ಕೂಲಿಗೆ ಹೋಗೋಣ ಎಂದರೆ ಜೀಪುಗಳಲ್ಲಿ ಅಷ್ಟೊಂದು ಮಹಿಳೆಯರು ಒಟ್ಟಿಗೆ ಕುಳಿತು ಹೋಗಲು ಪೊಲೀಸ್ ಬಿಡುವುದಿಲ್ಲ. ಇತ್ತ ಕನಿಷ್ಠ ಉಪ್ಪು ಹುಳ್ಳಿಯನ್ನೂ ತಂದುಕೊಳ್ಳಲು ಹಣವಿಲ್ಲ. ನಮ್ಮ ಚಿಕ್ಕಪುಟ್ಟ ಖರ್ಚುಗಳಿಗೂ ಯಾರಿಂದಲಾದರೂ ಬೇಡುವ ಸ್ಥಿತಿ ನಿರ್ಮಾಣವಾಗಿದೆ.
ಕೊಡಗು : ಕೊವಿಡ್ ಸೋಂಕು ಹರಡದಂತೆ ಸರ್ಕಾರವೇನೋ ಲಾಕ್ಡೌನ್ ಹೇರಿದೆ. ಜನರು ಮನೆಯಿಂದ ಹೊರಗೆ ಬರಬೇಡಿ, ಮನೆಯಲ್ಲೇ ಇರಿ ಅಂತ ಹೇಳುತ್ತಿದೆ. ಆದರೆ ಅಂದು ದುಡಿದು ಅಂದು ಒಂದೊತ್ತಿನ ಹಸಿವು ನೀಗಿಸಿಕೊಳ್ಳುತ್ತಿದ್ದ ಜನರ ಸ್ಥಿತಿಯನ್ನು ಮಾತ್ರ ಸರ್ಕಾರ ಗಮನಿಸಿಲ್ಲ. ಹೀಗಾಗಿ ಅತ್ತ ಕೂಲಿಯೂ ಇಲ್ಲದೆ ಇತ್ತ ಒಂದೊತ್ತಿನ ಊಟಕ್ಕೂ ಗತಿಯೂ ಇಲ್ಲದೆ ಆದಿವಾಸಿ ಬುಡಕಟ್ಟು ಜನರು ಪರದಾಡುವಂತಾಗಿದೆ. ಹೌದು ಕೊಡಗಿನ ಹಲವು ಹಾಡಿಗಳ ಜನರು ಒಂದೊತ್ತಿನ ಊಟಕ್ಕೂ ವ್ಯವಸ್ಥೆಯಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ, ತಟ್ಟಳ್ಳಿ ಸೇರಿದಂತೆ ಹಲವು ಗಿರಿಜನ ಹಾಡಿಗಳ ಜನರು ತೀವ್ರ ತೊಂದರೆಗೆ ಸಿಲುಕಿದ್ದಾರೆ.
ಅಂದು ದುಡಿದು ಒಂದೊತ್ತಿನ ಊಟದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದ ಗಿರಿ ಜನರು ಲಾಕ್ ಡೌನ್ ನಿಂದಾಗಿ ಕೂಲಿಯೂ ಇಲ್ಲದೆ ಊಟಕ್ಕೂ ಪರದಾಡು ವಂತಾಗಿದೆ. ಜೀಪುಗಳನ್ನು ಏರಿ ದೂರದ ಕಾಫಿ ತೋಟಗಳಿಗೆ ಹೋಗಿ ಕೂಲಿ ಮಾಡುತ್ತಿದ್ದ ನಮಗೆ ಈಗ ಕೂಲಿ ಕೆಲಸವೂ ಇಲ್ಲದಂತೆ ಆಗಿದೆ. ಸರ್ಕಾರ ವೇನೋ ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ ಮಾತ್ರ ವಿತರಣೆ ಮಾಡಿದೆ. ಆದರೆ ಬರೀ ಅಕ್ಕಿಯಿಂದ ಹೇಗೆ ಅಡುಗೆ ಮಾಡಿ ತಿನ್ನಲು ಸಾಧ್ಯ. ನಮ್ಮ ಸ್ಥಿತಿ ಯಾರಿಗೂ ಬರಬಾರದು ಎಂದು ಹಾಡಿಯ ಮಹಿಳೆಯರು ಕಣ್ಣೀರಿಡುತ್ತಿದ್ದಾರೆ.
ಕೂಲಿಗೆ ಹೋಗೋಣ ಎಂದರೆ ಜೀಪುಗಳಲ್ಲಿ ಅಷ್ಟೊಂದು ಮಹಿಳೆಯರು ಒಟ್ಟಿಗೆ ಕುಳಿತು ಹೋಗಲು ಪೊಲೀಸ್ ಬಿಡುವುದಿಲ್ಲ. ಇತ್ತ ಕನಿಷ್ಠ ಉಪ್ಪು ಹುಳ್ಳಿಯನ್ನೂ ತಂದುಕೊಳ್ಳಲು ಹಣವಿಲ್ಲ. ನಮ್ಮ ಚಿಕ್ಕಪುಟ್ಟ ಖರ್ಚುಗಳಿಗೂ ಯಾರಿಂದ ಲಾದರೂ ಬೇಡುವ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದು, ಅವರಿಗೆ ಸರಿಯಾದ ಊಟ ತಿಂಡಿ ಕೊಡಲು ಸಾಧ್ಯವಾಗದ ದುಃಸ್ಥಿತಿ ನಮ್ಮದು ಎಂದು ತಟ್ಟಳ್ಳಿ ಹಾಡಿಯ ಮಹಿಳೆ ಭಾಗ್ಯ ಕಣ್ಣೀರು ಇಟ್ಟಿದ್ದಾರೆ.
ಹಾಡಿಯ ಮಹಿಳೆಯರ ಈ ನೋವಿನ ಸ್ಥಿತಿಯನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದು, ಎಲ್ಲೆಡೆ ವೈರಲ್ ಮಾಡಿದ್ದಾರೆ. ಈ ವಿಡಿಯೋವನ್ನು ಗಮನಿಸಿದ ಕೊಡಗು ಸೇವ್ ತಂಡದ ಸದಸ್ಯರು ಬೆಂಗಳೂರಿನ ಬನವಾಸಿ ಕನ್ನಡ ಸಂಘವನ್ನು ಸಂಪರ್ಕಿಸಿದ್ದಾರೆ. ಅವರ ಮೂಲಕ ಕೊಡಗು ಸೇವ್ ತಂಡ ಮತ್ತು ಬನವಾಸಿ ಕನ್ನಡ ಸಂಘದ ಸದಸ್ಯರು ಸೇರಿ ನಾಲ್ಕೈದು ಹಾಡಿಗಳ ನೂರಾರು ಕುಟುಂಬಗಳಿಗೆ ಒಂದು ವಾರಕ್ಕೆ ಆಗುವಷ್ಟು ಆಹಾರದ ಪದಾರ್ಥಗಳನ್ನು ಪ್ರತೀ ಹಾಡಿಗಳಿಗೆ ತೆರಳಿ ವಿತರಣೆ ಮಾಡಿದ್ದಾರೆ.
ಸದ್ಯ ಒಂದು ವಾರಕ್ಕೆ ತಮ್ಮ ಹಸಿವು ನೀಗಿಸಿರುವುದಕ್ಕೆ ಕೊಡಗಿನ ಹಾಡಿಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಕೊವಿಡ್ ನಿಯಂತ್ರಣಕ್ಕೆ ಬಾರದೆ, ಜೂನ್ ಏಳರ ನಂತರವೂ ಸರ್ಕಾರ ಲಾಕ್ ಡೌನ್ ಮುಂದುವರಿಸಿದ್ದೇ ಆದಲ್ಲಿ ಹಾಡಿಯ ಜನರ ಬದುಕು ಮತ್ತೆ ಸಂಕಷ್ಟಕ್ಕೆ ಸಿಲುಕಲಿದೆ. ಅತ್ತ ಕೆಲಸವೂ ಇಲ್ಲದೆ, ಇತ್ತ ಕೂಲಿಯೂ ಇಲ್ಲದೆ ಮತ್ತೆ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಲಿದೆ. ಹೀಗಾಗಿ ಜನರ ಈ ಸ್ಥಿತಿಯನ್ನು ಬದಲಿಸಬೇಕಾಗಿದೆ ಎಂದು ಕೊಡಗು ಸೇವ್ ತಂಡದ ಮುಖಂಡ ನೌಷದ್ ಜನ್ನತ್ ಅವರು ಆಗ್ರಹಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ : ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ