HOME » NEWS » District » KS ESHWARAPPA DEFENDS BASANAGOUDA YATNAL AND ATTACKS CONGRESS MVSV SNVS

ಕಾಂಗ್ರೆಸ್, ಸಿದ್ಧರಾಮಯ್ಯ, ರಾಹುಲ್ ವಿರುದ್ಧ ಈಶ್ವರಪ್ಪ ವಾಗ್ದಾಳಿ- ಯತ್ನಾಳ ಪರ ಬ್ಯಾಟ್ ಬೀಸಿ ಸಚಿವರು ಹೇಳಿದ್ದೇನು ಗೊತ್ತಾ?

ನನ್ನದೇ ಸರ್ವಾಧಿಕಾರ, ನನ್ನ ನೇತೃತ್ವದಲ್ಲಿಯೇ ಎಲ್ಲ ನಡೆಯಬೇಕು ಎನ್ನುತ್ತಾರೆ ಸಿದ್ದರಾಮಯ್ಯ. ಸಾಮೂಹಿಕ ನೇತೃತ್ವ ಮತ್ತು ಪಕ್ಷ ಹಾಗೂ ಸಿದ್ಧಾಂತ ಎಂಬುದು ಕಾಂಗ್ರೆಸ್ಸಿಗರಿಗೆ ಇಲ್ಲ. ಅದರಲ್ಲಿಯೂ ಸಿದ್ಧರಾಮಯ್ಯಗಂತೂ ಇಲ್ಲವೇ ಇಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

news18-kannada
Updated:February 25, 2021, 3:56 PM IST
ಕಾಂಗ್ರೆಸ್, ಸಿದ್ಧರಾಮಯ್ಯ, ರಾಹುಲ್ ವಿರುದ್ಧ ಈಶ್ವರಪ್ಪ ವಾಗ್ದಾಳಿ- ಯತ್ನಾಳ ಪರ ಬ್ಯಾಟ್ ಬೀಸಿ ಸಚಿವರು ಹೇಳಿದ್ದೇನು ಗೊತ್ತಾ?
ಕೆಎಸ್ ಈಶ್ವರಪ್ಪ
  • Share this:
ವಿಜಯಪುರ(ಫೆ. 25): ಬಿಜೆಪಿಯಲ್ಲಿ ಮಡಿವಂತಿಕೆ ಎಂಬುದಿಲ್ಲ. ಕಾಂಗ್ರೆಸ್, ಮುಸ್ಲಿಂ ಲೀಗ್ ಬಿಟ್ಟು ಬೇರೆ ಯಾವುದೇ ಪಕ್ಷಗಳು ಬಂದರೂ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು.  ಮೈಸೂರಿನಲ್ಲಿ ಜೆಡಿಎಸ್ ಬಿಜೆಪಿಗೆ ಕೈ ಕೊಟ್ಟಿದೆ.  ಕೈಕೊಡುವ ಪಕ್ಷವೇ ಜೆಡಿಎಸ್.  ಗೋಹತ್ಯೆ ನಿಷೇಧಕ್ಕೆ ವಿಧಾನ ಪರಿಷತ್ ನಲ್ಲಿ ಅವರ ಬೆಂಬಲ ಬೇಕಿತ್ತು.  ಎಲ್ಲೆಲ್ಲಿ ನಮಗೆ ಅನುಕೂಲವಾಗುತ್ತೋ ಅಲ್ಲಲ್ಲಿ ಬಳಸಿಕೊಳ್ಳುತ್ತೇವೆ. ತಾವು ಈ ವಿಚಾರದಲ್ಲಿ ಬಿಜೆಪಿಯನ್ನು ಅನುಕೂಲವಾದಿ ಮತ್ತು ಅವಕಾಶವಾದಿ ಎಂದು ಏನೇ ಕರೆಯಿರಿ.  ಗೋಹತ್ಯೆಯಂಥ ಸಿದ್ಧಾಂತಗಳಿಗೆ ಬೆಂಬಲ ನೀಡಿದರೆ ಉಪಯೋಗಿಸಿಕೊಳ್ಳುತ್ತೇವೆ.  ಆದರೆ, ಕಾಂಗ್ರೆಸ್ ದೇಶವನ್ನು ದಿವಾಳಿ ಮಾಡಿದ ಪಕ್ಷ.  ಮುಸ್ಲಿಂ ಲೀಗ್ ದೇಶ ವಿರೋಧಿ ಪಕ್ಷ.  ಇವೆರಡನ್ನೂ ದೂರ ಇಡುತ್ತೇವೆ ಎಂದು ತಿಳಿಸಿದರು.

ಬೈ ಎಲೆಕ್ಷನ್ ವಿಚಾರ: ಮೂರು ವಿಧಾನ ಸಭೆ ಮತ್ತು ಒಂದು ಲೋಕಸಭೆ ಕ್ಷೇತ್ರಗಳ ಬೈ ಎಲೆಕ್ಷನ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬೈ ಎಲೆಕ್ಷನ್ ನಡೆಯಲಿರುವ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಪ್ರತಿ ಗ್ರಾಮದಲ್ಲಿಯೂ ಬಿಜೆಪಿ ಭೂತಮಟ್ಟದಲ್ಲಿಯೂ ಬೆಳೆದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಪಕ್ಷದಲ್ಲಿ ಚರ್ಚಿಸದೆ ಹೇಗೆ ನಿರ್ಧಾರ ತೆಗೆದುಕೊಂಡಿರಿ? ನೀವೊಬ್ಬರೆ ನಿರ್ಧಾರ ಮಾಡೋಕೆ ನಾವ್ಯಾಕೆ ಇರಬೇಕು?; ಡಿಕೆಶಿ ವಿರುದ್ಧ ರಮೇಶ್ ಕುಮಾರ್ ಗರಂ

ಕಾಂಗ್ರೆಸ್, ಸಿದ್ಧರಾಮಯ್ಯ, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ:

ಇದೇ ವೇಳೆ ಈಶ್ವರಪ್ಪ ಅವರು, ಕಾಂಗ್ರೆಸ್, ಮಾಜಿ ಸಿಎಂ ಎಸ್. ಸಿದ್ಧರಾಮಯಯ್ಯ, ಕಾಂಗ್ರೆಸ್ ಸಂಸದ ರಾಹುಲ ಗಾಂಧಿ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ‘ಹಿಂದ’ ಹೆಸರಿನಲ್ಲಿ ಸಿದ್ಧರಾಮಯ್ಯ ಮತ್ತೆ ಹೋರಾಟ ಮಾಡುವ ಕುರಿತು ಮಾತನಾಡಿದ ಅವರು, ತತ್ವ ಸಿದ್ಧಾಂತಗಳಿಗೆ ಬದ್ಧವಾಗಿರುವ ಪಕ್ಷ ಬಿಜೆಪಿ, ಆದರೆ, ಕಾಂಗ್ರೆಸ್ಸಿಗೆ ಒಂದು ವಿಚಾರ, ಸಿದ್ಧಾಂತವೇ ಇಲ್ಲ. ಉತ್ತರ ಮತ್ತು ದಕ್ಷಿಣ ಭಾರತ ಕುರಿತು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.  ಕಾಂಗ್ರೆಸ್ಸಿನವರು ಏನೇ ಮಾಡಲು ಹೊರಟರೂ ಅದು ಅವರಿಗೆ ತಿರುಗು ಬಾಣವಾಗುತ್ತಿದೆ.  ದೇಶಕ್ಕಾಗಿ ಬಿಜೆಪಿ ತೆಗೆದುಕೊಂಡ ನಿರ್ಧಾರವನ್ನು ಕಾಂಗ್ರೆಸ್ ಒಪ್ಪುವುದಿಲ್ಲ.  ರಕ್ಷಣಾ ವೆಚ್ಚ ಹೆಚ್ಚಿಸಿದರೂ ವಿರೋಧಿಸುತ್ತಾರೆ.  ವಿಚಾರ ಮತ್ತು ಸಿದ್ಧಾಂತವಿಲ್ಲದ ಕಾಂಗ್ರೆಸ್ಸಿಗೊಬ್ಬ ನಾಯಕರಿಲ್ಲ.  ನಿಮ್ಮ ನಾಯಕರು ಯಾರು ಎಂದರೂ ಅಧ್ಯಕ್ಷರನ್ನು ಮಾಡಿಕೊಳ್ಳುವ ಯೋಗ್ಯತೆ ಇಲ್ಲ. ಕಾಂಗ್ರೆಸ್ ಈಗ ಪ್ರಾದೇಶಿಕ ಪಕ್ಷವಾಗುತ್ತಿದೆ. ರಾಹುಲ್ ಗಾಂಧಿಗೆ ಏನು ಮಾಡುತ್ತಿದ್ದೇನೆ ಎಂಬ ಕಲ್ಪನೆಯೇ ಇಲ್ಲ. ಏನೇನೋ ಮಾಡುತ್ತಿರುತ್ತಾರೆ. ರಾಷ್ಚ್ರೀಯ ಪಕ್ಷ ಕಾಂಗ್ರೆಸ್ ಎಂದರೆ ಹಿಂದಿನ ನಾಯಕರಾದ ಸುಭಾಷ ಚಂದ್ರ ಭೋಸ್, ಚಂದ್ರಶೇಖರ್ ಆಜಾದ್, ಸಾವರ್ಕರ್, ಮಹಾತ್ಮ ಗಾಂಧಿ ಹೆಸರು ನೆನಪಿಗೆ ಬರುತ್ತದೆ. ಆದರೆ, ಆ ಸಂತತಿಗೆ ಸೇರಿದ ಶೇ. 1 ರಷ್ಟು ರಕ್ತವೂ ರಾಹುಲ್ ಗಾಂಧಿಗೆ ಹೊಂದುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ಧರಾಮಯ್ಯ ಜೆಡಿಎಸ್ ನಲ್ಲಿದ್ದರು.  ಅವರನ್ನು ಅಲ್ಲಿಂದ ಕಿತ್ತು ಬೀಸಾಕಿದರು. ಈಗ ಅಹಿಂದ ಸಮಾವೇಶ ಎಂದು ಹೇಳುತ್ತಿದ್ದಾರೆ.  ನಾನೇ ಸ್ವತಂತ್ರ, ನನ್ನದೇ ಸರ್ವಾಧಿಕಾರ.  ನನ್ನ ನೇತೃತ್ವದಲ್ಲಿಯೇ ಎಲ್ಲ ನಡೆಯಬೇಕು ಎನ್ನುತ್ತಾರೆ.  ಸಾಮೂಹಿಕ ನೇತೃತ್ವ ಮತ್ತು ಪಕ್ಷ ಹಾಗೂ ಸಿದ್ಧಾಂತ ಎಂಬುದು ಕಾಂಗ್ರೆಸ್ಸಿಗರಿಗೆ ಇಲ್ಲ.  ಅದರಲ್ಲಿಯೂ ಸಿದ್ಧರಾಮಯ್ಯ ಅವರಿಗಂತೂ ಇಲ್ಲವೇ ಇಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ರಾಜ್ಯದ ಆಡಳಿತ ಯಂತ್ರ ಯಾರ ಕೈಲಿದೆಯೋ ಗೊತ್ತಾಗ್ತಿಲ್ಲ; ವಿಜಯೇಂದ್ರಗೆ ಪರೋಕ್ಷ ತಿರುಗೇಟು ನೀಡಿದ ಕುಮಾರಸ್ವಾಮಿಸಿದ್ಧರಾಮಯ್ಯ ನಾನು ಹಿಂದುಳಿದವರ ಮತ್ತು ದಲಿತರ ಚಾಂಪಿಯನ್. ಅವರಿಗಾಗಿ ಜೀವನ ಮುಡುಪಾಗಿಟ್ಟಿದೇನೆ ಎಂದುಕೊಂಡಿದ್ದಾರೆ. ಅವರು ಮತ್ತೆ ಸಿಎಂ ಆಗುವುದಿಲ್ಲ. ಇವತ್ತು ಯಾವದೋ ಒಬ್ಬ ವ್ಯಕ್ತಿ ಹಿಂದುಳಿದ, ದಲಿತರ ಉದ್ಧಾರ ಮಾಡುವುದಾಗಿ ಹೇಳಿಕೊಂಡು ಸ್ಥಾನಮಾನ ಪಡೆದು ನಂತರ ಕೈಕೊಟ್ಟಿದ್ದನ್ನು ಜನ ಮರೆತಿಲ್ಲ.  ಈಗ ಮತದಾರರು ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ ನಮಗೆ ದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ಬೆಂಬಲಿಸಿದ್ದಾರೆ.  ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ ಅವರನ್ನು ನಂಬಬಾರದು ಎಂದು ಮತದಾರರು ಕಳೆದ ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದಾರೆ.  ಸಿದ್ಧರಾಮಯ್ಯಗೆ ಸೋತರೂ ಬುದ್ದಿ ಬಂದಿಲ್ಲ.  ಆದರೂ ಹೋದಲ್ಲೆಲ್ಲ ಮುಂದಿನ ಸಿಎಂ ನಾನೇ ಎಂದು ಹೇಳಿಕೊಳ್ಳುತ್ತಾರೆ.  ಡಿಕೆಶಿ ಈ ರೀತಿ ಹೇಳಬಾರದು ಎಂದು ಹೇಳ್ತಾರೆ.  ಸತೀಶ ಜಾರಕಿಹೊಳಿ ಮತ್ತು ಮಲ್ಲಿಕಾರ್ಜುನ ಖರ್ಗೆ ಹಿಂದ ಸಮಾವೇಶ ಇಲ್ಲ ಎಂದು ಹೇಳುತ್ತಿದ್ದಾರೆ.  ಆದರೂ, ಸಿದ್ಧರಾಮಯ್ಯ ಸಿಎಂ ಸ್ಥಾನದ ಗದ್ದುಗೆಯ ಮೇಲಿರುವ ಆಸಕ್ತಿಯಿಂದಾಗಿ ಹಗಲು-ರಾತ್ರಿ ಕನಸು ಕಾಣುತ್ತಿದ್ದಾರೆ.  ಈ ಕನಸು ಈ ಜನ್ಮದಲ್ಲಿ ಕಾಂಗ್ರೆಸ್ಸಿಗೆ ನನಸಾಗಲ್ಲ ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ರಾಮ ಮಂದಿರ ನಿರ್ಮಾಣದ ಲೆಕ್ಕ ಕೇಳಲು ನೀವು ಯಾರು? ನಿಮಗೆ ಏನು ಅಧಿಕಾರವಿದೆ? ಎಂದು ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದ ಅವರು, ಅಯೋಧ್ಯೆ ವಿವಾದಿತ ಜಾಗದಲ್ಲಿ ಮಂದಿರ ಕಟ್ಟಲು ನನ್ನ ಒಪ್ಪಿಗೆ ಇಲ್ಲ ಎಂದು ಹೇಳುತ್ತಾರೆ.  ಸಂವಿಧಾನ, ಅಂಬೇಡ್ಕರ್ ಬಗ್ಗೆ ಗೌರವವಿಲ್ಲದೇ ಹೀಗೆ ಮಾತನಾಡುತ್ತಾರೆ.  ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.  ಈ ಹಿಂದೆ ಗೋವಿನ ಶಾಪದಿಂದ ಕಾಂಗ್ರೆಸ್ ಸರಕಾರ ಕಳೆದುಕೊಂಡಿತು.  ಈಗ ರಾಮನ ಶಾಪದಿಂದ ಇನ್ನೆಂದೂ ಕಾಂಗ್ರೆಸ್ಸಿಗೆ ಅಡ್ರೆಸ್ ಇರಲ್ಲ.  ಆದರೂ ಸಿದ್ಧರಾಮಯ್ಯ ಸಿಎಂ ಸ್ಥಾನದ ಕನಸು ಕಾಣುತ್ತಿದ್ದಾರೆ.  ಕಾಂಗ್ರೆಸ್ಸಿನಲ್ಲಿ ಎಷ್ಟು ಗುಂಪುಗಾರಿಕೆ ಇದೆ ಎಂದರೆ ಇವರ ಪರ ಯಾರೂ ಇಲ್ಲ ಎಂದು ಅವರು ತಿಳಿಸಿದರು.

ಯತ್ನಾಳಗೆ ಪರ ಈಶ್ವರಪ್ಪ ಬ್ಯಾಟಿಂಗ್:

ಇದೇ ವೇಳೆ ಬಿಜೆಪಿ ಶಿಸ್ತು ಸಮಿತಿಯಿಂದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಶಿಸ್ತು ಸಮಿತಿ ನೊಟೀಸ್ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ ಅವರಿಗೆ ನೊಟೀಸ್ ಬಂದಿರುವ ಬಗ್ಗೆ ನನಗೇನೂ ಗೊತ್ತಿಲ್ಲ.  ಯತ್ನಾಳ ಹಿಂದೂತ್ವದ ಪ್ರಖರ ವ್ಯಕ್ತಿ.  ಹಿಂದುತ್ವದ ವಿಚಾರದಲ್ಲಿ ರಾಜಿಯಾಗದ ವ್ಯಕ್ತಿ.  ನಾನೂ ಹೇಳಿದ್ದೇನೆ.  ಪಕ್ಷದ ಸಿದ್ಧಾಂತದಲ್ಲಿ ಶಿಸ್ತಿನಲ್ಲಿರಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ.  ಯಾಕೋ ಅವರು ಗಮನ ಕೊಡುತ್ತಿಲ್ಲ.  ಯಡಿಯೂರಪ್ಪ ಮತ್ತು ಅವರ ಮಗನ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ.  ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಕಿದ್ದೆರ ಬಿಜೆಪಿಯಲ್ಲಿ ವಿಷಯ ಪ್ರಸ್ತಾಪಿಸಲು ಸಾಕಷ್ಟು ವೇದಿಕೆಗಳಿವೆ.  ನಾಲ್ಕು ಗೋಡೆಗಳ ಮಧ್ಯೆ ಕುಳಿತು ಯಡಿಯೂರಪ್ಪ, ಅವರ ಮಗನ ಭ್ರಷ್ಟಾಚಾರದ ಬಗ್ಗೆ ಸಂಬಂಧಿಸಿದವರಿಗೆ ಹೇಳಲಿ.  ಅದನ್ನು ಬಿಟ್ಟು ಮಾಧ್ಯಮಗಳಲ್ಲಿ ಹೇಳಿದರೆ ಪರಿಹಾರ ಸಿಗುತ್ತಾ? ನಮ್ಮ ಪಕ್ಷದ ವಿಚಾರವನ್ನು ನಾವೇ ಬಹಿರಂಗವಾಗಿ ಟೀಕೆ ಮಾಡುವುದು ಸೂಕ್ತವಲ್ಲ.  ಇದನ್ನು ನಾನು ಅವರಿಗೆ ಇನ್ನೋಮ್ಮೆ ಹೇಳಲು ಇಷ್ಟ ಪಡುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: ದೆಹಲಿ ಪ್ರವಾಸ ಯಾಕೆ ಎಂಬುದಕ್ಕೆ ಫೇಸ್​ಬುಕ್​ನಲ್ಲಿ ಎರಡು ಪತ್ರ ಮೂಲಕ ಯತ್ನಾಳ ಉತ್ತರ

ಕೆನೆ ಪದರ ನೀತಿ, ಮೀಸಲಾತಿ ಹೋರಾಟ ವಿಚಾರ:

ಇದೇ ವೇಳೆ, ಈಗಾಗಲೇ ಮೀಸಲಾತಿ ಪಡೆದವರನ್ನು ಕೆನೆ ಪದರು ನೀತಿಯಡಿ ತರಬೇಕು.  ಆದರೆ, ಕೆನೆ ಪದರು ನೀತಿ ಜಾರಿ ಅಷ್ಟು ಸುಲಭದ್ದಲ್ಲ.  ಎಲ್ಲ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಭಾವನೆ ಎಲ್ಲ ರಾಜ್ಯ, ಕೇಂದ್ರ ಸರಕಾರಗಳು ಚಿಂತನೆ ನಡೆಸುವ ಕಾಲ ಈಗ ಬಂದಿದೆ ಎಂದು ಅವರು ತಿಳಿಸಿದರು.

ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದಂತೆ ಅರ್ಹ ಸಮಾಜಗಳಿಗೆ ಮೀಸಲಾತಿ ಸಿಗುತ್ತಿದೆ.  ಎಲ್ಲ ಸಮಾಜದ ಬಡವರಿಗೆ ಧ್ವನಿ ಇರಲಿಲ್ಲ.  ಈಗ ಸಮಾಜಗಳು ಪೂಜ್ಯ ಜಗದ್ಗುರುಗಳ ನೇತೃತ್ವದಲ್ಲಿ ಮೀಸಲಾತಿ ಕೇಳುತ್ತಿವೆ.  ಇದನ್ನು ನಾನು ಸ್ವಾಗತಿಸುತ್ತೇನೆ.  ಅಂಬೇಡ್ಕರ್ ಅಪೇಕ್ಷೆಯಂತೆ ಮೀಸಲಾತಿ 10 ರಿಂದ 15 ವರ್ಷಗಳಿಗೆ ಸೀಮಿತವಾಗಿತ್ತು.  ಆದರೆ, ಆ ಮೀಸಲಾತಿ ಈಗಲೂ ಮುಂದುವರೆದಿದೆ.  ಯಾರು ಶ್ರೀಮಂತ ವರ್ಗದಲ್ಲಿದ್ದಾರೆ, ಅಧಿಕಾರ ವರ್ಗದಲ್ಲಿದ್ದಾರೆ, ರಾಜಕಾರಣದಲ್ಲಿದ್ದಾರೆ.  ಅವರು, ಅವರ ಮಕ್ಕಳು ಮಾತ್ರ ಇದನ್ನು ಅನುಭವಿಸುತ್ತಿದ್ದಾರೆ.  ಕಡು ಬಡವರಿಗೆ ಸಿಗಬೇಕಾದ ಮೀಸಲಾತಿಯನ್ನು ಇವರು ಉಪಯೋಗಿಸುತ್ತಿದ್ದಾರೆ.  ರಾಜಕೀಯ ಮತ್ತು, ಅಧಿಕಾರ ಅನುಭವಿಸುತ್ತಿದ್ದಾರೆ.  ಉಳಿದ ಸಮಾಜಗಳಿಗೆ ಅರ್ಹತೆಗೆ ತಕ್ಕಂತೆ ಮೀಸಲಾತಿ ಸಿಗಬೇಕು.  ಹೈಕೋರ್ಟ್ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಮೂಲಕ ವರದಿ ತರಿಸಿಕೊಂಡು ಮೀಸಲಾತಿ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಜು ಬಿರಾದಾರ, ವಿವೇಕ ಡಬ್ಬಿ, ವಿಜಯ್ ಜೋಶಿ, ಸಾಬು ಮಾಶ್ಯಾಳ, ಶಿವಾನಂದ ಅವಟಿ, ಮಲ್ಲಿಕಾರ್ಜುನ ಕನ್ನೂರ, ಜೋಗೂರ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: February 25, 2021, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories