• Home
  • »
  • News
  • »
  • district
  • »
  • ಅಬಕಾರಿ ಸಚಿವರ ತವರಲ್ಲಿ ನಿಲ್ಲದ ಲಿಕ್ಕರ್ ಮಾಫಿಯಾ; ಎಂಆರ್​ಪಿ ಮಳಿಗೆಗಳಲ್ಲೂ ನಡೆಯುತ್ತಿದೆ ಲೂಟಿ

ಅಬಕಾರಿ ಸಚಿವರ ತವರಲ್ಲಿ ನಿಲ್ಲದ ಲಿಕ್ಕರ್ ಮಾಫಿಯಾ; ಎಂಆರ್​ಪಿ ಮಳಿಗೆಗಳಲ್ಲೂ ನಡೆಯುತ್ತಿದೆ ಲೂಟಿ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಜಿಲ್ಲೆಯಲ್ಲಿ ಕೆಲ ಎಂಆರ್​ಪಿ ಮಳಿಗೆ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್​ಗಳಿಂದ ಲಿಕ್ಕರ್ ಹೆಸರಲ್ಲಿ ಹಗಲು ದರೋಡೆ ಎಗ್ಗಿಲ್ಲದೆ ನಡೆಯುತ್ತಿದೆ. ಜಿಲ್ಲೆಯ ಕೋಲಾರ, ಶ್ರೀನಿವಾಸಪುರ ತಾಲೂಕಿನ ಬಾರ್ ಗಳಲ್ಲಿ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್ ನಡೆಸಿದ್ದು, ಮದ್ಯಪ್ರಿಯರ ಸುಲಿಗೆ ಬಯಲಿಗೆ ಬಂದಿದೆ.

ಮುಂದೆ ಓದಿ ...
  • Share this:

ಕೋಲಾರ; ಲಾಕ್​ಡೌನ್ ನಂತರ ಮದ್ಯದ ಮೇಲೆ ಶೇಕಡಾ 21ರಷ್ಟು ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಲಾಗಿತ್ತು. ಇದರಿಂದ ಸರ್ಕಾರಕ್ಕೆ ನಿತ್ಯ ಕೋಟ್ಯಾಂತರ ರುಪಾಯಿ ಆದಾಯ ಹರಿದು ಬರುತ್ತಿದೆ.‌ ಆದರೆ ಸರ್ಕಾರಕ್ಕೆ ಆದಾಯ ಬರಲು ಕಾರಣರಾದ ಮದ್ಯಪ್ರಿಯರನ್ನು ಅಬಕಾರಿ ಸಚಿವ ಎಚ್ ನಾಗೇಶ್ ತವರು ಜಿಲ್ಲೆ ಕೋಲಾರದಲ್ಲಿ ವಂಚಿಸಲಾಗುತ್ತಿದೆ. ಹೌದು ಸರ್ಕಾರ ನಿಗದಿ ಮಾಡಿರುವ ಬೆಲೆಗಿಂತ ಹೆಚ್ಚುವರಿ ಹಣವನ್ನು ಪಡೆದು ಇಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಕೆಲ ಎಂಆರ್​ಪಿ ಮಳಿಗೆ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್​ಗಳಿಂದ ಲಿಕ್ಕರ್ ಹೆಸರಲ್ಲಿ ಹಗಲು ದರೋಡೆ ಎಗ್ಗಿಲ್ಲದೆ ನಡೆಯುತ್ತಿದೆ. ಜಿಲ್ಲೆಯ ಕೋಲಾರ, ಶ್ರೀನಿವಾಸಪುರ ತಾಲೂಕಿನ ಬಾರ್ ಗಳಲ್ಲಿ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್ ನಡೆಸಿದ್ದು, ಮದ್ಯಪ್ರಿಯರ ಸುಲಿಗೆ ಬಯಲಿಗೆ ಬಂದಿದೆ. ಕೋಲಾರ ನಗರ ಹೊರವಲಯದ ನಂದಿನಿ ಎಂಆರ್​ಪಿ ಮಳಿಗೆಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ನ್ಯೂಸ್ 18 ಕನ್ನಡ ವರದಿ ಮಾಡಿತ್ತು. ಅದರ ಪರಿಣಾಮ ಅಬಕಾರಿ ಅಧಿಕಾರಿಗಳು ಮಳಿಗೆಗೆ 25 ಸಾವಿರ ರೂಪಾಯಿ ದಂಡ ಹಾಕಿದ್ದರು. ಆದರೂ ಬುದ್ದಿ ಕಲಿಯದ ಶಾಪ್ ಮಾಲೀಕರು, ಮತ್ತದೇ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುವ ಮೂಲಕ ಲೂಟಿ ಮುಂದುವರೆಸಿದ್ದಾರೆ.

81 ರೂಪಾಯಿ ದರ ಇರುವ 90 ಮಿ.ಲೀ. ಪಾಕೆಟ್ ಗೆ, ಎಂಆರ್​ಪಿ ಶಾಪ್​ನಲ್ಲಿ 90 ರುಪಾಯಿಗೆ ಮಾರಾಟ ಮಾಡಿದ್ದಾರೆ. ಇದ್ಯಾಕೆ ಇಷ್ಟು ಅಂದರೆ ಇನ್ನು ಹೊಸ ರೇಟ್ ಬಂದಿಲ್ಲ ಎಂದು ಹೇಳುತ್ತಾರೆ. ಇನ್ನು ಕೋಲಾರ ತಾಲೂಕಿನ ಮಾರ್ಜೇನಹಳ್ಳಿ ಗ್ರಾಮದ ಚೌಡೇಶ್ವರಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ, 81 ರೂಪಾಯಿಯ 90 ಮಿ.ಲೀ, ಪಾಕೆಟ್​ಗೆ 100 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಯಾಕೆ ಇಷ್ಟು ಹಣ ಹೆಚ್ಚಾಗಿ ತೆಗೆದುಕೊಳ್ಳುತ್ತಿರಾ ಎಂದು ಪ್ರಶ್ನೆ ಮಾಡಿದರೆ, ನಮ್ಮ ಮಾಲೀಕರು ಹೇಳಿದ್ದಾರೆ. ಅವರ ಹೇಳಿದ ಬೆಲೆಗೆ ಮಾರಾಟ ಮಾಡುತ್ತಾ ಇದ್ದೇವೆ ಎಂದು ಹೇಳುತ್ತಾರೆ. ಇದರ ಜೊತೆಗೆ ಜಿಲ್ಲೆಯ  ಯಾವುದೇ ಬಾರ್​ಗಳಲ್ಲೂ ಗ್ರಾಹಕರಿಗೆ ಬಿಲ್ ಕೊಡುವುದೇ ಇಲ್ಲ. ಶ್ರೀನಿವಾಸಪುರ ತಾಲೂಕಿನ ಎರಡು ಬಾರ್​ಗಳಲ್ಲಿಯೂ ಹೀಗೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದು, ಬಿಲ್ ಕೇಳಿದ್ದಕ್ಕೆ ಬುಕ್ ಆಡಿಟಿಂಗ್​ಗೆ ಕೊಟ್ಟಿದ್ದೀವಿ. ಬಿಲ್ ಇಲ್ಲಾ ಅಂತಾರೆ.

ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿರೊ ಗಂಗಾ ಬಾರ್ ಆ್ಯಂಡ್  ರೆಸ್ಟೋರೆಂಟ್​ನಲ್ಲಿ 66 ರೂಪಾಯಿರುವ ಮದ್ಯದ ಪಾಕೆಟ್ ಗೆ 110 ರೂಪಾಯಿ ಪಡೆದ ಕ್ಯಾಷಿಯರ್, ಬಿಲ್ ಕೇಳಿದರೆ ಇಲ್ಲ ಆಡಿಟಿಂಗ್ ಗೆ ಹೋಗಿದೆ ಎಂದು ಹೇಳುತ್ತಾರೆ. ಇನ್ನು ರೋಣೂರು ಗ್ರಾಮದ ಬಾರ್ ನಲ್ಲೂ ಇದೇ ಕಥೆ, ದರ ಯಾಕೆ ಜಾಸ್ತಿ ಅಂದ್ರೆ ಎಲ್ಲೆಡೆ ಹೀಗೆ ಮಾರೋದು ಸಾರ್ ಏನು ಮಾಡೋದು ಅಂತಾರೆ ಕ್ಯಾಷಿಯರ್.‌ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅದನ್ನು ತಡೆಗಟ್ಟುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಕೊರೋನಾ ಕೇಸ್​ ಹೆಚ್ಚಾಗಲು ಕಾರಣವೇನು ಗೊತ್ತೇ? - ಇಲ್ಲಿದೆ ಆತಂಕಕಾರಿ ಮಾಹಿತಿ


ಬಾರ್ ಲೈಸೆನ್ಸ್ ರದ್ದು; ಸಚಿವ ನಾಗೇಶ್ ಎಚ್ಚರಿಕೆ

ಕೋಲಾರ ಜಿಲ್ಲೆಯ ಬಾರ್ ಆ್ಯಂಡ್ ರೆಸ್ಟೋರೆಂಟ್​ಗಳಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ನ್ಯೂಸ್ 18 ಕನ್ನಡ ವಾಹಿನಿಯಲ್ಲಿ ವರದಿ ಬಿತ್ತರಿಸಲಾಗಿದೆ. ಈ ಕುರಿತು ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿರುವ ಅಬಕಾರಿ ಸಚಿವ ಎಚ್ ನಾಗೇಶ್, ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದರೆ ಬಾರ್ ಲೈಸೆನ್ಸ್ ರದ್ದು ಮಾಡಲಾಗುವುದು. ಈ ಬಗ್ಗೆ ಮೈಸೂರು ಸೇರಿ ಹಲವೆಡೆಯಿಂದ ದೂರುಗಳು ಬರುತ್ತಿವೆ. ಈ ಕುರಿತು ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇದ್ದಲ್ಲಿ ಅವರನ್ನೇ ವರ್ಗಾವಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Published by:HR Ramesh
First published: