ಕೋಲಾರ; ಡಿಸೆಂಬರ್ 25 ರಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ, ಬಹುತೇಜ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಎಂದಿನಂತೆ ವಿಜೃಂಭಣೆಯಿಂದ ಪೂಜೆಗಳು ನೆರವೇರಿದೆ. ಭಕ್ತರು ವೆಂಕಟೇಶ್ವರ ದೇಗುಲದಲ್ಲಿ ದೇವರ ದರ್ಶನ ಪಡೆದು, ವೈಕುಂಠ ದ್ವಾರ ಪ್ರವೇಶಿಸಿ ವೈಕುಂಠ ಏಕಾದಶಿ ದಿನವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಿದರು.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕ ತಿರುಪತಿ ಗ್ರಾಮದ ಪ್ರಸನ್ನ ವೆಂಕಟೇಶ್ವರ ದೇಗುಲಕ್ಕೆ, ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ವಿಶೇಷ ಅಭಿಷೇಕ ಹಾಗೂ ವಿವಿಧ ಪೂಜೆಗಳನ್ನು ಅರ್ಚಕರು ನೆರವೇರಿಸಿದರು. ಬೆಳಗ್ಗೆ 5 ಗಂಟೆಯಿಂದ ಭಕ್ತರು ದೇಗುಲಕ್ಕೆ ಆಗಮಿಸಿ ದರ್ಶನ ಪಡೆದುಕೊಂಡರು. ಉತ್ತರಾಯಣ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇಗುಲದ ಉತ್ತರ ದ್ವಾರದಲ್ಲಿ, ವೈಕುಂಠ ದ್ವಾರವನ್ನ ನಿರ್ಮಿಸಲಾಗಿತ್ತು. ಬೆಳಗ್ಗೆ 7 ರಿಂದ ಕೊರೆಯುವ ಚಳಿಯಲ್ಲೂ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರಿಗಾಗಿ, ಉಚಿತ ದರ್ಶನ ಹಾಗು 100 ರೂಪಾಯಿ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ 19 ಮಾರ್ಗಸೂಚಿಯಂತೆ, ದೇಗುಲದ ಪ್ರವೇಶ ದ್ವಾರದ ಎದುರು ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ಯಾನಿಟೈಸನ್ ಸಿಂಪಡಿಸಿ, ಥರ್ಮಲ್ ಸ್ಕ್ರೀನಿಂಗ್ ಮಾಡುವ ಮೂಲಕ ಭಕ್ತರ ಆರೋಗ್ಯ ತಪಾಸಣೆ ಮಾಡಿದರು.
ಇನ್ನು 65 ವರ್ಷ ಮೆಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಈ ಮಾಹಿತಿ ತಿಳಿಯದ ಸಾಕಷ್ಟು ಪೋಷಕರು, ಮಕ್ಕಳನ್ನು ಕರೆತಂದು ಪೇಚೆಗೆ ಸಿಲುಕಿದರು. ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ, ಅನಿವಾರ್ಯವಾಗಿ ಮಕ್ಕಳನ್ನು ದೇಗುಲದ ಹೊರಗೆ ಕೂರಿಸಿ, ಪೋಷಕರು ದೇವರ ದರ್ಶನಕ್ಕೆ ತೆರಳಿದ್ದು ಕಂಡುಬಂತು. ಆದರೆ ಬೆಳಗ್ಗೆ 10 ಗಂಟೆ ನಂತರ ಹಿರಿಯರು, ಹಾಗೂ ಸಣ್ಣ ಮಕ್ಕಳನ್ನು ಪೋಷಕರು ದೇಗುಲದೊಳಕ್ಕೆ ಕರೆತಂದು ಕೋವಿಡ್- 19 ಮಾರ್ಗಸೂಚಿಗಳನ್ನು ಗಾಳಿಗೆ ತೂರಿದರು. ಇನ್ನು ದೇಗುಲದಲ್ಲಿ ಸಾಮಾಜಿಕ ಅಂತರ ಪಾಲನೆ ನಿಯಮ, ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿತ್ತು. ಭಕ್ತರು ಕನಿಷ್ಠ ಅಂತರವನ್ನು ಕಾಯಲು ವಿಫಲರಾದರು, ಭಕ್ತರ ಧಾರ್ಮಿಕ ಭಾವನೆಗಳ ಹಿತದೃಷ್ಟಿಯಿಂದ ದೇಗುಲ ತೆರೆಯುವ ನಿರ್ಧಾರ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು.
ಇದನ್ನು ಓದಿ: ಜೆಡಿಎಸ್ ಪಕ್ಷವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ; ಸಿದ್ದುಗೆ ಹೆಚ್.ಡಿ. ದೇವೇಗೌಡ ಸವಾಲು
ಸರ್ಕಾರದ ಸೂಚನೆಯಂತೆ ದೇಗುಲದಲ್ಲಿ ಕೋವಿಡ್- 19 ಮಾರ್ಗಸೂಚಿಗಳೊಂದಿಗೆ, ತೆರೆದಿರುವ ಹಿನ್ನಲೆ ಭಕ್ತರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರು. ಇಳಿಮುಖ ಆದಂತೆ ಕಂಡುಬಂದಿತ್ತು. ಬೆಳಗ್ಗೆ 5 ರಿಂದ ರಾತ್ರಿ 9.30 ವರೆಗೆ ದರ್ಶನ ವ್ಯವಸ್ಥೆ ಕಲ್ಪಿಸಿದರು. ಭಕ್ತರ ಸಂಖ್ಯೆಯಲ್ಲಿ ಹೆಚ್ಚಿನ ಸಂಖ್ಯೆ ಕಂಡುಬರಲಿಲ್ಲ. ಇನ್ನು ವೈಕುಂಠ ಏಕಾದಶಿ ಹಿನ್ನಲೆ ಪಕ್ಕದ ಬೆಂಗಳೂರು ಸೇರಿದಂತೆ ಆಂಧ್ರ ಹಾಗೂ ತಮಿಳುನಾಡು ರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯು ಇತ್ತು. ಆದರೆ ಕೋವಿಡ್- 19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಹೊರ ರಾಜ್ಯದ ಭಕ್ತರು ನಿರೀಕ್ಷಿತ ಸಂಖ್ಯೆಯಲ್ಲಿ ಕಂಡುಬರಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ