ಕೋಲಾರದಲ್ಲಿ ಸಾರಿಗೆ ನೌಕರರಿಂದ ಜೈಲ್ ಭರೋ ಚಳವಳಿ; ಪೊಲೀಸರಿಂದ ಲಾಠಿಚಾರ್ಜ್

ಆರನೇ ವೇತನ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲವಾಗಿ ಕೋಲಾರ ಗ್ರಾಮೀಣ ಠಾಣೆಗೆ ಸಾರಿಗೆ ನೌಕರರ ಗುಂಪೊಂದು ನುಗ್ಗಿ ಜೈಲ್ ಭರೋ ಚಳವಳಿಗೆ ಯತ್ನಿಸಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಕೋಲಾರ ಗ್ರಾಮೀಣ ಪೊಲೀಸ್ ಠಾಣೆ

ಕೋಲಾರ ಗ್ರಾಮೀಣ ಪೊಲೀಸ್ ಠಾಣೆ

  • Share this:
ಕೋಲಾರ: ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಪೊಲೀಸರು ಹಾಗು ಸಾರಿಗೆ ನೌಕರರ ಮಧ್ಯೆ ತೀವ್ರ ವಾಗ್ವಾದ ಉಂಟಾಗಿ ಗುಂಪು ಚದುರಿಸಲು ಪೊಲಿಸರು ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿದೆ. ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಕೋಲಾರದ ಸಂಗೊಂಡಹಳ್ಳಿ ಬಳಿಯಿಂದ ಬಸ್ ಡಿಪೋ ಎದುರು ಆಗಮಿಸಿ ಪ್ರತಿಭಟನೆ ನಡೆಸಲು ನೌಕರರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ನೌಕರರಿಗೆ ಪ್ರತಿಭಟನಾ ಜಾಥಾ ಕೈ ಬಿಡುವಂತೆ ಪೊಲೀಸರು ಹಲವು ಬಾರಿ ಮೌಖಿಕವಾಗಿ ಸೂಚನೆ ನೀಡಿದರು. ಆದರೂ ಪೊಲೀಸರ ಮಾತು ಲೆಕ್ಕಿಸದೆ ಪ್ರತಿಭಟನೆಗೆ ಮುಂದಾದ ಪ್ರಮುಖರನ್ನ ಪೊಲೀಸರು ವಶಕ್ಕೆ ಪಡೆದು, ಗ್ರಾಮಾಂತರ ಠಾಣೆಗೆ ಕರೆತಂದಿದ್ದರು. ಪೊಲೀಸರ ಕ್ರಮ ಖಂಡಿಸಿ,  ಪೋಲೀಸ್ ಠಾಣೆ ಎದುರು ನೌಕರರು ಜಮಾಯಿಸಿದರು. ನೌಕರರನ್ನ ದಬ್ಬಾಳಿಕೆಯಿಂದ ಬಂಧಿಸಲಾಗಿದೆ ಎಂದು ಪೊಲೀಸರ ಜೊತೆಗೆ ನೌಕರರು  ವಾಗ್ವಾದ ನಡೆಸಿದರು. ಈ ವೇಳೆ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಸಾರಿಗೆ ನೌಕರರನ್ನ ತಡೆದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರೆನ್ನಲಾಗಿದೆ.

ಪೊಲೀಸರು ಸಾರಿಗೆ ನೌಕರರನ್ನ ಅಟ್ಟಾಡಿಸಿ ಹೊಡೆಯುತ್ತಿದ್ದರೆ, ನೂರಾರು ಮಂದಿ ನೌಕರರು ಸ್ಥಳದಿಂದ ಚೆಲ್ಲಾ ಪಿಲ್ಲಿಯಾಗಿ ಓಡಿಹೋದರು. ಯಾವುದೇ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದಕ್ಕೆ ಪೊಲೀಸರು 25 ಕ್ಕು ಹೆಚ್ಚು ಸಾರಿಗೆ ನೌಕರರನ್ನ ಬಂಧಿಸಿದ್ದು, ಕೆಲಕಾಲ ಕೋಲಾರ ಗ್ರಾಮಾಂತರ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಇನ್ನು ಕೋಲಾರದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಈ ಮಧ್ಯೆ ರಸ್ತೆಗಿಳಿಯುತ್ತಿರುವ ಸರ್ಕಾರಿ ಬಸ್​ಗಳ‌ ಸಂಖ್ಯೆಯೂ ಗಣನೀಯವಾಗಿ ಏರಿಕೆ ಆಗುತ್ತಿದ್ದು, 100 ಕ್ಕೂ  ಹೆಚ್ಚು ಬಸ್​ಗಳು ಜಿಲ್ಲೆಯಲ್ಲಿ ಸಂಚರಿಸುತ್ತಿದೆ. ಈವರೆಗೂ ಕೆಲಸಕ್ಕೆ ಬಾರದೆ ಮುಷ್ಕರ ನಡೆಸಲು ಕಾರಣರಾದ 11 ಮಂದಿಯನ್ನ ಕೆಲಸದಿಂದ ವಜಾ ಮಾಡಲಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಕಣ್ಣೀರು ಹಾಕುತ್ತಾ ಕುಳಿತಿದ್ದ ಬಾಗಲಕೋಟೆ ಅಜ್ಜಿ; ಯೋಧನ ಸಮಯ ಪ್ರಜ್ಞೆಯಿಂದ ಕರುಳು ಬಳ್ಳಿ ಸೇರಿದ ಹಿರಿಯ ಜೀವ

ಖಾಸಗಿ ಬಸ್​ಗಳು ಖಾಲಿ ಖಾಲಿ:

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ, ಕೋಲಾರ ಜಿಲ್ಲೆಯಾದ್ಯಂತ ಜನರು ನಾನಾ ಕಷ್ಟಗಳನ್ನು ಪಡುವಂತಾಗಿದೆ, ಈ ಮಧ್ಯೆ ಸರ್ಕಾರಿ ಬಸ್​ಗಳನ್ನೇ ಅವಲಂಬಿಸಿದ್ದ ಜನರು, ಇದೀಗ ಮಿನಿ ಬಸ್, ಆಟೋ ಸೇರಿದಂತೆ ಸಣ್ಣ ಪುಟ್ಟ ವಾಹನಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಬೆಂಗಳೂರಿಗೆ ಹೋಗಿ ಬರಲು ರೈಲು ವ್ಯವಸ್ಥೆ ಇರುವುದರಿಂದ ಖಾಸಗಿ ಬಸ್​ಗಳು ನಿರ್ದಿಷ್ಟ ಸಮಯ ಹೊರತಾಗಿ ಮಿಕ್ಕಂತೆ ಖಾಲಿ ಖಾಲಿ ಓಡಾಡುತ್ತಿವೆ.

ಇದೇ ವೇಳೆ, ಪೊಲೀಸರ ಲಾಠೀ ಚಾರ್ಜ್ ಕ್ರಮವನ್ನ ಜಿಲ್ಲೆಯ ರಾಜಕೀಯ ಮುಖಂಡರು ಖಂಡಿಸಿದ್ದಾರೆ. ಸರ್ಕಾರ ಪೊಲೀಸರ ಮೂಲಕ ದಬ್ಬಾಳಿಕೆ ನಡೆಸುತ್ತಿದೆ ಎಂದು ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್ ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಸಾರಿಗೆ ನೌಕರರ ಬಸ್ ಮುಷ್ಕರ ಬಿಸಿ ಕೂಲಿ ಕಾರ್ಮಿಕರಿಗೆ ತಟ್ಟಿದ್ದು, ಅನಿವಾರ್ಯವಾಗಿ ಹೆಚ್ಚುವರಿ ಹಣ ನೀಡಿ ಖಾಸಗಿ ಸಾರಿಗೆಯನ್ನ ಅವಲಂಬಿಸಿದ್ದಾರೆ. ಸರ್ಕಾರ ಆದಷ್ಟು ಬೇಗ ಸಾರಿಗೆ ನೌಕರರ ಮುಷ್ಕರ ವಿಚಾರವನ್ನ ಬಗೆಹರಿಸಲು ಎಂದು‌ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದೇ ವೇಳೆ, ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದ ಬಗ್ಗೆ ನಿನ್ನೆ ಉಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಸಾರಿಗೆ ನೌಕರರ ಬೇಡಿಕೆ ನ್ಯಾಯಸಮ್ಮತವಾಗಿದೆಯಾ ಇಲ್ಲವಾ ಎಂಬ ಪ್ರಶ್ನೆಗಿಂತ ಈಗ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಷ್ಕರ ತರವಲ್ಲ. ಇದು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ಈಗಾಗಲೇ ಒತ್ತಡದಲ್ಲಿರುವ ನಾಗರಿಕರ ಮೇಲೆ ಇನ್ನಷ್ಟು ಒತ್ತಡ ಹಾಕುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವರದಿ: ರಘುರಾಜ್
Published by:Vijayasarthy SN
First published: