ಹಾಥ್ರಸ್ ಪ್ರಕರಣ: ರಾಮನಗರದಲ್ಲಿ ಸಮತಾ ಸೈನಿಕ ದಳ-ಬಿಎಸ್​ಪಿ ಪ್ರತಿಭಟನೆ; ಸಿಎಂ ಯೋಗಿ ರಾಜೀನಾಮೆಗೆ ಆಗ್ರಹ

ಉತ್ತರ ಪ್ರದೇಶದಲ್ಲಿ ಸರಣಿ ಅತ್ಯಾಚಾರ, ಕೊಲೆಗಳು ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಕಠಿಣ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ರಾಮನಗರದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಮತ್ತು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಸಮತಾ ಸೈನಿಕ ದಳ ಮತ್ತು ಬಿಎಸ್​ಪಿ ಕಾರ್ಯಕರ್ತರಿಂದ ರಾಮನಗರದಲ್ಲಿ ಪ್ರತಿಭಟನೆ

ಸಮತಾ ಸೈನಿಕ ದಳ ಮತ್ತು ಬಿಎಸ್​ಪಿ ಕಾರ್ಯಕರ್ತರಿಂದ ರಾಮನಗರದಲ್ಲಿ ಪ್ರತಿಭಟನೆ

  • Share this:
ರಾಮನಗರ: ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಯುವತಿಯ ಗ್ಯಾಂಗ್‌ರೇಪ್ ಮತ್ತು ಹತ್ಯೆ ಪ್ರಕರಣವನ್ನ ಖಂಡಿಸಿ ರಾಮನಗರ ಜಿಲ್ಲಾಧಿಕಾರಿ ಕಚೇರಿಯ ಎದುರು ಸಮತಾ ಸೈನಿಕ ದಳ ಹಾಗೂ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಇಂದು ಶನಿವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಸರಿಸುಮಾರು 1 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಒಬ್ಬ ನಾಲಾಯಕ್ ಸಿಎಂ. ಅವನಿಗೆ ಆಡಳಿತ ನಡೆಸಲು ಬರಲ್ಲ, ಉತ್ತರ ಪ್ರದೇಶದಲ್ಲಿ ಸರಣಿ ಅತ್ಯಾಚಾರ, ಕೊಲೆಗಳು ನಡೆಯುತ್ತಿದ್ದರೂ ಕೂಡ ಇಲ್ಲಿಯವರೆಗೆ ಯಾವುದೇ ಕಠಿಣ ಕ್ರಮವಹಿಸಿಲ್ಲ. ಇನ್ನು ಪ್ರಧಾನಿ ಮೋದಿ ಸಹ ಈ ಬಗ್ಗೆ ಗಮನಹರಿಸುತ್ತಿಲ್ಲ. ಇವತ್ತು ಉತ್ತರ ಪ್ರದೇಶದಲ್ಲಿ ನಡೆದಿದೆ, ನಾಳೆ ಕರ್ನಾಟಕದಲ್ಲೂ ಸಹ ಇಂತಹ ಘಟನೆಗಳು ನಡೆಯಬಹುದು. ಹಾಗಾಗಿ ಈ ಕೂಡಲೇ ಯೋಗಿ ಆದಿತ್ಯನಾಥ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

ಇದನ್ನೂ ಓದಿ: ಹಾಥ್ರಸ್​ ಅತ್ಯಾಚಾರ ಪ್ರಕರಣ; ನ್ಯಾಯಾಂಗ ತನಿಖೆಗೆ ಮೃತ ಯುವತಿಯ ಕುಟುಂಬಸ್ಥರ ಒತ್ತಾಯ

ಉತ್ತರ ಪ್ರದೇಶದ ಪೊಲೀಸರು ಸಹ ಗೂಂಡಾಗಳಂತೆ ವರ್ತಿಸಿದ್ದಾರೆ. ಸಾವನ್ನಪ್ಪಿದ್ದ ಯುವತಿಯ ಮೃತದೇಹವನ್ನ ಕುಟುಂಬಸ್ಥರಿಗೂ ನೀಡದೇ ತಾವೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಹಾಗಾಗಿ ಅಲ್ಲಿನ ಸರ್ಕಾರ ಸರ್ವಾಧಿಕಾರಿತನ ಪ್ರದರ್ಶನ ಮಾಡಿದೆ ಎಂದು ಕಿಡಿಕಾರಿದ ಬಿಎಸ್​ಪಿ ರಾಮನಗರ ಜಿಲ್ಲಾಧ್ಯಕ್ಷ ನಾಗೇಶ್, ದಲಿತ ಮುಖಂಡ ಪ್ರಕಾಶ್ ಮೊದಲಾದವರು, ಕೂಡಲೇ ಯೋಗಿ ಆದಿತ್ಯನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಏನಿದು ಪ್ರಕರಣ?:

ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯ ಗ್ರಾಮವೊಂದರಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ನಾಲಗೆ ಅರ್ಧ ಕತ್ತರಿಸಿಹೋಗಿತ್ತು. ಕತ್ತು ಹಿಸುಕಿ ಸಾಯಿಸಲು ಯತ್ನಿಸಿದ ಪರಿಣಾಮ ಆಕೆಯ ಕೈ ಕಾಲು ಸ್ವಾಧೀನ ಕಳೆದುಕೊಂಇಡದ್ದವು. ಆಕೆಯ ಮೇಲೆ ನಾಲ್ವರು ಅತ್ಯಾಚಾರ ಮಾಡಿ ಕೊಲೆಗೆ ಯತ್ನಿಸಿದರೆಂದು ಆಕೆ ಹಾಗೂ ಆಕೆಯ ಪೋಷಕರು ಆರೋಪ ಮಾಡಿದರು. ಕೆಲ ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಆ ದಲಿತ ಯುವತಿ ಸಾವನ್ನಪ್ಪಿದ್ದಳು. ಅದೇ ದಿನ ಪೊಲೀಸರು ಆ ಯುವತಿಯ ಶವವನ್ನು ಪೋಷಕರಿಗೆ ನೀಡದೆ ತಾವೇ ಖುದ್ದಾಗಿ ನಿಂತ ರಾತ್ರೋರಾತ್ರಿ ಶವ ಸಂಸ್ಕಾರ ಮಾಡಿದರು. ಈ ಘಟನೆ ಇಡೀ ದೇಶಾದ್ಯಂತ ವಿಪಕ್ಷಗಳ ಪ್ರತಿಭಟನೆಗೆ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ: Atal Tunnel: ಪ್ರಧಾನಿ ಮೋದಿಯಿಂದ ವಿಶ್ವದ ಅತಿ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟನೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೆಲ ಪೊಲೀಸ್ ಅಧಿಕಾರಿಗಳನ್ನ ಅಮಾನತುಗೊಳಿಸಿದ್ದಾರೆ. ಪ್ರಕರಣದ ಶೀಘ್ರ ತನಿಖೆ ನಡೆಸಿದ ಎಸ್​ಐಟಿ ತನ್ನ ವರದಿ ಇಂದು ನೀಡುತ್ತಿದೆ. ಇಷ್ಟು ದಿನ ಹೊರಗಿನವರಿಗೆ ಗ್ರಾಮ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸಿಎಂ ಇಂದು ತೆಗೆದಿದ್ದಾರೆ. ಮಾಧ್ಯಮಗಳು ಹಾಗೂ ರಾಜಕಾರಣಿಗಳು ಗ್ರಾಮವನ್ನು ಭೇಟಿ ಮಾಡಲು, ಯುವತಿಯ ಪೋಷಕರನ್ನ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ಧಾರೆ.

ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published: