ಕೊಡಗು: ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಕಾವೇರಿ ಪ್ರವಾಹ ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ನೂರಾರು ಹಳ್ಳಿಗಳು ಮುಳುಗಡೆಯಾಗುತ್ತಲೇ ಇವೆ. ರಾಷ್ಟ್ರೀಯ ಹೆದ್ದಾರಿ 275 ಹಾದು ಹೋಗಿರುವ ಕುಶಾಲನಗರ ಪಟ್ಟಣದ 10 ಕ್ಕೂ ಹೆಚ್ಚು ಬಡಾವಣೆಗಳು ಮೂರು ವರ್ಷಗಳಿಂದಲೂ ಮುಳುಗುತ್ತಲೇ ಇವೆ. ಇದಕ್ಕೆ ಮುಖ್ಯವಾದ ಕಾರಣ ನದಿಪಾತ್ರದ ಭೂಮಿ ಸಂಪೂರ್ಣವಾಗಿ ಒತ್ತುವರಿಯಾಗಿದೆ ಎನ್ನೋದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಂತಹದ್ದೇ ಮತ್ತೊಂದು ಪ್ರಮಾದ ನಡೆಯುತ್ತಿದ್ದು, ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ಹಿಡಿದು ಜಿಲ್ಲಾಡಳಿತವರೆಗೂ ಎಲ್ಲವೂ ಕಣ್ಮುಚ್ಚಿ ಕುಳಿತ್ತಿವೆ.
ನದಿಯಿಂದ 900 ಅಡಿವರೆಗೆ ಬಫರ್ ಝೋನ್ ಪ್ರದೇಶವಿದೆ. ಆದರೆ ಇದೆಲ್ಲವನ್ನು ಗಾಳಿಗೆ ತೂರಿಗೆ ನದಿಯಂಚಿನಲ್ಲೇ ಲೇಔಟ್ ಗಳು ನಿರ್ಮಾಣವಾಗುತ್ತಲೇ ಇವೆ. ಕುಶಾಲನಗರ ಪಟ್ಟಣದ ತಾವರೆಕೆರೆಯ ಎದುರಿಗೆ ಇರುವ ಪ್ರದೇಶ ಕಳೆದ ಮೂರು ವರ್ಷಗಳವರೆಗೆ ಗದ್ದೆಗಳಾಗಿಯೇ ಉಳಿದಿತ್ತು. ಆದರೆ ಎಸ್ಎಲ್ಎನ್ ಎಂಬ ಖಾಸಗೀ ಸಂಸ್ಥೆಯೊಂದು ಅದನ್ನು ಆಸ್ಪತ್ರೆ ನಿರ್ಮಿಸುವ ನೆಪದಲ್ಲಿ ಖರೀದಿಸಿ, ಆ ಗದ್ದೆ ಜಾಗಕ್ಕೆ 15 ಅಡಿ ಎತ್ತರಕ್ಕೆ ಸಾವಿರಾರು ಲೋಡ್ ಮಣ್ಣು ಸುರಿದು ಸಮತಟ್ಟು ಮಾಡಿ ಬಡಾವಣೆ ನಿರ್ಮಿಸುತ್ತಿದೆ. ಪ್ರವಾಹ ಬಂದಾಗಲೆಲ್ಲಾ ನಾಲ್ಕು ಎಕರೆಯಷ್ಟು ಪ್ರದೇಶದ ಈ ಗದ್ದೆಗಳಲ್ಲಿ ಹಲವು ಟಿಎಂಸಿ ನೀರು ಒಂದು ವಾರಗಳ ಕಾಲ ನಿಂತು ಬಿಡುತಿತ್ತು. ಅದು ಎಷ್ಟಮಟ್ಟಿಗೆ ಎಂದರೆ ಮಡಿಕೇರಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ನಿರ್ಮಾಣದ ಹಂತದಲ್ಲಿರುವ ಲೇಔಟ್ ಪಕ್ಕದಲ್ಲೇ ಇರುವ ರಾಷ್ಟ್ರೀಯ ಹೆದ್ದಾರಿ ಕೂಡ ಸಂಪೂರ್ಣ ಜಲಾವೃತವಾಗಿ ಬಂದ್ ಆಗಿಬಿಡುತಿತ್ತು. ಇದೀಗ ಗದ್ದೆಗಳಿಗೆ ಸಂಪೂರ್ಣ ಮಣ್ಣು ತುಂಬಿ ಲೇಔಟ್ ಮಾಡುತ್ತಿರುವುದರಿಂದ ಕುಶಾಲನಗರದ ಸುತ್ತಮುತ್ತ ಇರುವ ಮಾದಪಟ್ಟಣ, ತಾವರೆಕೆರೆ, ಗಂಧದ ಕೋಠಿ ಈ ಬಡಾವಣೆಗಳಿಗೆ ಕಳೆದ ಮೂರು ವರ್ಷಗಳಿಗಿಂತ ಹೆಚ್ಚು ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದೆ.
ಇದನ್ನು ಓದಿ: ಜೆಡಿಎಸ್ಗೆ ಅವಕಾಶ ಕೊಟ್ಟರೆ ಪಂಚರತ್ನ ಯೋಜನೆ ಜಾರಿ; ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
ಕಳೆದ ಮೂರು ವರ್ಷಗಳಲ್ಲೂ ಈ ಬಡಾವಣೆಗಳ ಜೊತೆಗೆ ಸಾಯಿ ಬಡಾವಣೆ, ರಸೂಲ್ ಲೇಔಟ್, ಕುವೆಂಪು ಬಡಾವಣೆ ಸೇರಿದಂತೆ ಹತ್ತಾರು ಬಡಾವಣೆಗಳಿಗೆ ಪ್ರವಾಹದ ನೀರು ನುಗ್ಗಿ, ಸಾವಿರಾರು ಜನರು ವಾರಗಳ ಕಾಲ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆಯುತ್ತಿದ್ದರು. ಇನ್ನು ದಂಡಿನಪೇಟೆ ಬಡಾವಣೆಯಲ್ಲಿ ಹಲವು ಮನೆಗಳು ಪ್ರವಾಹದ ನೀರಿನಲ್ಲಿ ಬಿದ್ದುಹೋದವು. ಇದೆಲ್ಲವೂ ಗೊತ್ತಿದ್ದರೂ ಬಡಾವಣೆ ನಿರ್ಮಾಣಕ್ಕೆ ಸ್ಥಳೀಯ ಪಟ್ಟಣ ಪಂಚಾಯಿತಿ ಮತ್ತು ಕುಶಾಲನಗರ ಯೋಜನಾ ಪ್ರಾಧಿಕಾರಗಳು ಒಪ್ಪಿಗೆ ಸೂಚಿಸಿ ಲೇಔಟ್ ಪ್ಲಾನ್ ಗೆ ಸಹಿ ಹಾಕಿವೆ. ಪಟ್ಟಣ ಪಂಚಾಯಿತಿ ಸದಸ್ಯರೇ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಲೇಔಟ್ ನಿರ್ಮಾಣಕ್ಕೆ ಮುಖ್ಯಾಧಿಕಾರಿ ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎನ್ನೋದು ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಜಿ. ಮನು ಅವರ ಆರೋಪ.
ಲೇಔಟ್ ನಿರ್ಮಾಣಕ್ಕೆ ರಾಜಕಾರಣಿಗಳ ಬೆಂಬಲವೂ ಇದೆ. ಅವರನ್ನು ಕೇಳಿದರೆ, ಖಾಸಗೀ ಲೇಔಟ್ ಅದಕ್ಕೆ ಅವರು ಮಣ್ಣು ತುಂಬಿಸಿಕೊಳ್ಳುವುದಾದರೆ ತುಂಬಿಕೊಳ್ಳಲಿ ಬಿಡಿ ಎನ್ನುತ್ತಿದ್ದಾರೆ ಎನ್ನೋದು ಮಾದಾಪಟ್ಟಣದ ನಿವಾಸಿ ಯಶವಂತ್ ಅವರ ಆಕ್ರೋಶ. ರಾಜಕಾರಣಿಗಳ ಬೆಂಬಲ ಇರೋದ್ರಿಂದಲೇ ಜನರ ವಿರೋಧದ ನಡುವೆಯೂ ಲೇಔಟ್ ಆಗುತ್ತಿದೆ ಎನ್ನೋದು ಸ್ಥಳೀಯರ ಆರೋಪ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ