ಕೆಆರ್​​ಎಸ್​ ಕಲಹ: ಸರ್ಕಾರ ಮುಲಾಜಿಲ್ಲದೇ ಅಕ್ರಮ ಗಣಿಗಾರಿಕೆ ಬಂದ್ ಮಾಡಬೇಕು; ಶಾಸಕ ರಾಜೂಗೌಡ ಆಗ್ರಹ

ಗಣಿಗಾರಿಕೆ ವಿಚಾರದಲ್ಲಿ ಮಾಜಿ ಸಿಎಂ ಎಚ್ ಡಿಕೆ ಹಾಗೂ ಸಂಸದೆ ಸುಮಲತಾ ಅವರು ವೈಯಕ್ತಿಕ ರಾಜಕೀಯ ಮಾಡಬಾರದು ಎಂದು ಶಾಸಕ ರಾಜೂಗೌಡ ಹೇಳಿದ್ದಾರೆ.

ಶಾಸಕ ರಾಜುಗೌಡ

ಶಾಸಕ ರಾಜುಗೌಡ

  • Share this:
ಯಾದಗಿರಿ(ಜು.15): ಕೆಆರ್​​ಎಸ್ ಜಲಾಶಯ ಸಮೀಪ ಅಕ್ರಮ ಗಣಿಗಾರಿಕೆ ನಡೆಯುವ ವಿಷಯವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ನಡೆಯುತ್ತಿರುವ ವಾಕ್ಸಮರದ ಬಗ್ಗೆ  ಶಾಸಕ ರಾಜುಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಆರ್​​ಎಸ್ ಡ್ಯಾಂ ಸಮೀಪ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ, ಸರಕಾರ ಮುಲಾಜಿಲ್ಲದೇ ಅಕ್ರಮ ಗಣಿಗಾರಿಕೆ ಬಂದ್ ಮಾಡಬೇಕು. ಸಚಿವರಾದ ಆರ್.ಅಶೋಕ್​, ಮುರುಗೇಶ್ ನಿರಾಣಿ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಬೇಕು. ಈ ವಿಚಾರದಲ್ಲಿ ವಿಳಂಬ ಮಾಡಬಾರದು.  ಸರಕಾರ ಮಧ್ಯಸ್ಥಿಕೆ ವಹಿಸಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಬಂದ್ ಮಾಡಿಸಬೇಕು. ಗಣಿಗಾರಿಕೆ ವಿಚಾರದಲ್ಲಿ ಮಾಜಿ ಸಿಎಂ ಎಚ್ ಡಿಕೆ ಹಾಗೂ ಸಂಸದೆ ಸುಮಲತಾ ಅವರು ವೈಯಕ್ತಿಕ ರಾಜಕೀಯ ಮಾಡಬಾರದು ಎಂದು ಶಾಸಕ ರಾಜೂಗೌಡ ಹೇಳಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್ ವೈ ಅವರೇ ತುಂಗಭದ್ರಾ ಜಲಾಶಯಕ್ಕೆ ಹಾಗೂ ನಾರಾಯಣಪುರದ ಜಲಾಶಯಕ್ಕೆ ಆದ್ಯತೆ ನೀಡಿ.  ತುಂಗಭದ್ರಾ ಜಲಾಶಯ ಹೂಳು ತುಂಬಿದ ಬಗ್ಗೆ ಯಾರೂ ಮಾತನಾಡಲ್ಲ. ಕೃಷ್ಣಾ ನದಿ ನೀರು ಪ್ರವಾಹದ ಸಂದರ್ಭದಲ್ಲಿ ಆಂಧ್ರ ಪಾಲಾಗುತ್ತಿದೆ. ಇದನ್ನು ತಡೆಯಲು ತಿಂಥಣಿ ಸಮೀಪ ನೀರು ಸಂಗ್ರಹಿಸಲು ಬ್ರಿಡ್ಜ್ ಕಂ ಬ್ಯಾರೇಜ್ ಬೇಗ ನಿರ್ಮಾಣ ಮಾಡಿ ಎಂದು ಆಗ್ರಹಿಸಿದರು.

ಇದನ್ನೂ ಓದಿ:Mekedatu Project: ನಾಳೆ ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿ ಮಾಡಲಿರುವ ತಮಿಳುನಾಡು ಸರ್ವಪಕ್ಷ ನಿಯೋಗ

ಇದೇ ವೇಳೆ, ಬೆಳಗಾವಿ ಜಿಲ್ಲೆಗೆ ಸಚಿವ ಸ್ಥಾನ ನೀಡುವ ಬಗ್ಗೆ ಅನ್ಯಾಯವಾಗಿದೆ ಎಂದ ಸಚಿವ ಉಮೇಶ ಕತ್ತಿ ಅವರಿಗೆ ಶಾಸಕ ರಾಜೂಗೌಡ ಟಾಂಗ್ ನೀಡಿದ್ದಾರೆ. ಬೆಳಗಾವಿ ಜಿಲ್ಲೆಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ, ಅನ್ಯಾಯವಾಗಿದೆ ಎಂದರೆ ಹೇಗೆ? ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಚಿವ ಉಮೇಶ ಕತ್ತಿ ಅವರನ್ನು ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿ ಮಾಡಬೇಕೆಂದು ಹೇಳಿ ಟಾಂಗ್ ನೀಡಿದ್ದಾರೆ.

ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂದು ರಾಜುಗೌಡ ಅಸಮಾಧಾನ ಹೊರಹಾಕಿದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ನೀಡಿದರೆ ಈ ಭಾಗ ಅಭಿವೃದ್ಧಿಯಾಗಲು ಅನುಕೂಲವಾಗುತಿತ್ತು ಆದರೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ, ಕರಾವಳಿ ಹಾಗೂ ಮೈಸೂರು ಭಾಗಕ್ಕೆ ಅನ್ಯಾಯವಾಗಿದೆ. ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅವರೇ ತಮ್ಮ ಪೂರ್ಣ ಅವಧಿ ಪೂರೈಸುತ್ತಾರೆ ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

ಸಿಎಂ ಬಿಎಸ್ ವೈ ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ ಸದಾನಂದಗೌಡ ಅವರು ಸಿಎಂ ಆಗಿದ್ದ ಅವಧಿಯಲ್ಲಿ ನಾನು‌ ಕೂಡ ಸಚಿವನಾಗಿದ್ದು ಸದಾನಂದ ಗೌಡ ಅವರಿಗೆ ಬಿಜೆಪಿ ಪಕ್ಷವು ಸೂಕ್ತ ಸ್ಥಾನ ಮಾನ ನೀಡಲಿದೆ ಎಂದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: