HOME » NEWS » District » LAKES AND CHANNELS OF KOLAR FILL UP AS HEAVY RAINFALL LASHES ACROSS THE DISTRICT SNVS

ಮಹಾಮಳೆಗೆ ಜನರು ಸಂತಸ; ಕೋಲಾರದಲ್ಲಿ ಕೆರೆಕಟ್ಟೆಗಳು ಭರ್ತಿ; ಮೈದುಂಬಿ ಹರಿದ ಕಾಲುವೆಗಳು

ಶ್ರೀನಿವಾಸಪುರ ಹೊರತುಪಡಿಸಿ ಕೋಲಾರದ ಉಳಿದೆಲ್ಲಾ 5 ತಾಲೂಕುಗಳಲ್ಲಿ ಭಾನುವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಧಾರಾಕಾರ ಮಳೆ ಆಗಿ ಅನೇಕ ಕೆರೆ ಕಟ್ಟೆ, ಕಾಲುವೆಗಳು ತುಂಬಿಹೋಗಿವೆ.

news18-kannada
Updated:July 20, 2020, 11:03 AM IST
ಮಹಾಮಳೆಗೆ ಜನರು ಸಂತಸ; ಕೋಲಾರದಲ್ಲಿ ಕೆರೆಕಟ್ಟೆಗಳು ಭರ್ತಿ; ಮೈದುಂಬಿ ಹರಿದ ಕಾಲುವೆಗಳು
ಕೋಲಾರದಲ್ಲಿ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತಿರುವುದು
  • Share this:
ಕೋಲಾರ: ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಕೊರೋನಾ ಮಾಹಾಮಾರಿಯ ಆರ್ಭಟದಿಂದ ಚಿಂತಾಕ್ರಾಂತಗೊಂಡಿದ್ದ ಜನರ ಮೊಗದಲ್ಲಿ ಮಳೆ ಸಂತಸ ತಂದಿದೆ. ನಿನ್ನೆಯ ಮಳೆ ದಾಖಲೆ ಪ್ರಮಾಣದಲ್ಲಿ ಸುರಿದಿದ್ದು, ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ಸಂಜೆ 6 ಗಂಟೆವರೆಗೆ ಒಂದೇ ಸಮನೆ ಸುರಿದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಹೊರತುಪಡಿಸಿ ಜಿಲ್ಲೆಯ ಐದು ತಾಲೂಕಿನಲ್ಲಿ ಭರ್ಜರಿ ಮಳೆಯಾಗಿದೆ.

ಭಾನುವಾರದ ಮಹಾ ಮಳೆಗೆ ಕೋಲಾರ ಮತ್ತು ಕೆಜಿಎಫ್ ತಾಲೂಕಿನಲ್ಲಿ ಸಣ್ಣ ಪುಟ್ಟ ಕೆರೆ ಕಟ್ಟೆ, ಕಾಲುವೆಗಳು ತುಂಬಿ ಕೋಡಿ ಹರಿದಿವೆ. ಕೋಲಾರ ನಗರದ ಕೋಲಾರಮ್ಮ ಕೆರೆಗೆ ಹರಿಯುವ ಕಾಲುವೆಗಳೆಲ್ಲ ತುಂಬಿದ ಕಾರಣ ಕೆರೆಗೆ ನೀರು ಹೆಚ್ಚಿ‌ನ ಪ್ರಮಾಣದಲ್ಲಿ ಹರಿದುಬಂದಿದೆ. ಅಂತರಗಂಗೆ ಬೆಟ್ಟದ ವಿಭೂತಿ ಫಾಲ್ಸ್​ನಲ್ಲಿ ನೀರು ಧುಮ್ಮುಕ್ಕಿ ಹರಿಯುತ್ತಿದ್ದು, ನಗರ ವಾಸಿಗಳನ್ನು ಸೆಳೆಯುತ್ತಿದೆ. ಇನ್ನು ಕೋಲಾರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಕೀಲುಕೋಟೆ ಹಾಗು ಖಾದ್ರೀಪುರ ರೈಲ್ವೆ ಬ್ರಿಡ್ಜ್ ಕೆಳಗೆ ನೀರು ನಿಂತು ಕಾಲುವೆಯಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ರೈಲ್ವೆ ಅಂಡರ್ ಪಾಸ್ ತುಂಬಿದ ಪರಿಣಾಮ ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಟ ಎದುರಿಸುವಂತಾಯಿತು. ಬ್ರಿಡ್ಜ್ ಕೆಳಗೆ ನೀರಿನ ಪ್ರಮಾಣ ಕಡಿಮೆಯಾಗದ ಕಾರಣ ವಾಹನ ಸವಾರರು ಗಂಟೆಗಟ್ಟಲೆ ಕಾದು ರಾತ್ರಿ ವಾಹನಗಳನ್ನ ಮನೆಗೆ ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿತು.

ಇದನ್ನೂ ಓದಿ: Karnataka Weather Forecast - ಮುಂದಿನ ಮೂರು ದಿನವೂ ರಾಜ್ಯಾದ್ಯಂತ ಮಳೆ: ಹವಾಮಾನ ಮುನ್ಸೂಚನೆ

ಕೆಜಿಎಫ್ ತಾಲೂಕಿನಲ್ಲೂ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ಉರಿಗಾಂ ಪೇಟೆ ಮುಖ್ಯರಸ್ತೆಯ ತುಂಬೆಲ್ಲ ನೀರು ಹರಿದು ಕಾಲುವೆಯಂತಹ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ಬದಿಯಲ್ಲಿದ್ದ ಮನೆಗಳು, ಮಳಿಗೆಗಳು ಹಾಗು ಕೆನೆರಾ ಬ್ಯಾಂಕ್ ಎಟಿಎಂಗೆ ನೀರು ನುಗ್ಗಿ ಜನರು ರಾತ್ರಿಯಿಡೀ ಪರದಾಟ ಎದುರಿಸಿದ್ದಾರೆ.

ಇತ್ತ ಕೆಜಿಎಫ್ ಚಿನ್ನದ ಗಣಿಯ ಸೈನೆಡ್ ಗುಡ್ಡಗಳಿಂದ ನೀರು ಜಿಗಿದಿದ್ದು ಕೃತಕ ಪಾಲ್ಸ್ ಸೃಷ್ಟಿಯಾಗಿತ್ತು. ಮಳೆಬಂದಾಗಲೆಲ್ಲ ಉರಿಗಾಂ ಪೇಟೆ ಮುಖ್ಯ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಕೂಡಲೇ ಕಾಲುವೆ ನಿರ್ಮಾಣ ಮಾಡುವಂತೆ ಜನಪ್ರತಿನಿಧಿಗಳ ವಿರುದ್ದ ಸ್ಥಳೀಯರು ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿರುವ ಸ್ಥಳೀಯ ನಿವಾಸಿ ಮಂಜುನಾಥ್ ಎನ್ನುವರು, “ಮಳೆ ಬಂದಾಗಲೆಲ್ಲ ಮನೆಗಳಿಗೆ ನೀರು ನುಗ್ಗುತ್ತೆ. ಈ ವಿಚಾರವನ್ನ ಅಧಿಕಾರಿಗಳಿಗೆ ತಿಳಿಸಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ. ಕಾಲುವೆ ನಿರ್ಮಾಣ ಮಾಡಿದ್ದಲ್ಲಿ ಈ ಸಮಸ್ಯೆ ಬಗೆಹರಿಯುತ್ತೆ” ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Karnataka Dams Water Level: ಕರ್ನಾಟಕದಲ್ಲಿ ಮುಂದುವರಿದ ಮಳೆ; ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಒಟ್ಟಿನಲ್ಲಿ, ಮೂರು ವರ್ಷದ ನಂತರ ಜಿಲ್ಲೆಯಲ್ಲಿ ಹೌಹಾರಿರುವ ಮಳೆರಾಯನಿಂದ ತಗ್ಗು ಪ್ರದೇಶದಲ್ಲಿರುವ ಜನರಿಗೆ ರಾತ್ರಿ ನಿದ್ದೆ ಇಲ್ಲದೆ ಮಾಡಿದರೂ, ಜಿಲ್ಲೆಯ ಕೆರೆ-ಕಟ್ಟೆ ಹಾಗು ರಾಜಕಾಲುವೆಗಳು ತುಂಬಿ ಹರಿದು ಜನರಲ್ಲಿ ಸಂತಸ ಮನೆಮಾಡಲು ಕಾರಣವಾಗಿದೆ.
Published by: Vijayasarthy SN
First published: July 20, 2020, 11:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories