HOME » NEWS » District » LAND PURCHASE CHEATING FARMERS LOCKED SOLAR POWER GENERATION PLANT NCHM HK

ಜಮೀನು ಖರೀದಿಸಿ ವಂಚನೆ ಆರೋಪ: ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಬೀಗ ಜಡಿದ ರೈತರು

ಎಕರೆಗೆ 15 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದ ಕಂಪನಿ ಈಗ ಕೇವಲ ಮೂರ್ನಾಲ್ಕು ಲಕ್ಷ ರೂಪಾಯಿ ನೀಡಿ ಉಳಿದ ಹಣ ನೀಡದೆ ವಂಚಿಸಿದೆ ಎಂದು ರೈತರು ಆರೋಪಿಸಿದ್ದಾರೆ.

news18-kannada
Updated:November 8, 2020, 7:32 PM IST
ಜಮೀನು ಖರೀದಿಸಿ ವಂಚನೆ ಆರೋಪ: ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಬೀಗ ಜಡಿದ ರೈತರು
ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಬೀಗ ಜಡಿದ ರೈತರು
  • Share this:
ಚಾಮರಾಜನಗರ(ನವೆಂಬರ್. 08): ಜಮೀನು ಖರೀದಿಸಿ ಒಪ್ಪಂದದ ಪ್ರಕಾರ ಹಣ ಹಾಗು ಉದ್ಯೋಗ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಖಾಸಗಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ರೈತರು ಬೀಗ ಜಡಿದಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿಯಲ್ಲಿ ನಡೆದಿದೆ. ಕಬ್ಬಹಳ್ಳಿಯ 70 ಕ್ಕು ಹೆಚ್ಚು  ರೈತರಿಂದ 135 ಎಕರೆ ಜಮೀನು ಖರೀದಿಸಿದ ಖಾಸಗಿ ಕಂಪನಿಯೊಂದು ಒಂದು ಎಕರೆಗೆ 15 ಲಕ್ಷ ರೂಪಾಯಿ ನೀಡುವುದಾಗಿ ಹೇಳಿ 3.25 ಲಕ್ಷ ರೂಪಾಯಿ ನೀಡಿ ಖರೀದಿ ಒಪ್ಪಂದ  ಮಾಡಿಕೊಂಡಿತ್ತು. ಅಲ್ಲದೆ ಮಧ್ಯವರ್ತಿಗಳ ಮೂಲಕ ಜಿ.ಪಿ.ಎ ಸಹ ಮಾಡಿಸಿಕೊಂಡಿತ್ತು. ಅಲ್ಲದೆ  ಜಮೀನು ಮಾರಾಟ ಮಾಡುವ  ರೈತ ಕುಟುಂಬದ ತಲಾ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಉದ್ಯೋಗ ಕರಾರು  ಮಾಡಿಕೊಂಡಿತ್ತು. ಆದರೆ, ಎಕರೆಗೆ 15 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದ ಕಂಪನಿ ಈಗ ಕೇವಲ ಮೂರ್ನಾಲ್ಕು ಲಕ್ಷ ರೂಪಾಯಿ ನೀಡಿ ಉಳಿದ ಹಣ ನೀಡದೆ ವಂಚಿಸಿದೆ ಎಂದು ರೈತರು ಆರೋಪಿಸಿದ್ದಾರೆ.

ಅಲ್ಲದೆ ಕೆಲವರನ್ನು  ಹೆದರಿಸಿ ಬೆದರಿಸಿ ಜಮೀನು ಖರೀದಿ ಮಾಡಿಕೊಂಡಿದೆ. ತಮ್ಮ ಮಕ್ಕಳಿಗೆ ಉದ್ಯೋಗವನ್ನು ನೀಡದೆ ಮೋಸ ಮಾಡಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಮಗಿದ್ದದ್ದು ಕೇವಲ ಒಂದು ಎಕರೆ ನಾವು ಕೊಡುವುದಿಲ್ಲ ಎಂದರೂ ಬಲವಂತವಾಗಿ ನಮ್ಮ ಯಜಮಾನರು ವಿದ್ಯಾವಂತರಲ್ಲ, ಅವರನ್ನು ಬೆದರಿಸಿ ಕ ಜಮೀನು ಬರೆಸಿಕೊಂಡಿದ್ದಾರೆ. ಎಕರೆಗೆ 15 ಲಕ್ಷ ರೂಪಾಯಿ ಹಣ ಹಾಗೂ ಮಗನಿಗೆ ಉದ್ಯೋಗ ನೀಡುವುದಾಗಿ ಕಂಪನಿಯ ಅಧಿಕಾರಿಗಳು ತಿಳಿಸಿದ್ದರು. ಆದರೆ, ಕೇವಲ ಮೂರು ಲಕ್ಷ ರೂಪಾಯಿ ನೀಡಿ ಮೋಸ ಮಾಡಿದ್ದಾರೆ, ಈಗ ನಮಗೆ ಬಾಕಿ ಹಣವೂ ಇಲ್ಲ, ನನ್ನ ಮಗನಿಗೆ ಉದ್ಯೋಗವೂ ಇಲ್ಲ ಎಂದು ದೇವಮ್ಮ ಎಂಬ ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ವಿಜಯಪುರದಲ್ಲಿ ಫೈರಿಂಗ್ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ

ಉದ್ಯೋಗ ನೀಡುವುದಾಗಿ ಕಂಪನಿ ನೀಡಿದ ಭರವಸೆ ಮೇರೆಗೆ ಬೆಂಗಳೂರಿನಲ್ಲಿ ಉದ್ಯೋಗ ಬಿಟ್ಟು ಗ್ರಾಮಕ್ಕೆ ಬಂದೆ. ಅದರೆ, ಈಗ ನಮ್ಮ ಜಮೀನು ಖರೀದಿ ಮಾಡಿರುವ ಕಂಪನಿ ನಮಗೆ ಉಳಿದ ಹಣವನ್ನು ನೀಡಿಲ್ಲ, ನನಗೆ ಉದ್ಯೋಗವನ್ನು ನೀಡಿಲ್ಲ, ನಾನು ಅತಂತ್ರರಾಗಿದ್ದೇನೆ ಎಂದು ಗುರುಪ್ರಸಾದ್ ಎಂಬ ಯುವಕ ತಮ್ಮ ಪರಿಸ್ಥಿತಿ ವಿವರಿಸುತ್ತಾರೆ.

ನಮಗೆ ಅನ್ಯಾಯವಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗು ತಹಶೀಲ್ದಾರರಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ, ಕಂಪನಿಯ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹಾಗಾಗಿ ಅನ್ಯದಾರಿ ಇಲ್ಲದೆ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಬೀಗ ಹಾಕಿ ಬಂದ್ ಮಾಡಿದ್ದೇವೆ. ತಮಗೆ ನ್ಯಾಯ ದೊರೆಯುವವರೆಗೂ ಬೀಗ ತೆರುವುಗೊಳಿಸುವುದಿಲ್ಲ ಎಂದು ಸಂತೋಷ್ ಎಂಬ ರೈತ ತಿಳಿಸಿದ್ದಾರೆ.
Published by: G Hareeshkumar
First published: November 8, 2020, 6:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories