ಸಾರಿಗೆ ಸಚಿವರ ತವರಲ್ಲೇ ಸಿಬ್ಬಂದಿಯ ಅಮಾನುಷ ಬಳಕೆ ; ಪೊರಕೆ ಹಿಡಿದು ಬಸ್ ನಿಲ್ದಾಣ ಸ್ವಚ್ಛತೆ

ಕೊರೋನಾ ಮಹಾಮಾರಿಯಿಂದ ಸ್ವಚ್ಛತಾ ಕಾರ್ಮಿಕರು ಕೆಲಸ ಬಿಟ್ಟಿರುವ ಕಾರಣ ಕೆಎಸ್​ಆರ್​ಟಿಸಿ ಸಿಬ್ಬಂದಿಯೇ ಬಸ್ ನಿಲ್ದಾಣ ಸ್ವಚ್ಛ ಮಾಡುವ ಪರಿಸ್ಥಿತಿ ಬಂದಿದೆ.

ಕೆಎಸ್​ಆರ್​​ಟಿಸಿ ಸಿಬ್ಬಂದಿ

ಕೆಎಸ್​ಆರ್​​ಟಿಸಿ ಸಿಬ್ಬಂದಿ

  • Share this:
ಚಿಕ್ಕೋಡಿ(ಜುಲೈ.21): ಕೊರೋನಾ‌ ಮಹಾಮಾರಿ ಸೃಷ್ಟಿಸಿರುವ ಅವಾಂತರದಿಂದ ಸಾರಿಗೆ ಸಚಿವ ಹಾಗೂ ಡಿಸಿಎಂ‌ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲೆ ಕೆಎಸ್​ಆರ್​ಟಿಸಿ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿಗಳನ್ನ ಅಮಾನುಷವಾಗಿ ಬಳಸಿಕೊಳ್ಳಲಾಗುತ್ತಿದೆ. ಖಾಕಿ‌ ಯುನಿಫಾರಂ ತೊಟ್ಟು ಬಸ್ ನಿಲ್ದಾಣಗಳನ್ನ ಕಸಬರಿಗೆ ಹಿಡಿದು ಸ್ವಚ್ಛ ಮಾಡುತ್ತಿರುವದು ಯಾರೋ ಪೌರ ಕಾರ್ಮಿಕರಲ್ಲ. ಹೀಗೆ ಬಸ್ ನಿಲ್ದಾಣವನ್ನ ಸ್ವಚ್ಛ ಮಾಡುತ್ತಿರುವದು ಕೆಎಸ್​ಆರ್​ಟಿಸಿ ಸಿಬ್ಬಂದಿಗಳು. ಇಂತಹ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಬಸ್ ನಿಲ್ದಾಣದಲ್ಲಿ.

ಸ್ವಚ್ಚತೆ ನಿರ್ವಹಣೆ ಮಾಡಲು ಸಿಬ್ಬಂದಿಗಳು ಸಿಗದ ಕಾರಣ ಇಲಾಖೆ ಅಧಿಕಾರಿಗಳ ದರ್ಪದಿಂದ ಬಸ್ ಚಾಲಕರು,‌ ನಿರ್ವಾಹಕರು ಹಾಗೂ ಕಂಟ್ರೋಲರ್ ಗಳು ಬಸ್ ನಿಲ್ದಾಣ ಸ್ವಚ್ಛ ಮಾಡುತ್ತಿದ್ದಾರೆ. ಮಹಾಮಾರಿಯಿಂದ ಇಲ್ಲಿ‌ ಇದ್ದ ಸ್ವಚ್ಚತಾ ಸಿಬ್ಬಂದಿಗಳು ಕೆಲಸ ಬಿಟ್ಟು ಹೋಗಿದ್ದಾರೆ. ಕೆಎಸ್​ಆರ್​ಟಿಸಿ ಅಧಿಕಾರಿಗಳು ಬೇರೆ ಸ್ವಚ್ಛತಾ ಸಿಬ್ಬಂದಿಯನ್ನ ನೇಮಕ‌ ಮಾಡಿಲ್ಲ. ಒಂದೊಂದು ಬಾರಿ‌ ಶೌಚಾಲಯವನ್ನು ಸ್ವಚ್ಚ ಮಾಡುವ ದುಸ್ಥಿತಿ ಕೆಎಸ್ ಆರ್ ಟಿ ಸಿ ಸಿಬ್ಬಂದಿಗೆ ಬಂದಿದೆ.

ಇನ್ನು ಕೆಲಸದಲ್ಲಿದ್ದವರು ಕೆಲಸ ಬಿಟ್ಟ ಬಳಿಕ ಹೊಸದಾಗಿ ಬೇರೆ ಕೆಲಸದವರನ್ನ ಮೇಲಾಧಿಕಾರಿಗಳು ನೇಮಕ ಮಾಡಿಕೊಂಡಿಲ್ಲ ಒಂದು ವೇಳೆ ಬಸ್ ನಿಲ್ದಾಣ ಸ್ವಚ್ಛ ಇಲ್ಲದಿದ್ದರೆ ಈ ನಮ್ಮನ್ನೆ ಪ್ರಶ್ನೆ ಮಾಡುತ್ತಾರೆ ಹೀಗಾಗಿ ನಾವೆ ಸ್ವಚ್ಚ  ಮಾಡಬೇಕು ಎಂದು ಇಲ್ಲಿನ ಸಿಬ್ಬಂದಿಗಳು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಕೊರೋನಾ ಮಹಾಮಾರಿಯಿಂದ ಸ್ವಚ್ಛತಾ ಕಾರ್ಮಿಕರು ಕೆಲಸ ಬಿಟ್ಟಿರುವ ಕಾರಣ ಕೆಎಸ್​ಆರ್​ಟಿಸಿ ಸಿಬ್ಬಂದಿಯೇ ಬಸ್ ನಿಲ್ದಾಣ ಸ್ವಚ್ಛ ಮಾಡುವ ಪರಿಸ್ಥಿತಿ ಬಂದಿದೆ.‌ ಅಧಿಕಾರಿಗಳಿಗೆ ಹೆದರಿ ಸಿಬ್ಬಂದಿ ಬಸ್ ನಿರ್ವಹಣೆ‌ ಜೊತೆಗೆ ಈಗ ಬಸ್ ನಿಲ್ದಾಣವನ್ನು ಸ್ವಚ್ಚ ಮಾಡುತ್ತಿದ್ದಾರೆ.‌

ಇದನ್ನೂ ಓದಿ : ಕೊರೋನಾ ತಂದ ಸಂಕಷ್ಟ; ಬೀದಿಗೆ ಬಿದ್ದ ಕ್ಯಾಬ್ ಚಾಲಕರ ಬದುಕು, ಕಾರಿನಲ್ಲಿ ಮಾಸ್ಕ್, ತರಕಾರಿ ಮಾರಾಟ

ಇನ್ನು ನಿತ್ಯವು ಹುಕ್ಕೇರಿ ಪುರಸಭೆಯ ಪೌರ ಕಾರ್ಮಿಕರು ಬಸ್ ನಿಲ್ದಾಣದ ಸುತ್ತಲೂ ಸ್ವಚ್ಚತಾ ಕಾರ್ಯವನ್ನ ಮಾಡುತ್ತಿದ್ದರು. ಆದರೆ, ಇಲ್ಲಿನ  ಪುರಸಭೆಯ ಪೌರ ಕಾರ್ಮಿಕರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನಲೆ 10 ಕ್ಕೂ ಹೆಚ್ಚು ಪೌರ ಕಾರ್ಮಿಕರು ಕ್ವಾರಂಟೈನ್ ಆಗಿದ್ದಾರೆ. ಪರಿಣಾಮ ನಿಲ್ದಾಣ ಹಾಗೂ ಪಟ್ಟಣದ ಸ್ವಚ್ಚತಾ ಕಾರ್ಯ ಕೂಡ ಸ್ಥಗಿತಗೊಂಡಿದೆ.

ಒಟ್ಟಿನಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ತವರು ಜಿಲ್ಲೆಯಲ್ಲೆ ನೌಕರರಿಗೆ ಇಂತಹ ಸ್ಥಿತಿ ಬಂದಿದೆ. ಸಚಿವರು ಇತ್ತ ಗಮನ ಹರಿಸಿ ಕೆಎಸ್​ಆರ್​ಟಿಸಿ ನೌಕರರನ್ನ ಅಮಾನುಷವಾಗಿ ನಡೆಸಿ ಕೊಳ್ಳುತ್ತಿರುವದಕ್ಕೆ ಅಂತ್ಯ ಹಾಡಬೇಕಿದೆ.
Published by:G Hareeshkumar
First published: