ಬೀಡಿ ಕಾರ್ಮಿಕರ ತುಟ್ಟಿಭತ್ಯೆ ವಾಪಸ್ : ಸರಕಾರದ ನಿರ್ಧಾರಕ್ಕೆ ಕಾರ್ಮಿಕ ಸಂಘಟನೆಗಳ ಆಕ್ರೋಶ

ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 4 ಲಕ್ಷದಷ್ಟು ಕಾರ್ಮಿಕರಿದ್ದಾರೆ. ಬೀಡಿ ಕಟ್ಟುವುದನ್ನೇ ತಮ್ಮ ಜೀವನವನ್ನಾಗಿಸಿಕೊಂಡಿರುವ ಹಲವು ಕುಟುಂಬಗಳಿಗೆ ಸರಕಾರದ ನಿರ್ಧಾರದಿಂದ ಬೇಸರ ಮೂಡಿಸಿದೆ.

ಬೀಡಿ ಕಟ್ಟುತ್ತಿರುವ ಮಹಿಳೆಯರು

ಬೀಡಿ ಕಟ್ಟುತ್ತಿರುವ ಮಹಿಳೆಯರು

  • Share this:
ಮಂಗಳೂರು(ಜುಲೈ.24): ಕೊರೋನಾ ಲಾಕ್ ಡೌನ್ ಬಳಿಕ ಕೆಲಸವಿಲ್ಲದೆ ಕಂಗಾಲಾದ ಬೀಡಿ ಕಾರ್ಮಿಕರಿಗೆ ಇದೀಗ ರಾಜ್ಯ ಸರಕಾರ ಮತ್ತೊಂದು ಶಾಕ್ ನೀಡಿದೆ. ಬೀಡಿ ಕಾರ್ಮಿಕರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಬೀಡಿ ಮಾಲಕರು ನೀಡುವ ಅನಿವಾರ್ಯತೆಯಿಲ್ಲ ಎನ್ನುವ ಆದೇಶವನ್ನು ಸರಕಾರ ಹೊರಡಿಸಿರುವುದು ಬೀಡಿ ಕಾರ್ಮಿಕರ ಹೊಟ್ಟೆಗೆ ಹೊಡೆದಂತಾಗಿದೆ.

ಸರಕಾರದ ಈ ಆದೇಶದಿಂದ ಈಗಾಗಲೇ ತುಟ್ಟಿಭತ್ಯೆ ನೀಡಿದ ಕಂಪನಿ ಮಾಲಕರು ಇದೀಗ ತುಟ್ಟಿಭತ್ಯೆಯನ್ನು ವಾಪಸ್ ಪಡೆಯಲು ಆರಂಭಿಸಿದ್ದಾರೆ. ಕೊರೋನಾ ಲಾಕ್ ಡೌನ್ ಜಾರಿಯಾದ ಬಳಿಕ ಕಾರ್ಮಿಕ ವರ್ಗ ಬಹಳಷ್ಟು ಸಮಸ್ಯೆಗೆ ಸಿಲುಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರ ಹಿತಕಾಯುವ ಪ್ರಯತ್ನವನ್ನು ಮಾಡಿವೆ. ಆದರೆ, ರಾಜ್ಯ ಸರಕಾರದ ಸಂಪುಟ ಸಮಿತಿ ಜುಲೈ 23 ರಂದು ತೆಗೆದುಕೊಂಡ ನಿರ್ಣಯವೊಂದು ಬೀಡಿ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೀಡಿ ಕಾರ್ಮಿಕರು ಕಟ್ಟುವ ಪ್ರತೀ 1 ಸಾವಿರ ಬೀಡಿಗೆ 13.92 ರೂಪಾಯಿ ತುಟ್ಟಿಭತ್ಯೆ ನೀಡಲಾಗುತ್ತಿದ್ದು, ಜುಲೈ 1 ರಿಂದ ಈ ತುಟ್ಟಿಭತ್ಯೆಯನ್ನು ಬೀಡಿ ಕಂಪನಿಯ ಮಾಲಕರು ನೀಡಲಾರಂಭಿಸಿದ್ದಾರೆ. ಆದರೆ, ರಾಜ್ಯ ಸರಕಾರದ ಹೊಸ ನಿರ್ಧಾರದ ಬಳಿಕ ಇದೀಗ ಬೀಡಿ ಕಂಪನಿಗಳು ಬೀಡಿ ಕಾರ್ಮಿಕರಿಗೆ ನೀಡುತ್ತಿದ್ದ ತುಟ್ಟಿಭತ್ಯೆಯನ್ನು ನಿಲ್ಲಿಸಿದೆ. ಅಲ್ಲದೆ ಈಗಾಗಲೇ ನೀಡಿರುವ ತುಟ್ಟಿಭತ್ಯೆಯನ್ನು ವಾಪಾಸು ಪಡೆಯಲು ಆರಂಭಿಸಿದೆ. ಇದಕ್ಕಾಗಿ ಬೀಡಿ ಕಾರ್ಮಿಕರಿಗೆ ನೀಡಲಾಗುವ ಮಜೂರಿಯಿಂದ ಆ ಹಣವನ್ನು ಕಡಿತ ಮಾಡಲಾಗುತ್ತಿದೆ.

ಕೊರೋನಾ ಲಾಕ್ ಡೌನ್ ಬಳಿಕ ಬೀಡಿ ಕೆಲಸವಿಲ್ಲದೆ ಕಂಗಾಲಾಗಿದ್ದ ಬೀಡಿ ಕಾರ್ಮಿಕರು ಮತ್ತೆ ಕೆಲಸ ಆರಂಭಿಸಿ ಕೇವಲ ತಿಂಗಳು ಕಳೆಯುವುದರ ಮೊದಲೇ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಬೀಡಿ ಕಾರ್ಮಿಕರ ಆಕ್ರೋಶಕ್ಕೂ ಕಾರಣವಾಗಿದೆ.

2015, 2016, 2017 ರ ತುಟ್ಟಿ ಭತ್ಯೆಯನ್ನು ಬೀಡಿ ಮಾಲಕರು ನೀಡದ ವಂಚಿಸಿದ್ದು, ಪ್ರತಿಯೊಬ್ಬ ಬೀಡಿ ಕಾರ್ಮಿಕನಿಗೆ 11,934 ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೆ ಸರಕಾರವೇ ಈ ಹಿಂದೆ ಜಾರಿ ಮಾಡಿದ ಕನಿಷ್ಟ ವೇತನದಲ್ಲೂ ಪ್ರತೀ ಸಾವಿರ ಬೀಡಿಯಲ್ಲಿ 40 ರೂಪಾಯಿಗಳನ್ನು ಕಡಿತ ಮಾಡಿ ಕೂಲಿಯನ್ನು ನೀಡುತ್ತಿದ್ದಾರೆ ಎನ್ನುವ ಆರೋಪವೂ ಇದೆ.

ಇದೀಗ ಸರಕಾರವೇ ಬೀಡಿ ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿ ಬೀಡಿ ಮಾಲಕರ ಪರವಾಗಿ ಆದೇಶ ಹೊರಡಿಸಿರುವುದು ಕಾರ್ಮಿಕ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಸಿದ್ಧರಾಮಯ್ಯ ಸಲಹೆ ಕೊಡಬಹುದೇ ಹೊರತು ಆದೇಶ ಮಾಡುವಂತಿಲ್ಲ ; ಸಚಿವ ಆರ್.ಅಶೋಕ್ ಕಿಡಿ

ರಾಜ್ಯದಲ್ಲಿ ಒಟ್ಟು 8 ಲಕ್ಷದಷ್ಟು ಬೀಡಿ ಕಾರ್ಮಿಕರಿದ್ದು, ದಕ್ಷಿಣಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳಲ್ಲೇ ಸುಮಾರು 4 ಲಕ್ಷದಷ್ಟು ಕಾರ್ಮಿಕರಿದ್ದಾರೆ. ಬೀಡಿ ಕಟ್ಟುವುದನ್ನೇ ತಮ್ಮ ಜೀವನವನ್ನಾಗಿಸಿಕೊಂಡಿರುವ ಹಲವು ಕುಟುಂಬಗಳಿಗೆ ಸರಕಾರದ ಈ ನಿರ್ಧಾರ ಬೇಸರ ಮೂಡಿಸಿದೆ. ಲಾಕ್ ಡೌನ್ ನ ಮೂರು ತಿಂಗಳ ಕಾಲ ಬೀಡಿ ಕಸುಬಿಲ್ಲದೆ ಸಂಕಷ್ಟ ಅನುಭವಿಸಿದ್ದ ಬೀಡಿ ಕಾರ್ಮಿಕರಿಗೆ ಸಿಗುವ ತುಟ್ಟಿಭತ್ಯೆಯನ್ನು ಕಡಿತಗೊಳಿಸಿರುವುದು ಯಾವ ನ್ಯಾಯ ಎನ್ನುವ ಆಕ್ರೋಶ ವ್ಯಕ್ತವಾಗಿದೆ.

ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಹೋದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ದಕ್ಷಿಣ ಕನ್ನಡ ಬೀಡಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ  ಬಿ.ಎಂ.ಭಟ್ ನೀಡಿದ್ದಾರೆ.
Published by:G Hareeshkumar
First published: