• Home
  • »
  • News
  • »
  • district
  • »
  • ಕಲಬುರ್ಗಿಯಲ್ಲಿ ದಿಢೀರ್ ಸಾರಿಗೆ ಮುಷ್ಕರ: ಬಸ್ ಮೇಲೆ ಕಲ್ಲು ತೂರಾಟ: ಸಾರ್ವಜನಿಕರಿಂದಲೂ ಪ್ರತಿಭಟನೆ

ಕಲಬುರ್ಗಿಯಲ್ಲಿ ದಿಢೀರ್ ಸಾರಿಗೆ ಮುಷ್ಕರ: ಬಸ್ ಮೇಲೆ ಕಲ್ಲು ತೂರಾಟ: ಸಾರ್ವಜನಿಕರಿಂದಲೂ ಪ್ರತಿಭಟನೆ

ಕಲ್ಲು ಎಸೆತದಿಂದ ಗಾಜು ಒಡೆದಿರುವ ದೃಶ್ಯ

ಕಲ್ಲು ಎಸೆತದಿಂದ ಗಾಜು ಒಡೆದಿರುವ ದೃಶ್ಯ

ಗಾಣಗಾಪುರದಿಂದ  ನಗರಕ್ಕೆ ಬರುತ್ತಿದ್ದ ಬಸ್ ಮೇಲೆ ಕಲ್ಲು ತೂರಲಾಗಿದೆ. ಬಸ್ ಗಾಜು ಬಡಿದು ಚಾಲಕನಿಗೆ ಗಾಯವಾಗಿದೆ. ಚಾಲಕ ಓಂಕಾರ್ ಕಣ್ಣಿಗೆ ಗಾಜು ಬಡಿದಿದೆ.

  • Share this:

ಕಲಬುರ್ಗಿ (ಡಿ. 11):  ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ ಸಾರಿಗೆ ನೌಕರರು ದಿಢೀರ್ ಮುಷ್ಕರಕ್ಕೆ ಇಳಿದಿದ್ದಾರೆ. ಮುಷ್ಕರದ ಕರೆ ನಡುವೆಯೂ ಬಸ್ ಸಂಚಾರ ಮುಂದುವರಿದ ಹಿನ್ನಲೆ ನಗರದಲ್ಲಿ ಬಸ್ಸೊಂದರ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ನಂತರ ಸಾರಿಗೆ ಸಿಬ್ಬಂದಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಸಾರಿಗೆ ನೌಕರರ ವರ್ತನೆ ಖಂಡಿಸಿ ಪ್ರಯಾಣಿಕರೂ ಸಾರಿಗೆ ನೌಕರರ ವಿರುದ್ಧ ಪ್ರತಿಭಟನೆ ನಡೆಸಿದರು. ಸಾರಿಗೆ ನೌಕರರು ಕರೆ ನೀಡಿರುವ ಮುಷ್ಕರಕ್ಕೆ ನಗರದಲ್ಲಿ ಬೆಳಿಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಲಬುರ್ಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಸಾರಿಗೆ ಸಂಚಾರ ಮುಂದುವರೆದಿತ್ತು. ಮುಷ್ಕರಕ್ಕೆ ಕರೆಕೊಟ್ಟರೂ ಸಾರಿಗೆ ನೌಕರರು  ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರು. ಆದರೆ ಅಫಜಲಪುರ ಮತ್ತು ಚಿಂಚೋಳಿ ತಾಲ್ಲೂಕಿನಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಬಸ್ ಸೇವೆ ಸ್ಥಗಿತಗೊಳಿಸಿ ಅಫಜಲಪುರ ಮತ್ತು ಚಿಂಚೋಳಿಯಲ್ಲಿ ಮುಷ್ಕರವನ್ನು ಬೆಂಬಲಿಸಿದ್ದರು.


ಕಲಬುರ್ಗಿಯಲ್ಲಿ ಸಂಚಾರ ಸರಾಗವಾಗಿ ಮುಂದುವರಿದಿರುವಾಗಲೇ ಕಲ್ಲು ತೂರಾಟದ ಘಟನೆ ನಡೆದಿದೆ. ಸಂಚಾರ‌ ನಡೆಸುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ ಮಾಡಿದ ಕಲಬುರ್ಗಿ ನಗರದ ಹೈಕೋರ್ಟ್ ಬಳಿ ನಡೆದಿದೆ. ದ್ವಿಚಕ್ರ ವಾಹನದ ಮೇಲೆ ಬಂದ ಕಿಡಿಗೇಡಿಗಳು ಬಸ್ ಗೆ ಕಲ್ಲು ಹೊಡೆದು ಪರಾರಿಯಾಗಿದ್ದಾರೆ. ಗಾಣಗಾಪುರದಿಂದ  ನಗರಕ್ಕೆ ಬರುತ್ತಿದ್ದ ಬಸ್ ಮೇಲೆ ಕಲ್ಲು ತೂರಲಾಗಿದೆ. ಬಸ್ ಗಾಜು ಬಡಿದು ಚಾಲಕನಿಗೆ ಗಾಯವಾಗಿದೆ. ಚಾಲಕ ಓಂಕಾರ್ ಕಣ್ಣಿಗೆ ಗಾಜು ಬಡಿದಿದೆ. ಚಾಲಕ ಬಸ್ಸನ್ನು ಹಾಗೆಯೇ ನಿಲ್ದಾಣಕ್ಕೆ ಸಾಗಿಸಿಕೊಂಡು ಬಂದಿದ್ದಾನೆ. ಬಸ್ ಮೇಲೆ ಕಲ್ಲು ತೂರಾಟ ಘಟನೆ ನಡೆಯುತ್ತಿದ್ದಂತೆಯೇ ಸಾರಿಗೆ ನೌಕರರು ಮುಷ್ಕರ ಬಿಗಿಗೊಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಒಂದು ಕಡೆ ಸಾರಿಗೆ ನೌಕರರು ಬಸ್ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರೆ, ದಿಢೀರ್ ಬಸ್ ನಿಲ್ಲಿಸಿರೋದನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ಮಾಡಿದ ಘಟನೆ  ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆಯಿತು.


ಇದನ್ನು ಓದಿ: ಕೋಲಾರದಲ್ಲಿ ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟ; ಖಾಸಗಿ ಬಸ್​ಗಳ ಮೊರೆ ಹೋದ ಪ್ರಯಾಣಿಕರು


ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬಸ್ ನಿಲ್ದಾಣದ ಬಳಿ ಸಾರಿಗೆ ಸಂಸ್ಥೆ ಸಿಬ್ಬಂದಿ ಧರಣಿ ನಡೆಸಿತು. ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಸಿಬ್ಬಂದಿ ಧರಣಿ ಕುಳಿತುಕೊಂಡಿತು. ಇದರಿಂದಾಗಿ ಕಲಬುರ್ಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ನೂರಾರು ಬಸ್ ಗಳ ಜಮಾವಣೆಗೊಂಡಿದ್ದವು. ಬೇಡಿಕೆ ಈಡೇರುವವರೆಗೂ ಕೆಲಸಕ್ಕೆ ಹಾಜರಾಗಲು ಸಿಬ್ಬಂದಿಗಳ ನಿರಾಕರಣೆ ಮಾಡಿದರು. ನೂರಾರು ಬಸ್ ಚಾಲಕ ನಿರ್ವಾಹಕರು ಧರಣಿಯಲ್ಲಿ ಭಾಗಿಯಾಗಿದ್ದರು.  ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಮುಷ್ಕರ ಮತ್ತಷ್ಟು ತೀವ್ರಗೊಂಡಿದೆ.


ಬಸ್ ಸಂಚಾರ ಇಲ್ಲದೆ ಪರದಾಡಿ ಪ್ರಯಾಣಿಕರು ಸಿಬ್ಬಂದಿಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ಗಾಗಿ ಸಾರ್ವಜನಿಕರಿಂದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು. ಮುಂದಿನ ಒಂದು ಗಂಟೆಯ ಒಳಗಾಗಿ ಬಸ್ ಆರಂಭ ಮಾಡುವಂತೆ ಆಗ್ರಹಿಸಿದರು. ದೂರದ ಊರಿಗಳಿಗೆ ತೆರಳಬೇಕಾಗಿದ್ದು, ಬಸ್ ಬೇಕು ಅಂತಾ ಜನ ಪಟ್ಟು ಹಿಡಿದಿದ್ದಾರೆ. ಅಧಿಕಾರಿಗಳು, ಸಾರಿಗೆ ಸಿಬ್ಬಂದಿ ವಿರುದ್ದ ಜನ ಹಿಡಿಶಾಪ ಹಾಕಿದ್ದಾರೆ. ಬಸ್ ನಿಲ್ದಾಣದಲ್ಲಿ ಬೇಕೆ ಬೇಕೆ ಬಸ್ ಬೇಕು ಅಂತಾ ಪ್ರತಿಭಟನೆ ಮಾಡಿದ್ದಾರೆ.

Published by:Seema R
First published: