Digital Library: ಈ ಊರಿನ ಗ್ರಂಥಾಲಯ ಈಗ ಸಂಪೂರ್ಣ ಹೈಟೆಕ್, ಎಲ್ಲರೂ ತಂತಮ್ಮ ಫೋನಲ್ಲೇ ಲೈಬ್ರರಿಯ ಪುಸ್ತಕ ಓದಬಹುದು!

Hitech Library: ಬೇವೂರು ಗ್ರಾಮದ ಡಿಜಿಟಲ್ ಗ್ರಂಥಾಲಯದಲ್ಲಿ  ಏಕಕಾಲದಲ್ಲಿ ಆನ್‌ಲೈನಲ್ಲೇ 40 ಜನ ಕುಳಿತುಕೊಂಡು ಪ್ರಪಂಚದಲ್ಲಿರುವ ಎಲ್ಲಾ  ಪುಸ್ತಕದ ಮಾಹಿತಿಯನ್ನು ಇಲ್ಲಿ ಪಡೆದುಕೊಳ್ಳಬಹುದಾಗಿದೆ.

ಬೇವೂರಿನ ಗ್ರಂಥಾಲಯ

ಬೇವೂರಿನ ಗ್ರಂಥಾಲಯ

  • Share this:
    ಬಾಗಲಕೋಟೆ: ಜಿಲ್ಲೆಯ ಜಿಲ್ಲಾ ಪಂಚಾಯತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಇಚ್ಛಾಶಕ್ತಿಯಿಂದ ಗ್ರಾಮೀಣ ಭಾಗದಲ್ಲಿ (Rural Parts) ಡಿಜಿಟಲ್ ಗ್ರಂಥಾಲಯಗಳು  (Digital Library) ತಲೆ ಎತ್ತಿ ನಿಂತಿವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ತಂತ್ರಜ್ಞಾನವನ್ನು ಮುಟ್ಟಿಸುವ ದೃಷ್ಟಿಯಿಂದ ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಡಿಜಿಟಲ್ ಟಚ್ ನೀಡಲಾಗುತ್ತಿದೆ. ಹೌದು, ಬಾಗಲಕೋಟೆ ತಾಲೂಕಿನ ಬೇವೂರ ಗ್ರಾಮ ಪಂಚಾಯಿತಿ ಕೇಂದ್ರದ ಅಧೀನದಲ್ಲಿರುವ ಗ್ರಂಥಾಲಯಕ್ಕೆ ಡಿಜಿಟಲ್ ಟಚ್ ನೀಡಲಾಗುತ್ತಿದ್ದು, ವಿವಿಧ ರೀತಿಯ ಸೌಲಭ್ಯಗಳು ಓದುಗರನ್ನು (Readers) ಆಕರ್ಷಿಸುತ್ತಿವೆ.  ಜಿಲ್ಲಾ ಪಂಚಾಯಿತಿ ಸಿಇಒ ಅವರ ಮಾರ್ಗದರ್ಶನ ಮತ್ತು  ಪಂಚಾಯಿತಿ ಅಧಿಕಾರಿಗಳ ಸತತ ಪರಿಶ್ರಮದಿಂದ ರಾಜ್ಯದ ಮೂರನೇ ಹಾಗೂ ಜಿಲ್ಲೆಯ ಪ್ರಥಮ ಮಾದರಿ ಡಿಜಿಟಲ್ ಗ್ರಂಥಾಲಯವಾಗಿ ಹೊರಹೊಮ್ಮಿದೆ. 

    ಗ್ರಾಮೀಣ ಭಾಗದ ಗ್ರಂಥಾಲಯ ಎಂದರೆ ಹಳೆ ಕಟ್ಟಡ, ಧೂಳು ತಿಂದ ಪುಸ್ತಕಗಳು ಇರುತ್ತವೆ ಎನ್ನೋ ಭಾವನೆ ಎಲ್ಲರಲ್ಲೂ ಇರುತ್ತೆ. ಆದ್ರೆ ಅಧಿಕಾರಿಗಳ ಆಸಕ್ತಿಯಿಂದ ಅಂತಹ ಭಾವನೆ ದೂರವಾಗಿದೆ. ಬೇವೂರು ಗ್ರಾಮದ ಡಿಜಿಟಲ್ ಗ್ರಂಥಾಲಯದಲ್ಲಿ  ಏಕಕಾಲದಲ್ಲಿ ಆನ್‌ಲೈನಲ್ಲೇ 40 ಜನ ಕುಳಿತುಕೊಂಡು ಪ್ರಪಂಚದಲ್ಲಿರುವ ಎಲ್ಲಾ  ಪುಸ್ತಕದ ಮಾಹಿತಿಯನ್ನು ಇಲ್ಲಿ ಪಡೆದುಕೊಳ್ಳಬಹುದಾಗಿದೆ.

    ಅಷ್ಟೇ ಅಲ್ಲದೆ, ರೈತರ ಅನುಕೂಲಕ್ಕಾಗಿ ಕೃಷಿ ಚಟುವಟಿಕೆಗಳ ಮಾಹಿತಿಗಳುಳ್ಳ ಪುಸ್ತಕಗಳು ಲಭ್ಯವಿವೆ. ರೈತರು ಯಾವ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸಬೇಕು  ಎಂಬ ಕೃಷಿ ಮಾಹಿತಿ ಕೂಡ ಇಲ್ಲಿ ಲಭ್ಯವಾಗುತ್ತದೆ.

    ಸುಸಜ್ಜಿತ ಕಟ್ಟಡ, ಆಸನದ ವ್ಯವಸ್ಥೆ..!

    ಸರ್ಕಾರದ ವಿವಿಧ ಅನುದಾನ ಬಳಸಿ  ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಜನರಲ್ ಜಿ.ಜಿ.ಬೇವೂರ ಸ್ಮಾರಕದ ಬಳಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ, ಜನರಿಗೆ, ಬೇರೆ ಬೇರೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಚಿಕ್ಕ -ಮಕ್ಕಳಿಗೆ ಬೇರೆ ಆಸನದ ವ್ಯವಸ್ಥೆ ಮಾಡಿರುವುದು ಇಲ್ಲಿನ ವಿಶೇಷತೆ. ಇನ್ನೂ ಗಾಳಿ ಬೆಳಕು, ನೀರಿನ ವ್ಯವಸ್ಥೆ ಸೇರಿದಂತೆ ಎಸಿ ಸೌಲಭ್ಯ ಅಳವಡಿಸುವ ಇಚ್ಛೆಯನ್ನ ಅಧಿಕಾರಿಗಳು ಹೊಂದಿದ್ದಾರೆ.

    ಇದನ್ನೂ ಓದಿ: ಬೆಳಗಾವಿಯಲ್ಲಿಂದು ಐದು ಭಾಷೆಯ ಡಿಜಿಟಲ್ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಿರುವ ಸಿಎಂ

    ಸದ್ಯ ಗ್ರಂಥಾಲಯದಲ್ಲಿ 250 ಜನ ಸಾಹಿತ್ಯಾಸಕ್ತರು, 150 ಜನರು ಕೃಷಿ ಸಂಬಂಧಿಸಿದ ಸದಸ್ಯರು, 600 ವಿದ್ಯಾರ್ಥಿಗಳು ಸದಸ್ಯರಾಗಿದ್ದಾರೆ. ಇಲ್ಲಿ ಉಚಿತವಾಗಿ ಸದಸ್ಯತ್ವ ಪಡೆದುಕೊಳ್ಳ ಬಹುದಾಗಿದ್ದು, ಸದಸ್ಯತ್ವ ಫೀ ನಿಗದಿಯಾಗಿಲ್ಲ. ಈಗಾಗಲೇ ಹೆಚ್ಚಿನ ಸದಸ್ಯತ್ವದ ಸಲುವಾಗಿ ಸ್ಥಳೀಯ ಗ್ರಾಪಂ ಅಧಿಕಾರಿಗಳು ಬೇವೂರ, ಚವಡಾಪೂರ ಗ್ರಾಮಗಳಲ್ಲಿ ಮನೆ-ಮನೆಗೆ ತರಳಿ ಸದಸ್ಯತ್ವ ಅಭಿಯಾನ ಕೂಡ ಮಾಡಿದ್ದಾರೆ.

    ಆನ್‌ಲೈನ್, ಆಫ್‌ಲೈನ್‌ನಲ್ಲೂ ಪುಸ್ತಕ ಲಭ್ಯ..!

    ಗ್ರಾಮ ಪಂಚಾಯಿತಿ  ಅನುದಾನ ಬಳಸಿ ಪ್ರಪಂಚದಲ್ಲಿರುವ ಎಲ್ಲಾ ಸಾಹಿತಿಗಳು, ರೈತರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್ ಲೈನ್, ಅಫ್‌ ಲೈನ್‌ ಲ್ಲೂ ಪುಸ್ತಕಗಳನ್ನು ಖರೀದಿಸಿದೆ. ದೇಶದಲ್ಲಿ ನಡೆಯುವ ಎಲ್ಲಾ ಮಾಹಿತಿಯನ್ನು ಆನ್‌ ಲೈನ್ ನಲ್ಲಿ ಪಡೆದುಕೊಳ್ಳುವಂತೆ ತಂತ್ರಜ್ಞಾನ ಅಳವಡಿಸಲಾಗಿದೆ.

    ಅಧಿಕಾರಿಗಳ ಇಚ್ಛಾಶಕ್ತಿ ಮತ್ತು  ಪರಿಶ್ರಮದೊಂದಿಗೆ ವರ್ಷಗಳಿಂದ ನಶಿಸಿ ಹೋಗಿ ಮೂಲೆ ಸೇರಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಈಗ ಹೊಸ ರೂಪ, ಡಿಜಿಟಲ್ ಭಾಗ್ಯ ದೊರೆತಿದೆ.  ಈಗಾಗಲೇ ಬಾಗಲಕೋಟೆ ಜಿಲ್ಲೆಯಾದ್ಯಂತ ಸುಮಾರು 15 ಗ್ರಂಥಾಲಯಗಳಿಗೆ ಡಿಜಿಟಲ್ ಟಚ್ ನೀಡಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಈ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತವಾಗಿದೆ.

    (ವರದಿ: ಮಂಜುನಾಥ ತಳವಾರ)
    Published by:Soumya KN
    First published: