ಕಾರವಾರ(ಅಕ್ಟೋಬರ್. 06): ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲ್ ಮೀನುಗಾರಿಕೆ ಮೇಲೆ ಜಿಲ್ಲಾಡಳಿತ ನಿಷೇಧ ಹೇರಿದೆ. ಮೀನುಗಳ ಸಂತತಿ ನಾಶವಾಗದಿರಲಿ ಎನ್ನುವ ಕಾರಣಕ್ಕೆ ಜಿಲ್ಲೆಯ ಮೀನುಗಾರರು ಸಹ ಮೀನುಗಾರಿಕೆಯಲ್ಲಿ ಈ ಅವೈಜ್ಞಾನಿಕ ಪದ್ದತಿಗಳನ್ನ ಅನುಸರಿಸುವುದಿಲ್ಲ. ಆದರೆ, ಹೊರ ಜಿಲ್ಲೆಗಳ ಮೀನುಗಾರರು ಜಿಲ್ಲೆಯ ಕರಾವಳಿಯಲ್ಲಿ ಬುಲ್ ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದ ವೇಳೆಯೇ ಕೋಸ್ಟ್ ಗಾರ್ಡ್ ಕೈಗೆ ಸಿಕ್ಕಿಬಿದ್ದಿದ್ದಾರೆ. ಜಿಲ್ಲೆಯ ಕಾರವಾರದ ಆಳಸಮುದ್ರ ಮೀನುಗಾರಿಕಾ ಬೋಟ್ಗಳು ದಡದ ಸಮೀಪದಲ್ಲೇ ನಿಷೇಧಿತ ಬುಲ್‌ಟ್ರಾಲ್ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಬೋಟ್ಗಳನ್ನ ಹಿಡಿದು ತಂದಿದ್ದಾರೆ. ರಾಜ್ಯ ಸರ್ಕಾರ ಕರಾವಳಿಯಲ್ಲಿ ಲೈಟ್ ಫಿಶಿಂಗ್ ಹಾಗೂ ಬುಲ್‌ಟ್ರಾಲಿಂಗ್ ನಂತಹ ಅವೈಜ್ಞಾನಿಕ ಮೀನುಗಾರಿಕೆಯನ್ನ ನಿಷೇಧಿಸಿದೆ. ಆದರೂ ಸಹ ಹೊರರಾಜ್ಯ ಹಾಗೂ ದಕ್ಷಿಣ ಕನ್ನಡ ಭಾಗದ ಮೀನುಗಾರರು ಆಳಸಮುದ್ರದಲ್ಲಿ ನಿಷೇಧಿತ ಮೀನುಗಾರಿಕೆಯಲ್ಲಿ ತೊಡಗುತ್ತಿರುವುದನ್ನ ಜಿಲ್ಲೆಯ ಮೀನುಗಾರರು ಸಾಕಷ್ಟು ಬಾರಿ ಗಮನಿಸಿದ್ದು ಮೀನುಗಾರಿಕಾ ಇಲಾಖೆಗೂ ದೂರು ನೀಡಿದ್ದರು.
ಮೀನುಗಾರಿಕೆ ಇಲಾಖೆ ನಿಷೇಧಿತ ಮೀನುಗಾರಿಕೆ ನಡೆಸುವವರ ಮೇಲೆ ಕಣ್ಣಿರಿಸಿದ್ದು ಆದರೂ ಸಹ ಯಾವುದೇ ಬೋಟ್ಗಳು ಸಿಕ್ಕಿಬಿದ್ದಿರಲಿಲ್ಲ. ಇದೀಗ ದಡದ ಸಮೀಪದಲ್ಲೇ ಬುಲ್ ಟ್ರಾಲಿಂಗ್‌ನಲ್ಲಿ ತೊಡಗಿದ್ದ ಮಲ್ಪೆ ಭಾಗದ ಬೋಟ್ ಗಳು ಕೋಸ್ಟ್ ಗಾರ್ಡ್ ಕೈಗೆ ಸಿಕ್ಕಿಬಿದ್ದಿದ್ದು, ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಬೋಟ್ಗಳನ್ನ ಪರಿಶೀಲಿಸಿ ಬುಲ್ ಟ್ರಾಲಿಂಗ್‌ನಲ್ಲಿ ತೊಡಗಿದ್ದ ಬೋಟ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಇನ್ನು ವಶಕ್ಕೆ ಪಡೆದ ಬೋಟ್ಗಳಲ್ಲಿ ಬುಲ್ ಟ್ರಾಲಿಂಗ್‌ಗೆ ಬಳಕೆಯಾಗುವ ಬಲೆಗಳು ಹಾಗೂ ಹಿಡಿಯಲಾದ ಮೀನುಗಳು ಪತ್ತೆಯಾಗಿದ್ದು ಸಮುದ್ರ ತೀರಕ್ಕೆ ಸಮೀಪದಲ್ಲೇ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದು ಕಂಡು ಬಂದಿದೆ. ಆಳಸಮುದ್ರ ಮೀನುಗಾರಿಕಾ ಬೋಟ್ಗಳು ತೀರದಿಂದ 12 ನಾಟಿಕಲ್ ಮೈಲಿಗಿಂತ ಹೊರಗಡೆ ಮಾತ್ರ ಮೀನುಗಾರಿಕೆ ನಡೆಸಬಹುದಾಗಿದ್ದು ಸದ್ಯ ಸಿಕ್ಕಿಬಿದ್ದಿರುವ ಬೋಟ್ಗಳು 12 ನಾಟಿಕಲ್ ಮೈಲ್ ಒಳಗಡೆಯೇ ಮೀನುಗಾರಿಕೆ ನಡೆಸಿದ್ದಾರೆ.
ಈ ರೀತಿಯ ಅವೈಜ್ಞಾನಿಕ ಮೀನುಗಾರಿಕೆಯಿಂದಾಗಿ ಸಣ್ಣ ಸಣ್ಣ ಮೀನಿನ ಮರಿಗಳು ಸಹ ಬಲೆಯಲ್ಲಿ ಸಿಲುಕುವುದರಿಂದ ಮೀನಿನ ಸಂತತಿ ಕ್ಷೀಣಿಸುತ್ತದೆ ಎನ್ನುವ ಕಾರಣಕ್ಕೆ ಈ ವಿಧಾನಗಳನ್ನ ನಿಷೇಧಿಸಲಾಗಿದೆ. ಆದರೂ ಸಹ ನಿಷೇಧಿತ ಮೀನುಗಾರಿಕೆ ನಡೆಸಿದ ಬೋಟ್ಗಳಿಗೆ ಐದು ಪಟ್ಟು ದಂಡ ವಿಧಿಸುವುದಾಗಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ರೀತಿಯ ಅವೈಜ್ಞಾನಿಕ ಮೀನುಗಾರಿಕೆಯಿಂದಲೇ ಮತ್ಸ್ಯಕ್ಷಾಮ ಎದುರಾಗುತ್ತಿದ್ದು, ಇಂತಹ ಬೋಟ್ಗಳ ಲೈಸನ್ಸ್‌ನ್ನ ರದ್ದುಗೊಳಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ : 57 ಲಕ್ಷ ನಗದು ಸೇರಿದಂತೆ ಹಲವು ದಾಖಲೆಗಳು ವಶ
ಇನ್ನು ಕರಾವಳಿಯಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಲಾಭದ ಆಸೆಗೆ ಕೆಲವರು ನಡೆಸುವ ಅವೈಜ್ಞಾನಿಕ ಮೀನುಗಾರಿಕೆಯಿಂದ ಉಳಿದ ಮೀನುಗಾರರು ತೊಂದರೆ ಅನುಭವಿಸುವಂತಾಗಿದ್ದು ಇಂತಹ ಮೀನುಗಾರಿಕೆ ನಡೆಸುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಮೀನುಗಾರರ ಅಭಿಪ್ರಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ