HOME » NEWS » District » KOPPAL ZP PRESIDENT VISHWANATH REDDY FAILS IN NO CONFIDENCE TEST MOVED BY CONGRESS SNVS

ಕೊಪ್ಪಳ ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ವಿರುದ್ಧ ಅವಿಶ್ವಾಸಕ್ಕೆ ಕೊನೆಗೂ ಜಯ; ಬಿಜೆಪಿಗೆ ಮುಖಭಂಗ

ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ ವಿರುದ್ಧ ಕಾಂಗ್ರೆಸ್ ನಡೆಸಿದ ಅವಿಶ್ವಾಸ ಗೊತ್ತುವಳಿಗೆ ಗೆಲುವು ಸಿಕ್ಕಿದ್ದು, ರಡ್ಡಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದಾರೆ. ಸೋಮವಾರದ ನಂತರ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

news18-kannada
Updated:October 3, 2020, 7:47 PM IST
ಕೊಪ್ಪಳ ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ವಿರುದ್ಧ ಅವಿಶ್ವಾಸಕ್ಕೆ ಕೊನೆಗೂ ಜಯ; ಬಿಜೆಪಿಗೆ ಮುಖಭಂಗ
ಶಿವರಾಜ ತಂಗಡಗಿ
  • Share this:
ಕೊಪ್ಪಳ(ಅ. 03): ಸುಮಾರು ನಾಲ್ಕೈದು ತಿಂಗಳ ಹಿಂದೆ ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ ವಿರುದ್ಧ ಅವಿಶ್ವಾಸಕ್ಕೆ ಸ್ವಪಕ್ಷ ಕಾಂಗ್ರೆಸ್ ವೇದಿಕೆ ಸಿದ್ಧಪಡಿಸಿತ್ತು. ನಾನಾ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಅವಿಶ್ವಾಸಕ್ಕೆ ಗೊತ್ತುವಳಿಗೆ ಶನಿವಾರ ಜಯ ಸಿಕ್ಕಿದೆ. ಕಾಂಗ್ರೆಸ್ ಗೆಲುವಿನ ನಗೆ ಬೀರಿದರೆ, ಬಿಜೆಪಿ ಆಪರೇಷನ್ ಮಾಡಲು ಹೋಗಿ ಮುಖಭಂಗ ಅನುಭವಿಸಿದೆ.

ಕೊಪ್ಪಳ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಅವಿಶ್ವಾಸ ಗೊತ್ತುವಳಿ ಸಭೆಗೆ ಜಿಪಂನ 29 ಸದಸ್ಯರ ಪೈಕಿ ಪಕ್ಷೇತರ ಸದಸ್ಯ ಸೇರಿ 24 ಜನ ಸದಸ್ಯರು ಹಾಜರಿದ್ದರು. ಸಭೆಯಲ್ಲಿದ್ದ ಎಲ್ಲ ಸದಸ್ಯರು ಅಧ್ಯಕ್ಷರ ಅವಿಶ್ವಾಸ ಗೊತ್ತುವಳಿ ಬೆಂಬಲಿಸಿದ್ದರಿಂದ ವಿಶ್ವನಾಥರಡ್ಡಿ ಅಧ್ಯಕ್ಷ ಸ್ಥಾನದಿಂದ ವಂಚಿತರಾದರು. ಹಿಟ್ನಾಳ ಜಿಪಂ ಕ್ಷೇತ್ರದ ಬೀನಾ ಗೌಸ್ ಜಿಪಂ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು. ಸೋಮವಾರದ ನಂತರ ಜಿಪಂಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಇದನ್ನೂ ಓದಿ: ಬಿಹಾರ ಚುನಾವಣೆ: ವಿಪಕ್ಷಗಳ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮ; ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ

ಏನಿದು ಹಗ್ಗಜಗ್ಗಾಟ?

ಕಾಂಗ್ರೆಸ್ ಪ್ರತಿನಿಧಿಸಿ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ವಿಶ್ವನಾಥರಡ್ಡಿಗೆ ಜಿಪಂ ಅಧ್ಯಕ್ಷ ಸ್ಥಾನ ಒಲಿದು ಬಂದಿತ್ತು. ಅವರಿಗಿಂತ ಹಿಂದೆ ಅಧ್ಯಕ್ಷರಾಗಿದ್ದ ರಾಜಶೇಖರ ಹಿಟ್ನಾಳ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿದ್ದರಿಂದ ಕಾಂಗ್ರೆಸ್ ಸದಸ್ಯರಾಗಿದ್ದ ವಿಶ್ವನಾಥರಡ್ಡಿ ಹಾಗೂ ಗೋನಾಳ ಅವರಿಗೆ ತಲಾ ಹತ್ತು ತಿಂಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಒಳ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ರಾಜಶೇಖರ ಹಿಟ್ನಾಳ ಸೋಲನುಭವಿಸಿ, ಪಕ್ಷ ಸಂಘಟನೆಗೆ ಒತ್ತು ನೀಡಿದರು. ಇತ್ತ ವಿಶ್ವನಾಥರಡ್ಡಿ ಅವರ ಅಧಿಕಾರವಧಿ ಮುಗಿಯುತ್ತಾ ಬಂದಿದ್ದರಿಂದ ಅಧಿಕಾರಕ್ಕೆ ಅಂಟಿಕೊಂಡ ವಿಶ್ವನಾಥರಡ್ಡಿ ಅಧಿಕಾರ‌ ಬಿಟ್ಟು ಕೊಡದೇ ಬಿಜೆಪಿ ಸಖ್ಯ ಬೆಳೆಸಿದರು. ಬಿಜೆಪಿಗೂ ಜಿಪಂ ಅಧಿಕಾರ ಅನಿವಾರ್ಯವಾಗಿದ್ದರಿಂದ ಸ್ವತಃ ಆರ್‌ಡಿಪಿಆರ್ ಮಂತ್ರಿ ಕೆ.ಎಸ್.ಈಶ್ವರಪ್ಪ ಬಂದು ಆಪರೇಷನ್ ಕಮಲ ನಡೆಸಿ, ಅವಿಶ್ವಾಸಕ್ಕೆ ನಿಯಮ ತಿದ್ದುಪಡಿ ಜಾರಿ ನೆಪದಲ್ಲಿ ಕೊಂಚಮಟ್ಟಿಗೆ ಅಡ್ಡಗಾಲು ಹಾಕಿದರು. ಪಕ್ಷಕ್ಕೆ ಸಂಬಂಧಿಸಿದಂತೆ ವಿಶ್ವನಾಥರಡ್ಡಿ ಕಾಂಗ್ರೆಸ್‌ನಲ್ಲಿದ್ದರೂ ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡರು. ಹಾಗಾಗಿ ಕಾಂಗ್ರೆಸ್‌ಗೆ ಅವರನ್ನು‌ ಕೆಳಗಿಳಿಸುವುದು ಅನಿವಾರ್ಯವಾಯಿತು.

ಯಾರೇ ಆಗಲಿ, ಮಾತು ತಪ್ಪಿದರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವಲ್ಲಿ ಕಾಂಗ್ರೆಸ್ ತಾಕತ್ತು ಏನೆಂಬುದನ್ನು ತೋರಿಸಿದ್ದೇವೆ.
- ಶಿವರಾಜ ತಂಗಡಗಿ, ಕಾಂಗ್ರೆಸ್ ಕೊಪ್ಪಳ ಜಿಲ್ಲಾಧ್ಯಕ್ಷ
.


ಸುಮಾರು‌ ನಾಲ್ಕೈದು ತಿಂಗಳ ಹಿಂದೆಯೇ ಈ ಪ್ರಕ್ರಿಯೆ ಆರಂಭಗೊಂಡಿತು. ಕಾಂಗ್ರೆಸ್‌-ಬಿಜೆಪಿ ಜಿಲ್ಲಾ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿತ್ತು. ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಈ ಪ್ರಕರಣವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ವಿಶ್ವನಾಥರಡ್ಡಿ ಅಧಿಕಾರ ಉಳಿಸಲು ಶತಾಯಗತಾಯ ಪ್ರಯತ್ನ ನಡೆಸಿ ಕೊನೆಗೂ ವಿಫಲರಾದರು.ಇದನ್ನೂ ಓದಿ: ಶಿರಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಾಜೇಶ್ ಗೌಡ ಬಿಜೆಪಿ ಸೇರ್ಪಡೆ; ನಳೀನ್ ಕುಮಾರ್ ಕಟೀಲ್ ಸ್ವಾಗತ

ಬಲಿ ಪಡೆದ ಬಿಜೆಪಿ!
ವಿಶ್ವನಾಥರಡ್ಡಿ ಸ್ವಪಕ್ಷ ಕಾಂಗ್ರೆಸ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಆಡಳಿತದಲ್ಲಿತ್ತು. ಕಾಂಗ್ರೆಸ್‌ನ ಹಲವು ಸಚಿವರು ಜಿಲ್ಲೆಗೆ ಭೇಟಿ ನೀಡಿದಾಗ ಗೌರವ ಸಿಗುತ್ತಿಲ್ಲ, ನನ್ನನ್ನು, ನಮ್ಮ ಪಕ್ಷದವರೇ ಗುರುತಿಸುತ್ತಿಲ್ಲ ಎಂದು ಅಲವತ್ತುಕೊಂಡಿದ್ದರು. ಕೆಲವೇ ದಿನಗಳಲ್ಲಿ ಮೈತ್ರಿ ಸರಕಾರ ಬಿದ್ದು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಅಷ್ಟೊತ್ತಿಗೆ‌ ಇವರ ಅಧಿಕಾರವಧಿಯೂ ಮುಗಿಯುತ್ತಾ ಬಂದಿತ್ತು. ಅಧಿಕಾರ ಹಸ್ತಾಂತರಿಸುವಲ್ಲಿ ಮಾತಿಗೆ ತಪ್ಪಿ, ಬಿಜೆಪಿ ಸ್ನೇಹ ಬೆಳೆಸಿದರು. ಆ ಸ್ನೇಹ ಅವರನ್ನು ಇಲ್ಲಿಯವರೆಗೆ ಅಧಿಕಾರದಲ್ಲಿಟ್ಟಿತ್ತು. ಈಗ ಅವರ ಅಧಿಕಾರವೂ ಹೋಯ್ತು, ಬಿಜೆಪಿಯಲ್ಲೂ ಅವರಿಗೆ ಟಿಕೆಟ್ ಭರವಸೆ ಕೈ ತಪ್ಪಿದೆ. ಹೀಗಾಗಿ ವಿಶ್ವನಾಥರಡ್ಡಿ ಈಗ ಬಿಜೆಪಿ ಬಲೆಗೆ ಬಿದ್ದು ಬಲಿಯಾದರು ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ.

ವಿಪ್ ಉಲ್ಲಂಘಿಸಿದ್ದಕ್ಕೆ ಕ್ರಮ ಖಚಿತ:

ವಿಶ್ವನಾಥರಡ್ಡಿ ಕಾಂಗ್ರೆಸ್ ಸದಸ್ಯರಾಗಿದ್ದರಿಂದ ಜಿಪಂ ಅಧ್ಯಕ್ಷರ ಅವಿಶ್ವಾಸ ಬೆಂಬಲಿಸುವಂತೆ ಪಕ್ಷ, ತನ್ನ ಎಲ್ಲ ಜಿಪಂ ಸದಸ್ಯರಿಗೆ ವಿಪ್ ಜಾರಿಗೊಳಿಸಿತ್ತು. ವಿಶ್ವನಾಥರಡ್ಡಿ ಅವಿಶ್ವಾಸದ ಸಭೆಗೆ ಗೈರಾಗುವ ಮೂಲಕ ವಿಪ್ ಉಲ್ಲಂಘಿಸಿದ್ದು ಸ್ಪಷ್ಟವಾಗಿದೆ. ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಚಾಟನೆ ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆಯ ವಿವಿಧ ಕ್ರಮ ಕೈಗೊಳ್ಳಬಹುದು.

ವರದಿ: ಬಸವರಾಜ ಕರುಗಲ್
Published by: Vijayasarthy SN
First published: October 3, 2020, 7:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories