ಡಿಸಿಎಂ ಲಕ್ಷ್ಮಣ ಸವದಿ ತವರಲ್ಲಿ ಕುಟುಂಬ ಸಮೇತ ಸಾರಿಗೆ ನೌಕರರ ಪ್ರತಿಭಟನೆ ಬಿಸಿ..!
ಕೇಂದ್ರ ಬಸ್ ನಿಲ್ದಾಣದಲ್ಲಿ ಇದ್ದ ಬಸ್ ಗಳನ್ನು ಡಿಪೋ ಕಳುಹಿಸಿ ಧರಣಿ ಹತ್ತಿಕ್ಕಲು ಅಧಿಕಾರಿಗಳು ಯತ್ನಿಸಿದ್ದಾರೆ ಎಂದು ಸಾರಿಗೆ ನೌಕರರು ಆರೋಪಿಸಿದರು. ನಂತರ ಕುಟುಂಬ ಸಮೇತರಾಗಿ ಬಂದು ಚಾಲಕ, ನಿರ್ವಾಹಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ತಲೆ ಮೇಲೆ ಇಟ್ಟಂಗಿ ಹೊತ್ತುಕೊಂಡು ಮಕ್ಕಳೊಂದಿಗೆ ಧರಣಿ ನಡೆಸಿದ ಸಾರಿಗೆ ಇಲಾಖೆ ನೌಕರರು
ಬೆಳಗಾವಿ(ಡಿಸೆಂಬರ್. 13): ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಣೆ ಮಾಡಲು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ಆರಂಭವಾಗಿದೆ. ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ತವರು ಜಿಲ್ಲೆ ಬೆಳಗಾವಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೂರು ದಿನಗಳಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ ನಡುವಿನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಬೆಳಗಾವಿಯಲ್ಲಿ ಮೂರು ದಿನಗಳಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿರಂತರ ಧರಣಿ ನಡೆಯುತ್ತಿದೆ. ನಿನ್ನೆ ರಾತ್ರಿ ಪ್ರತಿಭಟನೆ ಮಾಡುತ್ತಿದ್ದ ಚಾಲಕ ನಿರ್ವಾಹಕರನ್ನು ಅವರ ಊರುಗಳಿಗೆ ಬಲವಂತವಾಗಿ ಕಳುಹಿಸಲಾಗಿದೆ. ಜತೆಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಇದ್ದ ಬಸ್ ಗಳನ್ನು ಡಿಪೋ ಕಳುಹಿಸಿ ಧರಣಿ ಹತ್ತಿಕ್ಕಲು ಅಧಿಕಾರಿಗಳು ಯತ್ನಿಸಿದ್ದಾರೆ ಎಂದು ಸಾರಿಗೆ ನೌಕರರು ಆರೋಪಿಸಿದರು. ನಂತರ ಕುಟುಂಬ ಸಮೇತರಾಗಿ ಬಂದು ಚಾಲಕ, ನಿರ್ವಾಹಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಪುಟ್ಟ ಮಕ್ಕಳು, ಹೆಂಡತಿ ಹಾಗೂ ತಾಯಿಗಳ ಜತೆಗೆ ಧರಣಿ ನಡೆಸಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಘೋಷಣೆ ಕೂಗಿದರು. ನಂತರ ತಲೆ ಮೇಲೆ ಇಟ್ಟಂಗಿ ಹೊತ್ತುಕೊಂಡು ಮಕ್ಕಳು, ನೌಕರರು ಧರಣಿ ಮಾಡಿದರು. ಬಸ್ ನಿಲ್ದಾಣದಲ್ಲಿ ಉರುಳು ಸೇವೆ ಮಾಡುವ ಮೂಲಕ ಸರ್ಕಾರ ನಿಲುವನ್ನು ತೀವ್ರವಾಗಿ ವಿರೋಧಿಸಿದರು.
ಸಾರಿಗೆ ನೌಕರನ ಹೆಂಡತಿ ಸುಕನ್ಯಾ ಪಮ್ಮಾರ್ ಮಾತನಾಡಿ, ಸಂಬಳದಲ್ಲಿ ಹೋಂ ಲೋನ್ ಎಲ್ಲಾ ಕಟ್ಟಾಗಿ ಕಡಿಮೆ ಉಳಿಯುತ್ತೆ. ತಮಗೆ ಇಷ್ಟ ಬಂದಾಗ ವೇತನ ಹಾಕುತ್ತಾರೆ. ಸರ್ಕಾರಿ ನೌಕರಿ ಅಂತ ಹೇಳಿ ಬೇರೆ ಏನು ಮಾಡುವ ಹಾಗೇ ಇಲ್ಲ. ಆಸ್ಪತ್ರೆ ಬಿಲ್ ಸಹ ಸರಿಯಾಗ ಹಣ ಪಾವತಿ ಮಾಡಲ್ಲ. ನಿಗಮ ನಿಗದಿ ಮಾಡಿದ ಆಸ್ಪತ್ರೆಗೆ ಹೋದ್ರೆ ಮಾತ್ರ ನಿಯಮ ಅನ್ವಯ ಆಗುತ್ತಿದೆ. ಪ್ರಾಣ ಹೋಗುವ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಎಲ್ಲಿಂದ ಹುಡುಕೊಣ. ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಲೇ ಬೇಕು. ನಮಗೆ ಎಲ್ಲಾ ಸೌಲಭ್ಯ ಸಿಗಲೇಬೇಕು. ಖಾಸಗಿ ಬಸ್ ಓಡಿಸಿದ್ರೆ ಅದಕ್ಕೆ ತಲೆ ಕೊಟ್ಟು ಜೀವ ಕೊಡುತ್ತೇವೆ. ಇದಕ್ಕೆ ಸರ್ಕಾರವೇ ನೇರವಾಗಿ ಹೊಣೆ ಎಂದು ಹೇಳಿದರು.
ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಬೇಡಿಕೆ ಹೊರತುಪಡಿಸಿ ಉಳಿದೆಲ್ಲಾ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ಪ್ರಮುಖ ಬೇಡಿಕೆ ಈಡೇರದ ಕಾರಣ ಮುಷ್ಕರ ಮುಂದುವರಿಸಿರುವುದಾಗಿ ಸಾರಿಗೆ ನೌಕರರರು ನಿರ್ಧರಿಸಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ