‘ನೀಚಂಗೆ ದೊರೆತನು…’- ಮೈಸೂರಿನಲ್ಲಿ ದೇಗುಲ ಕೆಡವಿದ ವಿಚಾರಕ್ಕೆ ಕೋಡಿಮಠ ಶ್ರೀಗಳಿಂದ ಭವಿಷ್ಯ

Kodimatha Swamiji Predictions- ಒಬ್ಬ ನೀಚನಾದವನಿಗೆ ದೊರೆತನ ಬಂದರೆ, ಹೇಡಿಯಾದವನಿಗೆ ಮಿಲಿಟರಿ ಶಕ್ತಿ ಕೊಟ್ಟರೆ, ದಡ್ಡನೊಬ್ಬ ಗುರುವಾದರೆ ಜಗತ್ತು ಹೇಗಿದ್ದೀತು ಎಂದು ಕೋಲಾರದಲ್ಲಿ ಕೋಡಿಮಠ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೋಡಿಮಠ ಶ್ರೀ

ಕೋಡಿಮಠ ಶ್ರೀ

 • Share this:
  ಕೋಲಾರ: ಮೈಸೂರಿನ ನಂಜನಗೂಡಿನಲ್ಲಿ ಇತ್ತೀಚೆಗೆ ನಡೆಸಲಾದ ಪುರಾತನ ದೇವಸ್ಥಾನ ಕೆಡವಿದ ಪ್ರಕರಣದ ಬಗ್ಗೆ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಖೇದ ವ್ಯಕ್ತಪಡಿಸಿದ್ದಾರೆ. ಹಿಂದೆ ರಾಜ ಮಹಾರಾಜರು ದೇಗುಲ ಕಟ್ಟಿಸುತ್ತಿದ್ದರು. ಈಗಿರುವವರು ದೇಗುಲ ಕೆಡವುತ್ತಿದ್ದಾರೆ. ರಾಜನೇ ತಪ್ಪು ಮಾಡಿದರೆ ಯಾರಿಗೇನೂ ಹೇಳೋಕೆ ಆಗಲ್ಲ. ರಾಜನಿಗೆ ನೈಜವಾದ ಜ್ಞಾನ ಕಡಿಮೆ ಇರಬಹುದು. ಆದರೆ, ಅಜ್ಞಾನ ಇದೆಯೋ ಗೊತ್ತಿಲ್ಲ ಎಂದು ಕೋಡಿ ಶ್ರೀಗಳು ಬೇಸರ ವ್ಯಕ್ತಪಡಿಸಿದರು. “ನೀಚಂಗೆ ದೊರೆತನು, ಹೇಡಿಂಗೆ ಹಿರಿತನು, ಮೂಢಂಗೆ ಗುರುತನು ಜಗದಡಿ ಹೋದ… ಒಬ್ಬ ನೀಚನಾದವನಿಗೆ ದೊರೆತನ ಬಂದರೆ, ಹೇಡಿಯಾದವನಿಗೆ ಮಿಲಿಟರಿ ಶಕ್ತಿ ಕೊಟ್ಟರೆ, ದಡ್ಡನೊಬ್ಬ ಗುರುವಾದರೆ ಹೇಗೆ” ಎಂದು ಹಾಸನದ ಕೋಡಿ ಮಠದ ಶ್ರಿಗಳು ಆಕ್ರೋಶ ಪಟ್ಟರು.

  ಭವಿಷ್ಯ ಹೇಳುವುದಕ್ಕೆ ಬಹಳ ಖ್ಯಾತವಾಗಿರುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ರಾಜ್ಯದಲ್ಲಿ ಅಸ್ಥಿರವಾದ ಸರ್ಕಾರ ಇದೆ, ಕಾದು ನೋಡಿ ಎಂದು ಹೇಳಿ ತಮ್ಮ ಹಿಂದಿನ ಕೆಲ ಭವಿಷ್ಯಗಳು ನಿಜವಾಗಿರುವುದರ ನಿದರ್ಶನ ತೆರೆದಿಟ್ಟರು. ಪಟ್ಟ ಅಳಿಯುತ್ತದೆ, ಸೂತ್ರದಾರ ಸರ್ಕಾರ ನಡೆಸುತ್ತಾರೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಆದರೆ, ಸೂತ್ರದಾರ ಯಡಿಯೂರಪ್ಪನೋ ಅಮಿತ್ ಶಾನೋ ಗೊತ್ತಿಲ್ಲ. ದಸರಾದಿಂದ ಸಂಕ್ರಾಂತಿ ಒಳಗೆ ದೊಡ್ಡ ಅವಘಡ ಆಗಲಿದೆ. ತಾಲಿಬಾನ್​ನಿಂದ ಜಗತ್ತಿಗೆ ನೋವಾಗಲಿದೆ ಎಂದು ನಾನು ಮೊದಲೇ ಹೇಳಿದ್ದೆ. ಅದೂ ನಿಜವಾಗಿದೆ ಎಂದು ಶ್ರೀಗಳು ಹೇಳಿದರು.

  ಮುಂದಿನ ಹತ್ತು ವರ್ಷ ಕಾಲ ರೋಗ ರುಜಿನಗಳು ಈ ವಿಶ್ವವನ್ನು ಬಾಧಿಸುತ್ತವೆ. ಎರಡು ವರ್ಷದಲ್ಲಿ ವಿಶ್ವದೆಲ್ಲೆಡೆ ಜಲಕಂಟಕ ಇದೆ. ಭೂಕುಸಿತದಂಥ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ. ಸಿಡಿಲುಗಳು ಬಡಿದು ಬಹಳ ಜನ ಸಾಯುತ್ತಾರೆ. ಮಕ್ಕಳ ಶಿಕ್ಷಣ ಇನ್ನೂ ಎರಡು ವರ್ಷ ಅನಿಶ್ಚಿತವಾಗಿರುತ್ತದೆ… ವಿಶ್ವ ಭೂಪಟದಲ್ಲಿ ಒಂದು ದೇಶ ಅಳಿಸಿಹೋಗಲಿದೆ. ರಾಜ್ಯದಲ್ಲಿ ಸೂತ್ರಧಾರಿ ಸರ್ಕಾರಿ ಬರಲಿದೆ. ಸಂಕ್ರಾಂತಿ ಒಳಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಡ ಆಗಲಿದೆ. ಕಾರ್ತೀಕ ಮಾಸದವರೆಗೆ ಜಲಕಂಟಕ ಇರುತ್ತದೆ… ಜಗತ್ತಿನಲ್ಲಿ ದೊಡ್ಡ ದೊಡ್ಡ ತಲೆಗಳು ಉರುಳಲಿವೆ. ಸಾಮೂಹಿಕ ಸಾವುಗಳು ಸಂಭವಿಸಲಿವೆ. ಸತ್ತವರು ಮಾತನಾಡುತ್ತಾರೆ ಎಂದು ಈ ಹಿಂದೆ ವಿವಿಧ ಸಂದರ್ಭಗಳಲ್ಲಿ ಕೋಡಿಮಠದ ಸ್ವಾಮಿಗಳು ಭವಿಷ್ಯ ನುಡಿದಿದ್ದರು.

  ಇದನ್ನೂ ಓದಿ: ನೆಲಮಂಗಲದಲ್ಲಿ ಕಸಕ್ಕೆ ಬಿದ್ದ ದೇವರು; ಅನಧಿಕೃತ ದೇವಾಲಯ ತೆರವು ಕಾರ್ಯಾಚರಣೆ ಸ್ಥಗಿತ

  ಜಗತ್ತಿನ ಭೂಪಟದಿಂದ ಒಂದು ದೇಶ ಅಳಿಸಿಹೋಗುತ್ತದೆ ಎಂದು ಅವರು ಹೇಳಿದ್ದು ತಾಲಿಬಾನ್ ವಿಚಾರಕ್ಕೆ ಅಂತೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡು ಇಡೀ ವಿಶ್ವಕ್ಕೆ ತಲೆನೋವಾಗಿದ್ದಾರೆ ಎಂದು ಶ್ರೀಗಳು ವಿಶ್ಲೇಷಿಸಿದ್ಧಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿವೆ. ನಾಲ್ಕೈದು ವರ್ಷದೊಳಗೆ ಕೊರೋನಾದಿಂದ ಜಗತ್ತು ಮುಕ್ತವಾಗುತ್ತದೆ ಎಂದೂ ಅವರು ಭವಿಷ್ಯ ಹೇಳಿದ್ದಾರೆ.

  ಪೂಜ್ಯ ಸ್ವಾಮಿಗಳನ್ನ ಅಗೌರವವಾಗಿ ನಡೆಸಿಕೊಂಡ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡರು ಎಂದ ಕೋಡಿ ಶ್ರೀಗಳು, ಸ್ವಾಮೀಜಿಗಳು ಬೀದಿಗೆ ಬಂದು ಹೋರಾಟ ಮಾಡಬೇಕಾದ ಪ್ರಮೇಯ ಬಂದಿದ್ದು ದೌರ್ಭಾಗ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)
  Published by:Vijayasarthy SN
  First published: