• Home
  • »
  • News
  • »
  • district
  • »
  • ಇವರು ಒದೆಯೋ ಪೊಲೀಸರಲ್ಲ, ಓದಿಸುವ ಪೊಲೀಸರು; ಕೊಪ್ಪಳ ಐಆರ್​ಬಿ ಆವರಣ ಕಲಿಕೆಯ ತಾಣ

ಇವರು ಒದೆಯೋ ಪೊಲೀಸರಲ್ಲ, ಓದಿಸುವ ಪೊಲೀಸರು; ಕೊಪ್ಪಳ ಐಆರ್​ಬಿ ಆವರಣ ಕಲಿಕೆಯ ತಾಣ

ಕೊಪ್ಪಳ ಐಆರ್​ಬಿ ಆವರಣದಲ್ಲಿರುವ ಸುಸಜ್ಜಿತ ಕಟ್ಟಡ.

ಕೊಪ್ಪಳ ಐಆರ್​ಬಿ ಆವರಣದಲ್ಲಿರುವ ಸುಸಜ್ಜಿತ ಕಟ್ಟಡ.

ಬರೀ ಗ್ರಂಥಾಲಯ ಮಾತ್ರವಲ್ಲ, ಇಲ್ಲಿರುವ ವಸತಿ ಗೃಹದ ನಿವಾಸಿಗಳಿಗೆ ಅನುಕೂಲವಾಗಲೆಂದು ಶುದ್ಧ ಕುಡಿಯುವ ನೀರಿನ ಘಟಕ, ಹೋಟೆಲ್, ಔಷಧಾಲಯ, ತರಕಾರಿ ಅಂಗಡಿ, ಸಹಸ್ರಾರು ಸಂಖ್ಯೆಯಲ್ಲಿ ಗಿಡ-ಮರಗಳನ್ನು ಬೆಳೆಸಿದ್ದಾರೆ. ಅಧ್ಯಯನಕ್ಕೆ ಪೂರಕ ವಾತಾವರಣ ಇಲ್ಲಿದ್ದು, ಮಾದರಿಯಾಗಿದೆ.

  • Share this:

ಕೊಪ್ಪಳ: ಜನರ ರಕ್ಷಣೆ ಮಾಡೋರು, ಕಾನೂನು ರಕ್ಷಣೆ ಮಾಡೋರು, ಕಳ್ಳರನ್ನು ಹಿಡಿಯೋರು, ಭದ್ರತೆ ನೀಡೋರು, ಟ್ರಾಫಿಕ್ ನಿಯಂತ್ರಿಸೋರು ಅಂದರೆ ಅದು ಪೊಲೀಸರು. ಇಂತಹ ಜವಾಬ್ದಾರಿಯುತ ಹುದ್ದೆ ನಿಭಾಯಿಸುವುದರಲ್ಲಿ ಅವರ ಬಹುಪಾಲು ಸಮಯ ಮುಗಿದುಹೋಗುತ್ತದೆ. ಇನ್ನಿತರ ಚಟುವಟಿಕೆಗೆ ಅವರಿಗೆ ಸಮಯವೇ ಸಿಗುವುದಿಲ್ಲ.


ಆದರೆ, ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ಭಾರತೀಯ ಮೀಸಲು ಪಡೆಯ ಸಿಬ್ಬಂದಿಗೆ ಪುಸ್ತಕ ಮೇಲೆ ವಿಶೇಷ ಪ್ರೀತಿ ಹುಟ್ಟುವಂತೆ ಮಾಡಿದ್ದಾರೆ ಈ ಹಿಂದೆ  ಕಮಾಂಡೆಂಟ್ ಆಗಿದ್ದ ನಿಶಾ ಜೈನ್​ ಅವರು. ಪೊಲೀಸ್ ಸಿಬ್ಬಂದಿ ಮತ್ತು ಅವರ ಮಕ್ಕಳು ಹಾಗೂ ಸುತ್ತಲಿನ ಗ್ರಾಮಗಳ ಜನರಲ್ಲಿ ಪುಸ್ತಕ ಪ್ರೀತಿ ಮೂಡಿಸುವ ವಿನೂತನ ಅಭಿಯಾನವನ್ನು ನಿಶಾ ಅವರು ಆರಂಭಿಸಿದ್ದರು. ಈಗ ಆ ಅಭಿಯಾನವನ್ನು ಈಗಿನ ಕಮಾಂಡೆಂಟ್ ಕೆ.ಎಂ.ಮಹದೇವಪ್ರಸಾದ್ ಅವರು ಯಶಸ್ವಿಯಾಗಿ ಮುನ್ನಡೆಸಿಕೊಂಡು ಸಾಗಿದ್ದಾರೆ.


ಪೊಲೀಸ್ ಸಿಬ್ಬಂದಿ ಹಾಗೂ ಜನರ ಜ್ಞಾನಾರ್ಜನೆಗಾಗಿ ಐಆರ್​ಬಿ ಆವರಣದೊಳಗೆ ರೀಡಿಂಗ್ ರೂಂ, ಗ್ರಂಥಾಲಯ ನಿರ್ಮಿಸಿದ್ದಾರೆ. ಇಲ್ಲಿ ಕನ್ನಡ, ಇಂಗ್ಲಿಷ್ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಮಕ್ಕಳಿಗಾಗಿ ಕಥಾ ಪುಸ್ತಕಗಳು, ಚಿತ್ರಕಲೆಯ ಪುಸ್ತಕಗಳು, ಕವನ ಸಂಕಲನಗಳು, ಕುವೆಂಪು, ದ.ರಾ. ಬೇಂದ್ರೆ, ಮತ್ತಿತರ ಖ್ಯಾತ ನಾಮರ ಕಾದಂಬರಿಗಳು, ಪುಸ್ತಕಗಳು, ಪ್ರಬಂಧಗಳು, ಕಾನೂನು ವಿವರಿಸುವ ಸಹಸ್ರಾರು ಪುಸ್ತಕಗಳ ಲೋಕವನ್ನೇ ತಂದಿಟ್ಟಿದ್ದಾರೆ.


ಸ್ಕೂಲ್ ಸಮವಸ್ತ್ರ ಧರಿಸಿಕೊಂಡು ಬಂದು ಮಕ್ಕಳು ಕೂಡ ಇಂಡಿಯನ್ ರಿಸರ್ವ್ ಬಟಾಲಿಯನ್ ಆವರಣದಲ್ಲಿ ಆರಂಭಿಸಿದ ಗ್ರಂಥಾಲಯದಲ್ಲಿ ಓದುತ್ತಾರೆ. ಈ ಗ್ರಂಥಾಲಯಕ್ಕೆ ಜನರಿಂದಲೇ ಪುಸ್ತಕಗಳು ಬರುತ್ತವೆ. ಮತ್ತು ಅವುಗಳನ್ನು ಜನರೇ ಓದುತ್ತಾರೆ. ಇಂಥ ವಿಶಿಷ್ಟ ಯೋಚನೆ ಮಾಡಿದ್ದು ಐಆರ್​ಬಿ​ ಕಮಾಂಡೆಂಟ್ ಆಗಿದ್ದ ನಿಶಾ ಜೈನ್. ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣ ಇಲ್ಲದಿರುವುದು, ಪುಸ್ತಕಗಳ ಕೊರತೆ ಗಮನಿಸಿ ಗ್ರಂಥಾಲಯ ಶುರು ಮಾಡಲಾಗಿದ್ದು, ಕೊಪ್ಪಳದ ಜಿಲ್ಲಾ ಗ್ರಂಥಾಲಯದ ಸಹಕಾರವನ್ನೂ ಪಡೆದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಥಮ ಬುಕ್ಸ್ ಎನ್ನುವ ಸಂಸ್ಥೆ ನಡೆಸುತ್ತಿರುವ ಡೊನೇಟ್ ಎ ಬುಕ್ ಎನ್ನುವ ಆನ್ಲೈನ್ ವೆಬ್ಸೈಟ್ ಮೂಲಕ ಅಭಿಯಾನ ಆರಂಭಿಸಲಾಯಿತು. ಅಭಿಯಾನದಡಿ ವೆಬ್​ಸೈಟ್​ನಲ್ಲಿ ಮಾಡಿದ ಮನವಿಯಿಂದಾಗಿ ಸುಮಾರು 50 ಸಾವಿರ ಪುಸ್ತಕಗಳು ಸಿಕ್ಕಿವೆ.


ಗ್ರಂಥಾಲಯ ಮಾತ್ರವಲ್ಲ, ಕಚೇರಿ ಕಟ್ಟಡದಲ್ಲೇ ಸುಸಜ್ಜಿತ ರೀಡಿಂಗ್ ರೂಂ ತೆರೆಯಲಾಗಿದ್ದು, ಇದು ಪೊಲೀಸ್ ಸಿಬ್ಬಂದಿಗೆ ಮಾತ್ರವಲ್ಲ, ಪುಸ್ತಕ ಓದುವ ಅಭಿರುಚಿ ಇರುವ ಹೊರಗಿನವರಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಸದ್ಯ ಕೋವಿಡ್-19 ಇರುವುದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.


ಇದು ಐಆರ್​ಬಿ ಆವರಣದೊಳಗೆ ಇರುವುದರಿಂದ ಬಹಳಷ್ಟು ಜನರಿಗೆ ಗೊತ್ತಿಲ್ಲ. ಜನ ಇಲ್ಲಿ ಬಂದು ಪುಸ್ತಕ ಓದುವುದನ್ನು ರೂಢಿಸಿಕೊಂಡರೆ ಸಾರ್ಥಕ. ಪಕ್ಕದ ಗ್ರಾಮದ ಒಂದಿಬ್ಬರು ಬಂದು ಓದುತ್ತಾರೆ. ಸ್ಪರ್ಧಾತ್ಮಕ ಪುಸ್ತಕಗಳು ಇಲ್ಲಿವೆ. ವಿಶೇಷವಾಗಿ ಪೊಲೀಸ್ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅನೇಕ ಪುಸ್ತಕಗಳು ಇಲ್ಲಿವೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯ ಪುಸ್ತಕಗಳಿವೆ ಅನ್ನೋದು ವಿಶೇಷ. ಮಕ್ಕಳು ಶಾಲೆಗೆ ಹೋಗುವ ಮುನ್ನ ಹಾಗೂ ಬಂದ ಬಳಿಕ ಶಾಲೆಯ ಪುಸ್ತಕಗಳ ಜಂಜಾಟ ಬಿಟ್ಟು ಇಲ್ಲಿರುವ ಕಥೆ-ಕವನ-ಕಾದಂಬರಿಗಳ ಓದುವುದನ್ನು ರೂಢಿಸಿಕೊಂಡಿದ್ದಾರೆ. ಎಲ್ಲ ರೀತಿಯ ಪುಸ್ತಕಗಳು ಇಲ್ಲಿವೆ ಅಂತಾರೆ ಇಲ್ಲಿಗೆ ಬರುವ ಮಕ್ಕಳು.


ಇದನ್ನು ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನಲ್ಲೇ ಮಗ ಯತೀಂದ್ರಗೂ ತಗುಲಿದ ಕೊರೋನಾ ಸೋಂಕು


ಸುಮಾರು 160 ಎಕರೆ ವಿಸ್ತಾರದ ಐರ್​​ಬಿ ಜಮೀನಿನಲ್ಲಿ 560ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕುಟುಂಬದ ಸದಸ್ಯರೆಲ್ಲ ಲೆಕ್ಕ ಹಾಕಿದರೆ ಸುಮಾರು 1700 ಜನಸಂಖ್ಯೆ ಇಲ್ಲಿದೆ. ಬರೀ ಗ್ರಂಥಾಲಯ ಮಾತ್ರವಲ್ಲ, ಇಲ್ಲಿರುವ ವಸತಿ ಗೃಹದ ನಿವಾಸಿಗಳಿಗೆ ಅನುಕೂಲವಾಗಲೆಂದು ಶುದ್ಧ ಕುಡಿಯುವ ನೀರಿನ ಘಟಕ, ಹೋಟೆಲ್, ಔಷಧಾಲಯ, ತರಕಾರಿ ಅಂಗಡಿ, ಸಹಸ್ರಾರು ಸಂಖ್ಯೆಯಲ್ಲಿ ಗಿಡ-ಮರಗಳನ್ನು ಬೆಳೆಸಿದ್ದಾರೆ. ಅಧ್ಯಯನಕ್ಕೆ ಪೂರಕ ವಾತಾವರಣ ಇಲ್ಲಿದ್ದು, ಮಾದರಿಯಾಗಿದೆ.

Published by:HR Ramesh
First published: