news18-kannada Updated:December 26, 2020, 7:34 PM IST
ಮಾಜಿ ಸಚಿವ ಹೆಚ್. ಡಿ. ರೇವಣ್ಣ.
ಹಾಸನ; ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪ್ರಕಟಿಸದಿದ್ದರೇ ನಾಮಿನೇಟ್ ಮಾಡಲಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ವ್ಯಂಗ್ಯವಾಡಿದರು. ಹಾಸನದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆ ಮೊದಲನೇ ಹಂತ ಮುಗಿದಿದ್ದು, ನಾಳೆ ಎರಡನೇ ಹಂತವು ಸಹ ಮುಗಿಯಲಿದೆ. ಕೂಡಲೇ ಸರ್ಕಾರ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ ಮಾಡಬೇಕೆಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ. ನಿಗದಿತ ಸಮಯದಲ್ಲಿ ಮೀಸಲಾತಿ ಮಾಡದಿದ್ದಲ್ಲಿ ಸರ್ಕಾರವು ತಮಗಿಷ್ಟ ಬಂದವರನ್ನು ನಾಮಿನೆಟ್ ಮಾಡಲಿ. ಇಲ್ಲವಾದರೆ ಚುನಾವಣೆ ಯಾಕೆ ನಡೆಸಬೇಕು ಎಂದು ಹರಿಹಾಯ್ದರು.
ಜಿಲ್ಲಾ ಉಸ್ತುವಾರಿ ಸಚಿವರು ಚುನಾವಣೆ ಸಮಯದಲ್ಲಿ ಜಿಲ್ಲೆಯ ಪ್ರವಾಸ ಮಾಡಿದ್ದಾರೆ. ನಮಗೆ ಗ್ರಾಮ ಪಂಚಾಯತಿ ಚುನಾವಣೆ ಯಾವುದೇ ತೊಂದರೆ ಇಲ್ಲ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅನುದಾನವನ್ನು ಅವರಿಗೆ ಬೇಕಾದಂತಹ ಗುತ್ತಿಗೆದಾರರಿಗೆ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಹಣವನ್ನು ಲೂಟಿ ಮಾಡಲಾಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡುವ ಅವಶ್ಯಕತೆ ಇದೆ ಎಂದು ಆಗ್ರಹಿಸಿದರು.
ವಿಧಾನಸೌದದಲ್ಲಿರುವ ತಿಮ್ಮಪ್ಪ ಎನ್ನುವ ಖಾಸಗಿ ವ್ಯಕ್ತಿ ಅನುಮತಿ ಪಡೆದು ಟೆಂಡರ್ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇತನ ಪರ್ಮಿಷನ್ ಇದ್ದರಷ್ಟೆ ಕೆಲಸವಂತೆ. ಹಾಸನ ಜಿಲ್ಲೆಯ 80ಕೋಟಿ ರೂಪಾಯಿ ಪರಿಶಿಷ್ಟ ಜನಾಂಗದ ಹಣ ಬಾಕಿ ಇದೆ. ವಿವಿಧ ಕಾಮಗಾರಿಗಳಿಗೆ ಪ್ಯಾಕೇಜ್ ರೀತಿ ಟೆಂಡರ್ ಹಾಕಬೇಕು. ಸರ್ಕಾರದ ಕಾರ್ಯದರ್ಶಿ, ಇಂಜಿನಿಯರ್ ಗಳಿಗೆ 12 ಪರ್ಸೆಂಟ್ ಹಣ ಕೊಡಬೇಕು. ಇಲಾಖೆ ಲೆಟರ್ ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಗಂಭೀರ ಆರೋಪ ಮಾಡಿದರು.
ಇದನ್ನು ಓದಿ: ಮದುವೆ ದಿನ ಮುಟ್ಟಿನ ಗುಟ್ಟು ಮುಚ್ಚಿಟ್ಟಿದ್ದಕ್ಕೆ ವಿಚ್ಛೇದನ ಕೇಳಿದ ಪತಿರಾಯ!
ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡ ಇಲಾಖೆ ಎಸ್.ಇ.ಪಿ ಮತ್ತು ಪಿ.ಎಸ್.ಪಿ. ಅನುದಾನದ ಹಣ ಈ ರೀತಿ ದುರುಪಯೋಗ ಆಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಲೂಟಿ ಮಾಡುವರನ್ನು ಶಿಕ್ಷೆಗೆ ಗುರಿಪಡಿಸಲಿ. ಪರಿಶಿಷ್ಟರ ಹಣ ದುರುಪಯೋಗ ಸರಿಯಲ್ಲ. ಸಣ್ಣ ಪುಟ್ಟ ಟೆಂಡರ್ದಾರರು ಅರ್ಜಿ ಹಾಕುವಂತೆಯೇ ಇಲ್ಲ. ಸಾವಿರಾರು ಕೋಟಿ ಹೀಗಾಗಿದೆ. ಯಾವುದೇ ಕೆಲಸ ನೀಡಲು ಲೋಕಲ್ ಲೀಡರ್ ಕೈಲಿ ಹೇಳಿಸುವಂತೆ ಅಧಿಕಾರಿಗಳು ಕೇಳಿದ್ದು, ಆ ಲೀಡರ್ ಯಾರು ಅಂತ ನನಗೆ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಂಕ್ರಾಂತಿ ಕಳೆದ ಮೇಲೆ ಜಿಲ್ಲೆಯ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಎರಡು ವರ್ಷ ಆದ ಮೇಲೆ ನೋಡೋಣ, ಎರಡು ವರ್ಷ ಅಭಿವೃದ್ಧಿ ಕಾಮಗಾರಿ ನಿಂತಿರಲಿ, ಆಗ ನಾನು ಮುಖ್ಯಮಂತ್ರಿಗಳನ್ನು ಕೇಳುವುದಕ್ಕೆ ಹೋಗುವುದಿಲ್ಲ. ದೇವರು ನಮಗೆ ಮುಂದೆ ಅವಕಾಶ ಕೊಟ್ಟರೆ ಮಾಡೋಣ ಎಂದು ಹೇಳಿದರು.
ವರದಿ - ಡಿಎಂಜಿಹಳ್ಳಿ ಅಶೋಕ್
Published by:
HR Ramesh
First published:
December 26, 2020, 7:31 PM IST