ಯುವಕ ಸಂಘದಿಂದ ಪಾಳುಬಿದ್ದ ಕೆರೆ ಅಭಿವೃದ್ಧಿ ; ಗ್ರಾಮ ಪಂಚಾಯತ್​ನಿಂದ ನಗದು ಬಹುಮಾನ

ಯುವಕರ ಈ ಕೆಲಸವನ್ನು ಗಮನಿಸಿದ ಗ್ರಾಮ ಪಂಚಾಯತ್​ ನಗದು ರೂಪದಲ್ಲಿ ಬಹುಮಾನ ನೀಡಿ ಯುವಕರ ಕೆಲಸವನ್ನು ಶ್ಲಾಘಿಸಿ ಪ್ರೋತ್ಸಾಹಿಸಿದೆ

ಯುವಕರು ಸ್ವಚ್ಛಗೊಳಿಸಿದ ಕೆರೆ

ಯುವಕರು ಸ್ವಚ್ಛಗೊಳಿಸಿದ ಕೆರೆ

  • Share this:
ಕೊಡಗು(ಜೂ.15): ಇಂದು ತಾವಾಯ್ತು, ತಮ್ಮ ಕೆಲಸವಾಯ್ತು ಎಂದು ಸ್ವಾರ್ಥದ ಬದುಕನ್ನೇ ನಡೆಸುತ್ತಿರುವ ಜನರೇ ಹೆಚ್ಚು. ಇಂತಹ ವ್ಯವಸ್ಥೆಯಲ್ಲಿ ಯುವಕ ಸಂಘವೊಂದು ಊರಿನಲ್ಲಿ ಪಾಳು ಬಿದ್ದಿದ್ದ ಕೆರೆಯನ್ನು ಅಭಿವೃದ್ಧಿಗೊಳಿಸಿ ಕೆರೆಗೆ ಮರುಜೀವ ನೀಡಿದ್ದಾರೆ. ಯುವಕರ ಕೆಲಸವನ್ನು ಶ್ಲಾಘಿಸಿರುವ ಗ್ರಾಮ ಪಂಚಾಯತ್​ ನಗದು ಬಹುಮಾನ ನೀಡಿದೆ. ಆದರೆ, ಆ ಬಹುಮಾನವನ್ನು ಯುವಕರು ಸದುದ್ದೇಶಕ್ಕೆ ಬಳಸಿದ್ದಾರೆ.

ಮಳೆಗಾಲದ ಆರಂಭದಲ್ಲೇ ತುಂಬಿ ತುಳುಕುತ್ತಿರುವ ಕೆರೆ, ಒಂದೂ ಕಸ ಕಡ್ಡಿ ಇಲ್ಲದಿರುವ ನೀರು. ಇದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮದ ಕೆರೆ. ಅಷ್ಟಕ್ಕೂ ಗ್ರಾಮದ ಕೆರೆ ಇಷ್ಟೊಂದು ಸ್ವಚ್ಚವಾಗಿರುವುದಕ್ಕೆ ಕಾರಣ ಈ ಗ್ರಾಮದ ಯುವಕಲಾ ಯುವಕರ ಸಂಘ. ಹೌದು ಹಲವು ವರ್ಷಗಳಿಂದ ಪಾಳುಬಿದ್ದಿದ್ದ ಕೆರೆಗೆ ಯುವಕರು ಶ್ರಮದಾನದಿಂದ ಮರುಜೀವ ನೀಡಿದ್ದಾರೆ.

ಇಲ್ಲಿನ ಸಾರ್ವಜನಿಕ ಕೆರೆ ಹಲವು ವರ್ಷಗಳ ಹಿಂದೆ ಗ್ರಾಮದ ಜನ ಜಾನುವಾರುಗಳಿಗೆ ಜೀವ ಜಲವನ್ನು ಪೂರೈಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಸುತ್ತಮುತ್ತಲಿನ ವ್ಯಾಪಾರಸ್ಥರು ಎಲ್ಲಾ ರೀತಿಯ ತ್ಯಾಜ್ಯವನ್ನು ಕೆರೆಗೆ ತಂದು ಸುರಿಯುತಿದ್ದರು. ಅದರಲ್ಲಿ ವಿವಿಧ ಮಾಂಸಗಳ ತ್ಯಾಜ್ಯವನ್ನೂ ಸುರಿಯುತ್ತಿದ್ದರಿಂದ ಅದೆಲ್ಲವೂ ಇದರಲ್ಲಿ ಕರಗಿ ದುರ್ನಾತ ಬೀರುತಿತ್ತು. ಹೀಗೆ ವಿವಿಧ ಕಸ ಕಡ್ಡಿಯಿಂದ ತುಂಬಿ ಹೋಗಿದ್ದ ಕೆರೆ ಬಹುತೇಕ ಮುಚ್ಚಿಹೋಗಿತ್ತು. ಇದರಿಂದಾಗಿ ಬೇಸಿಗೆ ಕಾಲದಲ್ಲಿ ಗ್ರಾಮದ ಜನ ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗಿತ್ತು. ಇದೇ ಕೆರೆಯ ನೀರನ್ನು ನಂಬಿ ಬೇಸಿಗೆಯಲ್ಲಿ ಸಾಕಷ್ಟು ರೈತರು ವಿವಿಧ ಬೆಳೆ ಬೆಳೆಯುತ್ತಿದ್ದವರು ಬೇಸಿಗೆ ಬೆಳೆಯನ್ನೇ ನಿಲ್ಲಿಸಿದ್ದರು.

ಇದೆಲ್ಲವನ್ನೂ ಗಮನಿಸಿದ ಗ್ರಾಮದ ಮುತ್ತಪ್ಪ ಯುವಕಲಾ ಯುವಕರ ಸಂಘದ ಸದಸ್ಯರೆಲ್ಲರೂ ಸೇರಿ ಕೆರೆಯಲ್ಲಿ ತುಂಬಿದ್ದ ಹೂಳು, ತ್ಯಾಜ್ಯ ಮತ್ತು ಗಿಡಗಂಟಿಗಳನ್ನು ತೆರೆವುಗೊಳಿಸಿ ಸ್ವಚ್ಚಗೊಳಿಸಿದ್ದೇವೆ ಎನ್ನುತ್ತಾರೆ ಯುವಕರ ಸಂಘದ ಮುಖಂಡ ಮುತ್ತಪ್ಪ.

ಕೆರೆಯನ್ನು ಸ್ವಚ್ಚಗೊಳಿಸಿದ್ದರಿಂದ ಇದೀಗ ಮಳೆಗಾಲವೂ ಆರಂಭವಾಗಿರುವುದರಿಂದ ಒಂದು ಎಕರೆಯಷ್ಟು ವಿಸ್ತಾರದ ಕೆರೆಯಲ್ಲಿ ಸಾಕಷ್ಟು ನೀರು ತುಂಬಿದೆ. ಹೀಗಾಗಿ ಕೆರೆ ಮರು ಜೀವ ಪಡೆದು ಜೀವಕಳೆ ಪಡೆದುಕೊಂಡಿದೆ. ಯುವಕರ ಈ ಕೆಲಸವನ್ನು ಗಮನಿಸಿದ ಗ್ರಾಮ ಪಂಚಾಯತ್​ ನಗದು ರೂಪದಲ್ಲಿ ಬಹುಮಾನ ನೀಡಿ ಯುವಕರ ಕೆಲಸವನ್ನು ಶ್ಲಾಘಿಸಿ ಪ್ರೋತ್ಸಾಹಿಸಿದೆ. ಇದರಿಂದ ಮತ್ತಷ್ಟು ಹುಮ್ಮಸ್ಸು ಪಡೆದಿರುವ ಯುವಕರು ಬಹುಮಾನದ ರೂಪದಲ್ಲಿ ಬಂದಿರುವ ಹಣವನ್ನು ಕೆರೆಯ ಸುತ್ತಮುತ್ತ ಮರಗಿಡಗಳನ್ನು ಬೆಳೆಸಿ ಉದ್ಯಾನದ ರೀತಿಯಲ್ಲಿ ಮಾಡಲು ಹೊರಟಿದೆ.

ಇದನ್ನೂ ಓದಿ : ರೇವಣ್ಣನವರೇ ನಿಮ್ಮ ಪಾಳೇಗಾರಿಕೆ ಇನ್ನು ಮುಂದೆ ಹಾಸನದಲ್ಲಿ ನಡೆಯಲ್ಲ : ಶಾಸಕ ಪ್ರೀತಮ್ ಗೌಡ

ಆದರೆ ಕೆರೆಯ ಏರಿಯ ಮೇಲೆಯೇ ಮುಖ್ಯರಸ್ತೆ ಆದು ಹೋಗಿದ್ದು, ಅಪಾರಕ್ಕೆ ಆಹ್ವಾನ ನೀಡುತ್ತಿದೆ. ಈಗಾಗಲೇ ಹಲವು ವಾಹನಗಳ ಅಪಘಾತಗಳು ನಡೆದಿದ್ದು, ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೆರೆಗೆ ತಡೆಗೋಡೆ ನಿರ್ಮಿಸಿ ಅಪಾರ ತಪ್ಪಿಸಬೇಕು ಎನ್ನುವುದು ಸ್ಥಳೀಯರಾದ ಭರತ್ ಅವರ ಒತ್ತಾಯ.

ಒಟ್ಟಿನಲ್ಲಿ ಯುವ ಶಕ್ತಿ ಹೊಂದಾದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದುಕ್ಕೆ ಈ ಯುವಕರ ಸಂಘ ಸಾಧಿಸಿ ತೋರಿಸಿದ್ದು, ಇದು ಉಳಿದವರಿಗೂ ಮಾದರಿಯಾಗಲಿ ಎನ್ನುವುದು ನಮ್ಮ ಆಶಯ.
First published: