• Home
 • »
 • News
 • »
 • district
 • »
 • ಕೊರೋನಾ ವೈರಸ್ ತಡೆಗೆ ಲಾಕ್​ಡೌನ್ ಒಂದೇ ಪರಿಹಾರವಲ್ಲ, ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ; ಸಚಿವ ಆನಂದ್ ಸಿಂಗ್

ಕೊರೋನಾ ವೈರಸ್ ತಡೆಗೆ ಲಾಕ್​ಡೌನ್ ಒಂದೇ ಪರಿಹಾರವಲ್ಲ, ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ; ಸಚಿವ ಆನಂದ್ ಸಿಂಗ್

ಸಚಿವ ಆನಂದ್ ಸಿಂಗ್

ಸಚಿವ ಆನಂದ್ ಸಿಂಗ್

ಲಾಕ್​ಡೌನ್ ಮಾಡಿದ್ರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅನಿಸುತ್ತಿಲ್ಲ. ತಜ್ಞ ವೈದ್ಯರು ಹೇಳಿದರೆ ಲಾಕ್​ಡೌನ್ ಮಾಡಬಹುದು. ಕೇವಲ ಬಳ್ಳಾರಿ ಲಾಕ್​ಡೌನ್ ಮಾಡಿದರೆ ಕೊರೋನಾ ನಿಯಂತ್ರಣವಾಗಲ್ಲ. ಸದ್ಯ ಸೆಮಿ ಲಾಕ್​ಡೌನ್ ಇದೆ. ಸಂಪೂರ್ಣ ಪ್ರಮಾಣದ ಲಾಕ್​ಡೌನ್ ಮಾಡಿದರೂ ಕಷ್ಟ, ಮಾಡದೆ ಇದ್ರೂ ಕಷ್ಟ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

ಮುಂದೆ ಓದಿ ...
 • Share this:

  ಬಳ್ಳಾರಿ: ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವುದನ್ನು ತಡೆಯುವ ಸಲುವಾಗಿ  ರಾಜ್ಯ ಸರ್ಕಾರದಲ್ಲಿ ಸಂಪೂರ್ಣ ಲಾಕ್ ಡೌನ್‌ನ ಚರ್ಚೆ ಅತಿ ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಈ ವಿಚಾರವಾಗಿ ಬಳ್ಳಾರಿಯ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿ, ಕೊರೋನಾ ವೈರಸ್  ತಡೆಯುವುದಕ್ಕೆ ಲಾಕ್​ಡೌನ್ ಒಂದೇ ಪರಿಹಾರ ಅಲ್ಲ. ಸಾರ್ವಜನಿಕರು ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಆಗ ಮಾತ್ರ ಸೋಂಕು ನಿಯಂತ್ರಣ ಮಾಡಲು ಸಾಧ್ಯ ಎಂದಿದ್ದಾರೆ.


  ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಆನಂದ್ ಸಿಂಗ್ ಅವರು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಬಳ್ಳಾರಿ ಜನತೆ ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಜನರು ಆತಂಕಪಡುವುದು ಬೇಡ. ಜಾಗೃತೆಯಿಂದ ಇರಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಇನ್ನು ವೈರಸ್ ತಡೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ, ಎಲ್ಲಿಯೂ ಕೂಡ ಬೆಡ್‌ಗಳ ಕೊರತೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಮತ್ತು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹೊಸದಾಗಿ ಕೋವಿಡ್ ಕೇರ್ ಸೆಂಟರ್​ಗಳನ್ನು ಮಾಡಲಾಗುತ್ತಿದೆ ಎಂದರು.


  ಇನ್ನು ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಯಿಂದ ಸಾವಿರ ಬೆಡ್ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯವನ್ನು ಸಚಿವ ಆನಂದಸಿಂಗ್ ಅವರು ಇಂದು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಮತ್ತು ರಾಜ್ಯದ ಲಾಕ್ ಡೌನ್ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಸೆಮಿ ಲಾಕ್​ಡೌನ್ ಜಾರಿಯಲ್ಲಿದೆ. ಆದರೂ ಈ ಕೊರೋನಾ ಅಲೆಯನ್ನು ತಡೆಯಲಾಗುತ್ತಿಲ್ಲ. ಇನ್ನೂ ಲಾಕ್​ಡೌನ್ ಮಾಡಿದರೆ ಅದು ಹೇಗೆ ತಡೆಯೋಕೆ ಸಾಧ್ಯವಾಗುತ್ತೆ ನೀವೇ ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.


  ಇದನ್ನು ಓದಿ: ವೈದ್ಯಕೀಯ ವಿದ್ಯಾರ್ಥಿಗಳು ಟೆಲಿ ಕನ್ಸಲ್ಟೆನ್ಸಿಗೆ ಗೈರಾದರೆ ಆಯಾ ಕಾಲೇಜು ಡೀನ್​ಗಳೇ ಹೊಣೆ; ಡಿಸಿಎಂ ಅಶ್ವಥ್ ನಾರಾಯಣ ಎಚ್ಚರಿಕೆ


  ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ರೋಗಿಗಳಿಗೆ ಆಕ್ಸಿಜನ್ ಸಹಿತ ಸಾವಿರ ಬೆಡ್‍ಗಳ ತಾತ್ಕಾಲಿಕ ಆಸ್ಪತ್ರೆಯನ್ನು ತೋರಣಗಲ್ಲಿನ ಜಿಂದಾಲ್ ಕಾರ್ಖಾನೆ ಆವರಣದಲ್ಲಿ ನಿರ್ಮಾಣ ಮಾಡುತ್ತಿದ್ದು, ಸದ್ಯ 200 ಹಾಸಿಗೆಗಳ ಸಿದ್ದತೆ ಅಂತಿಮ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಕೋವಿಡ್ ರೋಗಿಗಳ ಆರೈಕೆಗೆ ಅನುವು ಮಾಡಿಕೊಡಲಾಗುವುದು ಎಂದರು.


  ಸದ್ಯ 200ಕ್ಕೂ ಹೆಚ್ಚು ಬೆಡ್‍ಗಳು ಸಿದ್ಧಗೊಂಡಿವೆ. ಇದಕ್ಕೆ ಬೇಕಾದ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಜಿಂದಾಲ್ ಕಾರ್ಖಾನೆಯಿಂದಲೇ ಆಕ್ಸಿಜನ್ ಪೈಪ್​ಲೈನ್ ವ್ಯವಸ್ಥೆ ಮಾಡಲಾಗುತ್ತಿದೆ. ಕೊರೋನಾ ನಿಯಂತ್ರಣಕ್ಕೆ ವೈದ್ಯರು ಸೇರಿದಂತೆ ಇಡೀ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಲಾಕ್​ಡೌನ್ ಮಾಡಿದರೆ ಕೊರೋನಾ ನಿಯಂತ್ರಣವಾಗಲ್ಲ. ಲಾಕ್​ಡೌನ್ ಮಾಡಿದ್ರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅನಿಸುತ್ತಿಲ್ಲ. ತಜ್ಞ ವೈದ್ಯರು ಹೇಳಿದರೆ ಲಾಕ್​ಡೌನ್ ಮಾಡಬಹುದು. ಕೇವಲ ಬಳ್ಳಾರಿ ಲಾಕ್​ಡೌನ್ ಮಾಡಿದರೆ ಕೊರೋನಾ ನಿಯಂತ್ರಣವಾಗಲ್ಲ. ಸದ್ಯ ಸೆಮಿ ಲಾಕ್​ಡೌನ್ ಇದೆ. ಸಂಪೂರ್ಣ ಪ್ರಮಾಣದ ಲಾಕ್​ಡೌನ್ ಮಾಡಿದರೂ ಕಷ್ಟ, ಮಾಡದೆ ಇದ್ರೂ ಕಷ್ಟ. ಹೀಗಾಗಿ ಪ್ರತಿಯೊಬ್ಬರೂ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಂದಾಗ ಮಾತ್ರ ಈ ಹೆಮ್ಮಾರಿ ವೈರಸ್ಸನ್ನು ಹೊಡೆದು ಓಡಿಸಲು ಸಾಧ್ಯ ಎಂದರು.

  • ವರದಿ: ವಿನಾಯಕ ಬಡಿಗೇರ

  Published by:HR Ramesh
  First published: