ಎಕ್ಕಾ, ರಾಜಾ, ರಾಣಿ ನನ್ನ ಕೈಯೊಳಗೆ; ಕೊಪ್ಪಳದಲ್ಲಿ ‘ಫಂಡ್’ ಅಡ್ಡೆಗೆ ಪೊಲೀಸ್ ರೇಡ್

ಗೋವಾದಲ್ಲಿ ನಡೆಯುತ್ತಿದ್ದ ಕ್ಯಾಸಿನೋ ಮಾದರಿಯಲ್ಲಿ ಕೊಪ್ಪಳ, ಗದಗ್​ನಲ್ಲಿ ಫಂಡ್ ಆಟ ನಡೆಯುತ್ತದೆ. ಅಂದರ್ ಬಾಹರ್ ರೀತಿಯಲ್ಲಿ ನಡೆಯುವ ಈ ಆಟಕ್ಕೆ ಬೇರೆ ಬೇರೆ ರಾಜ್ಯಗಳಿಂದಲೂ ಜನರು ಬರುತ್ತಾರೆನ್ನಲಾಗಿದೆ. ಈಗ ಕನಕಗಿರಿಯಲ್ಲಿ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ಹಲವು ಕಾರುಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.

ಕೊಪ್ಪಳದ ಕನಕಗಿರಿ ಪೊಲೀಸ್ ಠಾಣೆ

ಕೊಪ್ಪಳದ ಕನಕಗಿರಿ ಪೊಲೀಸ್ ಠಾಣೆ

  • Share this:
ಕೊಪ್ಪಳ: ಇಸ್ಪೀಟು, ಜೂಜಾಟ ಬಹುತೇಕ ಜನರಿಗೆ ಗೊತ್ತಿದೆ. ಆದರೆ ಫಂಡ್ ಆಟ ಬಹುಶಃ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಗೋವಾದ ಕ್ಯಾಸಿನೋದಂತೆ ನಡೆಯುವ ಆಟವನ್ನ ಫಂಡ್ ಎಂದು ಕರೆಯಲಾಗುತ್ತದೆ. ಮೊನ್ನೆ ಗುರುವಾರ ಫಂಡ್ ಆಟದಲ್ಲಿ ನಿರತರಾಗಿದ್ದವರ ಖಚಿತ ಮಾಹಿತಿ ಮೇರೆಗೆ ಜಿಲ್ಲೆಯ ಕನಕಗಿರಿ ಪೊಲೀಸರು ರೇಡ್ ಮಾಡಿ 4,65,300 ರೂಪಾಯಿ ನಗದು, 38 ಲಕ್ಷ ರೂಪಾಯಿ ಮೌಲ್ಯದ 17 ಕಾರುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ವಿಪರೀತವಾಗಿವೆ. ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ಜುಲೈ 22ರಂದು ಗಂಗಾವತಿ ಡಿವೈಎಸ್ಪಿಬಿ.ಪಿ.ಚಂದ್ರಶೇಖರ ಅವರಿಗೆ ಮನವಿ ನೀಡಿದ್ದರು. ಅದೇ ದಿನ ಡಿವೈಎಸ್ಪಿ ಸಾಹೇಬರು ಅಧೀನ ಅಧಿಕಾರಿಗಳಿಗೆ ಜ್ಞಾಪನಾ ಪತ್ರ ಕಳಿಸಿ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಸೂಚಿಸಿದ್ದರು. ಹಾಗಾಗಿ ಜುಲೈ 23ರಂದು ಕನಕಗಿರಿ ಪೊಲೀಸರು ವಿಠಲಾಪುರದಿಂದ ಹಿರೇಮಾದಿನಾಳ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬರುವ ದ್ರಾಕ್ಷಿತೋಟದ ಮೇಲೆ ರೇಡ್ ಮಾಡಿದ್ದಾರೆ.

ಹೊರಗಡೆ ಇರುವ ವಿಶಾಲ ಮೈದಾನದಲ್ಲಿ ಇಪ್ಪತ್ತಕ್ಕೂ ಅಧಿಕ ಕಾರುಗಳಿದ್ದವು ಎನ್ನಲಾಗಿದೆ. ಆದರೂ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ 17 ಕಾರುಗಳಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ದ್ರಾಕ್ಷಿ ತೋಟದೊಳಗೆ ನೋಡಿದಾಗ ಸುಮಾರು 20ಕ್ಕೂ ಅಧಿಕ ಜನರು ಅಂದರ್ ಬಾಹರ್ ಮಾದರಿಯ ಫಂಡ್ ಆಡುತ್ತಿದ್ದುದು ಖಚಿತವಾಗಿದೆ. ಪೊಲೀಸರನ್ನು ಕಂಡ ಕೂಡಲೇ ಕೆಲವರು ಪರಾರಿಯಾಗಿದ್ದಾರೆ. ಇದ್ದವರ ಪೈಕಿ ನಾಲ್ವರನ್ನು ತಂದು ಠಾಣೆಗೆ ಹಾಕಿದ್ದಾರೆ ಕನಕಗಿರಿ ಪೊಲೀಸರು.

ಇದನ್ನೂ ಓದಿ: ‘ಡಿ.ಕೆ ಶಿವಕುಮಾರ್​​, ಎಚ್.ಡಿ ಕುಮಾರಸ್ವಾಮಿ ರಿಟೈರ್ಡ್​ ಕುದುರೆಗಳು‘ - ನೂತನ ಎಂಎಲ್​​ಸಿ ಸಿ.ಪಿ ಯೋಗೇಶ್ವರ್

ಫಂಡ್ ಆಟ ಗದಗ್​ನಲ್ಲಿ ಜೋರಾಗಿ ನಡೆಯುತ್ತದೆ. ಈ ಆಟ ಆಡಲು ಬಳ್ಳಾರಿ, ಗದಗ, ಹುಬ್ಬಳ್ಳಿ, ಧಾರವಾಡ, ರಾಯಚೂರು ಜಿಲ್ಲೆಗಳು ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳ ಜನರು ಬರುತ್ತಾರೆ ಎನ್ನುವ ಮಾಹಿತಿ ಇದೆ. ಇದು ಎಷ್ಟರಮಟ್ಟಿಗೆ ಸತ್ಯ ಎಂಬುದನ್ನು ಪೊಲೀಸರೇ ತಿಳಿಸಬೇಕು.

ಅಂದರ್ ಆದವರು ನಾಲ್ವರು; ಇನ್ನುಳಿದವರು ಬಾಹರ್:

ಕನಕಗಿರಿ ಪೊಲೀಸರು ಇಸ್ಪೀಟ್ ಅಡ್ಡೆ ಮೇಲೆ ಮಾಡಿರುವ ರೇಡ್ ಕಾಲಕ್ಕೆ ಬಳ್ಳಾರಿ ಜಿಲ್ಲೆಯ ತೋರಣಗಲ್​ನ ಕೃಷ್ಣಪ್ಪ, ಗಂಗಾವತಿ ಜುಲೈನಗರದ ಚಂದ್ರು, ಬಳ್ಳಾರಿಯ ಚಾಂದಪಾಷಾ ಹಾಗೂ ಗಂಗಾವತಿ ಮುರಾರಿನಗರದ ರಮೇಶ್ ಎಂಬುವವರು ಸಿಕ್ಕಿ ಬಿದ್ದಿದ್ದಾರೆ. ಇನ್ನುಳಿದ ರಾಘವೇಂದ್ರ, ವಿನೋದ, ಸದ್ದಾಂ, ಬಾಬು ಕಲಂದರ್, ಗೋವಿಂದಪ್ಪ, ರಾಘವೇಂದ್ರ, ಚಂದ್ರು ಸೇರಿದಂತೆ ಇನ್ನಿತರ 7-8 ಜನ ಪರಾರಿಯಾಗಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಇಸ್ಪೀಟ್ ವೀರರು ಆಟದ ಸಮಯದಲ್ಲಿ ಕೋವಿಡ್-19 ನಿಯಮಗಳನ್ನು ಪಾಲಿಸಿರಲಿಲ್ಲ ಎಂಬುದನ್ನು ಉಲ್ಲೇಖ ಮಾಡಲಾಗಿದೆ. ಯಾರೂ ಸಹ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ, ಮಾಸ್ಕ್ ಧರಿಸದೇ ಆಟವಾಡುತ್ತಿದ್ದರು ಎಂಬ ಅಂಶ ಪ್ರಕರಣದಲ್ಲಿ ದಾಖಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಪೊಲೀಸರೇ ಅಕ್ರಮ ಚಟುವಟಿಕೆಗಳಿಗೆ ಬೆಂಗಾವಲಾಗಿದ್ದಾರೆ. ಬಿಜೆಪಿ ಮುಖಂಡರೇ ಮುಂದೆ ನಿಂತು ಇಸ್ಪೀಟ್ ಕ್ಲಬ್​ಗಳನ್ನ ನಡೆಸುತ್ತಾರೆ. ಕ್ಲಬ್​ಗಳಿಂದ ಪೊಲೀಸ್ ಅಧಿಕಾರಿಗಳಿಗೆ, ಸಚಿವರಿಗೆ, ಬಿಜೆಪಿ ಶಾಸಕರಿಗೆ ವಂತಿಕೆ ಸಲ್ಲಿಕೆಯಾಗುತ್ತದೆ. ಹಾಗಾಗಿ ಬಿಗಿ ಕ್ರಮ ಆಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪೊಲೀಸರು ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ಉತ್ಸಾಹ ತೋರಿಲ್ಲ. ಹಾಗಾಗಿ ಪೊಲೀಸ್ ಮಹಾನಿರ್ದೇಶಕರ ಬಳಿ ದೂರು ಸಲ್ಲಿಸುತ್ತಿದ್ದೇನೆ.
- ಮುಕುಂದ್ರಾವ್ ಭವಾನಿಮಠ, ಕಾಂಗ್ರೆಸ್ ಮುಖಂಡ


ಇದನ್ನೂ ಓದಿ: ದಿಲ್ಲಿ ಪೋಸ್ಟ್ | ಹಳ್ಳಿಹಕ್ಕಿ ಗುಟುರಿಗೆ ನಡುಗಿದ ಯಡಿಯೂರಪ್ಪ, ಸಾಹಿತಿಗಳಿಗೂ ರಾಜ್ಯಪಾಲರಾಗುವ ಆಸೆ!

ಇನ್ನು, ಕೆಲ ಆರೋಪಿಗಳು ತಪ್ಪಿಸಿಕೊಂಡು ಹೋಗಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಗಂಗಾವತಿಯ ಡಿವೈಎಸ್​ಪಿ ಬಿ.ಪಿ. ಚಂದ್ರಶೇಖರ್, ಕೊರೋನಾ ವೈರಸ್ ಸೋಂಕಿನ ಭೀತಿಯಿಂದ ಪೊಲೀಸರು ಸುರಕ್ಷತೆಗೆ ಆದ್ಯತೆ ಕೊಡಬೇಕಿತ್ತು ಎಂದರರು.

ಈಗಾಗಲೇ ಅಕ್ರಮಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕುವ ಕೆಲಸ ಮಾಡುತ್ತಿದೆ. ಕನಕಗಿರಿ ವ್ಯಾಪ್ತಿಯಲ್ಲಿ ನಡೆದ ಇಸ್ಪೀಟ್ ಅಡ್ಡೆ ದಾಳಿಯಲ್ಲಿ ತೋಟದ ಮಾಲಕ ಸೇರಿದಂತೆ ನಾಲ್ವರನ್ನ ಅರೆಸ್ಟ್ ಮಾಡಲಾಗಿದೆ. ಇನ್ನುಳಿದವರು ಪರಾರಿಯಾಗಿದ್ದು, ಯಾರೇ ಇದ್ದರೂ ಪತ್ತೆ ಮಾಡಲಾಗುತ್ತದೆ. ಕೋವಿಡ್-19 ಸಂದರ್ಭದಲ್ಲಿ ದಾಳಿ ಮಾಡಿದಾಗ ಉಳಿದ ದಿನಗಳಂತೆ ಆರೋಪಿಗಳನ್ನು ಓಡಿ ಹೋಗಿ ಹಿಡಿಯುದಕ್ಕಿಂತ ಸುಮ್ಮನಿರುವುದು ಒಳ್ಳೇಯದು. ಏಕೆಂದರೆ ಕೋವಿಡ್-19 ಇದ್ದವನನ್ನು ಹಿಡಿದರೆ ನಾಳೆ ನಮಗೂ ಬರಬಹುದು. ಹಾಗಾಗಿ ಪೊಲೀಸರಿಗೆ ಸೇಫ್ಟಿ ಮುಖ್ಯ. ಕಾರುಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರೆಲ್ಲರೂ ಬರಲೇಬೇಕು, ಬಂದೇ ಬರ್ತಾರೆ ಎಂದು ಡಿವೈಎಸ್​ಪಿ ಹೇಳಿದರು.
Published by:Vijayasarthy SN
First published: