• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ವೃತ್ತಿಜೀವನದಲ್ಲಿ ಒಂದೂ ಅಪಘಾತ ಮಾಡದ, ಒಮ್ಮೆಯೂ ರಜೆ ಮಾಡದ ಬಸ್ ಚಾಲಕ ಕೃಷ್ಣಪ್ಪಗೆ ಸನ್ಮಾನ

ವೃತ್ತಿಜೀವನದಲ್ಲಿ ಒಂದೂ ಅಪಘಾತ ಮಾಡದ, ಒಮ್ಮೆಯೂ ರಜೆ ಮಾಡದ ಬಸ್ ಚಾಲಕ ಕೃಷ್ಣಪ್ಪಗೆ ಸನ್ಮಾನ

ದಾವಣಗೆರೆಯ ಕೆಎಸ್ಸಾರ್ಟಿಸಿ ಬಸ್ ಚಾಲಕ ಎಂ.ಕೆ. ಕೃಷ್ಣಪ್ಪ

ದಾವಣಗೆರೆಯ ಕೆಎಸ್ಸಾರ್ಟಿಸಿ ಬಸ್ ಚಾಲಕ ಎಂ.ಕೆ. ಕೃಷ್ಣಪ್ಪ

ದಾವಣಗೆರೆಯಲ್ಲಿ ನಿವೃತ್ತಿ ಹೊಂದಿದ ಬಸ್ ಚಾಲಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಇಡೀ ವೃತ್ತಿಜೀವನದಲ್ಲಿ ಒಂದೂ ಅಪಘಾತ ಮಾಡದ ಚಾಲಕ ಕೃಷ್ಣಪ್ಪರನ್ನು ವಿಶೇಷವಾಗಿ ಗೌರವಿಸಲಾಯಿತು.

  • Share this:

ದಾವಣಗೆರೆ: ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಒಳ ಆವರಣದಲ್ಲಿ ಇತ್ತೀಚೆಗೆ ದಾವಣಗೆರೆ ಘಟಕ ಕೆಎಸ್‍ಆರ್‍ಟಿಸಿ ಹಾಗೂ ಎಐಯುಟಿಸಿ ಇವರ ಸಂಯುಕ್ತ ಆಶ್ರಯದಲ್ಲಿ ನಿವೃತ್ತಿ ಹೊಂದಿದ ಬಸ್ ಚಾಲಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಪಘಾತ ರಹಿತವಾಗಿ ಬಸ್ ಚಾಲನೆ ಮಾಡಿದ ಎಂ.ಕೆ. ಕೃಷ್ಣಪ್ಪ ಅವರನ್ನು ಗೌರವಿಸಲಾಯಿತು. ದಾವಣಗೆರೆ ವಿಭಾಗದ ಅಧಿಕಾರಿಗಳು ಬೆಳ್ಳಿ ಪದಕದೊಂದಿಗೆ ಪ್ರಶಸ್ತಿ ಪತ್ರವನ್ನು ಎಂ.ಕೆ.ಕೃಷ್ಣಪ್ಪನವರಿಗೆ ನೀಡಿ ಸನ್ಮಾನಿಸಿದರು.


ಕೃಷ್ಣಪ್ಪ ತಮ್ಮ 30 ವರ್ಷದ ಸೇವೆಯಲ್ಲಿ ಒಂದೂ ಅಪಘಾತ ಮಾಡದಿರುವುದು ಒಂದು ಹೆಗ್ಗಳಿಕೆಯಾದರೆ, ಅಷ್ಟೂ ವರ್ಷ ಹಬ್ಬ, ಸಮಾರಂಭಗಳಿದ್ದರೂ ಒಂದು ದಿನವೂ ರಜೆ ಮಾಡಿಲ್ಲ. ಇವರ ಈ ಸೇವಾಪರತೆಯನ್ನು ಮೆಚ್ಚಿಕೊಂಡು ಕೆಎಸ್‍ಆರ್‍ಟಿಸಿ ಸಂಸ್ಥೆಯಿಂದ ಪ್ರಶಸ್ತಿ ಪತ್ರವನ್ನು ಸಹ ನೀಡಿ ಗೌರವಿಸಲಾಯಿತು. ಇದೇ ವೇಳೆ, ನಿವೃತ್ತಿ ಹೊಂದಿದ ಇನ್ನುಳಿದ ಬಸ್ ಚಾಲಕರನ್ನು ಸಹ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಘಟಕದ ವ್ಯವಸ್ಥಾಪಕರಾದ ರಾಮಚಂದ್ರಪ್ಪ ಮಾತನಾಡಿ, ಒಬ್ಬ ಚಾಲಕ ತನ್ನ 30 ವರ್ಷದಲ್ಲಿ ಬಸ್‍ಗೆ ಇಂಧನ ಎಷ್ಟು ಬಳಕೆ ಮಾಡಲಾಗಿದೆ? ಬಸ್ ಎಷ್ಟು ದೂರ ಚಲಿಸಿದೆ? ಇಲ್ಲಿಯವರೆಗೂ ತಾನು ಪಡೆದಿರುವ ವೇತನದ ಒಟ್ಟು ಮೊತ್ತ ಎಷ್ಟು ಎಲ್ಲವನ್ನೂ ಲೆಕ್ಕದ ರೂಪದಲ್ಲಿ ಸವಿಸ್ತಾರವಾಗಿ ತಿಳಿಸಿದ ಚಾಲಕ ಎಂದರೆ ಅದು ಕೃಷ್ಣಪ್ಪ ಮಾತ್ರ ಎಂದು ಬಣ್ಣಿಸಿದರು.


ಇದನ್ನೂ ಓದಿ: ಕಲಿಯುಗ ಕೊರೋನಾ ಯುಗವಾಗುತ್ತಿದೆ: ಮುರುಘಾ ಶರಣರು ಆತಂಕ


ವೃತ್ತಿ ಜೀವನದಲ್ಲಿ ರಜೆ ಇದ್ದರೂ ಸಹ ಅದನ್ನು ಬಳಕೆ ಮಾಡಿಕೊಳ್ಳದೆ ರಜೆ ರಹಿತವಾಗಿ ಕಾರ್ಯ ನಿರ್ವಹಿಸುವ ಮೂಲಕ ಹಾಗೂ ಅಪಘಾತ ರಹಿತವಾಗಿ ಚಾಲನೆ ಮಾಡುವುದರೊಂದಿಗೆ ನಮ್ಮ ಸಂಸ್ಥೆಗೆ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಕೆ.ಕೃಷ್ಣಪ್ಪ, ಕಾಯಕವೇ ಕೈಲಾಸ ಎಂದು ನಂಬಿದವನು ನಾನು. ಹೆಚ್ಚಾಗಿ ಬೆಂಗಳೂರು-ದಾವಣಗೆರೆ ಲೈನ್​ನಲ್ಲಿಯೇ ಕಾರ್ಯ ನಿರ್ವಹಿಸಿದೆ. ನನ್ನ ವೃತ್ತಿ ಜೀವನದಲ್ಲಿ ಯಾವೊಬ್ಬ ಪ್ರಯಾಣಿಕರಿಗೂ ತೊಂದರೆ ಆಗದಂತೆ ನಡೆದುಕೊಂಡಿರುವೆ. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಹದ್ಯೋಗಿಗಳಿಗೆ ಸಹಕರಿಸಿದ್ದು, ಉತ್ತಮ ಕಾರ್ಯನಿರ್ವಹಿಸಿರುವ ಮನೋಭಾವ ನನ್ನಲಿದೆ ಎಂದು ತಿಳಿಸಿದರು.


ವೃತ್ತಿ ಜೀವನದಲ್ಲಿ ತಾವು ಚಾಲಕನಾಗಿ ಕಾರ್ಯ ನಿರ್ವಹಿಸಿದ ಕುರಿತು ಅಂದರೆ ಬಸ್ ಎಷ್ಟು ದೂರ ಚಾಲನೆ ಮಾಡಲಾಗಿದೆ, ಇಂಧನ ಎಷ್ಟು ಬಳಕೆ ಮಾಡಲಾಗಿದೆ ಹಾಗೂ ನಿವೃತ್ತಿಯವರೆಗೂ ಪಡೆದ ವೇತನ ಹೀಗೆ ಪ್ರತಿಯೊಂದನ್ನು ಅಂಕಿ ಆಂಶದ ರೂಪದಲ್ಲಿ ಕೃಷ್ಣಪ್ಪ ತಿಳಿಸಿದರು.


ಇದನ್ನೂ ಓದಿ: Mangalore Rain: ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ; ನದಿಗಳಲ್ಲಿ ನೀರಿನ ಮಟ್ಟ ಏರಿಕೆ


ಕೃಷ್ಣಪ್ಪ ವೃತ್ತಿ ಬದುಕಿನ ಮಾಹಿತಿ:
ಬಸ್ ಚಾಲಿಸಿದ ದೂರ- 24,40,470 ಕಿ.ಮೀ,
ಖರ್ಚಾದ ಇಂಧನ- 4,83,187 ರೂ
ಒಟ್ಟು ವೇತನ- 60,75,641 ರೂ
ಅಪಘಾತಗಳು: 0
ಸಾರಿಗೆ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್. ಬಸಪ್ಪ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗದ ಎಂ. ಮಹಾದೇವ, ಹಿರಿಯ ಘಟಕದ ವ್ಯವಸ್ಥಾಪಕರಾದ ಓ. ರೇಣುಕಪ್ಪ, ಚಿತ್ರದುರ್ಗದ ರಹೀಮ್ ಸಾಬ್, ಚಾಲಕರಾದ ಪಿ. ನಿಜಗುಣ, ಅವರಗೆರೆ ಎಚ್.ಜಿ. ಉಮೇಶ್, ಮಿರ್ಜಾ ರಾಮತ್ ಉಲ್ಲಾ, ರಾಚಪ್ಪ, ಪ್ರಕಾಶ್, ಕೃಷ್ಣಮೂರ್ತಿ, ಎಂ. ರಮೇಶ್, ಡಿ.ಎಂ. ಮಂಜಪ್ಪ, ಗುರುರಾಜ್, ವಿಜಯ್ ಕುಮಾರ್, ಮೂರ್ತಿನಾಯ್ಕ್, ರಂಗಸ್ವಾಮಿ ಹಾಗೂ ಮುಕುಂದ ತಳವಾರ್ ಸೇರಿದಂತೆ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಹಾಗೂ ಸನ್ಮಾನಿತರ ಕುಟುಂಬ ವರ್ಗದವರು ಹಾಜರಿದ್ದರು.


ವರದಿ : ಹೆಚ್ ಎಂ ಪಿ ಕುಮಾರ್

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು