HOME » NEWS » District » LICENSE CANCELLATION IF TAKE DOUBLE RATE OF SAND UTTARA KANNADA DC WAS GAVE WARNING RH

ಇನ್ನು ಮುಂದೆ ಮರಳಿಗೆ ದುಪ್ಪಟ್ಟು ದರ ಪಡೆದರೆ ಪರವಾನಗಿ ರದ್ದು: ಉತ್ತರ ಕನ್ನಡ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

ಯಾರಾದರೂ ಹೆಚ್ಚಿನ ಬೆಲೆಗೆ  ಮರಳು ಮಾರಾಟ ಮಾಡಿದಲ್ಲಿ ಸಾರ್ವಜನಿಕರು  ನೇರವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ದೂರವಾಣಿ ಸಂಖ್ಯೆ 08382- 229 857ಕ್ಕೆ ಅಥವಾ ವಾಟ್ಸಪ್ ದೂರು ಸಂಖ್ಯೆ 94835 11015ಕ್ಕೆ ಅಥವಾ ಆಯಾ ತಾಲೂಕಿಗೆ ಸಂಬಂಧಿಸಿದ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಗೆ ದೂರು ಸಲ್ಲಿಸಬಹುದಾಗಿದೆ.

news18-kannada
Updated:November 6, 2020, 7:32 AM IST
ಇನ್ನು ಮುಂದೆ ಮರಳಿಗೆ ದುಪ್ಪಟ್ಟು ದರ ಪಡೆದರೆ ಪರವಾನಗಿ ರದ್ದು: ಉತ್ತರ ಕನ್ನಡ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ
ಮರಳು ತೆಗೆಯುತ್ತಿರುವುದು. (ಸಾಂದರ್ಭಿಕ ಚಿತ್ರ)
  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಬೆಲೆಗೆ ಮರಳು ಮಾರಾಟ ಮಾಡಿದ್ದಲ್ಲಿ ಪರವಾನಗಿ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ಹರೀಶಕುಮಾರ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಮರಳು ಸಿಗುತ್ತಿಲ್ಲ. ಸಿಕ್ಕರೂ ಕೂಡ ದುಪ್ಪಟ್ಟು ಬೆಲೆ ತೆರಬೇಕಾಗಿದೆ ಎಂಬ ಕೂಗು ಪದೇ ಪದೇ ಕೇಳಿ ಬರುತ್ತಿದೆ. ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಅನುಮತಿ ಪಡೆದಿರುವ  ಟಿಪಿದಾರರು(ಪರವಾನಗಿದಾರರು) ಅಥವಾ ಸಾಗಾಣಿಕೆದಾರರು ಸಾರ್ವಜನಿಕರಿಂದ ಹೆಚ್ಚಿನ ಬೆಲೆಯನ್ನು ವಸೂಲಿ ಮಾಡುತ್ತಿರುವುದು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಗಮನಕ್ಕೆ ಬಂದಿದೆ. ಇದನ್ನು ನಿಯಂತ್ರಿಸುವ ಅವಶ್ಯಕತೆ  ಇದ್ದು, ಜಿಲ್ಲೆಯ ಸಾಮಾನ್ಯ ನಾಗರಿಕರಿಗೆ ಕೂಡ ಯೋಗ್ಯ ದರದಲ್ಲಿ ಮರಳು ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಅಂಕೋಲಾ, ಶಿರಸಿ, ದಾಂಡೇಲಿ, ಹೊನ್ನಾವರ, ಭಟ್ಕಳ ಹಾಗೂ ಹಳಿಯಾಳ ತಾಲೂಕುಗಳಲ್ಲಿ ಮರಳು ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮರಳು ದಾಸ್ತಾನು ಕೇಂದ್ರಗಳನ್ನು ತಾಲೂಕು ಮರಳು ಉಸ್ತುವಾರಿ ಸಮಿತಿಯ ಮೇಲುಸ್ತುವಾರಿಯಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರ ನಿರ್ವಹಣೆ ಮಾಡುತ್ತದೆ. ಈ ಮೊದಲು ಸರಕಾರಿ ಉದ್ದೇಶದ ಕಾಮಗಾರಿಗಳಿಗೆ ಮಾತ್ರ ಮರಳು ದಾಸ್ತಾನು ಕೇಂದ್ರಗಳಿಂದ  ಮರಳು ಪೂರೈಕೆ ಮಾಡಲು ನಿರ್ಧರಿಸಿದ್ದು, ಇನ್ನು ಮುಂದೆ ಸಾರ್ವಜನಿಕರಿಗೂ ಕೂಡ ಇಲ್ಲಿಂದಲೇ ಮರಳು ಪೂರೈಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಮರಳಿನ ಅವಶ್ಯಕತೆ ಇರುವ  ಸಾರ್ವಜನಿಕರು ತಮಗೆ ಅವಶ್ಯವಿರುವ ಮರಳಿನ ಪ್ರಮಾಣವನ್ನು ಸಹಾಯವಾಣಿ ಸಂಖ್ಯೆ 81235 99266ಗೆ ತಿಳಿಸಿದಲ್ಲಿ ತಾಲೂಕು ಮರಳು ಉಸ್ತುವಾರಿ ಸಮಿತಿಯು ಮರಳಿಗೆ  ಅನ್ವಯಿಸುವ ದರವನ್ನು ನಿಗದಿಪಡಿಸಿ ನೀಡಿದ ನಂತರ ಮರಳು ಖರೀದಿದಾರರು  ಸದರಿ ಮೊತ್ತವನ್ನು ನೇರವಾಗಿ  ತಾಲೂಕು ಮರಳು ಉಸ್ತುವಾರಿ ಸಮಿತಿ ಸೂಚಿಸುವ ಮರಳು ಪೂರೈಕೆದಾರರಿಗೆ  ಪಾವತಿಸಿದ ನಂತರ ಮರಳನ್ನು ಪೂರೈಸುವಲ್ಲಿ ಕ್ರಮ ಜರುಗಿಸಲಾಗುವುದು. ಇದರಿಂದಾಗಿ  ಸಾಮಾನ್ಯ ನಾಗರೀಕರಿಗೂ ಕೂಡ ಯೋಗ್ಯ ದರದಲ್ಲಿ ಮರಳು ಲಭ್ಯವಾಗುವುದು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಬಾಗಲಕೋಟೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ

ಇನ್ನುಮುಂದೆ ಸಾಂಪ್ರದಾಯಿಕವಾಗಿ ಮರಳು ತೆಗೆಯುವವರು ಅಥವಾ ಸಾಗಾಣಿಕೆದಾರರು ಹೆಚ್ಚಿನ ಬೆಲೆಗೆ ಮರಳು ಮಾರಾಟ ಮಾಡುವುದು ಅಥವಾ ಮಾಡಿರುವುದು  ಕಂಡು ಬಂದಲ್ಲಿ ಅಂಥವರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಲಾಗುವುದು. ಯಾರಾದರೂ ಹೆಚ್ಚಿನ ಬೆಲೆಗೆ  ಮರಳು ಮಾರಾಟ ಮಾಡಿದಲ್ಲಿ ಸಾರ್ವಜನಿಕರು  ನೇರವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ದೂರವಾಣಿ ಸಂಖ್ಯೆ 08382- 229 857ಕ್ಕೆ ಅಥವಾ ವಾಟ್ಸಪ್ ದೂರು ಸಂಖ್ಯೆ 94835 11015ಕ್ಕೆ ಅಥವಾ ಆಯಾ ತಾಲೂಕಿಗೆ ಸಂಬಂಧಿಸಿದ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಗೆ ದೂರು ಸಲ್ಲಿಸಬಹುದಾಗಿದೆ. ಈ ಕುರಿತಂತೆ ಎಲ್ಲಾ ಸಹಾಯಕ ಆಯುಕ್ತರಿಗೆ ಹಾಗೂ ತಹಸೀಲ್ದಾರರಿಗೆ ಈಗಾಗಲೇ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾಕೆ ಈ‌ ಕ್ರಮ?ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ. ಅವಕಾಶ ಸಿಕ್ಕಿದಾಗಿನಿಂದಲೂ ಉದ್ಯಮಿಗಳು ಮರಳನ್ನ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಡವರು ಮನೆ ಕಟ್ಟಿಕೊಳ್ಳಲು ಬಳಸಲು ಮರಳು ಖರೀದಿ ಮಾಡೋದು ಹರಸಾಹಸ ಪಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ದೂರುಗಳು ಜಿಲ್ಲಾಡಳಿತದ ಮೆಟ್ಟಿಲೇರಿದ್ದವು. ಇದರಿಂದ‌ ಎಚ್ಚೆತ್ತ ಜಿಲ್ಲಾಡಳಿತ ಕೂಡಲೇ ಈ‌ ಕ್ರಮಕ್ಕೆ ಮುಂದಾಗಿದೆ. ಸರಕಾರ ನಿಗದಿ ಮಾಡಿದ ದರಕ್ಕಿಂದ ಒಂದು ರೂಪಾಯಿ ಹೆಚ್ಚು ತೆಗೆದುಕೊಂಡರೂ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ. ಒಟ್ಟಾರೆ ಬಡವರ ಪರವಾಗಿ ನಿಂತಿರುವ ಜಿಲ್ಲಾಡಳಿತ ಮುಂದೆಯೂ ಕೂಡ ಇಂತಹ ಕಾನೂನು ಗಟ್ಟಿಗೊಳಿಸಲಿ.
Published by: HR Ramesh
First published: November 6, 2020, 7:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading