Kumbhashi Anegudde: ಉಡುಪಿಯಲ್ಲಿದೆ ಭಕ್ತರ ಬೇಡಿಕೆ ಶೀಘ್ರ ಈಡೇರಿಸುವ ಗಣಪ

Famous Ganesha temples in Udupi- ಪಾಂಡವರ ಕಾಲದಲ್ಲಿ ರೂಪುಗೊಂಡಿತೆನ್ನಲಾದ ಕುಂಭಾಶಿ ಆನೆಗುಡ್ಡೆ ಗಣೇಶ ದೇವಾಲಯದಲ್ಲಿ ಭಕ್ತರ ಬೇಡಿಕೆ ಬೇಗ ಈಡೇರುತ್ತದೆ ಎಂಬ ನಂಬಿಕೆ ಇದೆ. ಉಡುಪಿಯಿಂದ 32 ಕಿಮೀ ದೂರದಲ್ಲಿ ಈ ಪವಿತ್ರ ಕ್ಷೇತ್ರ ಇದೆ.

ಕುಂಭಾಶಿ ಆನೆಗುಡ್ಡೆ ದೇವಸ್ಥಾನ

ಕುಂಭಾಶಿ ಆನೆಗುಡ್ಡೆ ದೇವಸ್ಥಾನ

  • Share this:
ಉಡುಪಿ: ಪರಶುರಾಮ (Lord Parashurama) ಸೃಷ್ಟಿಯ ಏಳು ಕ್ಷೇತ್ರದಲ್ಲಿ ಉಡುಪಿ (Udupi) ಕ್ಷೇತ್ರವೂ ಒಂದು. ಇಂತಹ ಪವಿತ್ರ ಕ್ಷೇತ್ರದಲ್ಲಿ ಕಾರಣಿಕ ಮೆರೆದಿರುವ ಸ್ಥಳ‌ ಅದು ಕುಂಭಾಶಿ ಆನೆಗುಡ್ಡೆ ದೇವಾಲಯ (Kumbhashi Anegudde Temple). ಉಡುಪಿಯಿಂದ 32ಕಿಲೋಮೀಟರ್ ದೂರವಿರುವ ಈ ಆನೆಗುಡ್ಡೆ ದೇವಾಲಯ ಭಕ್ತರ ‌ಶ್ರದ್ದಾ ಕೇಂದ್ರವಾಗಿದೆ. ಈ ದೇವಾಲಯಕ್ಕೆ ಬರುವ ಭಕ್ತರನ್ನ ವಿನಾಯಕ (Lord Ganesha) ಎಂದೂ ಕೈಬಿಟ್ಟಿಲ್ಲ‌. ಒಮ್ಮೆ ಗಣಪತಿ ವಿಗ್ರಹ ನೋಡಿದರೆ ಸಾಕು ಎಂಥವರಲ್ಲೂ ಭಕ್ತಿ ಭಾವ ಉಕ್ಕಿ ಬರೋದಂತೂ ಸತ್ಯ.‌ ಇಲ್ಲಿ ಒಮ್ಮೆ ಬಂದು ಬೇಡಿದರೆ ಕ್ಷಿಪ್ರವಾಗಿ ಅಂದರೆ ಕೆಲವೇ ದಿನದಲ್ಲೇ ಈಡೇರುತ್ತೆ ಅನ್ನೋದು ಪ್ರತಿಯೊಬ್ಬರ ‌ನಂಬಿಕೆ.‌ ಈ ನಂಬಿಕೆ ‌ಎಂದೂ ಸುಳ್ಳಾಗಿಲ್ಲ ಅಂತಾರೆ ಭಕ್ತರು.

ಈ ಕ್ಷೇತ್ರದ ಮಹಿಮೆಗೆ ಇರುವ ಹಿನ್ನೆಲೆ‌ ಕೇಳಿದರೆ‌‌ ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಕುಂಭಾಶಿ ಆನೆಗುಡ್ಡೆ ಸ್ಥಳ ಗೌತಮ ಕ್ಷೇತ್ರವಾಗಿತ್ತು‌. ಇಲ್ಲಿ ಗೌತನ ಮುನಿಗಳು (Sage Gautama) ತಪಸ್ಸು, ಯಾಗ ಮಾಡುವಾಗ ಕುಂಭಾಸುರ (Kumbhasura) ಎಂಬ ರಾಕ್ಷಸ ಉಪಟಳ ಕೊಡುತ್ತಾನೆ. ಈ ವೇಳೆ ಪಾಂಡವರು (Pandavas) ವನವಾಸ ಬರುವ ಸಮಯ ಕೂಡ ಆಗಿತ್ತು. ಕೂಡಲೇ ಗೌತಮ ಮುನಿವರೇಣ್ಯರು ಪಾಂಡವರಲ್ಲಿ ಅಗ್ರಗಣ್ಯರಾಗಿದ್ದ ಧರ್ಮರಾಯನಲ್ಲಿ ಕುಂಭಾಸುರನ್ನ ಸಂಹಾರ ಮಾಡಿ ನಮಗೆ ಯಾಗ ಯಜ್ಞ ನಡೆಸಲು ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಾರೆ. ಕೂಡಲೇ ಧರ್ಮರಾಯ ಕುಂಭಾಸುರನೊಂದಿಗೆ ಯುದ್ದಕ್ಕೆ‌ ಇಳಿಯುತ್ತಾನೆ.‌ ಅದೆಷ್ಟೋ ರಾಕ್ಷಸರ ಸಂಹಾರ‌ ಮಾಡಿದ್ದ ಧರ್ಮರಾಯ (Dharmaraya) ಇಲ್ಲಿ ಸೋಲನ್ನ ಕಾಣುತ್ತಾನೆ. ಇದರಿಂದ ಪಶ್ಚಾತಾಪದಲ್ಲಿದ್ದ ಧರ್ಮರಾಯನಲ್ಲಿ ವಿಷ್ಣು ರೂಪದಲ್ಲಿ ಬಂದ ಕೃಷ್ಣ ಅಶರೀರವಾಣಿ ಮೂಲಕ ಬಂದು, ಗುರು ಹಾಗೂ ಗಣಪತಿಯನ್ನ ಪೂಜಿಸಿ ಯುದ್ದಕ್ಕೆ ಹೋದರೆ ಜಯ ಆಗುತ್ತೆ ಅಂತ ಸಲಹೆ ಕೊಡುತ್ತಾನೆ. ಈ‌ ಸಲಹೆಯಂತೆ ಗೌತಮ ಮುನಿಗಳನ್ನೇ ಗುರು ರೂಪದಲ್ಲಿ ಗಣಪತಿಯನ್ನ ಪೂಜಿಸಲು ಮುಂದಾಗುತ್ತಾರೆ.

ಈ‌ ಗುಡ್ಡದಲ್ಲಿ ಗಣಪತಿ ‌ಮೂರ್ತಿಯಾಗಲಿ, ಚಿತ್ರವಾಗಲಿ ಕಾಣದಿದ್ದಾಗ ಅಲ್ಲೇ ಇದ್ದ ದೊಡ್ಡ ಬಂಡೆಯನ್ನೇ‌ ಧರ್ಮರಾಯ ಸಹಿತ ಪಾಂಡವರು ಗಣಪತಿ ರೂಪದಲ್ಲಿ ಪೂಜಿಸುತ್ತಾರೆ. ಪೂಜೆಯಿಂದ ಪ್ರಸನ್ನನಾದ ಗಣಪತಿ ಆನೆ ರೂಪದಲ್ಲಿ ಪ್ರತ್ಯಕ್ಷರಾಗಿ ಖಡ್ಗವನ್ನು ವರವಾಗಿ ನೀಡಿ ಇದರಿಂದ ಕುಂಭಾಸುರನ ವಧೆ ಮಾಡುವಂತೆ ಹೇಳುತ್ತಾನೆ. ಅದರಂತೆ ಭೀಮ ಈ‌‌ ಖಡ್ಗದಿಂದಲೇ ಕುಂಭಾಸುರನ ಸಂಹಾರ ಮಾಡುತ್ತಾನೆ. ಹೀಗಾಗಿ ಈ ಕ್ಷೇತ್ರಕ್ಕೆ ಕುಂಭಾಶಿ‌ ಎಂಬ ಹೆಸರು ಪ್ರಸಿದ್ದಿ‌ ಪಡೆಯುತ್ತೆ. ಆನೆ ರೂಪದಲ್ಲಿ ಗಣಪತಿ ಬಂದ ಹಿನ್ನೆಲೆಯಲ್ಲಿಯೂ ಆನೆಗುಡ್ಡೆ ಎಂಬ ಹೆಸರು ಬಂದಿದೆ‌ ಎನ್ನಲಾಗುತ್ತೆ.

ಇದನ್ನೂ ಓದಿ: Dodda Ganapati Temple: ಬೆಂಗಳೂರಿನ ಇತಿಹಾಸ ಪ್ರಸಿದ್ಧ ದೊಡ್ಡಗಣಪತಿ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು?

ಕುಂಭಾಶಿ ಕ್ಷೇತ್ರದಲ್ಲಿ ಗಣಪತಿ ಖಡ್ಗ ಪ್ರಧಾನ ಮಾಡಿದ್ದರಿಂದ ಈ ಕ್ಷೇತ್ರದ ಮಹಿಮೆ ಅಪಾರ. ಈ ಕ್ಷೇತ್ರಕ್ಕೆ ನಂಬಿ ಬಂದ ಭಕ್ತರ ಜನ್ಮ ಜನ್ಮಾಂತರ ಪಾಪ‌ ಕಳೆಯುತ್ತೆ. ಎಷ್ಟೇ ಸಂಕಷ್ಟ ಹೊತ್ತು ಬಂದು‌ ಭಕ್ತಿಯಿಂದ ನಿವೇದಿಸಿದರೆ ಕ್ಷಿಪ್ರವಾಗಿ ಪರಿಹಾರ ಸಿಗುತ್ತೆ. ‌‌ಹೀಗಾಗಿ ಈ ಕ್ಷೇತ್ರ ಕಾರಣಿಕ ಪಡೆದಿದೆ. ಇನ್ನು ಗಣೇಶ ಚತುರ್ಥಿ ಪರ್ವ ಕಾಲದಲ್ಲಿ 8 ಸಾವಿರ ಜನರಿಗೆ ಅನ್ನದಾನ, ಗಣಪತಿಗೆ ಪ್ರಿಯವಾದ 8 ಸಾವಿರ ಕಡುಬು ನೈವೇಧ್ಯ, ಸಾವಿರದ ಎಂಟು ತೆಂಗಿನಕಾಯಿ ಅರ್ಪಣೆ ನಡೆಯುತ್ತೆ. ಅದೆಷ್ಟೋ ಭಕ್ತರು 21ಸಾವಿರ ಕಡುಬು ಸೇವೆ ರೂಪದಲ್ಲಿ‌ ನೀಡಿದ್ದು ಇದೆ ಅಂತ ಇಲ್ಲಿ‌‌‌ನ ಪ್ರಧಾನ ಅರ್ಚಕ ಮುರಾರಿ ಉಪಾಧ್ಯಾಯರು ಹೇಳುತ್ತಾರೆ.

‌ಒಟ್ಟಾರೆ ಈ ಆನೆಗುಡ್ಡೆ ಕ್ಷೇತ್ರದಲ್ಲಿ ಭಕ್ತಿಯಿಂದ ಏನೇ ಸೇವೆ ನೀಡಿದ್ರೂ ಪ್ರಸನ್ನನಾಗುತ್ತಾನೆ ಇಲ್ಲಿನ ಗಣಪತಿ ದೇವರು. ಗಣೇಶ ಹಬ್ಬದ ಈ ದಿನ ಕರೋನಾ ಎಂಬ ವಿಘ್ನ ಆದಷ್ಟು ಬೇಗ ನಿವಾರಣೆಯಾಗಲಿ ಅನ್ನೋದೇ ಎಲ್ಲರ ಸದಾಶಯ.‌

ಗಮನ ಸೆಳೆಯುತ್ತಿದೆ ಗುಡ್ಡೆ ಗಣಪನ ವಿಹಂಗಮ ನೋಟ:

ಉಡುಪಿಯಲ್ಲಿ ಇನ್ನೊಂದು ಅಪರೂಪದ ಗಣಪತಿ ದೇವಾಲಯವಿದೆ. ಇಲ್ಲಿ ಒಮ್ಮೆ‌ ಭೇಟಿ ಕೊಟ್ಟರೆ ವಿಭಿನ್ನ ಅನುಭವ ‌ಆಗೋದಂತು ಸತ್ಯ.. ಸುತ್ತಲೂ ಬಂಡೆಕಲ್ಲು ಒಳಗೆ ಉದ್ಬವ ಶಿವ ಪಾರ್ವತಿ ಮೂರ್ತಿಯೊಂದಿಗೆ ಸಂಗಮವಾಗಿದ್ದಾನೆ ಕಲ್ಲುಗಣಪ. ಈ ಗಣೇಶನನ್ನ ಗುಹೆಯೊಳಗಿನ ಗಣಪ, ಗುಡ್ಡೆ ಗಣಪ‌ ಎಂದೂ ಕರೆಯಲಾಗುತ್ತೆ.

Gudde Ganapa temple in Udupi
ಉಡುಪಿಯ ಶಿರಿಯಾರದಲ್ಲಿರುವ ಗುಡ್ಡೆಗಣಪ ದೇವಾಲಯ


ಇಲ್ಲಿ ಶಿವ ಹಾಗೂ ಪಾರ್ವತಿ ಉದ್ಭವ ಮೂರ್ತಿಯಾದರೆ ಗಣಪತಿಯನ್ನ ಇಲ್ಲಿ ಪ್ರತಿಷ್ಟಾಪಿಸಲಾಗಿದೆ. ಗಣೇಶ ಚತುರ್ಥಿಯಂದು ವಿಶೇಷ ಪೂಜೆ ಇಲ್ಲಿ ನಡೆಯುತ್ತೆ. ಅದ್ದೂರಿ ಆಚರಣೆ ಇಷ್ಟಪಡದವರು ಇಲ್ಲಿ ಬಂದು ಈ ಗಣಪತಿ ಕಣ್ತುಂಬಿಕೊಳ್ಳುತ್ತಾರೆ. ಉಡುಪಿಯಿಂದ 28 ಕಿಲೋಮೀಟರ್ ದೂರವಿರುವ  ಶಿರಿಯಾರದಲ್ಲಿ ಈ ದೇವಾಲಯವಿದೆ. ಈ ದೇವಾಲಯ ಆ ಭಾಗದವರಿಗಷ್ಟೇ ಪರಿಚಿತವಾಗಿತ್ತು. ಹೋಗಲು ಕಾಲು ದಾರಿ. ಹೀಗಾಗಿ ಸ್ಥಳೀಯರಷ್ಟೇ ಬಂದು ಪೂಜೆ ಕೊಟ್ಟು ಹೋಗ್ತಿದ್ರು. ತದನಂತರ ರಸ್ತೆ ನಿರ್ಮಾಣವಾಗಿ ದೂರದಿಂದಲೂ ಜನರು ಬಂದು ಗಣಪತಿ ದೇವರನ್ನ ಕಣ್ತುಂಬಿಕೊಳ್ತಾರೆ. ಕೇವಲ ಗಣಪತಿ ನೋಡಲಷ್ಡೇ ಅಲ್ಲ ಪ್ರಕೃತಿ ಸೌಂದರ್ಯ, ಬೃಹತ್ ಬಂಡೆಯೊಳಗೆ ನಡೆಸಿಕೊಂಡು ಹೋಗುವ ಅನುಭವ ಪಡೆಯಲೂ ಜನರು ಹೆಚ್ಚು ಬರ್ತಿದ್ದಾರೆ.‌

ವರದಿ: ಪರೀಕ್ಷಿತ್ ಶೇಟ್
Published by:Vijayasarthy SN
First published: