ಬರೋಬ್ಬರಿ 13 ವರ್ಷಗಳ ನಂತರ ಪೂರ್ಣಗೊಂಡ ಕೋಲಾರದ ಯರಗೋಳ ಡ್ಯಾಂ; ಬೇಕಿದೆ ಮಳೆರಾಯನ ಕರುಣೆ

2008 ರಲ್ಲಿ ಆರಂಭವಾಗಿದ್ದ ಕೋಲಾರ ಜಿಲ್ಲೆಯ ಯರಗೋಳ ಡ್ಯಾಂ ಕಾಮಗಾರಿ ಬರೋಬ್ಬರಿ 14 ವರ್ಷಗಳ ಬಳಿಕ ಪೂರ್ಣಗೊಂ ಡಿದೆ. ಬಂಗಾರಪೇಟೆ ತಾಲೂಕಿನ ಯರಗೋಳ ಗ್ರಾಮದ ಬಳಿ 2006 ರಲ್ಲಿ ಡ್ಯಾಂ ಕಟ್ಟಲು ಅಂದಿನ ಕುಮಾರಸ್ವಾಮಿ ನೇತೃತ್ವದ  ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು.

ಯರಗೋಳ ಡ್ಯಾಂ.

ಯರಗೋಳ ಡ್ಯಾಂ.

  • Share this:
ಕೋಲಾರ: ಚಿನ್ನಡನಾಡು, ಬಯಲುಸೀಮೆ ಕೋಲಾರ ಜಿಲ್ಲೆಗೆ ಯಾವುದೇ ನೀರಾವರಿ ವ್ಯವಸ್ತೆಯಿಲ್ಲ. ಸದ್ಯ ಬೆಂಗಳೂರಿನ ಸಂಸ್ಕರಿಸಿದ ನೀರನ್ನು ಕೆಸಿ ವ್ಯಾಲಿ ಯೋಜನೆ ಮೂಲಕ ಕೆರೆಗಳಿಗೆ ಹರಿಸಲಾಗುತ್ತಿದ್ದು, ಇದು ಅಂತರ್ಜಲ ಮಟ್ಟ ವೃದ್ದಿಗೆ ಸಹಕಾರಿಯಾಗಲಿದೆ. ಆದರೆ ಸರ್ಕಾರ ಕುಡಿಯುವ ನೀರಿಗಾಗಿ ಎತ್ತಿನಹೊಳೆ ಯೋಜನೆ ಆರಂಭಿಸಿದ್ದು, ಕಾಮಗಾರಿಗೆ‌ ಮುಕ್ತಾಯಕ್ಕೆ ಇನ್ನು ಕೆಲವು ವರ್ಷಗಳು ಬೇಕಾಗಬಹುದು. ಆದರೆ 2008 ರಲ್ಲಿ ಆರಂಭವಾಗಿದ್ದ ಕೋಲಾರ ಜಿಲ್ಲೆಯ ಯರಗೋಳ ಡ್ಯಾಂ ಕಾಮಗಾರಿ ಬರೋಬ್ಬರಿ 14 ವರ್ಷಗಳ ಬಳಿಕ ಪೂರ್ಣಗೊಂ ಡಿದೆ. ಬಂಗಾರಪೇಟೆ ತಾಲೂಕಿನ ಯರಗೋಳ ಗ್ರಾಮದ ಬಳಿ 2006 ರಲ್ಲಿ ಡ್ಯಾಂ ಕಟ್ಟಲು ಅಂದಿನ ಕುಮಾರಸ್ವಾಮಿ ನೇತೃತ್ವದ  ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಬಳಿಕ ಆರ್ಥಿಕ ಒಪ್ಪಿಗೆ ನೀಡಿದ ಮೇಲೆ ಅದರಂತೆ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ವತಿಯಿಂದ 2008 ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು.

ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ತಡವಾಗಿದ್ದು, ಇದೀಗ ಡ್ಯಾಂ ನಿರ್ಮಾಣ ಕಾರ್ಯ ಸಂಪೂರ್ಣವಾಗಿದೆ. ಇದುವರೆಗು 314 ಕೋಟಿ ಹಣ ಖರ್ಚಾಗಿದ್ದು, 40 ಮೀಟರ್ ಎತ್ತರ ಹಾಗು 414 ಮೀಟರ್ ಅಗಲದಲ್ಲಿ ಸುಂದರವಾಗಿ ಡ್ಯಾಂ ನಿರ್ಮಾಣವಾಗಿದೆ. ಡ್ಯಾಂ ಮುಂಭಾಗದ ನೋಟ ಮಿನಿ ಕೆಆರ್‌ಆರ್ ಡ್ಯಾಂನಂತೆ ಕಾಣುತ್ತದೆ. ಡ್ಯಾಂನ ಸುತ್ತಲೂ 154 ಎಕರೆ ಪ್ರದೇಶವನ್ನ ಭೂ ಸ್ವಾದೀನ ಪ್ರಕ್ರಿಯೆಯಲ್ಲಿ ಸ್ವಾಧೀನ ಮಾಡಿಕೊಂಡಿದ್ದು, ಮಳೆಯಾದಲ್ಲಿ 300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನೀರು ನಿಲ್ಲಲಿದೆ.

ಹೀಗಾಗಿ ಮಳೆಯಾದಲ್ಲಿ  ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ಮಳೆಯನೀರು ಕುಡಿಯುವ ನೀರಿಗಾಗಿ ಬಳಕೆಯಾಗಲಿದೆ. ಡ್ಯಾಂನಲ್ಲಿ 500 ಎಮ್,ಸಿ,ಎಪ್,ಟಿ(MCFT) ಸಾಮರ್ಥ್ಯದ ನೀರು ಶೇಖರಣೆಯಾಗಲಿದ್ದು, ಇದರಿಂದ ಕೋಲಾರ, ಮಾಲೂರು, ಬಂಗಾರಪೇಟೆ ನಗರ ಪ್ರದೇಶಗಳು ಹಾಗು ಮಾರ್ಗ ಮಧ್ಯೆ ಇರುವ 45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುವುದು, ಡ್ಯಾಂ ಬಳಿ  ಪಂಪ್‍ಹೌಸ್ ಸಹ ನಿರ್ಮಿಸಲಾಗಿದ್ದು, ಮೋಟಾರ್ ಅಳವಡಿಕೆ ಕಾರ್ಯ ಮಾತ್ರ ಬಾಕಿಯಿದೆ, ತಾಲೂಕುಗಳಿಗೆ ಪೈಪ್ ಲೈನ್ ಅಳವಡಿಕೆ ಕಾರ್ಯ ಮುಗಿದಿದ್ದು, ಸಂಸ್ಕರಣಾ ಘಟಕ ಹಾಗು ಟ್ಯಾಂಕ್ ಗಳನ್ನ ನಿರ್ಮಿಸಲಾಗಿದೆ.

ಇನ್ನು ಡ್ಯಾಂ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ವಿರೊಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು, ಆದರೆ ರಾಜ್ಯ ಸರ್ಕಾರ ತಮ್ಮ ಸಮರ್ಥವಾದ ವಾದವನ್ನ ಮಂಡಿಸುವ ಮೂಲಕ ಡ್ಯಾಂ ನಿರ್ಮಾಣಕ್ಕಿದ್ದ ತೊಡಕನ್ನು ನಿವಾರಿಸಿತ್ತು. ಇದೀಗ ಡ್ಯಾಂ ನಿರ್ಮಾಣ ಕಾರ್ಯ ಮುಗಿದಿದ್ದರಿಂದ ಯರಗೋಳು ಜಲಾಶಯ ಸ್ತಳ ಪ್ರವಾಸಿ ತಾಣವಾಗಿದೆ, ಕೋಲಾರ ಜಿಲ್ಲೆ ಸೇರಿದಂತೆ, ನೆರೆಯ ರಾಜ್ಯಗಳಿಂದಲೂ  ಪ್ರವಾಸಿಗರು ಬಂದು ಹೋಗುತ್ತಿದ್ದು, ಮಳೆಯಾಗಿ ನೀರು ಶೇಖರಣೆಯಾದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆಯಿದೆ.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದು ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಲಹೆ

ಈಗಾಗಲೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದು, ಶುದ್ದ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿ ಜನರಿಗೆ ಬಹುತೇಕ ಕಡೆ ನೀರು ಸರಬರಾಜು ಮಾಡಲಾಗುತ್ತಿದೆ. ಯೋಜನೆ ಆರಂಭಕ್ಕು ಮುನ್ನ ಇಲ್ಲಿ ಮಳೆಯಿಂದಾಗಿ ಭಾರೀ ಪ್ರಮಾಣದ ನೀರು ಪಕ್ಕದ ತಮಿಳುನಾಡಿಗೆ ಹರಿದು ಹೋಗುತ್ತಿತ್ತು, ಇದೀಗ ಉತ್ತಮ ಮಳೆಯಾದಲ್ಲಿ ಅಕ್ಕ ಪಕ್ಕದ ಬೆಟ್ಟ ಗುಡ್ಡಗಳಿಂದಲೂ ನೀರು ಶೇಖರಣೆಯಾಗಿ ಡ್ಯಾಂ ತುಂಬಲು ಸಹಕಾರಿಯಾಗಲಿದೆ. ಆದರೆ ಕುಡಿಯುವ ನೀರು ಪೂರೈಸಲು ಎಲ್ಲಾ ಸಿದ್ದತೆಗಳು ನಡೆದಿದ್ದು, ಮಳೆಯ ಕಡೆಗೆ ಜನರು ಮುಖಮಾಡಿದ್ದಾರೆ.

ಯರಗೋಳ ಜಲಾಶಯಕ್ಕೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ಯೋಜನೆಯ ಮಹತ್ವ ಅರಿತುಕೊಂಡು,  ಅಣೆಕಟ್ಟು ಕಟ್ಟಲು ಅನುಮೋದನೆ  ನೀಡಿ ಆರ್ಥಿಕ ಒಪ್ಪಿಗೆ ನೀಡಿದ್ದರು. ಹೀಗಾಗಿ ಇದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಜನಪರ ಕಾಳಜಿಯೆಂದು ಜೆಡಿಎಸ್ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ನಾಡು ನುಡಿ, ಜಲ ರಕ್ಷಣೆಗಾಗಿ ಸದಾ ಜೆಡಿಎಸ್ ಪಕ್ಷ ಮುಂದಿರಲಿದೆ ಎಂದು ತೆನೆ ನಾಯಕರು ಪ್ರಚಾರ ಮಾಡುತ್ತಿದ್ದು, ಮುಂದೆ ಸ್ತಳೀಯ ಸಮಸ್ಯೆಗಳನ್ನು ಬಗೆಹರಿಸಲು ಜೆಡಿಎಸ್ ಪಕ್ಷವನ್ನೆ ಜನರು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ‌.
Published by:MAshok Kumar
First published: