ZP, TP Elections – ಕೋಲಾರ ಜಿ.ಪಂ., ತಾ.ಪಂ. ಚುನಾವಣೆ; ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆಲುವಿನ ಲೆಕ್ಕಾಚಾರ

ಕೋಲಾರದ 32 ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾವು ಏರುತ್ತಿದೆ. ಕಾಂಗ್ರೆಸ್ ಪಕ್ಷ ಜಿ.ಪಂ. ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದೆ. ರಾಜ್ಯದಲ್ಲಿ ಅಧಿಕಾರ ಇರುವ ಬಿಜೆಪಿ ಇಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಉಮೇದಿನಲ್ಲಿದೆ.

ಬಿಜೆಪಿ ಸಂಸದ ಎಸ್ ಮುನಿಸ್ವಾಮಿ

ಬಿಜೆಪಿ ಸಂಸದ ಎಸ್ ಮುನಿಸ್ವಾಮಿ

  • Share this:
ಕೋಲಾರ: ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗು ತಾಲೂಕು ಪಂಚಾಯಿತಿ ಚುನಾವಣೆ ಕಾವು ರಂಗೇರಿದೆ, ಬೇಸಿಗೆಯಲ್ಲೂ ರಾಜಕೀಯ ಪಕ್ಷಗಳು ರಣತಂತ್ರಗಳನ್ನ ರೂಪಿಸುವುದರಲ್ಲಿ ತಲ್ಲೀನವಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳು ಸರಣಿ ಸಭೆಗಳನ್ನ ನಡೆಸುತ್ತಿವೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಜಿ.ಪಂ. 30 ಕ್ಷೇತ್ರಗಳಿದ್ದವು. ಕ್ಷೇತ್ರ ಪುನರ್ ವಿಂಗಡನೆ ನಡೆದಿದ್ದು, 2 ಜಿಲ್ಲಾ ಪಂಚಾಯಿತಿ ಕ್ಚೇತ್ರವನ್ನ ಹೆಚ್ಚುವರಿಯಾಗಿ ನಿರ್ಮಿಸಲಾಗಿದೆ. 32 ಜಿಲ್ಲಾ ಪಂಚಾಯಿತಿಗಳ ಆಕಾಂಕ್ಷಿತ ಅಭ್ಯರ್ಥಿಗಳು ಈಗಾಗಲೇ ಗ್ರಾಮಗಳಲ್ಲಿ ಠಿಕ್ಕಾಣಿ ಹಾಕಿದ್ದು, ದೇಗುಲ‌ ಪೂಜೆ, ಸಮಾಜಸೇವೆ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಸದ್ಯ ಕೋಲಾರ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಜೆಡಿಎಸ್ ಸಮ್ಮಿಶ್ರ ಆಡಳಿತ ಮುಂದುವರೆದಿದ್ದು, ಪೂರ್ಣ ಅವಧಿಯ ಅಧ್ಯಕ್ಷ ಸ್ಥಾನವನ್ನ ಕೈ ಪಕ್ಷಕ್ಕೆ ಜೆಡಿಎಸ್ ಬಿಟ್ಟುಕೊಟ್ಟು, ಉಪಾಧ್ಯಕ್ಷ ಸ್ಥಾನವನ್ನ ಅಲಂಕರಿಸಿದೆ. ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ 14, ಜೆಡಿಎಸ್ 11, ಬಿಜೆಪಿ 5 ಸ್ಥಾನಗಳಲ್ಲಿ ಗೆದ್ದಿದ್ದು, ಇದುವರೆಗೆ ಬಿಜೆಪಿ ಪಕ್ಷ ಸಂಪೂರ್ಣ ಬಹುಮತ ಪಡೆದು ಅಧಿಕಾರದ ಚುಕ್ಕಾಣಿಯೇ ಹಿಡಿದಿಲ್ಲ.

ಜಿಲ್ಲಾ ಪಂಚಾಯಿತಿ ಅರ್ಧದಷ್ಟು ಸ್ಥಾನ‌ ಬಿಜೆಪಿ ಗೆದ್ದರೆ ರಾಜಕೀಯ ನಿವೃತ್ತಿ - ಕಾಂಗ್ರೆಸ್ ಅಧ್ಯಕ್ಷ ಕೆ ಚಂದ್ರಾರಡ್ಡಿ ಓಪನ್ ಚಾಲೆಂಜ್:

ಚುನಾವಣೆ ವೇಳೆಯಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷದ ಕೋಲಾರ ಜಿಲ್ಲಾಧ್ಯಕ್ಷ ಕೆ ಚಂದ್ರಾರಡ್ಡಿ, ಬಿಜೆಪಿಗೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ, ಕಳೆದ ಪುರಸಭೆ ಹಾಗು ನಗರಸಭೆ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಇರುವ ಸ್ಥಾನಗಳಲ್ಲಿ 30 ಸ್ಥಾನ ಗೆಲ್ಲುವಂತೆ ಸವಾಲು ಹಾಕಿದ್ದರು. ಆದರೆ ಬಿಜೆಪಿ ಎರಡಂಕಿ ಕೂಡ ದಾಟಲು ಯಶಸ್ವಿಯಾಗಲಿಲ್ಲ. ಹೀಗಾಗಿ ಮತ್ತೊಮ್ಮೆ ಸವಾಲೆಸೆದಿರುವ ಕೆ ಚಂದ್ರಾರೆಡ್ಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ ಕೋಲಾರದಲ್ಲಿ ಅರ್ಧದಷ್ಟು ಸ್ಥಾನ ಬಿಜೆಪಿ ಗೆದ್ದರೆ ರಾಜಕೀಯವಾಗಿ ನಿವೃತ್ತಿ ಹೊಂದುವುದಾಗಿ ಚಾಲೆಂಜ್ ಮಾಡಿದ್ದಾರೆ.

ಇದನ್ನೂ ಓದಿ: ಹೂಬಳ್ಳಿ ಹುಬ್ಬಳ್ಳಿಯಾಗಿದ್ದನ್ನು ತೋರಿಸಲು ಹೊರಟ ‘ಛೋಟಾ ಬಾಂಬೆ’ – ಆಡಿಯೋ ಬಿಡುಗಡೆ

ಕಾಂಗ್ರೆಸ್​ಗೆ ನಾಗಾಲೋಟದ ಚಿಂತೆ; ಜೆಡಿಎಸ್​ಗೆ ಸ್ಥಾನ ಉಳಿಸಿಕೊಳ್ಳುವುದೇ ಸವಾಲು; ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ:

ಕೋಲಾರ ಲೋಕಸಭೆ ಚುನಾವಣೆಯಲ್ಲಿ ಸಂಸದ ಎಸ್ ಮುನಿಸ್ವಾಮಿ ಗೆದ್ದು ಬೀಗಿದ ನಂತರ, ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿದೆ, ಆದರೆ ಕಳೆದ ಗ್ರಾಮ ಪಂಚಾಯಿತಿ ಮತ್ತು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದ ಸಾಧನೆ ಮಾಡಿಲ್ಲ, ಹೀಗಾಗಿ ಈ ಸಲ ಶತಾಯ ಗತಾಯ 15 ಕ್ಕೂ ಹೆಚ್ಚು ಸ್ಥಾನ ಗೆಲ್ಲುವತ್ತ, ಸಂಸದ ಎಸ್ ಮುನಿಸ್ವಾಮಿ ರಣತಂತ್ರ ರೂಪಿಸಿದ್ದು, ಈಗಾಗಲೇ ಜಿಲ್ಲಾ ಮುಖಂಡರ ಸ‌ಭೆ ನಡೆಸಿ ಸಿದ್ದತೆ ಅರಂಭಿಸಿ ಎಂದು ಕರೆನೀಡಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಲಿಷ್ಟವಾಗಿದ್ದರೂ ಪಕ್ಷದಲ್ಲಿನ ನಾಯಕರ ಒಳ ಪ್ರತಿಷ್ಟೆಯಿಂದ ಹಿನ್ನಡೆಯಾಗಿದೆ. ಈಗಾಗಲೇ ಕೈ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಓಡಾಡುತ್ತಿದ್ದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸುತ್ತಾ ರಾಜಕೀಯ ಆರಂಭಿಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕೊಂಚ ಬಲಿಷ್ಟವಾಗಿ ಇದ್ದರೂ, ಇಲ್ಲಿನ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿಕೆ ವೆಂಕಟಶಿವಾರೆಡ್ಡಿ ಪಕ್ಷಕ್ಕೆ ಉತ್ಸಾಹ ತುಂಬುವುದರಲ್ಲಿ ಹಿಂದುಳಿದಿದ್ದಾರೆ. ಆದರೂ‌ ತಾಲೂಕಿನ ಜೆಡಿಎಸ್ ನಾಯಕರು ಮುತುವರ್ಜಿ ವಹಿಸಿಕೊಂಡು ಸ್ಥಳೀಯ ನಾಯಕರ ಜೊತೆಗೆ ಸಭೆಗಳನ್ನ ನಡೆಸುತ್ತಾ, ಬಿಜೆಪಿ ಹಾಗು ಕಾಂಗ್ರೆಸ್​​ಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಚುನಾವಣೆ ಕಾವು ಆರಂಭವಾಗಿದ್ದು, ಅಗತ್ಯ ವಸ್ತುಗಳ‌ ಬೆಲೆ‌ ಏರಿಕೆ, ಕೃಷಿ ಕಾಯ್ದೆಗಳು, ದೆಹಲಿ ರೈತರ ಹೋರಾಟ ಸೇರಿ ನಾನಾ ವಿಚಾರಗಳ ಕಾರಣದಿಂದ ಈ ಬಾರಿ ಜನರು ಬಿಜೆಪಿ ವಿರುದ್ದವಾಗಿ ಮತ ನೀಡುವುದು ನಿಶ್ಚಿತ ಎಂಬುದು ಕಾಂಗ್ರೆಸ್, ಜೆಡಿಎಸ್ ಲೆಕ್ಕಾಚಾರವಾಗಿದೆ.

ವರದಿ: ರಘುರಾಜ್
Published by:Vijayasarthy SN
First published: