Koppala - ರಾಜಕೀಯ ಕಿಡಿ ಹೊತ್ತಿಸಿದ ಕರಡಿ ಸಂಗಣ್ಣ ಪತ್ರ

ಕನಕದಾಸ ವೃತ್ತದ ಸ್ಥಳದ ಕುರಿತು ಸಂಸದ ಕರಡಿ ಸಂಗಣ್ಣ ಅವರು ಡಿಸಿ ಗೆ ಪತ್ರ ಬರೆದಿರುವುದಕ್ಕೆ ಇದೀಗ ಕುರುಬ ಸಮಾಜದವರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಸದರು ಕುರುಬ ಸಮಾಜದವರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.

ಕೊಪ್ಪಳದ ಕನಕದಾಸ ವೃತ್ತ

ಕೊಪ್ಪಳದ ಕನಕದಾಸ ವೃತ್ತ

  • Share this:
ಕೊಪ್ಪಳ: ಕೊಪ್ಪಳದಲ್ಲಿ ಈ ಮೊದಲಿನಿಂದಲೂ ಹೊಂದಾಣಿಕೆ ರಾಜಕಾರಣ ಇದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಆದರೆ ಆ ಒಂದು ವೃತ್ತದ ಸ್ಥಳ ಇದೀಗ ಹೊಂದಾಣಿಕೆ ರಾಜಕಾರಣಕ್ಕೆ ತಿಲಾಂಜಲಿ ಇಡುವಂತೆ ಕಾಣಿತ್ತಿದೆ. ಆ ವೃತ್ತ ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ‌ಕೊಪ್ಪಳ ನಗರದ ಬಸ್ ನಿಲ್ದಾಣ ಮುಂದೆ ಕನಕದಾಸ ದಾಸ ವೃತ್ತದ ಸ್ಥಳದಲ್ಲಿದ್ದ ಕಾಂಪ್ಲೆಕ್ಸ್, ಕಟ್ಟೆಯನ್ನು ಕೆಡವಿ ಹಾಕಿ, ಇಲ್ಲಿ ಕನಕದಾಸರ ಮೂರ್ತಿ ಸ್ಥಾಪನೆಗೆ ಸಿದ್ದತೆ ನಡೆದಿದೆ. ಕನಕದಾಸ ವೃತ್ತಕ್ಕೆ ಹೆಚ್ಚುವರಿ ಜಾಗವನ್ನು ಅತಿಕ್ರಮಣ ಮಾಡಿರುವುದಕ್ಕೆ ಸಂಸದ ಕರಡಿ ಸಂಗಣ್ಣ ವಿರೋಧ ವ್ಯಕ್ತಪಡಿಸಿ ಡಿಸಿಗೆ ಪತ್ರ ಬರೆದಿದ್ದಾರೆ. ಇದರಿಂದಾಗಿ ಈಗ ಹೊಂದಾಣಿಕೆ ರಾಜಕೀಯ ಬದಲಾಗಿ ಜಾತಿ ವೈಷಮ್ಯದ ರಾಜಕಾರಣ ಆರಂಭವಾಗಿದೆ. 

1988 ರಲ್ಲಿ ಅಂದಿನ‌ ಸಾರಿಗೆ ಸಚಿವರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನಕದಾಸ ವೃತ್ತವನ್ನು ಉದ್ಘಾಟ‌‌ನೆ ಮಾಡಿದ್ದರು. ಆದರೆ ಇತ್ತೀಚಿಗೆ ಬಹುಕೋಟಿ ವೆಚ್ಚದಲ್ಲಿ ಕನಕದಾಸ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅದೇ ಸ್ಥಳದಲ್ಲಿಯೇ ಉದ್ಯಾನವನ ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಕನಕದಾಸ ವೃತ್ತದ ಹಿಂಭಾಗದಲ್ಲಿನ ನಗರಸಭೆಗೆ ಸೇರಿದ 20 ವಾಣಿಜ್ಯ ಮಳಿಗೆಗಳನ್ನು ನೆಲಸಮ‌ ಮಾಡಲಾಗಿದೆ. ಜೊತೆಗೆ ವಾಣಿಜ್ಯ ಮಳಿಗೆಗಳ ಜಾಗದಲ್ಲಿ ಕನಕದಾಸ ‌ಮೂರ್ತಿಯನ್ನು ಪ್ರತಿಷ್ಠಾಪಿಸಿ ವೃತ್ತ ನಿರ್ಮಾಣ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಇದೀಗ ಸಂಸದ ಕರಡಿ ಸಂಗಣ್ಣ ವಿರೋಧ ವ್ಯಕ್ತಪಡಿಸಿದ್ದು, ನಗರಸಭೆಯ ವಾಣಿಜ್ಯ ಮಳಿಗೆಯ ಜಾಗವನ್ನು ಅತಿಕ್ರಮಿಸಿಕೊಂಡು ಕನಕದಾಸ ವೃತ್ತ ನಿರ್ಮಾಣ ಮಾಡಲಾಗುತ್ತಿದ್ದು, ಇದರ ಬಗ್ಗೆ ತನಿಖೆ ನಡೆಸಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕನಕದಾಸ ವೃತ್ತ ನಿರ್ಮಾಣಕ್ಕೆ ನನ್ನ ವಿರೋಧ ಇಲ್ಲ. ಆದರೆ ಸರ್ವಾಧಿಕಾರಿಯಂತೆ ನಿರ್ಧಾರ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನು ಸಂಸದ ಕರಡಿ ಸಂಗಣ್ಣ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಹಿಂದೆ ರಾಜಕೀಯ ಉದ್ದೇಶ ಇರುವುದು ಸಹ ಸ್ಪಷ್ಟ. 2013 ರಲ್ಲಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದ ರಾಘವೇಂದ್ರ ಹಿಟ್ನಾಳ್, ಕುರುಬ ಸಮಾಜಕ್ಕೆ ಸೇರಿದವರು. ಜೊತೆಗೆ ಕರಡಿ ಸಂಗಣ್ಣ ಪ್ರಥಮ ಬಾರಿಗೆ ಶಾಸಕರಾದಾಗ ಕನಕದಾಸ ವೃತ್ತದ ಹಿಂಭಾಗದ ಸ್ಥಳದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿಸಿದ್ದರು. ಆದರೆ ಇದೀಗ ಶಾಸಕ ರಾಘವೇಂದ್ರ ಹಿಟ್ನಾಳ್, ಕರಡಿ ಸಂಗಣ್ಣ ಕಟ್ಟಿಸಿದ್ದ ವಾಣಿಜ್ಯ ಮಳಿಗೆಗಳನ್ನು ಯಾವುದೇ ಸೂಚನೆ, ಚರ್ಚೆ ಮಾಡದೆ ಡೆಮಾಲಿಶನ್ ಮಾಡಿಸಿದ್ದಾರೆ. ಜೊತೆಗೆ ವಾಣಿಜ್ಯ ಮಳಿಗೆ ಇದ್ದ ಜಾಗವನ್ನು ಅತಿಕ್ರಮಿಸಿಕೊಂಡು ಆ ಜಾಗದಲ್ಲಿ ಕನಕದಾಸ ವೃತ್ತವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Karnataka Weather Today: ಜುಲೈ.08ರ ನಂತರ ರಾಜ್ಯಕ್ಕೆ ಭಾರೀ ಮಳೆ ತರಲಿದೆ ನೈರುತ್ಯ ಮುಂಗಾರು; ಎಲ್ಲೆಲ್ಲಿ ಮಳೆ?

ಕನಕದಾಸ ವೃತ್ತದ ಸ್ಥಳದ ಕುರಿತು ಸಂಸದ ಕರಡಿ ಸಂಗಣ್ಣ ಅವರು ಡಿಸಿ ಗೆ ಪತ್ರ ಬರೆದಿರುವುದಕ್ಕೆ ಇದೀಗ ಕುರುಬ ಸಮಾಜದವರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಕನಕದಾಸರ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಈ ಕೂಡಲೇ ಸಂಸದ ಕರಡಿ ಸಂಗಣ್ಣ ಕುರುಬ ಸಮಾಜದವರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.

ಈ ಮುಂಚೆ ಇದ್ದ ಕನಕದಾಸ ವೃತ್ತದಲ್ಲಿ 10 ಲಕ್ಷ ವೆಚ್ಚದಲ್ಲಿ ಕಟ್ಟೆಯೊಂದನ್ನು ಕಟ್ಟಲಾಗಿತ್ತು.‌ ಆದರೆ ಲಾಕ್ ಡೌನ್ ವೇಳೆಯಲ್ಲಿ ಆ ಕಟ್ಟೆಯನ್ನು ಕೆಡವಲಾಗಿದ್ದು, ಹೊಸದೊಂದು ಕಟ್ಟೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ‌ಒಟ್ಟಿ‌ನಲ್ಲಿ ದಾರ್ಶನಿಕ ಕನಕದಾಸರ ವೃತ್ತ ಇದೀಗ ಕೊಪ್ಪಳದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: