ರಾಮನಗರ: ರಾಜ್ಯ ಹೆದ್ದಾರಿ ಮಧ್ಯೆಯೇ ಬೃಹತ್ ಹೈ-ಟೆನ್ಷನ್ ಲೈನ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯೂ ಆಗ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಈ ಹೈ-ಟೆನ್ಷನ್ ಲೈನ್‌ನಿಂದಾಗಿ ಜನರ ಆರೋಗ್ಯದ ಮೇಲೂ ಸಹ ವ್ಯತಿರಿಕ್ತ ಪರಿಣಾಮ ಬೀರಲಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣದ ಹಲಗೂರು-ಸಾತನೂರು ರಾಜ್ಯ ಹೆದ್ದಾರಿಯ ಮಧ್ಯೆ 220 ಕೆ.ವಿ ಹೈ-ಟೆನ್ಷನ್ ಲೈನ್ ನಿರ್ಮಾಣವಾಗ್ತಿದೆ. ಸಾತನೂರು ವೃತ್ತದಿಂದ ಸುಣ್ಣಘಟ್ಟ ಗ್ರಾಮದವರೆಗೆ ಈ ಕಾಮಗಾರಿ ಸದ್ಯಕ್ಕೆ ಪ್ರಾರಂಭವಾಗಿದೆ.
ಕಳೆದ ಎರಡು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, ಅತ್ಯಂತ ನಿಧಾನವಾಗಿ ಸಾಗುತ್ತಿದೆ. ರಾಜ್ಯ ಸರ್ಕಾರದ ಮೂಲಕ ನಡೆಯುತ್ತಿರುವ ಈ ಯೋಜನೆಗೆ ಸ್ಥಳೀಯವಾಗಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೇವಲ 40 ಅಡಿ ಅಗಲವಿರುವ ಈ ರಸ್ತೆಯ ಮಧ್ಯೆ ಸರಿಸುಮಾರು 80 ಅಡಿ ಉದ್ದದ ಕಂಬದಲ್ಲಿ 220 ಕೆ.ವಿ ಹೈ-ಟೆನ್ಷನ್ ಲೈನ್ ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ಅವೈಜ್ಞಾನಿಕ ಎನ್ನಲಾಗುತ್ತಿದೆ.
ಇದನ್ನೂ ಓದಿ: ಚಿನ್ನದ ಆಸೆಯಿಂದ ದೋಚಿಕೊಂಡು ಬಂದ; ಅದೇ ಚಿನ್ನಕ್ಕೆ ಕೊಲೆಯಾದ ವ್ಯಾಪಾರಿ; ಇದು ಒಂದು ಚಿನ್ನದ ಕಥೆ!
ಈ ಭಾಗದಲ್ಲಿ ಜನರು ಮನೆಗಳನ್ನ ಕಟ್ಟಿಕೊಂಡು ಸುಮಾರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಆದರೆ ಏಕಾಏಕಿ ಯಾವುದೇ ಮಾಹಿತಿ ನೀಡದೆ ಕಾಮಗಾರಿಯನ್ನ ಪ್ರಾರಂಭ ಮಾಡಿದ್ದಾರೆ. ಈಗ ನಿಮ್ಮ ಜಾಗಕ್ಕೆ ಸರ್ಕಾರದಿಂದ ಪರಿಹಾರದ ಹಣ ನೀಡುತ್ತೇವೆ, ನಿಮ್ಮ ಜಾಗವನ್ನ ಬಿಟ್ಟುಕೊಡಿ ಎಂದು ಬೆಸ್ಕಾಂ ಇಲಾಖೆಯವರು ಸ್ಥಳೀಯ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ, ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದಾಗಿ ದಿನನಿತ್ಯ ಅಪಘಾತಗಳು ಸಾಕಷ್ಟು ನಡೆಯುತ್ತಿವೆ. ಜೊತೆಗೆ ಈ ಲೈನ್ ನಿರ್ಮಾಣವಾದರೆ ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕದ ಕೂಗು ಕೂಡ ಕೇಳಿಬರುತ್ತಿದೆ.
ಇದನ್ನೂ ಓದಿ: Bangalore Crime: ಎಕ್ಸ್ ರೇ ಯಂತ್ರಗಳ ನೆಪದಲ್ಲಿ ಬೆಂಗಳೂರಿಗೆ ಲಕ್ಷಾಂತರ ರೂ. ಮೌಲ್ಯದ ವಿದೇಶಿ ಸಿಗರೇಟ್ ಸಾಗಾಟ
ಈ ಬಗ್ಗೆ ಸ್ಥಳೀಯ ಬೆಸ್ಕಾಂ ಅಧಿಕಾರಿಗಳನ್ನ ಪ್ರಶ್ನೆ ಮಾಡಿದರೆ, ಇದು ಸರ್ಕಾರದ ಯೋಜನೆ. ನಾವು ಈ ಬಗ್ಗೆ ಯಾವ ಮಾಹಿತಿಯನ್ನು ಸಹ ಕೊಡಲು ಸಾಧ್ಯವಿಲ್ಲ. ಸರ್ಕಾರದ ಸೂಚನೆ ಮೇರೆಗೆ ನಾವು ಕಾಮಗಾರಿಯನ್ನ ಪ್ರಾರಂಭ ಮಾಡಿದ್ದೇವೆಂದು ತಿಳಿಸುತ್ತಾರೆ. ಒಟ್ಟಾರೆ ಈ ಯೋಜನೆಯಿಂದಾಗಿ ಸ್ಥಳೀಯವಾಗಿ ವಿರೋಧವಂತೂ ವ್ಯಕ್ತವಾಗಿರುವುದು ಸತ್ಯ.
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ