ಕೊಪ್ಪಳ; ರೈತ ಮಾರುವಾಗ ಭತ್ತಕ್ಕೆ ರೇಟಿಲ್ಲ, ವ್ಯಾಪಾರಿಗಳಿಗೆ ಮಾತ್ರ ದುಬಾರಿ ಲಾಭ

ಕಡಿಮೆ ದರದಲ್ಲಿ ರೈತರಿಂದ ಖರೀದಿಸಿ ಭತ್ತವನ್ನು ಸ್ಟಾಕ್ ಮಾಡಿಕೊಂಡಿರುವ ದಲ್ಲಾಳಿಗಳು ಈಗ ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತ ಬೆಳೆದಾಗ ಕಡಿಮೆ ದರದಲ್ಲಿ ಮಾರಾಟ ಮಾಡಿದ ರೈತ ಒಂದು ಕಡೆ ಈಗ ದುಬಾರಿ ಅಕ್ಕಿ ಖರೀದಿಸುವ ಗ್ರಾಹಕ ಇಬ್ಬರು ನಷ್ಟ ಅನುಭವಿಸುತ್ತಿದ್ದಾರೆ.

ಭತ್ತದ ಕಟಾವಿನಲ್ಲಿ ತೊಡಗಿರುವ ರೈತ.

ಭತ್ತದ ಕಟಾವಿನಲ್ಲಿ ತೊಡಗಿರುವ ರೈತ.

  • Share this:
ಕೊಪ್ಪಳ: ಇದೊಂದು ನಾಣ್ನುಡಿ ಘಟನೆ ಇದ್ದಂತೆ ಇದೆ. ಹಲ್ಲು ಇದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲು ಇಲ್ಲ ಎಂಬಂತೆ ರೈತರಲ್ಲಿ ಭತ್ತವಿದ್ದಾಗ ರೇಟು ಇರಲಿಲ್ಲ. ಈಗ ರೈತರಲ್ಲಿ ಭತ್ತವಿಲ್ಲ ಆದರೆ ಭತ್ತ ದುಬಾರಿಯಾಗಿದೆ. ಇದರಿಂದಾಗಿ ರೈತರಿಗಿಂತ ಅಧಿಕವಾಗಿ ವ್ಯಾಪಾರಿಗಳಿಗೆ ಲಾಭವಾಗುತ್ತಿದೆ. ಲಾಕ್​ಡೌನ್ ನಿಂದಾಗಿ ಭತ್ತದ ದರ ಇಳಿಕೆಯಾಗಿತ್ತು, ಆದರೆ, ಅನ್​ಲಾಕ್ ಆಗುತ್ತಿದ್ದಂತೆ ಭತ್ತದ ದರ ಏರಿಕೆಯಾಗಿದೆ. ಕಡಿಮೆ ದರದಲ್ಲಿ ಖರೀದಿಸಿದ ಭತ್ತವನ್ನು ಈಗ ದುಬಾರಿ ದರಕ್ಕೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸೋನಾ ಮಸೂರಿ ಎಂಬ ವಿಶಿಷ್ಠ ತಳಿಯ ಭತ್ತವನ್ನು ಬೆಳೆಯುತ್ತಾರೆ.

ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ 48 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹಿಂಗಾರಿ ಹಂಗಾಮಿನಲ್ಲಿ ಭತ್ತವನ್ನು ಬೆಳೆದಿದ್ದು, ಪ್ರತಿ ಎಕರೆಗೆ 30-40 ಚೀಲ ಭತ್ತವನ್ನು ಬೆಳೆದಿದ್ದಾರೆ. ಹಿಂಗಾರಿ ಹಂಗಾಮಿನ ಭತ್ತವು ಇಳುವರಿ ಬಂದ ಸಂದರ್ಭದಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಆಯಿತು. ಲಾಕ್ ಡೌನ್ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಭತ್ತದ ದರ ಇಳಿಕೆಯಾಯಿತು.

ಪ್ರತಿ ಚೀಲಕ್ಕೆ 1000-1100 ರೂಪಾಯಿಗೆ ಇಳಿಯಿತು. ಲಾಕ್​ಡೌನ್ ಸುಮಾರು 51 ದಿನ ಮುಂದುವರಿದಂತೆ ಭತ್ತದ ದರ ಏರಿಕೆಯಾಗಲಿಲ್ಲ. ಅಕ್ಕಿಯು ಮಾರಾಟದ ಸಮಸ್ಯೆ ಇರುವ ಕಾರಣದಿಂದಾಗಿ ಭತ್ತವನ್ನು ಕೇಳುವವರೆ ಇಲ್ಲದಂತಾಗಿತ್ತು. ಈ ಸಮಯದಲ್ಲಿ ಭತ್ತದ ದರ ಏರಿಕೆಯಾಗುತ್ತದೆ ಎಂದು ಕಾಯ್ದು, ಕಾಯ್ದು ಸುಸ್ತಾದ ರೈತರು ಮಳೆಗಾಲ ಆರಂಭ ವಾಗುತ್ತಿದ್ದಂತೆ ಭತ್ತದ ಫಸಲು ಹಾಳಾಗುತ್ತಿದೆ ಎಂಬ ಕಾರಣಕ್ಕೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿದೆ.

ಭತ್ತ ಬೆಳೆಯಲು ಸಾಕಷ್ಟ ಸಾಲ ಮಾಡಿರುವ ರೈತನಿಗೆ ಸಾಲ ತೀರಿಸದಿದ್ದರೆ ಬಡ್ಡಿ ಅಧಿಕಗೊಳ್ಳುವ ಕಾರಣಕ್ಕಾಗಿ ಕಡಿಮೆ ದರಕ್ಕೆ ಭತ್ತವನ್ನು ಮಾರಾಟ ಮಾಡಿದ್ದಾರೆ. ಈಗ ಮಾರುಕಟ್ಟೆ ತೆರೆದಿದೆ, ಇದೇ ವೇಳೆ ಗಂಗಾವತಿ ಭಾಗದ ಭತ್ತಕ್ಕೆ ಡಿಮ್ಯಾಂಡ್ ಇರುವದರಿಂದ ಸಹಕವಾಗಿ ದರ ಏರಿಕೆಯಾಗಿದೆ. ವ್ಯಾಪಾರಿಗಳು ಸ್ವಲ್ಪ ಪ್ರಮಾಣದಲ್ಲಿ ಲಾಭ ಮಾಡಿಕೊಂಡು ಭತ್ತ ಹಾಗು ಅಕ್ಕಿ ಮಾರಾಟ ಮಾಡುತ್ತಿದ್ದಾರೆ ಇದರಲ್ಲಿ ಅಂಥ ವಿಶೇಷವಿಲ್ಲ ಸಹಜವಾಗಿರುವುದು ಎನ್ನುತ್ತಾರೆ ಅಕ್ಕಿ ಗಿರಣಿ ಮಾಲೀಕರೂ ಆಗಿರುವ ಶಾಸಕ ಪರಣ್ಣ ಮುನವಳ್ಳಿ.

ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗು ಕಾರಟಗಿ ಮಾರುಕಟ್ಟೆಯಲ್ಲಿ ಎಪ್ರಿಲ್ ತಿಂಗಳಲ್ಲಿ 904224 ಕ್ವಿಂಟಾಲ್, ಮೇ ತಿಂಗಳಲ್ಲಿ 440235 ಕ್ವಿಂಟಾಲ್ ಹಾಗೂ ಜೂನ್ ತಿಂಗಳಲ್ಲಿ 478386 ಕ್ವಿಂಟಾಲ್ ಭತ್ತವನ್ನು ಮಾರಾಟ ಮಾಡಲಾಗಿದೆ. ಎಪ್ರಿಲ್ ಹಾಗು ಮೇ ತಿಂಗಳಲ್ಲಿ 1000-1200 ರೂಪಾಯಿಯವರೆಗೂ ಇದ್ದ ದರ ಈಗ 1500-1800 ರೂಪಾಯಿಯ ವರೆಗೂ ಏರಿಕೆಯಾಗಿದೆ.

ಕಡಿಮೆ ದರದಲ್ಲಿ ರೈತರಿಂದ ಖರೀದಿಸಿ ಭತ್ತವನ್ನು ಸ್ಟಾಕ್ ಮಾಡಿಕೊಂಡಿರುವ ದಲ್ಲಾಳಿಗಳು ಈಗ ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈಗ ಸೋನಾ ಮಸೂರಿ ಅಕ್ಕಿಯು ಸಹ ದುಬಾರಿಯಾಗಿದೆ. ರೈತ ಬೆಳೆದಾಗ ಕಡಿಮೆ ದರದಲ್ಲಿ ಮಾರಾಟ ಮಾಡಿದ ರೈತ ಒಂದು ಕಡೆ ಈಗ ದುಬಾರಿ ಅಕ್ಕಿ ಖರೀದಿಸುವ ಗ್ರಾಹಕ ಇಬ್ಬರು ನಷ್ಟ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಅಕ್ಕಿ ಗಿರಣಿ ಮಾಲೀಕರು ಭತ್ತ ವ್ಯಾಪಾರಿಗಳಿಗೆ ಲಾಭವಾಗುತ್ತಿದೆ.

ಇದನ್ನೂ ಓದಿ: ಚೀನಾ ಬದಲಿಗೆ ಪಾಕಿಸ್ತಾನದ ಮೇಲೆ ಕೇಂದ್ರೀಕರಿಸಿದೆ: ಭಾರತವು ಸೈಬರ್ ಶಕ್ತಿಯಲ್ಲಿ 3 ನೇ ಸಾಲಿನಲ್ಲಿದೆ

ಲಾಕ್​ಡೌನ್ ನಿಂದಾಗಿ ರೈತ ನಷ್ಟ ಅನುಭವಿಸಿದ್ದು ಅದರ ಲಾಭವನ್ನು ವ್ಯಾಪಾರಿಗಳು ಪಡೆದುಕೊಳ್ಳುತ್ತಿದ್ದಾರೆ. ಭತ್ತದ ದರ ಇಳಿಕೆಯಾಗಿ ಎರಿಕೆ ಹಾಗು ಅಕ್ಕಿ ದರ ಏರಿಕೆಯಾಗುತ್ತಿರುವಾಗ ಸರಕಾರ ಈ ಬಗ್ಗೆ ನಿಗಾವಹಿಸಬೇಕಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: