಹಾಗೂ ಇರ್ಷಾದ್​ ಮೃತದೇಹಗಳು. ಬೇರೊಬ್ಬನ ಜೊತೆ ಮದುವೆಯಾಗಲು ಇಷ್ಟವಿಲ್ಲದ ವಿದ್ಯಾ, ಪ್ರೀತಿಯನ್ನು ಕಳೆದುಕೊಳ್ಳಲು ಬಯಸದ ಇರ್ಷಾದ್​ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿನಲ್ಲಿ ಒಂದಾಗುವ ಭ್ರಮೆಯೊಂದಿಗೆ ವಿಷವನ್ನು ಜ್ಯೂಸ್​ನಲ್ಲಿ ಬೆರೆಸಿ ಇಬ್ಬರು ಕುಡಿದಿದ್ದರು. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


    (ವರದಿ: ಮಂಜುನಾಥ್ ತಳವಾರ)

    Published by:Kavya V
    First published: