ಬೆಳಗಾವಿಯಲ್ಲಿ ಪೊಲೀಸರ ವಶಕ್ಕೆ ಕೋಡಿಹಳ್ಳಿ ಚಂದ್ರಶೇಖರ್; ಇದು ದಮನ ನೀತಿ ಎಂದ ಹೋರಾಟಗಾರರು

ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಸಾರಿಗೆ ಮುಖಂಡರ ಜೊತೆ ಸಭೆ ನಡೆಸಲು ಕುಂದಾನಗರಿಗೆ ಬಂದಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನ ಬೆಳಗಾವಿ ಕ್ಯಾಂಪ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೋರಾಟ ಹತ್ತಿಕ್ಕುವ ಸರ್ಕಾರದ ಈ ನಡೆಯನ್ನ ಸಾರಿಗೆ ಹೋರಾಟಗಾರರು ಖಂಡಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಅವರನ್ನ ಬೆಳಗಾವಿ ಕ್ಯಾಂಪ್ ಪೊಲೀಸರು ವಶಕ್ಕೆ ಪಡೆದುಕೊಂಡರು

ಕೋಡಿಹಳ್ಳಿ ಚಂದ್ರಶೇಖರ್ ಅವರನ್ನ ಬೆಳಗಾವಿ ಕ್ಯಾಂಪ್ ಪೊಲೀಸರು ವಶಕ್ಕೆ ಪಡೆದುಕೊಂಡರು

  • Share this:
ಬೆಳಗಾವಿ(ಏ. 10): ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿರುವ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನ ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರಿಗೆ ನೌಕರರ ಮುಷ್ಕರವನ್ನು ಇನ್ನೂ ತೀವ್ರಮಟ್ಟಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಬೆಳಗಾವಿ ಮತ್ತು ಕಲಬುರ್ಗಿಯ ಸಾರಿಗೆ ಮುಖಂಡರೊಂದಿಗೆ ಸಭೆ ನಡೆಸಲು ಕೋಡಿಹಳ್ಳಿ ಚಂದ್ರಶೇಖರ್ ಬೆಳಗಾವಿಗೆ ಆಗಮಿಸಿದ್ದರು. ಅವರು ತಂಗಿದ್ದ ಹೋಟೆಲ್​ಗೆ ಬಂದು ಅಲ್ಲಿಯೇ ಬೆಳಗಾವಿ ಕ್ಯಾಂಪ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಗೆಯೇ ಕೋಡಿಹಳ್ಳಿ ಚಂದ್ರಶೇಖರ್ ಸುವರ್ಣಸೌಧದ ಬಳಿ ನಡೆಸಬೇಕಿದ್ದ ಸಭೆಗೆ ಬಂದಿದ್ದ ಸಾರಿಗೆ ನೌಕರರನ್ನೂ ಕೂಡ ಹಿರೇಬಾಗೇವಾಡಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಕ್ರಮವನ್ನು ಸಾರಿಗೆ ಹೋರಾಟಗಾರರು ತೀವ್ರವಾಗಿ ಖಂಡಿಸಿದ್ದಾರೆ. ಇದು ಹೋರಾಟ ಹತ್ತಿಕ್ಕುವ ದಮನಕಾರಿ ನೀತಿ ಎಂದು ಅವರು ಕಿಡಿಕಾರಿದ್ಧಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ತನ್ನನ್ನ ವಶಕ್ಕೆ ಪಡೆಯಲು ಸಕಾರಣ ಗೊತ್ತಿಲ್ಲ. ಇದು ತಪ್ಪು. ಒಂದು ಚಳವಳಿಯನ್ನು ದಮನ ಮಾಡುವ ನೀತಿ ಇದಾಗಿದೆ. ಇದು ಅಕ್ರಮ. ಯಾವಾಗಲು ವಾಕ್ ಸ್ವಾತಂತ್ರ್ಯ ಹಾಗೂ ಚಳವಳಿಯ ಸ್ವಾತಂತ್ರ್ಯ ಇರಬೇಕು. ಸರ್ಕಾರ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಆದರೂ ಕೂಡ ತಾನು ಸರ್ಕಾರದ ಈ ನಡೆಯನ್ನು ಸ್ವಾಗತ ಮಾಡುತ್ತೇನೆ ಎಂದು ವ್ಯಂಗ್ಯ ಮತ್ತು ಆಕ್ರೋಶದ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: Night Curfew: ಬೆಂಗಳೂರಿನಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜೊತೆಗೆ 144 ಸೆಕ್ಷನ್​ ಜಾರಿ; ಪ್ರಮುಖ ರಸ್ತೆಗಳು, ಮೇಲ್ಸೇತುವೆಗಳು ಬಂದ್

ರಾಜ್ಯ ಸಾರಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಆರ್ ಚಂದ್ರಶೇಖರ್ ಕೂಡ ಈ ಬೆಳವಣಿಗೆಯನ್ನು ಖಂಡಿಸಿದ್ದಾರೆ. ಒಂದು ಶಾಂತಿಯುತ ಹಾಗೂ ಅಹಿಂಸಾ ಮಾರ್ಗದ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ತನ್ನ ಅಧಿಕಾರ ಹಾಗೂ ಶಕ್ತಿ ಎಲ್ಲವನ್ನೂ ಉಪಯೋಗಿಸಿ ಪ್ರಯತ್ನಿಸುತ್ತಿದೆ. ಏನೇ ಮಾಡಿದರೂ ನಮ್ಮ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಮೇಲೆ ಸರ್ಕಾರ ಯಾವತ್ತು ಕಣ್ಣು ತೆರೆದು ನೋಡುತ್ತೋ ಕಾದು ನೋಡುತ್ತೇವೆ ಎಂದು ಆರ್ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ನಮಗೆ ಎಲ್ಲಾ ಸವಲತ್ತುಗಳನ್ನ ಇವತ್ತೇ ಕೊಡಿ ಎಂದು ಕೇಳುತ್ತಿಲ್ಲ. ಸರ್ಕಾರದ ಪರಿಸ್ಥಿತಿ ನಮಗೂ ಅರ್ಥವಾಗುತ್ತದೆ. ಆದರೆ, ಯಾವ ಸೌಲಭ್ಯ ನೀಡದೆ ನಾವು ಕೊಡೋದೇ ಇಷ್ಟು. ನೀವು ಜೀತಪದ್ಧತಿಯಲ್ಲಿ ಇರಬೇಕು ಎಂದರೆ ಹೇಗೆ? ಈ ಮುಷ್ಕರವೇ ಅಂತಿಮವಾಗಲಿ ಎಂಬುದು ನಮ್ಮ ಕಳಕಳಿ. ಮಾತುಕತೆಗೆ ನಾವು ಸದಾ ಸಿದ್ಧವಿದ್ದೇವೆ. ಮಾತುಕತೆಗೆ ಎಲ್ಲಿ ಬರಬೇಕು, ಹೇಗೆ ಬರಬೇಕು, ಎಷ್ಟು ಗಂಟೆಗೆ ಬರಬೇಕು ಎಂದು ಸರ್ಕಾರವೇ ಹೇಳಲಿ. ನಾವು ಮಧ್ಯರಾತ್ರಿ 2 ಗಂಟೆಗೆ ಕರೆದರೂ ಮಾತುಕತೆಗೆ ಸಿದ್ಧವಿದ್ದೇವೆ. ಸಂಧಾನ ಸಫಲ ಆದ ಮರುಕ್ಷಣವೇ ನಮ್ಮೆಲ್ಲಾ ವಾಹನಗಳು ರಸ್ತೆಗೆ ಇಳಿಯುತ್ತವೆ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷರಾದ ಆರ್ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.

ವರದಿ: ಲೋಹಿತ್ ಶಿರೋಳ
Published by:Vijayasarthy SN
First published: