ಜನರನ್ನು ಸಾಯುವಂತೆ ಮಾಡಿ ಬೂದಿ ಕೊಟ್ಟ ಬಿಜೆಪಿಗೆ ಜನಾಶೀರ್ವಾದ ಬೇಕಾ?: ಡಿ.ಕೆ. ಶಿವಕುಮಾರ್ ವ್ಯಂಗ್ಯ

ಸರ್ಕಾರ ಬೆಳಗಾವಿಯಲ್ಲಿ ಸದನ ಮಾಡದೆ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆ. ಅಲ್ಲಿನ ನೆರೆ ಸಂತ್ರಸ್ತರಿಗೆ ಕಳೆದ ವರ್ಷದ ಪರಿಹಾರವೇ ಸಿಕ್ಕಿಲ್ಲ. ಆ ಭಾಗಕ್ಕೆ ಸಂಬಂಧಿಸಿದಂತೆ ಹಲವು ವಿಚಾರ ಚರ್ಚೆ ಆಗಬೇಕಿದೆ. ಆ ಭಾಗದ ಜನರನ್ನು ಎದುರಿಸಲು ಸರಕಾರಕ್ಕೆ ಸಾಧ್ಯವಿಲ್ಲವೇ?" ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ್​.

ಡಿ.ಕೆ. ಶಿವಕುಮಾರ್​.

 • Share this:
  ದೊಡ್ಡಬಳ್ಳಾಪುರ (ಆಗಸ್ಟ್​ 19): ಕೋವಿಡ್ ಸಮಯದಲ್ಲಿ ಬೆಡ್, ಚಿಕಿತ್ಸೆ, ಔಷಧಿ, ಆಕ್ಸಿಜನ್, ಲಸಿಕೆ ನೀಡದೆ ಜನ ಸಾಯುವಂತೆ ಮಾಡಿ ಅವರಿಗೆ ಬೂದಿ ಕೊಟ್ಟಿರುವ ಬಿಜೆಪಿ ಸರ್ಕಾರಕ್ಕೆ ಜನ ಆಶೀರ್ವಾದ ಮಾಡಬೇಕಾ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಛೇಡಿಸಿದ್ದಾರೆ. ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರದಲ್ಲಿ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಹಾಗೂ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್​, "ರಾಜ್ಯದ ಉದ್ದಗಲಕ್ಕೂ ಕೋವಿಡ್ ವಾರಿಯರ್ಸ್ ಗಳಿಗೆ ಗೌರವ ಸೂಚಿಸುವುದು ಕಾಂಗ್ರೆಸ್ ಕಾರ್ಯಕ್ರಮ. ಸೋಂಕಿನಿಂದ ಸತ್ತವರ ಕುಟುಂಬಕ್ಕೆ ಪರಿಹಾರ ಸಿಗುವಂತೆ ಮಾಡಬೇಕು. ಅದಕ್ಕೆ ಪೂರಕವಾಗಿ ಡೆತ್ ಆಡಿಟ್ ಮಾಡಿಸಿ, ಮಾಹಿತಿ ಸಂಗ್ರಹಿಸಲು ತಿಳಿಸಿದ್ದೇವೆ.

  ಯಾವ ರೈತರಿಗೂ ಬೆಂಬಲ ಬೆಲೆ ಸಿಕ್ಕಿಲ್ಲ. ರೈತರ ವಿಚಾರದಲ್ಲಿ ಕೇವಲ ಮಾತನಾಡುತ್ತಿದ್ದಾರೆಯೇ ಹೊರತು ಯಾರಿಗೂ ನೆರವಾಗಿಲ್ಲ. ಸರ್ಕಾರ ಒಂದೆರಡು ದಿನಗಳಲ್ಲಿ ಸದನ ಕರೆಯಬಹುದು, ಆಗ ಸರ್ಕಾರ ಎಷ್ಟು ಜನರಿಗೆ ನೆರವು ನೀಡಿದೆ ಎಂದು ಲೆಕ್ಕ ನೀಡಲಿ" ಎಂದು ಕಿಡಿಕಾರಿದ್ದಾರೆ.

  "ಬಿಜೆಪಿಯವರು ತಮ್ಮ ಸಭೆಗಳಿಗೆ ಮಾತ್ರ ಯಾಕೆ ವಿನಾಯಿತಿ ಕೊಟ್ಟುಕೊಂಡಿದ್ದಾರೆ. ಬೇರೆಯವರಿಗೆ ಯಾಕೆ ಅವಕಾಶ ನೀಡುತ್ತಿಲ್ಲ. ರಾಜಕೀಯ ಸಭೆ ಮಾಡಬಾರದು ಎಂದು ಸರ್ಕಾರ ಹೇಳುತ್ತದೆ. ಮತ್ತೊಂದು ಕಡೆ ಕೇಂದ್ರ ಸಚಿವರು ಜನಾಶೀರ್ವಾದ ಸಭೆ ಮಾಡುತ್ತಿದ್ದಾರೆ. ಅವರು ಯಾವ ಸಭೆಯಾದರೂ ಮಾಡಿಕೊಳ್ಳಲಿ. ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ತಾರತಮ್ಯ ಮಾಡುತ್ತಿದೆ. ಕೋವಿಡ್ ನಿಯಮಾವಳಿ ಏನು ಬೇಕಾದರೂ ಮಾಡಲಿ. ಆದರೆ ಅದು ಎಲ್ಲರಿಗೂ ಅನ್ವಯವಾಗಬೇಕು.

  ಸರ್ಕಾರ ಬೆಳಗಾವಿಯಲ್ಲಿ ಸದನ ಮಾಡದೆ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆ. ಅಲ್ಲಿನ ನೆರೆ ಸಂತ್ರಸ್ತರಿಗೆ ಕಳೆದ ವರ್ಷದ ಪರಿಹಾರವೇ ಸಿಕ್ಕಿಲ್ಲ. ಆ ಭಾಗಕ್ಕೆ ಸಂಬಂಧಿಸಿದಂತೆ ಹಲವು ವಿಚಾರ ಚರ್ಚೆ ಆಗಬೇಕಿದೆ. ಆ ಭಾಗದ ಜನರನ್ನು ಎದುರಿಸಲು ಸರಕಾರಕ್ಕೆ ಸಾಧ್ಯವಿಲ್ಲವೇ?" ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

  ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಬಗ್ಗೆಯೂ ಮಾತನಾಡಿದ ಡಿ.ಕೆ. ಶಿವಕುಮಾರ್, "ನಮ್ಮ ಶಾಸಕರು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆಸ್ಪತ್ರೆ ಕಾರ್ಯಕರ್ತರನ್ನು ಗುರುತಿಸಲು ಕಳೆದೊಂದು ತಿಂಗಳಿಂದ ಸುಮಾರು 40 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ್ದಾರೆ. ಇವರು ಶಾಸಕರಾಗಿರುವುದು ಬಿಟ್ಟರೆ, ಬೇರಾವುದೇ ಅಧಿಕಾರ ಇಲ್ಲ. ಆದರೂ ತಾಲೂಕಿನ ಜನರ ಜೀವನಕ್ಕೆ ನೆರವಾಗಿ ಗೌರವ ಸಲ್ಲಿಸುತ್ತಿದ್ದಾರೆ. ಹೀಗಾಗಿ ಪಕ್ಷದ ಪರವಾಗಿ ಅವರಿಗೆ ಅಭಿನಂದನೆಗಳು.

  ನೀವು ನಿಮ್ಮ ಜೀವವನ್ನು ಪಣಕ್ಕಿಟ್ಟು ನಿಮ್ಮ ಕರ್ತವ್ಯ ಮಾಡಿದ್ದೀರಿ. ಮನೆ, ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿ ಜನರ ಜೀವ ಉಳಿಸಲು ಸಾಕಷ್ಟು ತ್ಯಾಗ ಮಾಡಿದ್ದೀರಿ. ನಿಮಗೆ ಸಾಷ್ಟಾಂಗ ನಮಸ್ಕಾರಗಳು. ಕಳೆದ ವರ್ಷ ನಮ್ಮ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಮುಂದಿಟ್ಟು ಪ್ರತಿಭಟನೆ ಮಾಡಿದರು. ನಂತರ ನಾನು ಮತ್ತು ಸಿದ್ದರಾಮಯ್ಯ ಅವರು ಇವರಿಗೆ, ವೃತ್ತಿ ಕಾಪಾಡಿಕೊಂಡು ಬಂದವರಿಗೆ, ಬೀದಿ ವ್ಯಾಪಾರಿಗಳು, ಚಾಲಕರಿಗೆ ಹಣ ಕೊಡಿ, ರೈತರಿಗೆ ಪರಿಹಾರ ನೀಡಿ, ಕಲಾವಿದರಿಗೆ ನೆರವು ನೀಡಿ ಎಂದು ಹೋರಾಟ ಮಾಡಿದೆವು.

  ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮತ್ತೋರ್ವ ರಾಜಕೀಯ ಮುಖಂಡನ ಹತ್ಯೆ; ಕಳೆದ 12 ದಿನಗಳಲ್ಲಿ ಇದು 4 ನೇ ರಾಜಕೀಯ ಕೊಲೆ!

  ಸರ್ಕಾರ ಒಂದು ತಿಂಗಳು 5 ಸಾವಿರ ನೀಡುವುದಾಗಿ ಹೇಳಿತ್ತು. ರೈತನಿಗೆ ಹೆಕ್ಟೇರ್ ಗೆ 10 ಸಾವಿರ ಪರಿಹಾರ ಘೋಷಿಸಿದರು. ನಾನು ರೈತರ ತೋಟಕ್ಕೆ ಹೋದಾಗ ದ್ರಾಕ್ಷಿ, ಕ್ಯಾರೆಟ್, ತರಕಾರಿ ಬೆಳೆದವರು ಕೆಜಿಗೆ 3-4 ರೂಪಾಯಿಯಂತೆ ತೆಗೆದುಕೊಂಡು ಹೋಗಿ ಎಂದಿದ್ದರು.

  ಚಾಲಕರು 25 ಲಕ್ಷ ಮಂದಿ ಇದ್ದಾರೆ. ಆದರೆ ಸರ್ಕಾರ 2.5 ಲಕ್ಷ ಜನರಿಗೆ ಮಾತ್ರ ಪರಿಹಾರ ಕೊಟ್ಟಿದೆ. ಮೋದಿ ಅವರು ದೇಶದ ಪ್ರಧಾನಿಗಳು, ನಾವು ಅವರನ್ನು ಗೌರವಿಸುತ್ತೇವೆ. ಅವರು ಚಪ್ಪಾಳೆ ಹೊಡಿ, ಜಾಗಟೆ ಬಾರಿಸು ಎಂದಾಗ ಅದನ್ನು ಮಾಡಿದ್ದೇವೆ. ದೀಪ ಹಚ್ಚಿ ಎಂದಾಗ ಹಚ್ಚಿದೆವು. ಮಹಾಭಾರತ ಯುದ್ಧ 18 ದಿನದಲ್ಲಿ ಮುಗಿದಿತ್ತು, ನಾನು ಕೋವಿಡ್ ವಿರುದ್ಧದ ಹೋರಾಟವನ್ನು 21 ದಿನಗಳಲ್ಲಿ ಮುಗಿಸುತ್ತೇನೆ ಎಂದಿದ್ದರು.

  ಇದನ್ನೂ ಓದಿ: Agriculture Bill| ವಿವಾದಿತ ಕೃಷಿ ಕಾನೂನಿನ ಬಗ್ಗೆ ಯಾರಿಗೇ ಗೊಂದಲ ಇದ್ದರೂ ಬಗೆಹರಿಸಲಾಗುವುದು; ರಾಜನಾಥ್​ ಸಿಂಗ್

  ಆದರೆ ಇದುವರೆಗೂ ಆಗಿಲ್ಲ. ನಂತರ ಪರಿಹಾರ ಕೇಳಿದ್ದಕ್ಕೆ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿದರು. ಯಾರಿಗಾದರೂ ಪರಿಹಾರ ಬಂದಿತಾ? ಎಂದು ಪ್ರಶ್ನೆ ಮಾಡಿದರು.

  ಇದೇ ಸಂದರ್ಭದಲ್ಲಿ ಕೊರೋನಾ ನಿಯಂತ್ರಣದಲ್ಲಿ ವೈಫಲ್ಯ, ಆಕ್ಸಿಜನ್ ದುರಂತ, ಕೊರೋನಾ ಕಾಲದಲ್ಲೂ ಭ್ರಷ್ಟಾಚಾರ, ಔಷಧ, ಲಸಿಕೆಯಲ್ಲೂ ಬಿಜೆಪಿ ಲೂಟಿ ಮಾಡಿದೆ ಈ ಮೂಲಕ ಜನರ ಬದುಕನ್ನೇ ಬೂದಿ ಮಾಡಿ, ಈಗ ಜನಾಶೀರ್ವಾದ ಯಾತ್ರೆ ನಡೆಸುತ್ತಿದೆ ಎಂದು ಡಿ.ಕೆ. ಶಿವಕುಮಾರ್​ ಬಿಜೆಪಿ ನಾಯಕರ ಜನಾಶೀರ್ವಾದ ಯಾತ್ರೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
  Published by:MAshok Kumar
  First published: