Viral - ಸೂಪರ್ ಕಾಪ್​ನೊಳಗೊಬ್ಬ ಗಾಯಕ – KSRP ಎಡಿಜಿಪಿ ಅಲೋಕ್ ಕುಮಾರ್ ಹಾಡು ಈಗ ವೈರಲ್

ಸಮಾಜಘಾತುಕ ಶಕ್ತಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಅಲೋಕ್ ಕುಮಾರ್ ಅವರು ಅಂತರಾಳದಲ್ಲಿ ತುಸು ಭಿನ್ನವೇ ಇದ್ದಾರೆ. ಐಪಿಎಸ್ ಅಧಿಕಾರಿ ಎಂಬ ಹಮ್ಮಿಲ್ಲದೆ ಸಾಮಾನ್ಯರೊಂದಿಗೂ ಬೆರೆತು ಅವರು ಹಾಡಿರುವ ಹಾಡು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹಾಡು ಹೇಳುತ್ತಿರುವುದು

ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹಾಡು ಹೇಳುತ್ತಿರುವುದು

  • Share this:
ವಿಜಯಪುರ(ಜ. 09): ಸೂಪರ್ ಕಾಪ್ ಅಲೋಕಕುಮಾರ್ ತಮ್ಮ ಕಾರ್ಯ ವೈಖರಿಯ ಮೂಲಕ ಸಮಾಜ ಘಾತುಕ ಶಕ್ತಿಗಳಿಗೆ ನಡುಕ ಹುಟ್ಟಿಸಿದವರು. 2018ರಲ್ಲಿ ಬೆಳಗಾವಿ ಉತ್ತರ ವಲಯ ಐಜಿಯಾಗಿದ್ದಾಗ ಗುಮ್ಮಟ ನಗರಿ ಖ್ಯಾತಿಯ ವಿಜಯಪುರ ಜಿಲ್ಲೆಯ ಭೀಮಾ ತೀರದಲ್ಲಿ ಚಡಚಣ ಸಹೋದರರ ನಕಲಿ ಎನಕೌಂಟರ್ ಆರೋಪ ಪ್ರಕರಣವನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೇ ಅಲೋಕಕುಮಾರ ತಾವೊಬ್ಬ ಖಡಕ್ ಪೊಲೀಸ್ ಅಧಿಕಾರಿ ಮಾತ್ರವಲ್ಲ ತಮ್ಮಲ್ಲಿಯೂ ಕವಿಯಿದ್ದಾನೆ. ಗಾಯಕನಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇವರಲ್ಲಿರುವ ಗಾಯಕ ಹೊರಬರಲು ವೇದಿಕೆಯಾಗಿದ್ದು ಇದೇ ಬಸವನಾಡು ವಿಜಯಪುರ ಜಿಲ್ಲೆ. 

ಜ.6 ರಂದು ವಿಜಯಪುರ ನಗರದಲ್ಲಿ ಬೆ. 7.30ಕ್ಕೆ ರನ್ ಫಾರ್ ಫಿಟ್ ಇಂಡಿಯಾ (Run for Fit India) ಓಟ ಆಯೋಜಿಸಿದ್ದರು. ಕೊರೊನಾ ನಂತರ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಆಯೋಜಿಸಿದ್ದ ಈ ಓಟ ವಿಜಯಪುರ ನಗರದ ಐತಿಹಾಸಿಕ ಗೋಳಗುಮ್ಮಟದಿಂದ ಜಿಲ್ಲಾ ಕ್ರೀಡಾಂಗಣ, ಅಂಬೇಡ್ಕರ ವೃತ್ತ, ಬಸವೇಶ್ವರ ಚೌಕ್, ಗಾಂಧಿಚೌಕ್, ವಾಟರ್ ಟ್ಯಾಂಕ್ ಮೂಲಕ ಬಿಎಲ್​ಡಿಇ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯದ ಕ್ರೀಡಾಂಗಣದವರೆಗೆ ನಡೆಯಿತು. ಈ ಓಟದಲ್ಲಿ ಭಾರತೀಯ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ, ಬೇರೆ ಬೇರೆ ಸಂಘಟನೆಗಳ ಅಥ್ಲೀಟ್​ಗಳು ಸೇರಿದಂತೆ ಸ್ವತಃ ಅಲೋಕ್ ಕುಮಾರ ಕೂಡ ಸುಮಾರು 7 ಕಿ. ಮೀ. ಸಂಪೂರ್ಣ ಓಟದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳ ಮುಂದೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು

ಬಳಿಕ ಸಂಜೆ ವಿಜಯಪುರ ಜಿಲ್ಲೆಯ ಅರಕೇರಿಯಲ್ಲಿರುವ ಭಾರತೀಯ ಮೀಸಲು ಪಡೆ (ಐಆರ್​ಬಿ) ಬಟಾಲಿಯನ್​ನಲ್ಲಿ ಮೀಸಲು ಪಡೆಯ ಸಿಬ್ಬಂದಿ ಮತ್ತು ಕುಟುಂಬಸ್ಥರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಾಗಿತ್ತು. ಈ ಸಂದರ್ಭದಲ್ಲಿ ಕೈಗೆ ಮೈಕ್ ಎತ್ತಿಕೊಂಡ ಅಲೋಕಕುಮಾರ ಅವರನ್ನು ನೋಡಿದ ಅಲ್ಲಿನ ಜನ ತಮಗೆ ಏನಾದರೂ ಸಂದೇಶ ನೀಡಬಹುದು ಎಂದುಕೊಂಡಿದ್ದರು. ಆದರೆ, ಆಗಿದ್ದೇ ಬೇರೆ. ಪೊಲೀಸ್ ಸೂಪರ್ ಕಾಪ್ ಎಡಿಜಿಪಿ ಅಲೋಕಕುಮಾರ ಕೈಯಲ್ಲಿ ಮೈಕ್ ಹಿಡಿದು ತಮ್ಮ ಮಧುರವಾದ ಕಂಠದಿಂದ ಹಿಂದಿ ಹಾಡು ಹೇಳಿ ರಂಜಿಸಿದರು. ಖ್ಯಾತ ಹಿಂದಿ ಗಾಯಕ ಕಿಶೋರ್ ಕುಮಾರ್ ಹಾಡಿರುವ ಪ್ರೇಮ್ ಪೂಜಾರಿ ಚಿತ್ರದ ಫೂಲೋಂಕೆ ರಂಗಸೆ, ದಿಲ್ ಕಿ ಕಲಂಸೆ ಹಾಡು ಹೇಳಿದ ನೆರೆದ ಜನ ವಾವ್ ಎನ್ನುವಂತೆ ಮಾಡಿದರು. ಈ ಪ್ರೇಮ್ ಪೂಜಾರಿ ಚಿತ್ರ ಅರವತ್ತರ ದಶಕದ ಚಿತ್ರವಾಗಿದ್ದು, ಅಂದಿನ ಎವರ್ ಗ್ರೀನ್ ಹೀರೋ ದೇವಾನಂದ್ ಮತ್ತು ವಹೀದಾ ರೆಹೆಮಾನ್ ಈ ಚಿತ್ರದಲ್ಲಿ ನಟಿಸಿದ್ದಾರೆ.

4 ನಿಮಿಷ 1 ಸೆಕೆಂಡ್ ಹಾಡನ್ನೂ ಅಲೋಕ್ ಕುಮಾರ್ ಒಂಚೂರೂ ತಡವರಿಸದೇ ಸುಮಧರವಾಗಿ ಸಂಪೂರ್ಣವಾಗಿ ಹಾಡು ಹೇಳುವ ಮೂಲಕ ತಮ್ಮಲ್ಲಿರುವ ಗಾಯಕನನ್ನು ಹೊರಗೆಡವಿದ್ದಾರೆ. ಅಂದಹಾಗೆ ಅಲೋಕಕುಮಾರ ಯಾವುದೇ ಸಂಗೀತದ ಸಹಾಯವಿಲ್ಲದೆ ನಿರರ್ಗಳವಾಗಿ ಮತ್ತು ಸಂಪೂರ್ಣವಾಗಿ ಹಿಂದಿ ಹಾಡು ಹೇಳುವ ಮೂಲಕ ಪೊಲೀಸ್ ಸೂಪರ್ ಕಾಪ್​ನೊಳಗಿರುವ ಗಾಯಕನ ರೂಪವನ್ನು ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: ಹೀರೋಗಳಾಗಿ ನಿವೃತ್ತಿ ಹೊಂದಿ, ಗುಲಾಮರಂತೆ ವರ್ತಿಸಬೇಡಿ; ಅಧಿಕಾರಿಗಳಿಗೆ ಬೆವರಿಳಿಸಿದ ಸಂಸದ ಎಸ್​. ಮುನಿಸ್ವಾಮಿ

ಅಂದು ಅಲೋಕಕುಮಾರ ಹಾಡು ಹೇಳುತ್ತಿದ್ದಂತೆ ಅಲ್ಲಿ ನೆರೆದಿದ್ದ ಜನರು ತಮ್ಮ ಮೊಬೈಲ್ ಹೊರತೆಗೆದು ರೆಕಾರ್ಡ್ ಮಾಡಿಕೊಂಡು ಪದೇ ಪದೇ ನೋಡುತ್ತಿದ್ದಾರೆ. ಐಪಿಎಸ್ ಹಿರಿಯ ಅಧಿಕಾರಿಯಾಗಿದ್ದರೂ ಯಾವುದೇ ಬಿಗುಮಾನವಿಲ್ಲದೆ ಎಲ್ಲರೊಂದಿಗೆ ಬೆರೆತು ಹಾಡಿರುವ ಈ ಹಾಡನ್ನು ಐಆರ್​ಬಿ ಸಿಬ್ಬಂದಿ ಕಬಾಡೆ ಕಬಾಡೆಸಿವಿ ಎಂಬುವರು ತಮ್ಮ ಫೇಸ್​ಬುಕ್​ನಲ್ಲಿ ಶೇರ್ ಮಾಡಿದ್ದಾರೆ. ಕೆಎಸ್​ಆರ್​ಪಿ ಎಡಿಜಿಪಿ ಅಲೋಕಕುಮಾರ ಹಾಡಿರುವ ಈ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: