news18-kannada Updated:January 11, 2021, 6:03 PM IST
ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಮುಖಂಡರು.
ಹುಬ್ಬಳ್ಳಿ; ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಕಲ್ಪ ಸಮಾವೇಶ ನಡೆಯಿತು. ಗೋಕುಲ ರಸ್ತೆಯ ಲೋಟಸ್ ಗಾರ್ಡನ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶದಲ್ಲಿ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸುವ ಕುರಿತು ಚರ್ಚೆ ನಡೆಸಲಾಯಿತು. ಪಕ್ಷದ ಬ್ಲಾಕ್ ಮಟ್ಟದ ಮುಖಂಡರಿಂದ ಪಕ್ಷ ಸಂಘಟನೆಯ ಕುರಿತು ಸಲಹೆಗಳನ್ನು ಪಡೆಯಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯ, ಸತೀಶ್ ಜಾರಕಿಹೊಳಿ, ಬಿ.ಕೆ. ಹರಿಪ್ರಸಾದ್, ರಾಮಲಿಂಗಾ ರೆಡ್ಡಿ, ಎಸ್.ಆರ್. ಪಾಟೀಲ್, ಕೆ.ಎಚ್ ಮುನಿಯಪ್ಪ, ಆರ್.ವಿ. ದೇಶಪಾಂಡೆ ಸಮಾವೇಶದಲ್ಲಿ ಭಾಗವಹಿಸಿದ್ದರು.
ಸಮಾವೇಶ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದ ಪ್ರಮುಖರಿಗೆ ಸಖತ್ ಕ್ಲಾಸ್ ತೆಗೆದುಕೊಂಡರು. ಸಭೆ ನಡೆಸಿ, ಭಾಷಣ ಹೊಡೆದರೆ ಪಕ್ಷ ಸಂಘಟನೆ ಆಗೋದಿಲ್ಲ. ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡೊದು ಬೇಡ. ಈಗಿನಿಂದಲೇ ಚುನಾವಣೆಗೆ ಸಿದ್ದರಾಗಿ. ಎಐಸಿಸಿಯಿಂದ ರೈತ ಪರ ಹೋರಾಟ ರೂಪಿಸುವಂತೆ ಸೂಚನೆ ಬಂದಿದೆ. ಸಂಕ್ರಮಣ ಕಾರಣಕ್ಕೆ ಜನವರಿ 14ರಂದು ನಡೆಯಬೇಕಿದ್ದ ಹೋರಾಟ 20ಕ್ಕೆ ಮುಂದೂಡಲಾಗಿದೆ. ಜನವರಿ 20 ರಂದು ರಾಜಭವನ ಚಲೋ ಹೋರಾಟ ಆಯೋಜಿಸಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಜನ ಸೇರಿಸಬೇಕೆಂದು ಡಿಕೆಶಿ ಕರೆ ನೀಡಿದರು.
ಇದನ್ನು ಓದಿ: ಮಂತ್ರಿ ಗಿರಿಗಾಗಿ ಲಾಬಿ ಮಾಡಲ್ಲ, ಹೈ ಕಮಾಂಡ್ ಕರೆದರೆ ಹೋಗಿ ಮಂತ್ರಿ ಆಗ್ತಿನಿ; ಶಾಸಕ ಉಮೇಶ್ ಕತ್ತಿ
ಪ್ರತಿಯೊಂದು ಬ್ಲಾಕ್ ನಿಂದ ಐದೈದು ಬಸ್ ಗಳಲ್ಲಿ ಜನರನ್ನು ಕರೆತರಬೇಕು. ಫ್ರೀಡಂ ಪಾರ್ಕ್ನಿಂದ ಬೃಹತ್ ಪ್ರತಿಭಟನೆ ಮೂಲಕ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು. ಜಿಲ್ಲಾ ಪಂಚಾಯತಿ, ತಾಲೂಕ ಪಂಚಾಯತಿ, ಪಾಲಿಕೆ ಚುನಾವಣೆಗೆ ಸಿದ್ದರಾಗಬೇಕು. ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಸಮರ್ಥರನ್ನು ಗುರುತಿಸಿ ಪಕ್ಷದ ಟಿಕೆಟ್ ನೀಡಲಾಗುವುದು. ತಳಮಟ್ಟದಿಂದ ಪಕ್ಷ ಸಂಘಟನೆಗೆ ಯೋಜನೆ ರೂಪಿಸಿದ್ದೇನೆ. ನಾವು ಹಾಕಿಕೊಟ್ಟಂತೆ ಶಿಸ್ತಿನಿಂದ ಪಕ್ಷವನ್ನು ಮುನ್ನಡೆಸಬೇಕು. ಯಾರು ಎಷ್ಟೇ ದೊಡ್ಡ ನಾಯಕರು ಆಗಿದ್ದರು ಪಕ್ಷದ ಶಿಸ್ತು ಉಲ್ಲಂಘಿಸುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಇನ್ಮುಂದೆ ವ್ಯಕ್ತಿ ಪೂಜೆ ನಡೆಸಲು ಅವಕಾಶ ಇಲ್ಲ. ಕೇವಲ ಪಕ್ಷದ ಪೂಜೆ ಮಾತ್ರ ಎಂದು ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ, ಆರ್.ವಿ. ದೇಶಪಾಂಡೆ, ಕೆ.ಬಿ. ಕೋಳಿವಾಡ ಸಮ್ಮುಖದಲ್ಲಿ ಡಿ.ಕೆ. ಶಿವಕುಮಾರ್ ಗುಡುಗಿದರು.
ಸಂಕಲ್ಪ ಸಮಾವೇಶದಲ್ಲಿ ಸಿದ್ದರಾಮಯ್ಯ ನಿದ್ದೆ
ಹುಬ್ಬಳ್ಳಿಯ ಲೋಟಸ್ ಗಾರ್ಡನ್ನಲ್ಲಿ ನಡೆದ ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಸಿದ್ದರಾಮಯ್ಯ ನಿದ್ದೆಗೆ ಮೊರೆ ಹೋದರು. ಕಾರ್ಯಕ್ರಮದ ಮೊದಲ ಸಾಲಿನಲ್ಲಿ ಕುಳಿತು ಗಡದ್ ನಿದ್ದೆ ಹೊಡೆಯುತ್ತಿದ್ದರು. ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಷಣ ಮಾಡುತ್ತಿದ್ದರೆ ಮತ್ತೊಂದೆಡೆ ಸಿದ್ದರಾಮಯ್ಯ ನಿದ್ರೆಗೆ ಜಾರಿದ್ದರು.
Published by:
HR Ramesh
First published:
January 11, 2021, 6:03 PM IST