‘ಎಸ್ಟಿ ನಮ್ಮ ಹಕ್ಕು’ – ಬೆಂಗಳೂರು ತಲುಪಿದ ಕುರುಬರ ಪಾದಯಾತ್ರೆ; ಎಲ್ಲೆಲ್ಲಿ ಟ್ರಾಫಿಕ್ ಜಾಮ್?
ಜ. 15ರಂದು ಕಾಗಿನೆಲೆಯಲ್ಲಿ ಆರಂಭಗೊಂಡಿದ್ದ ಕುರುಬ ಸಮುದಾಯದವರ ಪಾದಯಾತ್ರೆ ಇಂದು ಬೆಂಗಳೂರು ತಲುಪಿದ್ದು, ಸಂಜೆ 5ಕ್ಕೆ ಫ್ರೀಡಂ ಪಾರ್ಕ್ನಲ್ಲಿ ಸಮಾಪ್ತಿಗೊಳ್ಳಲಿದೆ. ಕುರುಬರಿಗೆ ಎಸ್ಟಿ ಸ್ಥಾನಮಾನ ಕಲ್ಪಿಸುವಂತೆ ಒತ್ತಾಯಿಸಿ ಈ ಹೋರಾಟ ನಡೆದಿದೆ.
ಬೆಂಗಳೂರು(ಫೆ. 03): ಕುರುಬರಿಗೆ ಎಸ್ಟಿ ಮೀಸಲಾತಿ ಸ್ಥಾನಮಾನ ಕಲ್ಪಿಸುವಂತೆ ಒತ್ತಾಯಿಸಿ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಕುರುಬ ಸಮುದಾಯದವರು ಜನವರಿ 15ರಂದು ಆರಂಭಿಸಿರುವ ಬೃಹತ್ ಪಾದಯಾತ್ರೆ ಇಂದು ಬೆಂಗಳೂರು ನಗರವನ್ನ ಪ್ರವೇಶಿಸಿದೆ. ‘ಎಸ್ಟಿ ನಮ್ಮ ಹಕ್ಕು’ ಹೆಸರಿನಲ್ಲಿ ನಡೆಯುತ್ತಿರುವ ಈ ಪಾದಯಾತ್ರೆ ಬೆಳಗ್ಗೆ 6ಗಂಟೆ ಬಳಿಕ ನಗರಕ್ಕೆ ಅಡಿ ಇಟ್ಟಿತು. ದಾಸರಹಳ್ಳಿ ಶಾಸಕ ಆರ್ ಮಂಜುನಾಥ್ ಅವರು ನಿರಂಜನಾನಂದಪುರಿ ಸ್ವಾಮಿಗಳಿಗೆ ಹೂ, ಹಾರ ಶಾಲು ಹಾಕಿ ಸ್ವಾಗತಿಸಿ ಆಶೀರ್ವಾದ ಪಡೆದರು. ನೆಲಮಂಗಲ ರಸ್ತೆಯ ಮಾದನಾಯಕನಹಳ್ಳಿಯಿಂದ ಸಾಗಿ ಬರುತ್ತಿರುವ ಈ ಪಾದಯಾತ್ರೆ ಸಂಜೆ 5ರ ನಂತರ ಮೆಜೆಸ್ಟಿಕ್ ಬಳಿಯ ಅಣ್ಣಮ್ಮ ದೇವಿ ಮಂದಿರದ ಬಳಿ ಸಮಾಪ್ತಿಗೊಳ್ಳಲಿದೆ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಪಾದಯಾತ್ರೆ?
ಮಾದನಾಯಕನ ಹಳ್ಳಿ – ಜಾಲಹಳ್ಳಿ ಕ್ರಾಸ್ ಸರ್ವಿಸ್ ರಸ್ತೆ – ಗೊರಗುಂಟೆ ಪಾಳ್ಯ – ಯಶವಂತಪುರ – ಇಸ್ಕಾನ್ (ಕಮಲಮ್ಮನ ಗುಂಡಿ) – ನವರಂಗ್ (ರಾಜಾಜಿನಗರ) – ರಾಜಕುಮಾರ್ ರಸ್ತೆ – ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ – ಫ್ರೀಡಂ ಪಾರ್ಕ್ – ಅಣ್ಣಮ್ಮ ದೇವಸ್ಥಾನ.
ಇಸ್ಕಾನ್ ಬಳಿ ಜಾಗೃತ ಸಭೆ ನಡೆಯಲಿದ್ದು, ಅಲ್ಲಿ ಸ್ವಲ್ಪಹೊತ್ತು ವಿಶ್ರಾಂತಿ ಪಡೆದು ನಂತರ ಪಾದಯಾತ್ರೆ ಮುಂದುವರಿಯಲಿದೆ. ಸ್ವಾತಂತ್ರ್ಯ ಉದ್ಯಾನವನ ತಲುಪುವ ಮುನ್ನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿ ಇರುವ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಯೋಜಿಸಲಾಗಿದೆ. ಸಂಜೆ 5ಕ್ಕೆ ಫ್ರೀಡಂ ಪಾರ್ಕ್ನಲ್ಲಿ ಸಮಾಪ್ತಿ ಸಭೆ ನಡೆಯುತ್ತದೆ. ಆ ಬಳಿಕ ಅಣ್ಣಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆ ಮುಕ್ತಾಯವಾಗುತ್ತದೆ.
ಸಾವಿರಾರು ಸಂಖ್ಯೆಯಲ್ಲಿ ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದರಿಂದ ಅದು ಸಾಗುವ ಹಾದಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಬೆಳಗ್ಗೆ 11 ಗಂಟೆವರೆಗೂ ಮಾದನಾಯಕನಹಳ್ಳಿಯಿಂದ ಗೊರಗುಂಟೆಪಾಳ್ಯದವರೆಗೂ ಟ್ರಾಫಿಕ್ ಕಿರಿಕಿರಿ ಆಗಬಹುದು. ಮಧ್ಯಾಹ್ನ 2 ಗಂಟೆಯ ನಂತರ ಇಸ್ಕಾನ್, ವೆಸ್ಟ್ ಆಫ್ ಕಾರ್ಡ್ ರಸ್ತೆ, ನವರಂಗ್, ರಾಜಕುಮಾರ್ ರಸ್ತೆ, ಕೆಅರ್ಎಸ್ ರೈಲು ನಿಲ್ದಾಣ ರಸ್ತೆ, ಮೆಜೆಸ್ಟಿಕ್ ಸುತ್ತಮುತ್ತ, ಆನಂದ್ ರಾವ್ ಸರ್ಕಲ್, ಫ್ರೀಡಂ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.
ವರದಿ: ಅಭಿಷೇಕ್ ನೆಲಮಂಗಲ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ