Kolar JDS- ಕೊಚ್ಚೆ ನೀರಿನ ಹೆಸರಲ್ಲಿ ಪೊಲಿಟಿಕ್ಸ್; ಕುಮಾರಸ್ವಾಮಿ ಹೇಳಿಕೆಗೆ ಜೆಡಿಎಸ್ ಶಾಸಕ ಆಕ್ಷೇಪ

HD Kumaraswamy vs Srinivasa Gowda- ಕೋಲಾರಕ್ಕೆ ಕೆಸಿ ವ್ಯಾಲಿಯ ಕೊಚ್ಚೆ ನೀರನ್ನ ಹರಿಸಿದ್ದೇ ರಮೇಶ್ ಕುಮಾರ್ ಸಾಧನೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಆಕ್ಷೇಪ ವ್ಯಕ್ತಪಡಿಸಿದ್ಧಾರೆ.

ಜೆಡಿಎಸ್ ಶಾಸಕ ಶ್ರೀನಿವಾಸಗೌಡ

ಜೆಡಿಎಸ್ ಶಾಸಕ ಶ್ರೀನಿವಾಸಗೌಡ

  • Share this:
ಕೋಲಾರ: ಜಿಲ್ಲೆಗೆ ಕೊಚ್ಚೆ ನೀರನ್ನ ಹರಿಸಲಾಗುತ್ತಿದೆ ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರೇ ಕಿಡಿಕಾರಿದ್ದಾರೆ. ಕಳೆದ ತಿಂಗಳ ಆಗಸ್ಟ್ 18 ರಂದು ಕೋಲಾರ ನಗರದಲ್ಲಿ ಪಕ್ಷದ ಮುಖಂಡರ ಮನೆಯ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಶಾಸಕ ಶ್ರೀನಿವಾಸಗೌಡ ಸಮ್ಮುಖದಲ್ಲೇ ರಮೇಶ್ ಕುಮಾರ್ ಅವರನ್ನ  ಟೀಕಿಸಿದ್ದರು. ಕೋಲಾರಕ್ಕೆ ಕೊಚ್ಚಿ ನೀರನ್ನ ಹರಿಸಿದ್ದೇ ರಮೇಶ್ ಕುಮಾರ್ ಸಾಧನೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಕೋಲಾರದ ಅಗ್ರಹಾರ ಕೆರೆ ಬಳಿ ರಮೇಶ್ ಕುಮಾರ್ ಸಮ್ಮುಖದಲ್ಲೇ ಪಕ್ಷದ ನಾಯಕ ಕುಮಾರಸ್ವಾಮಿ ಅವರನ್ನೇ ಶ್ರೀನಿವಾಸಗೌಡ ಪ್ರಶ್ನಿಸಿದ್ದಾರೆ.

ಕೋಲಾರಕ್ಕೆ ಕೊಳಚೆ ನೀರು ಹರಿಯುತ್ತಿಲ್ಲ ಎಂದಿರುವ ಶ್ರೀನಿವಾಸಗೌಡ, ನಾನೇ ಕೆಸಿ ವ್ಯಾಲಿ ನೀರನ್ನ ಕುಡಿದಿದ್ದೇನೆ. ಈ ಮಾತನ್ನ ಕುಮಾರಸ್ವಾಮಿಗೂ ಹೇಳಿದ್ದೇನೆ. ಎಲ್ಲರು ನೋಡಿದ್ದಾರೆ. ಕುಮಾರಸ್ವಾಮಿ ನಮ್ಮ ನಾಯಕರು. ಆದರೆ ನಂಗೆ ಪಕ್ಷ ಮುಖ್ಯವಲ್ಲ, ರೈತರ ಅಭಿವೃದ್ದಿಯೇ ಮುಖ್ಯ. ಹೀಗಾಗಿ ಕುಮಾರಸ್ವಾಮಿ ಹಾಗೆ ಹೇಳಬಾರದಿತ್ತು. ಆ ಮಾತು ಅವರು ಹೇಳುವ ಅಗತ್ಯತೆ ಏನಿತ್ತು ಎಂದು ಶ್ರೀನಿವಾಸಗೌಡ ಪ್ರಶ್ನೆಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೀರು ಕುಡಿದಿದ್ದು ನಿಜವೋ, ಸುಳ್ಳೋ ಗೊತ್ತಿಲ್ಲ:

ಶ್ರೀನಿವಾಸಗೌಡ ಹೇಳಿಕೆಗೆ ಜೆಡಿಎಸ್ ಎಮ್ ಎಲ್ ಸಿ ಇಂಚರ ಗೋವಿಂದರಾಜು ಆಕ್ಪೇಪಿಸಿದ್ದಾರೆ. ಶ್ರೀನಿವಾಸಗೌಡರಿಗೆ ಬಿ ಪಾರ್ಮ್ ನೀಡಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದು ಜೆಡಿಎಸ್ ಪಕ್ಷ. ಆದರೆ ಯಾಕೆ ಪಕ್ಷದ ನಾಯಕ ಕುಮಾರಸ್ವಾಮಿ ವಿರುದ್ದವೇ ಹೇಳಿಕೆ ನೀಡಿದ್ದಾರೊ ಅರ್ಥವಾಗುತ್ತಿಲ್ಲ. ಕುಮಾರಸ್ವಾಮಿ ಅವರು ಕೋಲಾರದಲ್ಲಿ ಕೆಸಿ ವ್ಯಾಲಿ ನೀರಿನ ವಿಚಾರವಾಗಿ ಮಾತನಾಡಿದ ದಿನ ಶ್ರೀನಿವಾಸಗೌಡ ಅವರು ಸುಮ್ಮನೇ ಇದ್ದರು. ಆದರೆ ಅಂದೇ ನಾನು ಆ ನೀರು ಕುಡಿದಿದ್ದಾಗಿ ಕುಮಾರಸ್ವಾಮಿಗೆ ಹೇಳಿದ್ದಾಗಿ ಶ್ರೀನಿವಾಸಗೌಡ ಹೇಳಿಕೆ ನೀಡಿದ್ದಾರೆ. ಆದರೆ ನರಸಾಪುರ ಕೆರೆಯಲ್ಲಿ ಶಾಸಕ ಶ್ರೀನಿವಾಸಗೌಡ ಕೆಸಿ ವ್ಯಾಲಿ ನೀರು ಕುಡಿದರೋ ಇಲ್ಲವೋ, ಕುಡಿದಂತೆ ಸುಮ್ಮನೆ ತೋರಿಸಿಕೊಂಡರೊ ಗೊತ್ತಿಲ್ಲ ಎಂದು ಇಂಚರ ಗೋವಿಂದರಾಜು ಕಿಡಿಕಾರಿದ್ದಾರೆ.

ಇನ್ನು, ಶಾಸಕ ಶ್ರೀನಿವಾಸಗೌಡ ಜೆಡಿಎಸ್ ತೊರೆಯುವ ಬಗ್ಗೆ ಮಾತನಾಡಿದ ಗೋವಿಂದರಾಜು, ಪಕ್ಷದಿಂದ ಯಾರು ಹೋದರೂ ನಷ್ಟವಿಲ್ಲ. ಪಕ್ಷ ಸಂಘಟನೆ ಎಂದಿನಂತೆ ನಡೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Robber lodges Complaint: ಎಲ್ರೂ ಸೇರಿ ನನ್ನ ಹೊಡೆದ್ರು: ಜನರ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟ ಕಳ್ಳ

ಜೆಡಿಎಸ್ ಪಕ್ಷ ಬಿಡಲ್ಲ- ಶ್ರೀನಿವಾಸಗೌಡ

ಕುಮಾರಸ್ವಾಮಿ ವಿರುದ್ದ ನೀಡಿರುವ ಹೇಳಿಕೆ ಬಗ್ಗೆ ಮತ್ತೊಮ್ಮೆ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಶ್ರೀನಿವಾಸಗೌಡ, ಕೆಸಿ ವ್ಯಾಲಿ ನೀರು ಕೊಳಚೆ ನೀರಲ್ಲ ಎಂದು ಕುಮಾರಸ್ವಾಮಿ ಗೆ ಹೇಳಿದ್ದೇನೆ. ಅದು ಬಿಟ್ಟರೆ ಬೇರೆ ಏನಿಲ್ಲ ಎಂದು ವಿವಾದಕ್ಕೆ ತೇಪೆ ಹಾಕಲು ಯತ್ನಿಸಿದ್ದಾರೆ.

ನಾನು ಸದ್ಯ ಜೆಡಿಎಸ್ ಪಕ್ಷ ಬಿಡುವ ಪ್ರಶ್ನೆಯಿಲ್ಲ. ಆದರೆ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಈ ಮೊದಲು ಕಾಂಗ್ರೆಸ್​ನಲ್ಲಿ ಶಾಸಕನಾಗಿ ಸಚಿವನಾಗಿದ್ದೆ. ಮುಂದಿನ ರಾಜಕೀಯ ನಿರ್ಧಾರ ವಿಚಾರವಾಗಿ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ಚುನಾವಣೆಗೆ ಇನ್ನೂ ಸಮಯವಿದೆ, ಮುಂದೆ ನೋಡೋಣ ಎಂದು ಶ್ರೀನಿವಾಸಗೌಡ ಹೇಳಿದ್ದಾರೆ.

ಒಟ್ಟಿನಲ್ಲಿ ಕೋಲಾರ ಜೆಡಿಎಸ್​ನಲ್ಲಿ ಹಾವು ಏಣಿ ಆಟ ನಡೆಯುತ್ತಿದ್ದು, ಇಷ್ಟುದಿನ ಶಾಸಕ ಶ್ರೀನಿವಾಸಗೌಡ ಜೆಡಿಎಸ್ ಬಿಡುವ ಕುರಿತು ಚರ್ಚೆಗಳು ನಡೆಯುತ್ತಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸಗೌಡ ತಾನು ಪಕ್ಷ ಬಿಡಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವರದಿ: ರಘುರಾಜ್
Published by:Vijayasarthy SN
First published: