• Home
  • »
  • News
  • »
  • district
  • »
  • ನಾನೇ ಮುಂದಿನ ಸಿಎಂ ಎನ್ನುವ ಸಿದ್ದರಾಮಯ್ಯ ಮೇಲೆ ಕ್ರಮ ತೆಗೆದುಕೊಳ್ಳುವ ಧಮ್ ಡಿಕೆಶಿಗೆ ಇದೆಯಾ?: ಈಶ್ವರಪ್ಪ

ನಾನೇ ಮುಂದಿನ ಸಿಎಂ ಎನ್ನುವ ಸಿದ್ದರಾಮಯ್ಯ ಮೇಲೆ ಕ್ರಮ ತೆಗೆದುಕೊಳ್ಳುವ ಧಮ್ ಡಿಕೆಶಿಗೆ ಇದೆಯಾ?: ಈಶ್ವರಪ್ಪ

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

ಸಿದ್ದರಾಮಯ್ಯ ಯಾವಾಗಲೂ ನಾನೇ ಮುಂದಿನ ಸಿಎಂ ಎನ್ನುತ್ತಾರೆ. ಮಾತುಮಾತಿಗೂ ಧಮ್ ಪದ ಬಳಸುವ ಡಿಕೆ ಶಿವಕುಮಾರಗೆ ಧಮ್ ಇದ್ದರೆ ಸಿದ್ದರಾಮಯ್ಯ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ಕೆಎಸ್ ಈಶ್ವರಪ್ಪ ಸವಾಲು ಹಾಕಿದ್ದಾರೆ.

  • Share this:

ಧಾರವಾಡ: ದೇಶ-ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ. ಇಂಥ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಆದರೆ, ರಾಜ್ಯದಲ್ಲಿ ಇನ್ಮುಂದೆ ಕಾಂಗ್ರೆಸ್ ಮುಖ್ಯಮಂತ್ರಿ ಅಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯ ಮಾಡಿದರು.


ಇಲ್ಲಿಯ ಜಿಲ್ಲಾ ಪಂಚಾಯತಿ ನೂತನ ಆಡಳಿತ ಭವನಕ್ಕೆ ಲೋಕಾರ್ಪಣೆಗೊಳಿಸಿದ ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ‌ ನೀಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಕರ್ನಾಟಕದ ಮುಖ್ಯಮಂತ್ರಿ ಆಗುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.


ಕರ್ನಾಟಕದಲ್ಲಿ ಇನ್ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದ ಸಚಿವ ಈಶ್ವರಪ್ಪ, ಮಾತು ಮಾತಿಗೂ ಧಮ್ ಪದ ಬಳಸುವ ಡಿ.ಕೆ. ಶಿವಕುಮಾರಗೆ ಅದೇ ಧಮ್ ಇದ್ದರೆ ಮುಂದಿನ ಸಿಎಂ ನಾನೇ ಎಂಬ ಹೇಳಿಕೆ ಕೊಡುವ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲ್ ಹಾಕಿದರು.


ಮುಖ್ಯಮಂತ್ರಿ ಯಾರೆಂದು ಹೈಕಮಾಂಡ್, ಪಕ್ಷದ ಶಾಸಕರು ನಿರ್ಧರಿಸುವುದು ಬೇಡವೇ...? ಡಿ.ಕೆ.ಶಿವಕುಮಾರಗೆ ಧಮ್ ಇದ್ದರೆ, ನಾನೇ ಮುಂದಿನ ಸಿಎಂ ಸೇರಿದಂತೆ ಬಾಯಿಗೆ ಬಂದಂತೆ ಹೇಳುವ ಸಿದ್ದರಾಮಯ್ಯರ ಸರ್ವಾಧಿಕಾರಿ ದೋರಣೆ ವಿರುದ್ಧ ಕ್ರಮ‌ಕೈಗೊಂಡು, ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಲಿ ಎಂದರು.


ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥೆ ಸರಿಯಿಲ್ಲ. ಉಸಿರುಗಟ್ಟುವ ವಾತಾವರಣದಲ್ಲಿ ಇರಲು ಯಾರು ಇಷ್ಟಪಡಲ್ಲ. ಕಾಂಗ್ರೆಸ್ ಮುಳುಗುವ ಹಡಗು ಇದ್ದಂತೆ. ಈ ಕಾರಣಕ್ಕೆ ಆ ಪಕ್ಷದ ನಾಯಕರು-ಮುಖಂಡರು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪಕ್ಷ ತೊರೆದು ಬೇರೆ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.


ಇದನ್ನೂ ಓದಿ: Resort Politics - ಸಾಹುಕಾರ್ ನೇತೃತ್ವದಲ್ಲಿ ಸಿಪಿವೈ, ಎಂಪಿಕೆ, ಗೋಪಾಲಯ್ಯ ಮತ್ತಿತರರ ಗೌಪ್ಯ ಸಭೆ


ರಾಜ್ಯದಲ್ಲಿ ಎರಡು ಹಂತದ ಪಂಚಾತರಾಜ್ ವ್ಯವಸ್ಥೆ ಜಾರಿಗೊಳಿಸುವುದು ಸೂಕ್ತ ಎಂಬುದು ನನ್ನ ವೈಯಕ್ತಿಕವಾಗಿ ಅಭಿಪ್ರಾಯವಾಗಿದೆ. ಈ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸಂವಿಧಾನ ತಿದ್ದುಪಡಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವ ಉದ್ದೇಶವಿದೆ ಎಂದರು.


ಮೂರು ಹಂತದ ಪಂಚಾಯತರಾಜ್ ವ್ಯವಸ್ಥೆ ಬದಲಿಗೆ ಎರಡು ಹಂತದ ವ್ಯವಸ್ಥೆ ಜಾರಿಗೊಳ್ಳಬೇಕು ಎಂಬ ಅಭಿಪ್ರಾಯವಿದೆ. ಇದಕ್ಕೆ ಸಂಪೂರ್ಣ ಸಹಮತವಿದೆ. ಸಂವಿಧಾನದಲ್ಲಿ ಮೂರು ಹಂತದ ಪಂಚಾಯತರಾಜ್ ವ್ಯವಸ್ಥೆ ಸೂಚಿಸಿರುವುದರಿಂದ ಅನುಷ್ಠಾನ ಅನಿವಾರ್ಯವಾಗಿದೆ. ಇದನ್ನು ಬದಲಾಯಿಸಲು ಕೋರಿ ರಾಜ್ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು, ಸಂವಿಧಾನಕ್ಕೆ ತಿದ್ದುಪಡಿಯಾದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಸ್ಪಷ್ಟಪಡಿಸಿದರು.


ಧಾರವಾಡ ಜಿಲ್ಲಾ ಪಂಚಾಯತಿ ನೂತನ ಆಡಳಿತ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬೃಹತ್, ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಜಿಲ್ಲಾ ಪಂಚಾಯತ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿ.ಪಂ.ಸಿಇಓ ಡಾ.ಬಿ.ಸುಶೀಲಾ, ಸದಸ್ಯರಾದ ಚೈತ್ರಾ ಗುರುಪಾದಪ್ಪ ಶಿರೂರ, ರೇಣುಕಾ ಇಬ್ರಾಹಿಂಪುರ, ಚನ್ನಬಸಪ್ಪ ಮಟ್ಟಿ,ಕರಿಯಪ್ಪ ಮಾದರ ಮತ್ತಿತರರು ಇದ್ದರು.


ವರದಿ: ಮಂಜುನಾಥ ಯಡಳ್ಳಿ

Published by:Vijayasarthy SN
First published: