ತುಪ್ಪ ಬೇಕಾ ತುಪ್ಪ?; ಕೋಲಾರ ಹಾಲು ಒಕ್ಕೂಟದಲ್ಲಿ 10 ಲಕ್ಷ ರೂಪಾಯಿಗೂ ಅಧಿಕ ಬೆಲೆಯ ತುಪ್ಪ ಕಳ್ಳತನ, ಸಿಬ್ಬಂದಿಯೇ ಶಾಮೀಲು !

ಕೋಲಾರ ಹಾಲು ಒಕ್ಕೂಟದ ಕೇಂದ್ರ ಕಚೇರಿಯ ತುಪ್ಪ ಉತ್ಪಾದನಾ ಘಟಕದಿಂದ ಸುಮಾರು 10,25,000 ರೂಪಾಯಿ ಬೆಲೆ ಬಾಳುವ 200 ಬಾಕ್ಸ್​  ಅಂದರೆ 2400 ಲೀಟರ್​ ತುಪ್ಪವನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಕೋಮುಲ್ ಕಚೇರಿ

ಕೋಮುಲ್ ಕಚೇರಿ

  • Share this:
ಕೋಲಾರ(ಏಪ್ರಿಲ್ 02): ಅತಿಹೆಚ್ಚು ಹಾಲು ಉತ್ಪಾದನೆಯಲ್ಲಿ  ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೋಮುಲ್ ಸಂಸ್ಥೆ ಮುಂದಿದೆ.   ಹಾಲು ಉತ್ಪಾದಕರ ಶ್ರಮದಿಂದಲೇ ನಡೆಯುತ್ತಿರುವ ಸಹಕಾರಿ ಸಂಸ್ಥೆಯಲ್ಲಿ ಒಕ್ಕೂಟವು ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದು, ಇದನ್ನು ನಂಬಿ ಸಾವಿರಾರು ರೈತ ಕುಟುಂಬಗಳು ಜೀವನ ನಡೆಸುತ್ತಿವೆ. ಹೀಗಿರುವಾಗ ಇಂಥಾ ಕಡೆ ಕೆಲಸ ಮಾಡುವ ಸಿಬ್ಬಂದಿಗಳೇ ಹಾಲು ಒಕ್ಕೂಟದಲ್ಲಿ ಉತ್ಪಾದನೆ ಮಾಡುವ ಉತ್ತಮ ಗುಣಮಟ್ಟದ ತುಪ್ಪವನ್ನು  ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೇ  ಮಾರ್ಚ್​ 17 ರಂದು ಇಲ್ಲಿನ ಮೂರು ಸಿಬ್ಬಂದಿಗಳು ಮಸಲತ್ತು ಮಾಡಿ  ಕೋಲಾರ ಹಾಲು ಒಕ್ಕೂಟದ ಕೇಂದ್ರ ಕಚೇರಿಯ ತುಪ್ಪ ಉತ್ಪಾದನಾ ಘಟಕದಿಂದ ಸುಮಾರು 10,25,000 ರೂಪಾಯಿ ಬೆಲೆ ಬಾಳುವ 200 ಬಾಕ್ಸ್​  ಅಂದರೆ 2400 ಲೀಟರ್​ ತುಪ್ಪವನ್ನು ಕಳ್ಳತನ ಮಾಡಿರುವುದು ಮಾರ್ಚ್​ 30 ರಂದು ಬೆಳಕಿಗೆ ಬಂದಿದೆ.

ಇದರಲ್ಲಿ  ಪ್ರಮುಖವಾಗಿ ಡ್ರೈವರ್​ ಗಜೇಂದ್ರ, ಗುತ್ತಿಗೆ ಕಾರ್ಮಿಕ ಪವನ್​ ಕುಮಾರ್​, ಹಾಗೂ ಖಾಯಂ ನೌಕರ ಕಿರಣ್​ ಕುಮಾರ್​ ಕಳ್ಳತನದಲ್ಲಿ  ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆ ಮೂರು ಜನರ ವಿರುದ್ದವು ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಗೆ ಒಕ್ಕೂಟದಿಂದ ದೂರು  ನೀಡಲಾಗಿದೆ.

ಕೋಲಾರ ಹಾಲು ಒಕ್ಕೂಟ ಕೋಮುಲ್ ನಲ್ಲಿ ಉತ್ಪಾದನೆಯಾಗುವ ಗುಣಮಟ್ಟದ ತುಪ್ಪಕ್ಕೆ ವಿಶೇಷ ಬೇಡಿಕೆ ಇದೆ. ಇಲ್ಲಿಯ ತುಪ್ಪ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರು ಮಾಡೋದಕ್ಕೂ ಸರಬರಾಜು ಮಾಡಲಾಗುತ್ತದೆ. ಹೀಗೆ ಪ್ರಸಿದ್ದಿ ಪಡೆದಿರುವ ತುಪ್ಪಕ್ಕೆ ಎಲ್ಲೆಡೆ ಬೇಡಿಕೆ ಹೆಚ್ಚು. ಇಂಥ ತುಪ್ಪವನ್ನು ಕಳ್ಳತನ ಮಾಡುತ್ತಿದ್ದಾರೆ ಅಂದರೆ ಅದು ಅಷ್ಟು ಸುಲಭದ ಕೆಲಸವಲ್ಲ.  ಯಾಕೆಂದರೆ ಇಡೀ ಕೋಮುಲ್ ಸಂಸ್ಥೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ,  ಜೊತೆಗೆ ಪ್ರತ್ಯೇಕ ಸೆಕ್ಯೂರಿಟಿ ಸಿಬ್ಬಂದಿ ಇದ್ದಾರೆ. ಇಷ್ಟೆಲ್ಲಾ ಇದ್ದಗ್ಯೂ ಕಳ್ಳತನ ನಡೆದಿದೆ ಎಂದರೆ ಇದು ಚಾಣಾಕ್ಷರೇ ಮಾಡಿರಬೇಕು ಎಂದು ತಿಳಿಯಿತು.

ಕಳ್ಳತನ ನಡೆಯುವ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮರಾವನ್ನು ಆಫ್​ ಮಾಡಿ ತುಪ್ಪವನ್ನು ಕಳ್ಳತನ ಮಾಡಿಕೊಂಡು  ಹೋಗಿದ್ದಾರೆ ಅಂದರೆ,  ಇದು ಕೇವಲ ಒಬ್ಬರಿಂದ ಮಾಡಲು ಸಾಧ್ಯವಿಲ್ಲ,  ಇದರಲ್ಲಿ ಅಧಿಕಾರಿಗಳ ಕೈವಾಡವಿದೆ ಅನ್ನೋ ಅನುಮಾನ ಕೇಳಿಬರ್ತಿದೆ. ಆಡಳಿತ ಮಂಡಳಿಯು ಅಕ್ರಮದ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಿದ್ದು, ಅದರಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೋಮುಲ್ ಸಂಸ್ಥೆ ಅಧ್ಯಕ್ಷ ಶಾಸಕ ಕೆ ವೈ ನಂಜೇಗೌಡ,  ಅಕ್ರಮದಲ್ಲಿ ಯಾವುದೇ ರಾಜಿ ಪ್ರಶ್ನೆಯಿಲ್ಲ.  ಅದಕ್ಕಾಗಿಯೇ ಸಂಸ್ಥೆಯ ಎಂ.ಡಿ.ಯಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

ಕೋಮುಲ್ ಸಂಸ್ಥೆ ಎಂಡಿ ತಿಪ್ಪಾರೆಡ್ಡಿಯಿಂದ ದೂರು ದಾಖಲು: ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿರುವ ಒಕ್ಕೂಟದ ಎಂಡಿ ತಿಪ್ಪಾರೆಡ್ಡಿ, ಡೈರಿಯಲ್ಲಿ ಕಳುವಾಗಿದ್ದ 200 ಬಾಕ್ಸ್ ತುಪ್ಪದ ಪೈಕಿ, ಆರೋಪಿ ಚಾಲಕ ಗಜೇಂದ್ರ ಅವರ ನಿವಾಸದಲ್ಲಿ, 140 ಬಾಕ್ಸ್ ಇದ್ದ ಬಗ್ಗೆ ಮಾಹಿತಿ ಪಡೆದುಕೊಂಡು ವಾಪಾಸ್ ಸಂಸ್ಥೆಗೆ ನೀಡಲಾಗಿದೆ, ಇನ್ನುಳಿದ 60 ಬಾಕ್ಸಗಳಲ್ಲಿನ ತುಪ್ಪದ ಒಟ್ಟು ಮೌಲ್ಯ, 3 ಲಕ್ಷಕ್ಕೂ ಹೆಚ್ಚಿದ್ದು, ಇದನ್ನು ವಾಪಾಸ್ ನೀಡದೆ ಇದ್ದುದ್ದಕ್ಕೆ ದೂರು ನೀಡುತ್ತಿದ್ದು ಮೂವರ ವಿರುದ್ದವೂ ಕಾನೂನು ಕ್ರಮ ಜರುಗಿಸುವಂತೆ ತಮ್ಮ ದೂರಿನಲ್ಲಿ ಕೋರಿದ್ದಾರೆ.  ಇನ್ನು ಸಂಸ್ಥೆಯಲ್ಲಿ ಖಾಸಗಿ ಸೆಕ್ಯೂರಿಟಿ ಭದ್ರತೆಯು ಬಿಗಿಯಾಗಿದ್ದು,  ಪ್ರತಿಸಲ ಒಳಗೆ ಹೊರಗೆ ಹೋಗಿ ಬರೋರನ್ನ ತಪಾಸಣೆ ಮಾಡಿಯೇ ಬಿಡಲಾಗುತ್ತಿದೆ. ಇನ್ನು ವಾಹನಗಳು ಹೊರಹೋಗುವುದಕ್ಕೂ ಮೊದಲು ಸಂಬಂಧ ಪಟ್ಟ ದಾಖಲೆಯನ್ನ ನೀಡಬೇಕಾಗಿದೆ. ಆದರೂ ಇಷ್ಟು ಸಂಖ್ಯೆಯ  ತಪ್ಪದ ಬಾಕ್ಸ್ ಗಳು ತಪಾಸಣೆಯೆ ಇಲ್ಲದೆ ಹೊರಗೋಗಿದೆ ಎನ್ನುವುದಾದರೆ, ಇದರಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸೆಕ್ಯುರಿಟಿ ನೌಕರರು ಶಾಮೀಲಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದುಬರುವ ವಿಚಾರವಾಗಿದೆ. ಹೀಗಾಗಿ ತುಪ್ಪ ಕದ್ದವರ ಮೇಲೆ ತನಿಖೆ ಮಾಡುವ ಜೊತೆಗೆ ಸಂಸ್ಥೆಯ ಸಿಬ್ಬಂದಿಯೇ ಶಾಮೀಲಾಗಿರುವ ಬಗ್ಗೆಯು ಕೂಲಂಕುಷವಾಗಿ ತನಿಖೆ ನಡೆಯಬೇಕಿದೆ.

ಒಟ್ಟಾರೆ ರೈತರ ಶ್ರಮದಿಂದ ಕಟ್ಟಿ ಬೆಳೆಸಲಾಗಿರುವ ಹಾಲು ಒಕ್ಕೂಟದಲ್ಲಿ ಕೆಲಸ ಪಡೆದು ಜೀವನ  ಮಾಡುತ್ತಿರುವುದು ಅಲ್ಲದೆ , ತಿಂದ ಮನೆಗೆ ಕನ್ನ ಹಾಕುವ  ಮೂಲಕ ಸಹಕಾರಿ ಒಕ್ಕೂಟವನ್ನು ಹಾಳುವ ಮಾಡಲು ಹೊರಟಿರುವ ಇಂಥಹ ಕಳ್ಳ ಖದೀಮರಿಗೆ,   ಹಾಗೂ ಇವರ ಬೆನ್ನೆಲುಬಾಗಿ ನಿಂತಿರುವವರಿಗೆ ತಕ್ಕ ಶಿಕ್ಷೆಯಾಗಬೇಕಿದೆ ಎಂಬುದು ಎಲ್ಲರ ಆಗ್ರಹವಾಗಿದೆ .
Published by:Soumya KN
First published: