ಚಿಕ್ಕಮಗಳೂರು : ಡ್ರಗ್ಸ್ ಕೇಸಲ್ಲಿ ಜಮೀರ್ ಅಹಮದ್ ಅವರ ಪಾತ್ರ ಎಷ್ಟಿದೆ? ಏನು ಅನ್ನೋದು ತನಿಖೆಯ ಬಳಿಕ ಗೊತ್ತಾಗಬೇಕು. ಆದರೆ, ಕೆಜೆ ಹಳ್ಳಿ-ಡಿಜೆ ಹಳ್ಳಿ ಪ್ರಕರಣದಲ್ಲಿ ಅಪರಾಧಿಗಳ ಪರ ಅವರು ನಿಂತ ನಿಲುವು ಸಮಾಜಘಾತುಕ ಶಕ್ತಿಗಳಿಗೆ ಬೆಂಬಲ ಕೊಡುವಂತಹಾ ಮನಸ್ಥಿತಿ ತೋರಿಸುತ್ತೆ ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಜಮೀರ್ ವಿರುದ್ಧ ಕಿಡಿ ಕಾರಿದ್ದಾರೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಜೋನ್ ಕುರಿತಂತೆ ಸ್ಥಳಿಯರೊಂದಿಗಿನ ಸಭೆಯ ಬಳಿಕ ಮಾತನಾಡಿದ ಅವರು, "ಅವರದ್ದು ಅಪರಾಧಿಗಳ ಪರವಾಗಿ ನಿಲ್ಲುವಂತಹಾ ಮನೋಭಾವನೆ. ಜೊತೆಗೆ, ಅವರದ್ದೇ ಕ್ಷೇತ್ರವಾದ ಪಾದರಾಯನಪುರದಲ್ಲಿ ಅವರ ಬೆಂಬಲಿಗರು ಕೊರೋನ ವಾರಿಯರ್ಸ್‍ಗಳ ಹಲ್ಲೆ ನಡೆಸಿದ್ದರು.
ಆಗ ಅವರು ಅವರ ಪರವಾಗಿ ನಿಂತು ಅವರನ್ನ ಸನ್ಮಾನಿಸೋ ಕೆಲಸ ಮಾಡಿದ್ದೆಲ್ಲಾ ಸ್ವಲ್ಪ ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯ. ಸಾರ್ವಜನಿಕ ಬದುಕಿನಲ್ಲಿ ಇರುವಂತವರು ಸೌಹಾರ್ದತೆಗೆ ಒತ್ತು ಕೊಡಬೇಕೇ ವಿನಃ, ಡಿಸ್ಟ್ರೆಕ್ಟೀವ್ ಮೆಂಟಾಲಿಟಿಗೆ ಒತ್ತು ಕೊಡುವಂತದ್ದು ಶ್ರೇಯಸ್ಸಲ್ಲ. ಅದು ತಾತ್ಕಾಲಿಕವಾಗಿ ಲಾಭ ತಂದುಕೊಡಬಹುದು. ಆದರೆ, ಖಳನಾಯಕನಾಗಿ ಉಳಿಯೋದಕ್ಕೆ ಬೆಳೆಯೋದಕ್ಕೆ ಕಾರಣವಾಗುತ್ತೆ. ಜಮೀರ್ ಏನು ಅನ್ನೋದನ್ನ ಅವರೇ ಯೋಚಿಸಬೇಕು" ಎಂದು ಜಮೀರ್ ವಿರುದ್ಧ ಸಿ.ಟಿ.ರವಿ ಅಸಮಾಧಾನ ಹೊರಹಾಕಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, "ಡ್ರಗ್ಸ್ ಮಾಫಿಯಾ ಬಗ್ಗೆ ಅಧಿವೇಶನದಲ್ಲಿ ಮಾತಾಡುತ್ತೇನೆ. ಡ್ರಗ್ಸ್ ನಮ್ಮ ಕಾಲದಲ್ಲೂ ಇತ್ತು. ಅವರ ಕಾಲದಲ್ಲೂ ಇತ್ತು, ಎಲ್ಲರ ಕಾಲದಲ್ಲೂ ಡ್ರಗ್ಸ್ ಇತ್ತು. ನಾವೂ ಕೂಡ ಅದನ್ನು ಮಟ್ಟಹಾಕಲು ಯತ್ನಿಸಿದ್ದೆವು. ಈಗ ಅವರ ಕಾಲದಲ್ಲಿ ಇದು ಬಯಲಿಗೆ ಬಂದಿದೆ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆ ಆಗಬೇಕು. ರಾಗಿಣಿಗೂ ಬಿಜೆಪಿಗೂ ಸಂಬಂಧ ಇಲ್ಲ ಅಂತಾರೆ. ಆದರೆ, ಆಕೆ ಬಿಜೆಪಿ ಪರ ಪ್ರಚಾರ ಮಾಡಿರೋದಕ್ಕೆ ಸಾಕ್ಷಿ ಇದೆ. ಫೋಟೋಗಳು, ವೀಡಿಯೋಗಳು ಇವೆ" ಎಂದು ಬಿಜೆಪಿ ವಿರುದ್ಧವೇ ಸಿದ್ದರಾಮಯ್ಯ ಆರೋಪಿಸಿದರು.
ರಾಜಕಾರಣಿಗಳ ಮಕ್ಕಳೇ ಇರಲೀ, ರಾಜಕಾರಣಿಗಳೇ ಇರಲಿ, ಯಾರೇ ಇರಲಿ ಡ್ರಗ್ಸ್ ಕೇಸಲ್ಲಿ ಶಿಕ್ಷೆಯಾಗಲಿ. ನಮಗೂ ಮಾಧ್ಯಮಗಳಿಂದ ತಿಳಿಯುತ್ತಿದೆ. ಯಾರೇ ಇದ್ದರೂ ತನಿಖೆ ಆಗಲಿ. ಡ್ರಗ್ಸ್ ಮಟ್ಟ ಹಾಕೋಕೆ ನಮ್ಮ ಅವಧಿಯಲ್ಲೂ ಪ್ರಯತ್ನ ಮಾಡಿದ್ದೆವು. ಈಗ ಹೆಚ್ಚಾಗಿ ಬಯಲಿಗೆ ಬರ್ತಿದೆ. ಎನ್ಸಿಬಿ ಈಗ ಎಲ್ಲವನ್ನೂ ಪತ್ತೆ ಹಚ್ಚುತ್ತಿದೆ. ನಾರ್ಕೋಟಿಕ್ ಆ್ಯಕ್ಟ್ ಇದೆ, ಅದರ ಪ್ರಕಾರ ಕ್ರಮ ತೆಗೆದುಕೊಳ್ಳಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ