HOME » NEWS » District » LACK OF GRANTS FOR THE CONSTRUCTION OF AN INTERNATIONAL CLASS SPORTS COMPLEX IN DHARAWADA RHHSN MYD

ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಅನುದಾನದ ಕೊರತೆ: 2 ವರ್ಷ ಕಳೆದರು ಪೂರ್ಣಗೊಂಡಿಲ್ಲ ಕಾಮಗಾರಿ

ಧಾರವಾಡದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣದಲ್ಲಿ ಕೆಲವು ಬದಲಾವಣೆ ಆಗಿದ್ದರಿಂದ ಯೋಜನಾ ವೆಚ್ಚವನ್ನು 35 ಕೋಟಿಗೆ ಹೆಚ್ಚಿಸಲಾಯಿತು. ಹೀಗಾಗಿ ಆರಂಭದಲ್ಲಿ ಅನುದಾನ ಕೊರತೆ ಎದುರಾಗಿತ್ತು. ಈಗ ಹೆಚ್ಚುವರಿ ಅನುದಾನಕ್ಕೆ ವಿವಿಧ ಕಂಪನಿಗಳ ಜೊತೆಗೆ ಚರ್ಚಿಸಿ ಒಪ್ಪಿಗೆ ಪಡೆಯಲಾಗಿದೆ. 2 ವರ್ಷದಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎನ್ನುತ್ತಾರೆ ಹುಬ್ಬಳ್ಳಿ - ಧಾರವಾಡದ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ.

news18-kannada
Updated:February 2, 2021, 2:11 PM IST
ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಅನುದಾನದ ಕೊರತೆ: 2 ವರ್ಷ ಕಳೆದರು ಪೂರ್ಣಗೊಂಡಿಲ್ಲ ಕಾಮಗಾರಿ
ಅರ್ಧಕ್ಕೆ ನಿಂತ ಕ್ರೀಡಾ ಸಂಕೀರ್ಣದ ಕಾಮಗಾರಿ.
  • Share this:
ಧಾರವಾಡ: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಕ್ರೀಡೆಯಲ್ಲಿಯೂ ಸಹ ಮುಂದೆ ಬರಲೆಂಬ ಉದ್ದೇಶದಿಂದ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಚಾಲನೆ ಸಿಕ್ಕು ಎರಡು ವರ್ಷಗಳು ಕಳೆದರು ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ. ಸದ್ಯ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ.  ಧಾರವಾಡದಲ್ಲಿದ್ದ ಈಜುಕೊಳದ ಸಮರ್ಪಕ ನಿರ್ವಹಣೆ ಇಲ್ಲದೆ ಇರುವುದರಿಂದ ಅದೇ ಸ್ಥಳದಲ್ಲಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲು ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಿಸಲು 2018 ರಲ್ಲಿ ಕೇಂದ್ರ ಸಚಿವ ಪಲ್ಲಾದ ಜೋಶಿ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ, ಈವರೆಗೂ ಕ್ರೀಡಾ ಸಂಕೀರ್ಣ ನಿರೀಕ್ಷಿತ ಮಟ್ಟದಲ್ಲಿ ಮೇಲೇಳದಿರುವುದು ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ದೆಹಲಿಯ ಐಐಟಿ ಹಾಗೂ ಪ್ರತಿಷ್ಠಿತ ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಟ್​ನ ತಾಂತ್ರಿಕ ಸಲಹೆ ಇದ್ದು, ಶಿಲಾನ್ಯಾಸದಿಂದಲೂ ಮೇಲಿಂದ ಮೇಲೆ ಎದುರಾದ ಹಲವಾರು ವಿಘ್ನಗಳನ್ನು ನಿವಾರಿಸಿಕೊಂಡು ಕುಂಟುತ್ತಲೇ ಸಾಗುತ್ತಿರುವ ಕಾಮಗಾರಿಗೆ ಇದೀಗ ಅನುದಾನದ ಕೊರತೆ ಎದುರಾಗಿದೆ. ಒಎನ್‌ಜಿಸಿ ಕಂಪನಿಯ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ಮೂಲಕ ಒಟ್ಟು 13.5ಕೋಟಿ ರೂ. ವೆಚ್ಚದಲ್ಲಿ ಸಂಕೀರ್ಣ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ನೀಲಿನಕ್ಷೆಯಲ್ಲಿ ಕೆಲವು ಬದಲಾವಣೆ ಮಾಡಿದ ಪರಿಣಾಮ ಯೋಜನಾ ವೆಚ್ಚವನ್ನು 35 ಕೋಟಿ ರೂ. ಗೆ ಏರಿಸಲಾಗಿದೆ ಎನ್ನಲಾಗುತ್ತಿದೆ.

ಕಾಮಗಾರಿಯ ಭೂಮಿಪೂಜೆ ನೆರವೇರಿಸುವ ಪೂರ್ವದಲ್ಲಿ ಕ್ರೀಡಾ ಸಂಕೀರ್ಣ ಯಾವೆಲ್ಲ ವಿಶಿಷ್ಟ ಹೊಂದಿರಬೇಕು ಎಂದು ಕ್ರೀಡಾಪಟುಗಳು, ತರಬೇತುದಾರರೊಂದಿಗೆ ಚರ್ಚೆ ನಡೆಸದಿರುವುದೇ ಅನುದಾನದ ಕೊರತೆಗೆ ಕಾರಣವಾಗಿದೆ. ಕಾಮಗಾರಿ ಆರಂಭಕ್ಕೆ ಪೂರ್ವ ನಿಯೋಜಿತ ಯೋಜನೆಯಂತೆ ಒಎನ್‌ಜಿಸಿ 13.5 ಕೋಟಿ ರೂ. ನೀಡಲು ಒಪ್ಪಿ ಮೊದಲ ಹಂತವಾಗಿ 5 ಕೋಟಿ ರೂ. ಅನುದಾನ ಸಹ ಬಿಡುಗಡೆ ಮಾಡಿದೆ. ನಂತರ ಬದಲಾವಣೆಗಳ ಬಳಿಕ ಎದುರಾಗಿರುವ ಅನುದಾನದ ಕೊರತೆ ನೀಗಿಸಲು ಕಂಪನಿ ಹಿಂದೇಟು ಹಾಕಿದೆ. ಹೀಗಾಗಿ ಉಳಿದ ಅನುದಾನಕ್ಕಾಗಿ ವಿವಿಧ ಕಂಪನಿಗಳ ಮೊರೆ ಹೋಗುವಂತಾಗಿದೆ.

ಇದನ್ನು ಓದಿ: ಮಾಜಿ ಸಿಎಂ ಸಂಬಂಧಿ ಸಿದ್ಧಾರ್ಥ್ ಕೊಲೆ ಪ್ರಕರಣ: ತಿರುಪತಿ ಬಳಿ ಎ1 ಆರೋಪಿ ಶ್ಯಾಮ್ ಆತ್ಮಹತ್ಯೆ

ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಕ್ರೀಡಾಪಟುಗಳು, ತರಬೇತುದಾರರು ಸಲಹೆ ನೀಡಲು ಮುಂದಾಗಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ನಡೆಸಲು ಅಗತ್ಯವಿರುವ ಈಜುಕೊಳ ಸೇರಿ ಕೆಲ ಬದಲಾವಣೆ ಮಾಡಿದ್ದರಿಂದ ಯೋಜನಾ ವೆಚ್ಚ ಮೊದಲಿಗಿಂತ 21 ಕೋಟಿ ರೂ. ಹೆಚ್ಚಳವಾಗಿದೆ ಎನ್ನಲಾಗಿದೆ. ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಪೂರ್ಣಗೊಳ್ಳಲು ಇನ್ನು 2 ವರ್ಷ ಕಾಯಬೇಕಿದ್ದು, ಬಹು ಉಪಯೋಗಿ ಕ್ರೀಡಾ ಸಂಕೀರ್ಣ ಇದಾಗಿದೆ. ಜಿ 3 ಮಹಡಿಗಳಲ್ಲಿ ಕಾಪ್ಲೆಕ್ಸ್ ನಿರ್ಮಾಣಗೊಳ್ಳಲಿದೆ. ನೆಲಮಹಡಿಯಲ್ಲಿ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಉಳಿದ ಕಡೆಗಳಲ್ಲಿ ಕ್ರೀಡಾ ಸಾಮಗ್ರಿಗಳ ಮಳಿಗೆಗಳು, ಕ್ಯಾಂಟೀನ್, ವೀಕ್ಷಕರ ಗ್ಯಾಲರಿ, ತರಬೇತುದಾರರು ಮತ್ತು ವೈದ್ಯರಿಗೆ ಕೊಠಡಿ, ಮಕ್ಕಳು ಹಾಗೂ ವಯಸ್ಕರಿಗೆ ಪ್ರತ್ಯೇಕ ಈಜುಕೊಳ, ಕಬ್ಬಡ್ಡಿ ಅಂಕಣ, ಬ್ಯಾಡ್ಮಿಂಟನ್, ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕವಾದ ಜಿಮ್ ಹಾಗೂ ಇತರ ವಿಶಿಷ್ಟವಾದ ವ್ಯವಸ್ಥೆಯನ್ನು ಈ ಕಾಂಪ್ಲೆಕ್ಸ್ ನಲ್ಲಿ ಇರಲಿದೆ.

ಧಾರವಾಡದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣದಲ್ಲಿ ಕೆಲವು ಬದಲಾವಣೆ ಆಗಿದ್ದರಿಂದ ಯೋಜನಾ ವೆಚ್ಚವನ್ನು 35 ಕೋಟಿಗೆ ಹೆಚ್ಚಿಸಲಾಯಿತು. ಹೀಗಾಗಿ ಆರಂಭದಲ್ಲಿ ಅನುದಾನ ಕೊರತೆ ಎದುರಾಗಿತ್ತು. ಈಗ ಹೆಚ್ಚುವರಿ ಅನುದಾನಕ್ಕೆ ವಿವಿಧ ಕಂಪನಿಗಳ ಜೊತೆಗೆ ಚರ್ಚಿಸಿ ಒಪ್ಪಿಗೆ ಪಡೆಯಲಾಗಿದೆ. 2 ವರ್ಷದಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎನ್ನುತ್ತಾರೆ ಹುಬ್ಬಳ್ಳಿ - ಧಾರವಾಡದ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ.

  • ವರದಿ: ಮಂಜುನಾಥ ಯಡಳ್ಳಿ

Published by: HR Ramesh
First published: February 2, 2021, 2:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories