HOME » NEWS » District » LABOURERS OF LABOUR MINISTER OWN DISTICT FACING HEALTH FACILITIES HK

ಕಾರ್ಮಿಕ ಸಚಿವರ ತವರು ಜಿಲ್ಲೆಯಲ್ಲೇ ಆರೋಗ್ಯ ಸೌಲಭ್ಯಕ್ಕಾಗಿ ಕಾರ್ಮಿಕರ ಪರದಾಟ ; ಇಎಸ್ಐ ಆರಂಭವಾಗಿದರೂ ವೈದ್ಯರೇ ಇಲ್ಲ

ಆರೋಗ್ಯಕ್ಕೆ ಸಂಬಂಧಿಸಿದ ಬಿಲ್‌ಗಳನ್ನು ಮರು ಪಾವತಿ ಮಾಡಿಕೊಳ್ಳಲು ಕಾರ್ಮಿಕರು ದಾಂಡೇಲಿ, ಹುಬ್ಬಳ್ಳಿ, ಕುಂದಾಪುರ, ಶಿವಮೊಗ್ಗ ಮುಂತಾದೆಡೆ ತೆರಳಬೇಕಿದೆ.

news18-kannada
Updated:July 5, 2020, 10:04 PM IST
ಕಾರ್ಮಿಕ ಸಚಿವರ ತವರು ಜಿಲ್ಲೆಯಲ್ಲೇ ಆರೋಗ್ಯ ಸೌಲಭ್ಯಕ್ಕಾಗಿ ಕಾರ್ಮಿಕರ ಪರದಾಟ ; ಇಎಸ್ಐ ಆರಂಭವಾಗಿದರೂ ವೈದ್ಯರೇ ಇಲ್ಲ
ಕಾರ್ಮಿಕರು
  • Share this:
ಕಾರವಾರ(ಜುಲೈ.05): ಉತ್ತರ ಕನ್ನಡ ಜಿಲ್ಲೆಯಲ್ಲಿ ನೌಕರರ ರಾಜ್ಯ ವಿಮಾ ನಿಗಮ(ಇಎಸ್‌ಐ)ಡಿಸ್ಪೆನ್ಸರಿ ಕಳೆದ ವರ್ಷವೇ ಮಂಜೂರಾಗಿದ್ದರೂ, ವೈದ್ಯರಿಲ್ಲದೇ ಸೇವೆ ಪ್ರಾರಂಭವಾಗಿಲ್ಲ. ಶಿರಸಿ ಹಾಗೂ ಕುಮಟಾಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಗಳು ಮಂಜೂರಾಗಿದ್ದರೂ ಬಾಗಿಲು ತೆರೆದಿಲ್ಲ. ಇದರಿಂದ ಕಾರ್ಮಿಕರು ಆರೋಗ್ಯ ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ.

ಕಾರವಾರ ಭಾಗದ ಜನರ ಬಹು ದಿನದ ಬೇಡಿಕೆಯ ಮೇರೆಗೆ 2019 ರ ಸೆಪ್ಟೆಂಬರ್‌ನಲ್ಲೇ ಶಾಖಾ ಕಚೇರಿಯನ್ನು ಹಬ್ಬುವಾಡ ರಸ್ತೆಯ ವಿಶ್ವನಾಥ ಕಾಂಪ್ಲೆಕ್ಸ್‌ನಲ್ಲಿ ತೆರೆಯಲಾಗಿದೆ. ಕೇಂದ್ರ ಕಾರ್ಮಿಕ ಇಲಾಖೆಯಿಂದ ಪೂರ್ಣ ಪ್ರಮಾಣದ ಡಿಸ್ಪೆನ್ಸರಿ, ಅಲ್ಲಿ ಕಾರ್ಯನಿರ್ವಹಿಸಲು ಒಬ್ಬ ವೈದ್ಯ, ಒಬ್ಬ ನರ್ಸ್ ಹಾಗೂ ಒಬ್ಬ ಫಾರ್ಮಸಿಸ್ಟ್ ಹುದ್ದೆಗಳು ಮಂಜೂರಾಗಿವೆ.

ಡಿಸ್ಪೆನ್ಸರಿ ತೆರೆಯಲು ಮಾಸಿಕ ಲಕ್ಷಾಂತರ ರೂಪಾಯಿ ಬಾಡಿಗೆಗೆ ಬೃಹತ್ ಕಟ್ಟಡವನ್ನು ಪಡೆಯಲಾಗಿದೆ. ಆದರೆ, ವೈದ್ಯರ ಕೊರತೆ ಎಂಬ ಕಾರಣಕ್ಕೆ  9 ತಿಂಗಳು ಕಳೆದರೂ ಇದುವರೆಗೂ ಡಿಸ್ಪೆನ್ಸರಿ ಮಾತ್ರ ಕಾರ್ಯನಿರ್ವಹಿಸುತ್ತಿಲ್ಲ. ಶಾಖಾ ಕಚೇರಿ ಹಾಗೂ ಡಿಸ್ಪೆನ್ಸರಿ ಪ್ರಾರಂಭವಾದ ಬಗ್ಗೆ ದೊಡ್ಡ ಬೋರ್ಡ್ ಕೂಡ ಹಾಕಿಲ್ಲ. ವಾರದಲ್ಲಿ ಎರಡು ದಿನ ದಾಂಡೇಲಿಯಿಂದ ಗುಮಾಸ್ತ ಸಿಬ್ಬಂದಿ ಬಂದು ಈ ಭಾಗದ ಇಎಸ್‌ಐ ಖಾತೆದಾರರ ಸಂದಾಯಗಳನ್ನು ನೋಡಿ ಹೋಗುತ್ತಾರೆ.

10 ಸಾವಿರಕ್ಕೂ ಹೆಚ್ಚು ಕಾರ್ಮಿಕರು

ಜಿಲ್ಲೆಯಲ್ಲಿ ಇಎಸ್‌ಐ ಸೌಲಭ್ಯ ಪಡೆಯಲು ಅರ್ಹರಾದ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಆದರೆ, ಸದ್ಯ ಜಿಲ್ಲೆಯ ದಾಂಡೇಲಿಯಲ್ಲಿ ಮಾತ್ರ ಪೂರ್ಣ ಪ್ರಮಾಣದ ಇಎಸ್‌ಐ ಆಸ್ಪತ್ರೆ ಇದೆ. ಅದರ ಜತೆ 6480 ಕಾರ್ಮಿಕರು ತಮ್ಮ ಹೆಸರು  ಜೋಡಿಸಿಕೊಂಡಿದ್ದಾರೆ. ಜಿಲ್ಲೆಯ ಇತರ ತಾಲೂಕುಗಳ ಹಲವು ನೌಕರರು ದಾಂಡೇಲಿಗೆ ತೆರಳಲು ಸೂಕ್ತ ಬಸ್ ಸೌಕರ್ಯವಿಲ್ಲದ ಕಾರಣ ಹೊರ ಜಿಲ್ಲೆಗಳ ಆಸ್ಪತ್ರೆಯೊಂದಿಗೆ ತಮ್ಮ ಹೆಸರು ಜೋಡಿಸಿಕೊಂಡಿದ್ದಾರೆ. ಕಳೆದ ಲಾಕ್‌ಡೌನ್ ಅವಧಿಯಲ್ಲಿ ಹೊರ ಜಿಲ್ಲೆಗಳಿಗೆ ತೆರಳಲಾಗದೇ ಸಾಕಷ್ಟು ಕಾರ್ಮಿಕರು ತೊಂದರೆ ಅನುಭವಿಸಬೇಕಾಯಿತು.

ಹಲವು ವರ್ಷಗಳ ಬೇಡಿಕೆ :

ಕಾರವಾರದಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರ, ಸೀಬರ್ಡ್ ನೌಕಾ ಯೋಜನೆಯಲ್ಲಿ ಹೊರ ಗುತ್ತಿಗೆ, ಖಾಸಗಿ ಕಂಪನಿಗಳ ಸಾವಿರಾರು ಉದ್ಯೋಗಿಗಳಿದ್ದಾರೆ. ಅಲ್ಲದೆ, ಬಿಣಗಾ ಗ್ರಾಸಿಂ ರಾಸಾಯನಿಕ ಕಾರ್ಖಾನೆ ಸೇರಿ ವಿವಿಧ ಉದ್ಯಮಗಳಿಂದ ಇಎಸ್‌ಐ ಸೌಲಭ್ಯ ಪಡೆಯಲು ಅರ್ಹರಾದ ನಾಲ್ಕೈದು ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದರೂ ಇಲ್ಲಿ ಅವರಿಗಾಗಿ ಆಸ್ಪತ್ರೆ ಇಲ್ಲ.ಇದನ್ನೂ ಓದಿ : ಬಂದೇ ನವಾಜ್ ಉರುಸ್ ಮೇಲೆ ಕೊರೋನಾ ಕರಿನೆರಳು ; ದರ್ಗಾದ ಆವರಣದಲ್ಲಿ ಸರಳವಾಗಿ ಆಚರಿಸಲು ತೀರ್ಮಾನ

ಉದ್ಯೋಗ ನೀಡುವ ಕಂಪನಿಗಳಿಂದ ಮಾಸಿಕ ವೇತನದಲ್ಲಿ ನೂರಾರು ರೂಪಾಯಿಗಳನ್ನು ಕಡಿತ ಮಾಡಲಾಗುತ್ತದೆ. ಆದರೆ, ಚಿಕಿತ್ಸೆ ಪಡೆಯಲು ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಬಿಲ್‌ಗಳನ್ನು ಮರು ಪಾವತಿ ಮಾಡಿಕೊಳ್ಳಲು ಕಾರ್ಮಿಕರು ದಾಂಡೇಲಿ, ಹುಬ್ಬಳ್ಳಿ, ಕುಂದಾಪುರ, ಶಿವಮೊಗ್ಗ ಮುಂತಾದೆಡೆ ತೆರಳಬೇಕಿದೆ.

2019 ರ ಏಪ್ರೀಲ್‌ನಿಂದ ಶಿರಸಿಯ ನ್ಯೂ ಎಪಿಎಂಸಿ ಯಾರ್ಡ್‌ನಲ್ಲಿ ವಿಜಯಾ ಬ್ಯಾಂಕ್ ಸಮೀಪ ಪ್ರಾರಂಭವಾದ ಇಎಸ್‌ಐ ಆಸ್ಪತ್ರೆ(ಎಂಇಯುಡಿ)ಕೆಲವೇ ದಿನದಲ್ಲಿ ಬಾಗಿಲು ಮುಚ್ಚಿದೆ. ಕುಮಟಾದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆಯ ತೆರೆಯುವ ಕನಸೂ ಈಡೇರಿಲ್ಲ.
Published by: G Hareeshkumar
First published: July 5, 2020, 9:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories