Bombay Clay Ganesha- ಬಾಂಬೆ ಕ್ಲೇನಿಂದ ಗಣೇಶನ ಮೂರ್ತಿ ತಯಾರಿಸುವ ವಸ್ತ್ರದ ಕುಟುಂಬ

Vastrada Family- ಬಾಂಬೆ ಕ್ಲೇ ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳು ಪರಿಸರಕ್ಕೆ ಹಾನಿಕಾರಕವಲ್ಲ. ಅಷ್ಟೇ ಅಲ್ಲ, ಆ ಮಣ್ಣಿನ್ನು ಬಳಸಿ ಬಹಳ ಹದವಾಗಿ ಮೂರ್ತಿ ತಯಾರಿಸಬಹುದು. ಇಂಥ ಗಣಪತಿ ಮೂರ್ತಿಯನ್ನ ಪ್ರಖ್ಯಾತ ವಸ್ತ್ರದ ಕುಟುಂಬದವರು ಮಾಡುತ್ತಿದ್ದಾರೆ.

ಬಾಂಬೆ ಕ್ಲೇ ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿ

ಬಾಂಬೆ ಕ್ಲೇ ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿ

  • Share this:
ಕೊಪ್ಪಳ: ಇತ್ತೀಚಿನವರೆಗೂ ಗಣೇಶ ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ನಿಂದ ತಯಾರಿಸಲಾಗುತ್ತಿತ್ತು. ಸರಕಾರ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಿಷೇಧಿಸಿದ ನಂತರ ಮಣ್ಣಿನ ಗಣಪ ಮೂರ್ತಿ ತಯಾರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬಾಂಬೆ ಕ್ಲೇ (Bombay Clay) ಎಂಬ ನುಣುಪಾದ ಮಣ್ಣಿನಿಂದ ಸುಂದರವಾದ ಗಣೇಶ ಮೂರ್ತಿಗಳನ್ನು ಕೊಪ್ಪಳದಲ್ಲೊಬ್ಬರು ತಯಾರಿಸುತ್ತಿದ್ದಾರೆ. ಇದು ಈ ಭಾಗದಲ್ಲಿ ಈ ಮಣ್ಣಿನಿಂದ ಗಣೇಶನ ಮೂರ್ತಿ ತಯಾರಿಸುವ ವ್ಯಕ್ತಿ ಇವರೊಬ್ಬರೇ ಎಂದೆನ್ನಲಾಗುತ್ತಿದೆ.

ಕೊಪ್ಪಳದಲ್ಲಿ ವಸ್ತ್ರದ ಎಂಬ ಕುಟುಂಬದವರು ಸುಮಾರು 30 ವರ್ಷದಿಂದ ಕೊಪ್ಪಳದಲ್ಲಿ ಬೃಹತ್ತಾಕಾರದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದರು. ಮೊದಲಿಗೆ ಮಣ್ಣಿನಿಂದ ಹಾಗೂ ನಂತರ ಪ್ಲಾಸ್ಟರ್ ಅಫ್ ಪ್ಯಾರಿಸ್ ಬಳಸಿ ಬೃಹತ್ ಗಣೇಶ ಮೂರ್ತಿಗಳನ್ನ ತಯಾರಿಸುತ್ತಿದ್ದರು. ಕುಟುಂಬದ ಸುಮಾರು 10 ಜನರು ಸುಮಾರು ನಾಲ್ಕು ತಿಂಗಳ ಕಾಲ ತೊಡಗಿಸಿಕೊಂಡು ನೂರಾರು ಗಣೇಶ ಮೂರ್ತಿಗಳನ್ನು ನಿರ್ಮಿಸುತ್ತಿದ್ದರು. ಕೊಪ್ಪಳ ಹಾಗು ಸುತ್ತ ಮುತ್ತಲಿನ ಪ್ರದೇಶದಲ್ಲಿ ಸಾಮಾನ್ಯವಾಗಿ ವಸ್ತ್ರದ ಕುಟುಂಬದವರು ತಯಾರಿಸಿದ ಗಣೇಶ ಮೂರ್ತಿಗಳನ್ನೇ ಹೆಚ್ಚಾಗಿ ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ನೀರಿನಲ್ಲಿ ಕರಗುವುದಿಲ್ಲ. ಅವು ಪರಿಸರ ನಾಶಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಪಿಒಪಿ ಬಳಸಿ ತಯಾರಿಸಿದ ಗಣೇಶ ಮೂರ್ತಿಯನ್ನು ಮೂರು ವರ್ಷಗಳಿಂದ ನಿಷೇಧಿಸಲಾಗಿದೆ. ಆದ್ದರಿಂದ ಈಗ ಹೆಚ್ಚಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ.

ಪ್ಲಾಸ್ಟ್ ಆಫ್ ಪ್ಯಾರಿಸ್ ಬಳಕೆ ಬರುವ ಮುನ್ನ ಕೊಪ್ಪಳದ ವಸ್ತ್ರದ ಕುಟುಂಬದವರು ಮಹಾರಾಷ್ಟ್ರದಲ್ಲಿ ಸಿಗುವ ಬಾಂಬೇ ಕ್ಲೇ ಎಂಬ ನುಣುಪಾದ ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದರು. ಈ ಮಣ್ಣು ಬೇಗ ನೀರಿನಲ್ಲಿ ಕರಗುತ್ತದೆ, ಅಷ್ಟೇ ಬೇಗ ಗಟ್ಟಿಯಾಗುತ್ತದೆ. ಗಣೇಶನ ಮೂರ್ತಿಗಳನ್ನು ತಯಾರಿಸಲು ಇದು ಸೂಕ್ತವಾದ ಮಣ್ಣಾಗಿದೆ. ತಮಗೆ ಬೇಕಾದ ಆಕಾರದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಬಹುದಾಗಿದೆ. ಸಾಮಾನ್ಯವಾಗಿ ಮಣ್ಣಿನ ಗಣೇಶ ತಯಾರಿಸಲು ಅದಕ್ಕೆ ಕೆರೆಯ ಮಣ್ಣನ್ನು ತಂದು ಅದನ್ನು ಹದವಾಗಿ ಕುಟ್ಟಿ ಅದಕ್ಕೆ ಅರಳಿ ಹಾಕಿ ಗಣೇಶ ಮೂರ್ತಿ ತಯಾರಿಕೆಗೆ ಸಿದ್ದಪಡಿಸಿಕೊಳ್ಳಬೇಕು. ಆದರೆ ಬಾಂಬೆ ಕ್ಲೇ ಮಣ್ಣಿನಲ್ಲಿ ಕೇವಲ ನೀರು ಹಾಕಿ ಸರಿಯಾಗಿ ಹದ ಮಾಡಿದರೆ ಸಾಕು ಮಣ್ಣು ಮೂರ್ತಿ ತಯಾರಿಸಲು ಸಿದ್ದವಾಗುತ್ತದೆ.

ಇದನ್ನೂ ಓದಿ: ರಾಮನಗರ, ರಾಜಾನುಕುಂಟೆ, ಮಾಗಡಿವರೆಗೆ ಮೆಟ್ರೋ ಗುರಿ, ಇಂದಿನಿಂದ ಬೆಂಗಳೂರು ಅಭಿವೃದ್ಧಿ ಯುಗ: ಸಿಎಂ ಬೊಮ್ಮಾಯಿ

ಕಳೆದೆರಡು ವರ್ಷದಿಂದ ಕೊರೋನಾ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಗಣೇಶ ಮೂರ್ತಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವುದಿಲ್ಲ. ಇದರಿಂದ ವಸ್ತ್ರದ ಕುಟುಂಬದಲ್ಲಿ ಈಗ ಕೇವಲ ಒಬ್ಬರು ಮಾತ್ರ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ವಿಜಯ ವಸ್ತ್ರದ ಮಾತ್ರ ಬಾಂಬೇ ಕ್ಲೇ ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಈ ಮೊದಲು ವಸ್ತ್ರದ ಕುಟುಂಬದವರು ಗಣಪತಿ ಮೂರ್ತಿಗಳನ್ನ ತಯಾರಿಸಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ದುಡಿಮೆ ಮಾಡಿಕೊಳ್ಳುತ್ತಿದ್ದರು. ಇದು ಅವರ ಕುಟುಂಬಕ್ಕೆ ಇಡೀ ವರ್ಷ ಉಪಜೀವನ ನಡೆಸಲು ಸಾಕಾಗುತ್ತಿತ್ತು. ಆದರೆ ಕೊರೋನಾ ಎಂಬ ಮಾಹಾಮಾರಿ ಅವರ ದುಡಿಮೆಯನ್ನು ಕಸಿದುಕೊಂಡಿದೆ. ಉಳಿದವರು ಈಗ ಬೇರೆ ಬೇರೆ ಉದ್ಯೋಗ ಮಾಡುತ್ತಿದ್ದಾರೆ. ಕೆಲವರು ಫೋಟೊಗ್ರಫಿ ಕೆಲಸ ಮಾಡಿದರೆ, ಮತ್ತೂ ಕೆಲವರು ಪೆಂಡಾಲ್ ಹಾಕುವ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ.

ವಿಜಯ ವಸ್ತ್ರದ ಸಹ ಕೆಲವೇ ಕೆಲವು ಗಣೇಶ ಮೂರ್ತಿಗಳನ್ನು ತಯಾರಿಸಿದ್ದು ತೀರಾ ಆತ್ಮೀಯರು ಮನೆಯಲ್ಲಿ ಪ್ರತಿಷ್ಠಾಪನೆಗಾಗಿ ಕೇಳಿದ್ದಕ್ಕೆಂದು ಅವುಗಳನ್ನ ತಯಾರಿಸಿ ಕೊಟ್ಟಿದ್ದಾರೆ. ಈ ಭಾಗದಲ್ಲಿ ಬಾಂಬೇ ಕ್ಲೇ ಮಣ್ಣಿನಿಂದ ಗಣೇಶ ಮೂರ್ತಿಯನ್ನು ತಯಾರಿಸುವವರು ವಿಜಯ ವಸ್ತ್ರದ ಮಾತ್ರ ಎನ್ನಲಾಗಿದೆ. ಮೊದಲಿನಿಂದ ಗಣೇಶ ಮೂರ್ತಿ ತಯಾರಿಸುವ ವಿಜಯ ವಸ್ತ್ರದ ಅವರು ಸಂಪ್ರಾದಾಯ, ಕಲೆ ಎಂಬ ಕಾರಣಕ್ಕೆ ಬಿಡಬಾರದು ಎಂದು ಲಾಭ ಹೆಚ್ಚು ಇಲ್ಲದಿದ್ದರೂ ಗಣೇಶ ಮೂರ್ತಿಗಳ ತಯಾರಿಕೆ ಕೆಲಸವನ್ನ ಮುಂದವರಿಸುತ್ತಿದ್ದಾರೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: