• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Kollegala- ವಿಪ್ ಉಲ್ಲಂಘನೆ: ಕೊಳ್ಳೇಗಾಲದ 7 ಮಂದಿ ಬಿಎಸ್​ಪಿ ನಗರಸಭಾ ಸದಸ್ಯರ ಸದಸ್ಯತ್ವ ಅನರ್ಹ

Kollegala- ವಿಪ್ ಉಲ್ಲಂಘನೆ: ಕೊಳ್ಳೇಗಾಲದ 7 ಮಂದಿ ಬಿಎಸ್​ಪಿ ನಗರಸಭಾ ಸದಸ್ಯರ ಸದಸ್ಯತ್ವ ಅನರ್ಹ

ಕೊಳ್ಳೇಗಾಲ ನಗರಸಭೆ ಕಾರ್ಯಾಲಯ

ಕೊಳ್ಳೇಗಾಲ ನಗರಸಭೆ ಕಾರ್ಯಾಲಯ

7 BSP members disqualified- ಕಳೆದ ವರ್ಷ ನಡೆದಿದ್ದ ನಗರಸಭೆ ಅಧ್ಯಕ್ಷಗಾದಿ ಚುನಾವಣೆ ವೇಳೆ ಪಕ್ಷದ ವಿಪ್ ಉಲ್ಲಂಘಿಸಿದ ಏಳು ಮಂದಿ ಬಿಎಸ್​ಪಿ ಸದಸ್ಯರನ್ನ ಅನರ್ಹಗೊಳಿಸಿ ಚಾಮರಾಜನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

  • Share this:

ಚಾಮರಾಜನಗರ: ಪಕ್ಷಾಂತರ ನಿಷೇಧ ಕಾಯ್ದೆ (Anti-defection Law) ಅನ್ವಯ ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷೆ ಸೇರಿದಂತೆ ಬಹುಜನ ಸಮಾಜ ಪಕ್ಷದ (BSP) ಏಳು ಮಂದಿ ನಗರಸಭಾ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಚಾಮರಾಜನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೊಳ್ಳೇಗಾಲ ನಗರಸಭೆಯ (Kollegal CMC) 7 ಮಂದಿ ಬಿಎಸ್​ಪಿ ಸದಸ್ಯರು 2020ರ ಅಕ್ಟೋಬರ್ 29 ರಂದು ನಡೆದಿದ್ದ ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆಂಬ ಆರೋಪ ಎದುರಿಸುತ್ತಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ನಾಗಮಣಿ, ಗಂಗಮ್ಮ, ನಾಸೀರ್ ಪಾಶಾ, ಎನ್ ಪವಿತ್ರ, ಪ್ರಕಾಶ್, ರಾಮಕೃಷ್ಣ, ನಾಗಸುಂದ್ರ ಅವರನ್ನು ಅನರ್ಹಗೊಳಿಸಿ ಆದೇಶಿಸಿದೆ.


 ಪ್ರಕರಣದ ವಿವರ: ಕೊಳ್ಳೇಗಾಲ ನಗರಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 7, ಬಿಎಸ್ಪಿ 9 ಹಾಗು ಪಕ್ಷೇತರ 4 ಅಭ್ಯರ್ಥಿಗಳು ಆಯ್ಕೆಯಾಗಿದ್ದರು ಬಳಿಕ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಾಂಗ್ರೆಸ್​ನ ಪುಷ್ಪಲತಾ, ಬಿಎಸ್​ಪಿಯ ಜಯಮೇರಿ ಹಾಗು  ಬಿಎಸ್​ಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗಂಗಮ್ಮ ಸ್ಪರ್ಧಿಸಿದ್ದರು. ಬಿಎಸ್​ಪಿ ಪಕ್ಷದ ಅಧಿಕೃತ ಅಭ್ಯರ್ಥಿ ಜಯಮೇರಿಗೆ ಮತ ಚಲಾಯಿಸುವಂತೆ ಬಹುಜನ ಸಮಾಜ ಪಕ್ಷದ ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗಯ್ಯ ಅವರು ವಿಪ್ ಜಾರಿಗೊಳಿಸಿದ್ದರು. ಆದರೆ ವಿಪ್ ಉಲ್ಲಂಘಿಸಿ ಬಿಎಸ್ಪಿ ಬಂಡಾಯ ಅಭ್ಯರ್ಥಿ ಗಂಗಮ್ಮ ಅವರಿಗೆ 7 ಮಂದಿ ಬಿಎಸ್​ಪಿ ಸದಸ್ಯರು ಮತ ಚಲಾಯಿಸಿದ್ದರು ಬಿಜೆಪಿಯ 7 ಹಾಗು ಓರ್ವ ಪಕ್ಷೇತರ ಸದಸ್ಯರ ಬೆಂಬಲ ಪಡೆದು ಗಂಗಮ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಬಿಎಸ್ಪಿಯ ಅಧಿಕೃತ ಅಭ್ಯರ್ಥಿ ಜಯಮೇರಿ ಅವರಿಗೆ 2 ಮತ ಹಾಗು ಕಾಂಗ್ರೆಸ್​ನ ಪುಷ್ಪಲತಾ ಅವರಿಗೆ 14 ಮತಗಳು ದೊರೆತು ಸೋಲು ಅನುಭವಿಸಿದ್ದರು.


ಇದನ್ನೂ ಓದಿ: Petrol Prices- ಪೆಟ್ರೋಲ್ ಬೆಲೆ ಬೆಂಗಳೂರಲ್ಲಿ ಏರಿಕೆ, ಚೆನ್ನೈನಲ್ಲಿ ಇಳಿಕೆ; ಕಾರವಾರದಲ್ಲಿ ಅತಿಹೆಚ್ಚು ಇಳಿಕೆ


ಪಕ್ಷದ ಅಧಿಕೃತ ಅಭ್ಯರ್ಥಿ ಪರ ಮತಚಲಾಯಿಸದೆ ಸೋಲಿಗೆ ಕಾರಣವಾದ 7 ಮಂದಿ ಸದಸ್ಯರ ವಿರುದ್ದ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಜರುಗಿಸುವಂತೆ 2020 ರ ಡಿಸೆಂಬರ್1 ರಂದು ಬಿಎಸ್ಪಿ ಸದಸ್ಯೆ ಜಯಮೇರಿ ಅವರು ಕೊಳ್ಳೇಗಾಲ ನಗರಸಭಾ ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ದೂರನ್ನು ಪೌರಾಯುಕ್ತರು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ರವಾನಿಸಿದ್ದರು.


ತಮಗೆ ವಿಪ್ ಜಾರಿಯಾಗಿಲ್ಲ ಎಂದು ಪ್ರತಿವಾದಿಗಳಾಗಿದ್ದ ಬಿಎಸ್​ಪಿ ಸದಸ್ಯರು ವಾದಿಸಿದ್ದರು. ಆದರೆ ಇದನ್ನು ಸಾಬೀತುಪಡಿಸುವಲ್ಲಿ ಅವರು ವಿಫಲರಾಗಿದ್ದರು. ಇದಲ್ಲದೆ ಪಕ್ಷವು ಚುನಾವಣಾ ಪೂರ್ವದಲ್ಲಿ ವಿವಿಧ ಸಂದರ್ಭಗಳಲ್ಲಿ ಕರೆದಿದ್ದ ಎಲ್ಲಾ ಸಭೆಗಳಿಗೆ ಉದ್ದೇಶಪೂರ್ವಕವಾಗಿ ಇವರು ಗೈರು ಹಾಜರಾಗಿರುವುದು ಸಾಬೀತಾಗಿತ್ತು.


ಇದನ್ನೂ ಓದಿ: Basavaraj Bommai: ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ, ಕೇಂದ್ರ ಸಚಿವರ ಜತೆ ಮಹತ್ವದ ಚರ್ಚೆ ಸಾಧ್ಯತೆ


ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ, ಪಕ್ಷಾಂತರ ನಿಷೇಧ ಕಾಯ್ದೆ 1987 ಸೆಕ್ಷನ್ 4(2)(iii) ಅನ್ವಯ ಅಧ್ಯಕ್ಷೆ  ಗಂಗಮ್ಮ ಸೇರಿದಂತೆ ಬಿಎಸ್ಪಿಯ 7 ಮಂದಿಯನ್ನು ನಗರಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ನೀಡಿದ್ದಾರೆ.


ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987 ಅನ್ವಯ 60 ದಿನಗಳ ಒಳಗೆ ಪ್ರಕರಣವನ್ನು ಇತ್ಯರ್ಥ ಗೊಳಿಸಬೇಕಿತ್ತು. ಆದರೆ ಕೋವಿಡ್-19 ಕೆಲಸದಲ್ಲಿ ನಿರತರಾಗಿದ್ದರಿಂದ, ಪ್ರತಿವಾದಿ ವಕೀಲರು ವಾದ ಮಂಡಿಸಲು ಪ್ರಕರಣ ಮುಂದೂಡುವಂತೆ ಮನವಿ ಮಾಡಿದ್ದರಿಂದ ಹಾಗು ವಾದಿ ಮತ್ತು ಪ್ರತಿವಾದಿಗಳಿಗೆ ಸಾಕಷ್ಟು ಸಮಯಾವಕಾಶ ನೀಡಿದ್ದರಿಂದ ಪ್ರಕರಣ ವಿಚಾರಣೆ ಮುಕ್ತಾಯಗೊಳಿಸಲು 8 ತಿಂಗಳ ಸಮಯಾವಕಾಶ ತೆಗೆದುಕೊಳ್ಳಲಾಯ್ತು ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

top videos


    ವರದಿ: ಎಸ್.ಎಂ. ನಂದೀಶ್

    First published: