ಕೋಲಾರ(ಏಪ್ರಿಲ್ 05): ದೇಶದಲ್ಲಿ ದಿನೇ ದಿನೇ ದಿನಬಳಕೆ ವಸ್ತುಗಳು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. ಈ ಮಧ್ಯೆ ರೈತರು ಬೆಳೆದಿರುವ ಬೆಳೆಗಳನ್ನ ಮಾರುಕಟ್ಟೆಯಲ್ಲಿ ಕೇಳೊರಿಲ್ಲದಂತೆ ಆಗಿದೆ. ಈಗಾಗಲೇ ತರಕಾರಿ ಬೆಲೆಗಳು ಇಳಿಮುಖವಾಗಿದ್ದು ಇದೀಗ ದೇವರ ಪೂಜೆಗೆ ಬಳಸುವ ಹೂವಿನ ಬೆಲೆ ಕೂಡಾ ಇಳಿಕೆಯಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭದ ಮಧ್ಯೆ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ರೈತರಿಗೆ ಮತ್ತೊಮ್ಮೆ ಬೆಲೆ ಇಳಿಕೆ ಬಿಸಿ ಜೋರಾಗಿ ತಟ್ಟುತ್ತಿದೆ. ಜಿಲ್ಲೆಯಲ್ಲಿ ಚೆಂಡು ಹೂ ಮತ್ತು ಕಾಪ್ಸಿಕಂ ತರಕಾರಿಯ ಬೆಲೆ ಪಾತಾಳಕ್ಕೆ ಕುಸಿದಿದ್ದು ಬೆಳೆಯನ್ನೆ ಕಟಾವು ಮಾಡದಿರಲು ರೈತರು ತೀರ್ಮಾನಿಸಿದ್ದಾರೆ. ಮಾಲೂರು ತಾಲೂಕಿನ ಭುವನಹಳ್ಳಿ ಗ್ರಾಮದ ರೈತ ವೆಂಕಟೇಶಪ್ಪ ಎನ್ನುವವರು ಇರೋ ಬರೋ ಚಿನ್ನ ಮತ್ತು ಬೆಳ್ಳಿಯನ್ನ ಗಿರವಿ ಅಂಗಡಿಯಲ್ಲಿ ಅಡವಿಟ್ಟು ಒಂದೂವರೆ ಎಕರೆಯಲ್ಲಿ ಚೆಂಡು ಹೂ ಮತ್ತು ಒಂದು ಎಕರೆಯ ಪಾಲಿಹೌಸ್ನಲ್ಲಿ ಕಾಪ್ಸಿಕಂ ಬೆಳೆದಿದ್ದು, ದಿಡೀರ್ ಬೆಲೆ ಕುಸಿತದಿಂದ ರೈತ ವೆಂಟಕೇಶಪ್ಪ ಆಘಾತಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯ ಹೂ ಮಾರುಕಟ್ಟೆಯಲ್ಲಿ 50 ಕೆಜಿಯ ಒಂದು ಮೂಟೆ ಚೆಂಡು ಹೂಗೆ ಸದ್ಯ 50 ರೂಪಾಯಿ ಬೆಲೆಯಿದ್ದು, ಹಾಕಿದ ಬಂಡವಾಳದ ಒಂದು ಭಾಗವು ರೈತರಿಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕ್ಯಾಪ್ಸಿಕಂ ತರಕಾರಿ ಕೂಡಾ ಒಂದು ಕೆಜಿಗೆ 15 ರಿಂದ 16 ರೂಪಾಯಿ ಇದ್ದು, ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವ ವೆಚ್ಚವೂ ಸಿಗೋದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರೈತರಾದ ವೆಂಕಟೇಶಪ್ಪ ಸರ್ಕಾರ ಕೂಡಲೇ ಬೆಲೆ ಕುಸಿತ ಆಗಿರುವ ಹೂ ಮತ್ತು ತರಕಾರಿಗೆ ಬೆಂಬಲ ಬೆಲೆ ಘೋಷಿಸಿ ಸಹಾಯಕ್ಕೆ ಧಾವಿಸಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಸ್ಥಳೀಯರು ಸರ್ಕಾರ ರೈತರಿಗೆ ವಿಶೇಷ ನೆರವು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕೊರೋನಾ ಎರಡನೇ ಅಲೆ ಮಧ್ಯೆ ರೈತರ ಬೆಳೆಗಳಿಗೂ ಬೆಲೆಯಿಲ್ಲದಂತಾಗಿದ್ದು, ಬಂಡವಾಳ ಹಾಕಿದ ರೈತರು ದಿಕ್ಕೇ ತೋಚುತ್ತಿಲ್ಲ ಎನ್ನುತ್ತಿದ್ದಾರೆ. ಬೇಸಿಗೆಯಾದರೂ ಮಾರುಕಟ್ಟೆಗೆ ಎಥೇಚ್ಚವಾಗಿ ತರಕಾರಿಗಳು ಆಗಮಿಸುತ್ತಿದೆ ಹೀಗಾಗಿ, ಸಾಮಾನ್ಯವಾಗಿ ಬೇಡಿಕೆ ಕುಸಿದು ಬೆಲೆಯೂ ಕುಸಿತವಾಗಿದೆ ಎನ್ನುವುದು ವ್ಯಾಪಾರಸ್ತರ ಮಾತು, ಇನ್ನು ಜಿಲ್ಲೆಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಟೊಮೆಟೊ ಬೆಳೆ ಹಾಕಿರುವ ರೈತರು, ಮುಂದಿನ ಜೂನ್ ತಿಂಗಳಲ್ಲಿ ಇಳುವರಿ ನಿರೀಕ್ಷೆಯಲ್ಲಿ ಇದ್ದಾರೆ.
ಜಿಲ್ಲೆಯಲ್ಲಿ ಕೆಸಿ ವ್ಯಾಲಿ ಯೋಜನೆ ನೀರು ಬಂದಾಗಿನಿಂದ, ಕೋಲಾರ ಮತ್ತು ಶ್ರೀನಿವಾಸಪುರ ತಾಲೂಕಿನ ಕೆಲವೆಡೆ ಅಂತರ್ಜಲ ಮಟ್ಟ ವೃದ್ದಿಯಾಗಿದ್ದು, ನೀರು ಸುಲಭವಾಗಿ ಲಭಿಸುತ್ತಿರುವ ಹಿನ್ನಲೆ ಸಾಲ ಸೋಲ ಮಾಡಿ ರೈತರು ಟೊಮೆಟೊ ಮೇಲೆ ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿದ್ದಾರೆ. ಸದ್ಯ ಟೊಮೆಟೊ ಬೆಲೆಯೂ ಪಾತಾಳಕ್ಕೆ ಕುಸಿದಿದ್ದು, ಮಾರುಕಟ್ಟೆಗೆ ಬೆಳೆ ತಂದಿರುವ ರೈತರಿಗೆ ಸರಕು ಸಾಗಾಣಿಕೆಯ ವೆಚ್ಚವೂ ಸಿಗುತ್ತಿಲ್ಲ ಎನ್ನುವದು ಆಘಾತಕಾರಿ ಬೆಳವಣಿಗೆಯಾಗಿದೆ. ಹಾಕಿದ ಬಂಡವಾಳವೂ ವಾಪಾಸ್ ಬಾರದೆ ಹೋದಲ್ಲಿ ಮುಂದೆ ಕೃಷಿ ಸಹವಾಸವೇ ಬೇಡ ಎಂದು ಕೆಲ ರೈತರು ಹೇಳುತ್ತಿದ್ದು, ಮಾಡಿದ ಸಾಲವನ್ನ ಹೇಗಪ್ಪಾ ವಾಪಾಸ್ ನೀಡುವುದು ಎಂದು ಚಿಂತಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ