ಕಾಫಿನಾಡಿಗೂ ಕಾಲಿಟ್ಟ ಮಿಡತೆಗಳು; ಕೀಟಗಳ ಕಾಟಕ್ಕೆ ಮಲೆನಾಡಿನ ಅಡಿಕೆ ಬೆಳೆಗಾರರು ಹೈರಾಣು

ಒಟ್ಟಾರೆ, ಮಲೆನಾಡಿನ ಬೆಳೆಗಾರರಿಗೆ ಒಂದಲ್ಲ ಒಂದು ಸಮಸ್ಯೆ ನಿರಂತರವಾಗಿ ಎದುರಾಗುತ್ತಿದ್ದು, ಸಮಸ್ಯೆ ಎದುರಿಸಿ ಉಳಿಸಿಕೊಂಡಿದ್ದ ಅಡಕೆ ತೋಟಕ್ಕೆ ಇದೀಗ ಮಿಡತೆಗಳು ದಾಳಿ ಮಾಡಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

ಮಿಡತೆಗಳು ಅಡಿಕೆ ಗರಿಗಳನ್ನು ತಿಂದಿರುವುದು.

ಮಿಡತೆಗಳು ಅಡಿಕೆ ಗರಿಗಳನ್ನು ತಿಂದಿರುವುದು.

  • Share this:
ಚಿಕ್ಕಮಗಳೂರು: ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದ ಮಿಡತೆಗಳು ಈಗ ಕಾಫಿನಾಡಿಗೂ ಕಾಲಿಟ್ಟಿದ್ದು, ಮಲೆನಾಡಿಗರು ಕಂಗಾಲಾಗಿದ್ದಾರೆ. ಶೃಂಗೇರಿ ತಾಲೂಕಿನ ತೆಕ್ಕೂರು ಎಂಬ ಗ್ರಾಮದಲ್ಲಿ ಅಡಕೆ ತೋಟಗಳ ಮೇಲೆ ದಾಳಿ ಮಾಡಿರುವ ಮಿಡತೆಗಳು ಅಡಕೆ ಮರದ ಗರಿಗಳನ್ನು ಸಂಪೂರ್ಣ ನಾಶ ಮಾಡಿವೆ. ಅಡಕೆ ತೋಟದಲ್ಲಿ ಮಿಡತೆಗಳನ್ನು ಕಂಡ ಮಲೆನಾಡಿಗರು ಆತಂಕಕ್ಕೆ ಒಳಗಾಗಿದ್ದಾರೆ.

Locust
ತೋಟಕ್ಕೆ ದಾಳಿ ಮಾಡಿರುವ ಮಿಡತೆಗಳಲ್ಲಿ ಒಂದನ್ನು ಹಿಡಿದಿರುವುದು.


ಈಗಾಗಲೇ ಕಳೆದ ಎರಡು ದಶಕಗಳಿಂದ ಅಡಕೆಗೆ ಹಳದಿ ಎಲೆ ರೋಗ ತಗುಲಿದೆ. ಹತೋಟಿಗೆ ಬಾರದ ಹಳದಿ ರೋಗಕ್ಕೆ ಬೇಸತ್ತ ಹಲವು ಮಲೆನಾಡಿಗರು ಗ್ರಾಮಗಳನ್ನು ತ್ಯಜಿಸಿ, ತೋಟ ಮನೆಗಳನ್ನು ಪಾಳು ಬಿಟ್ಟು ನಗರ ಸೇರಿದ್ದರು. ಗ್ರಾಮಗಳು ವೃದ್ದಾಶ್ರಮಗಳಾಗಿದ್ದವು. ಕೆಲ ಬೆಳೆಗಾರರು ತೋಟಗಳನ್ನು ನಿರ್ವಹಣೆ ಮಾಡೋದನ್ನೇ ಕೈ ಬಿಟ್ಟಿದ್ದರು. ಮತ್ತಲವರು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದರು. ಇನ್ನು ಕೆಲವರು ನಾನಾ ರೀತಿಯ ಔಷಧಗಳೊಂದಿಗೆ ಅಡಕೆ ಮೇಲೆ ಅವಲಂಬಿತರಾಗಿದ್ದರು. ಮಲೆನಾಡಿನ ಸ್ಥಿತಿ ಈಗಿರುವಾಗ ಕಳೆದ ಎರಡು ವರ್ಷಗಳ ನಿರಂತರ ಭಾರೀ ಮಳೆಯಿಂದ ಅಡಕೆ ತೋಟಕ್ಕೆ ಕೊಳೆ ರೋಗ ಕೂಡ ಆವರಿಸಿತ್ತು. ತೋಟದಲ್ಲಿ ಎರಡು ಮೂರು ಅಡಿ ನೀರು ನಿಂತಿತ್ತು. ಇದರಿಂದ ಮಲೆನಾಡಿಗರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದರು. ಹೀಗೆ ಹಲವು ಸಮಸ್ಯೆಗಳ ನಡುವೆ ಕೆಲವರು ಅಡಕೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದರು. ಇದೀಗ ಮಲೆನಾಡಿಗರಿಗೆ ಮಿಡತೆಗಳ ಕಾಟ ಕೂಡ ಆರಂಭವಾಗಿದ್ದು, ಮಲೆನಾಡಿಗರನ್ನು ಕಂಗೆಡಿಸಿದೆ.

ಅಡಕೆ ಗರಿಗಳನ್ನು ತಿಂದು ಹಾಕುತ್ತಿರುವ ಮಿಡತೆಗಳನ್ನು ಕಂಡು ತೋಟದ ಮಾಲೀಕರು ಭಯಭೀತರಾಗಿದ್ದಾರೆ. ತೋಟ ಉಳಿಯುತ್ತೋ ಇಲ್ಲವೋ ಎಂಬ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಈಗಾಗಲೇ ಶೃಂಗೇರಿ ತಾಲೂಕಿನ ಎರಡ್ಮೂರು ತೋಟಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ. ಗುಂಪು ಗುಂಪಾಗಿ ದಾಳಿ ಮಾಡಿರುವ ಮಿಡತೆಗಳು ಅಡಕೆ ಗರಿಯನ್ನು ಸಂಪೂರ್ಣ ನಾಶ ಮಾಡಿವೆ.

ಇದನ್ನು ಓದಿ: ಮೊಳಕೆ ಬಾರದ ಸೋಯಾಬಿನ್; ಕಳಪೆ ಬೀಜ ವಿತರಣೆಗೆ ರೈತರ ಆಕ್ರೋಶ
 

ಒಟ್ಟಾರೆ, ಮಲೆನಾಡಿನ ಬೆಳೆಗಾರರಿಗೆ ಒಂದಲ್ಲ ಒಂದು ಸಮಸ್ಯೆ ನಿರಂತರವಾಗಿ ಎದುರಾಗುತ್ತಿದ್ದು, ಸಮಸ್ಯೆ ಎದುರಿಸಿ ಉಳಿಸಿಕೊಂಡಿದ್ದ ಅಡಕೆ ತೋಟಕ್ಕೆ ಇದೀಗ ಮಿಡತೆಗಳು ದಾಳಿ ಮಾಡಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

 
First published: