SSLC ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್‌ಗಳ ವಿಶೇಷ ಸೇವೆ; ಮೊದಲ ದಿನವೇ ಯಶಸ್ವಿ ಕಾರ್ಯಾಚರಣೆ

ಪ್ರತಿಯೊಂದು ಬಸ್ಸಿಗೆ ಚಾಲಕರೊಂದಿಗೆ ನಿರ್ವಾಹಕರನ್ನು ನಿಯೋಜಿಸಿ ಸರ್ಕಾರದ ಮಾರ್ಗಸೂಚಿ ಮತ್ತು ನಿರ್ದೇಶನಗಳ ಪ್ರಕಾರ  ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮುಂತಾದ ಎಲ್ಲಾ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ನಿಗಾ ವಹಿಸಲಾಗಿದೆ.

SSLC ವಿದ್ಯಾರ್ಥಿಗಳಿಗಾಗಿ ಸೇವಾನಿರತ ವಾಯುವ್ಯ ಸಾರಿಗೆ ಬಸ್‌ಗಳು.

SSLC ವಿದ್ಯಾರ್ಥಿಗಳಿಗಾಗಿ ಸೇವಾನಿರತ ವಾಯುವ್ಯ ಸಾರಿಗೆ ಬಸ್‌ಗಳು.

  • Share this:
ಹುಬ್ಬಳ್ಳಿ: ಗುರುವಾರದಿಂದ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಯವ್ಯ ಸಾರಿಗೆ ಸಂಸ್ಥೆ ವಿಶೇಷ ಬಸ್‌ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದೆ. ಅಲ್ಲದೆ, ಗುರುವಾರ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಕರೆತಂದು ಮರಳಿ ಸ್ವಸ್ಥಾನಕ್ಕೆ ಬಿಡುವಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳು ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿವೆ. ಶಿಕ್ಷಣ ಇಲಾಖೆಯ ಕೋರಿಕೆಯಂತೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ 2953 ಪರೀಕ್ಷಾರ್ಥಿಗಳಿಗಾಗಿ 106 ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ.

ಸಾರಿಗೆ ವ್ಯವಸ್ಥೆಯ ಕೊರತೆಯಿಂದಾಗಿ ಯಾವುದೇ ವಿದ್ಯಾರ್ಥಿ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತನಾಗಬಾರದು ಎನ್ನುವ ನಿಟ್ಟಿನಲ್ಲಿ ಮುಂಚಿತವಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು,  ಘಟಕ ವ್ಯವಸ್ಥಾಪಕರುಗಳು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು  ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ  ಸಭೆಗಳನ್ನು ನಡೆಸಿ ತೀರ್ಮಾನ ತೆಗೆದುಕೊಂಡಿದ್ದಾರೆ.

ವಿವಿಧ ಊರುಗಳಿಂದ ಪರೀಕ್ಷಾ ಕೇಂದ್ರಗಳಿರುವ ಸ್ಥಳಗಳಿಗೆ ಮಾರ್ಗ ನಕ್ಷೆ ರೂಪಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅವಶ್ಯಕವಿರುವಷ್ಟು ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ. ಕೆಲವು  ಬಸ್ಸುಗಳನ್ನು ರಾತ್ರಿಯೇ ಘಟಕಗಳಿಂದ ಹೊರಡಿಸಿ ತಾಲ್ಲೂಕು ಕೇಂದ್ರಗಳಲ್ಲಿ ನಿಲ್ಲಿಸಲಾಗಿದ್ದರೆ, ಇನ್ನುಳಿದ ಬಸ್ಸುಗಳು ಬೆಳಗಿನ ಜಾವ ಘಟಕಗಳಿಂದ ಹೊರಟು ನಿಗದಿತ ಸಮಯದಲ್ಲಿ ವಿವಿಧ ಊರುಗಳಿಗೆ ತೆರಳಿ ಅಲ್ಲಿಂದ ಪರೀಕ್ಷಾರ್ಥಿಗಳನ್ನು ಹತ್ತಿಸಿಕೊಂಡು ನಿಗಧಿಪಡಿಸಿದ್ದ ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ತಲುಪಿಸಿವೆ.

ಎಲ್ಲಾ ಬಸ್ಸುಗಳನ್ನು ಪರೀಕ್ಷಾ ಕೇಂದ್ರದ ಹತ್ತಿರದಲ್ಲಿಯೆ ನಿಲ್ಲಿಸಲಾಗುತ್ತಿದೆ. ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳನ್ನು  ಹತ್ತಿಸಿಕೊಂಡು ಮರಳಿ ಅವರವರ  ಊರುಗಳಿಗೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಎಲ್ಲಾ ಬಸ್ಸುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಸಿಂಪಡಿಸಿ ಸ್ಯಾನಿಟೇಷನ್ ಮಾಡಲಾಗಿದೆ.

ಪ್ರತಿಯೊಂದು ಬಸ್ಸಿಗೆ ಚಾಲಕರೊಂದಿಗೆ ನಿರ್ವಾಹಕರನ್ನು ನಿಯೋಜಿಸಿ ಸರ್ಕಾರದ ಮಾರ್ಗಸೂಚಿ ಮತ್ತು ನಿರ್ದೇಶನಗಳ ಪ್ರಕಾರ  ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮುಂತಾದ ಎಲ್ಲಾ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ನಿಗಾ ವಹಿಸಲಾಗಿದೆ.

ಇದನ್ನೂ ಓದಿ : Indian Railways: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ; ದೇಶಾದ್ಯಂತ ಎಲ್ಲಾ ರೈಲು ಸಂಚಾರವೂ ರದ್ದು

ಬಸ್ಸುಗಳ ಸುಗಮ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸಾರಿಗೆ ಸಂಸ್ಥೆಯಿಂದ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ ಮತ್ತು ಶಿಕ್ಷಣ ಇಲಾಖೆಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗುರುವಾರ ನಡೆದ ಪ್ರಥಮ ಪರೀಕ್ಷೆಯಲ್ಲಿ ಬಸ್‌ಗಳು ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿವೆ. ಹೀಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುವ ವರೆಗೆ ಬಸ್‌ಗಳ ಸೇವೆ ಮುಂದುವರಿಯಲಿದೆ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ನ್ಯೂಸ್‌18ಗೆ ತಿಳಿಸಿದ್ದಾರೆ.
First published: