ಕೊಡಗು; ಜಿಲ್ಲೆಯಲ್ಲಿ ಮಳೆ ಆರಂಭವಾಯಿತೆಂದರೆ ಮುಗಿಯಿತು ಮೂರು ತಿಂಗಳು ಎಡಬಿಡದೆ ಸುರಿಯುತ್ತೆ. ಈ ವೇಳೆ ಎಷ್ಟೋ ಗ್ರಾಮೀಣ ಪ್ರದೇಶಗಳ ಜನರು ಪಡಬಾರದ ಕಷ್ಟ ಪಡುತ್ತಾರೆ. ಅದರಲ್ಲೂ ಕಳೆದ ವರ್ಷ ಎದುರಾದ ಪ್ರವಾಹ ನೂರಾರು ಹಳ್ಳಿಗಳ ಸಂಪರ್ಕವನ್ನೇ ಸ್ಥಬ್ಧವಾಗಿಸಿತ್ತು. ಇನ್ನು ಈ ಬಾರಿಯೂ ಅದೇ ರೀತಿ ವರುಣನ ಆರ್ಭಟ ಮಿತಿಮೀರಿದರೆ ಮತ್ತೆ ಎಷ್ಟೋ ಹಳ್ಳಿಗಳಿಗೆ ಹಲವು ದಿನಗಳ ಸಂಪರ್ಕ ಕಡಿತವಾಗಲಿದೆ ಎನ್ನಲಾಗುತ್ತಿದೆ.
ಇದು ಕೊಡಗಿನ ಪ್ರಸಿದ್ಧ ಯಾತ್ರಾ ಕೇಂದ್ರ ಭಾಗಮಂಡಲ. ಇಲ್ಲಿಂದ ಕೊಡಗಿನ ಕುಲದೇವತೆ ಮೂಲಸ್ಥಾನ ತಲಕಾವೇರಿಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತೆ. ಅಷ್ಟೇ ಯಾಕೆ ಇಲ್ಲಿಂದ ವಿರಾಜಪೇಟೆ, ಚೇರಂಗಾಲ, ಕೋರಂಗಾಲ ಮತ್ತು ನಾಪೋಕ್ಲು ಸೇರಿದಂತೆ ಹಲವು ಪಟ್ಟಣ ಮತ್ತು ಹಳ್ಳಿಗಳಿಗೆ ಸಂಪರ್ಕ ಸೇತುವೆಯೇ ಸರಿ. ವಿಪರ್ಯಾಸವೆಂದರೆ ಪ್ರತೀ ಬಾರಿ ಮಳೆ ಸುರಿದು ತ್ರಿವೇಣಿ ಸಂಗಮ ಭರ್ತಿ ಆಯಿತೆಂದರೆ ಹತ್ತಾರು ಹಳ್ಳಿಗಳು ಸಂಪರ್ಕ ಕಳೆದುಕೊಂಡು ಬಿಡುತ್ತವೆ.
ಇದು ಒಂದೆಡೆರಡು ವರ್ಷಗಳ ಸಮಸ್ಯೆ ಅಲ್ಲ. ಇದನ್ನು ಮನಗಂಡೇ ಕಾಂಗ್ರೆಸ್ ನೇತೃತ್ವದ ಸರ್ಕಾರ ಮೂರು ವರ್ಷಗಳ ಹಿಂದೆಯೇ 30 ಕೋಟಿ ವೆಚ್ಚದಲ್ಲಿ ಈ ತ್ರಿವೇಣಿ ಸಂಗಮಕ್ಕೆ ಮೇಲ್ಸೇತುವೆ ನಿರ್ಮಿಸುವುದಕ್ಕೆ ಅನುದಾನ ಬಿಡುಗಡೆ ಮಾಡಿತ್ತು. ಹಾಗೆ ವರ್ಷದ ಹಿಂದೆಯೇ ಕಾಮಗಾರಿಯೂ ಆರಂಭವಾಗಿತ್ತು. ಆದರೆ,ಕಾಮಗಾರಿ ಆರಂಭವಾಗಿ ವರ್ಷವೇ ಕಳೆದರೂ ಇಂದಿಗೂ ಸೇತುವೆ ಮಾತ್ರ ಆಗಿಲ್ಲ.
ಕೇವಲ ಪಿಲ್ಲರ್ ಗಳನ್ನು ಮಾಡಿದ್ದು ಬಿಟ್ಟರೆ ಇದುವರೆಗೆ ಮತ್ಯಾವುದೇ ಕಾಮಗಾರಿ ಆಗಿಲ್ಲ. ಹೀಗೆ ಇಂದೆ ಉಳಿಯೋದಕ್ಕೆ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳ ನಿರಾಕ್ತಿಯೇ ಕಾರಣ. ಒಂದೊಂದೆ ಇಂತಹ ಹಲವು ಕಾಮಗಾರಿಗಳು ಹೀಗೆ ಅರ್ಧಕ್ಕೆ ಉಳಿದಿವೆ ಎನ್ನೋದು ಸ್ಥಳೀಯರ ಆರೋಪ.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಕೊಡಗಿನ ಉಸ್ತುವಾರಿಯಾಗಿದ್ದ ಕೆ.ಜೆ. ಜಾರ್ಜ್ ಮೇಲ್ಸೇತುವೆ ಕಾಮಗಾರಿಗಾಗಿ 30 ಕೋಟಿ ಅನುದಾನ ಕೊಡಿಸಿದ್ದರು. ಎರಡು ವರ್ಷಗಳಾದರೂ ಕಾಮಗಾರಿ ಆರಂಭವಾಗದೆ ಇದೀಗ ಮತ್ತೆ 8 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಆಗೋ ಈಗೋ ಕುಂಟುತ್ತಾ ಸಾಗಿದ್ದ ಕಾಮಗಾರಿ ಕೊನೆಗೂ ಜೂನ್ ತಿಂಗಳ ಒಳಗಾದರೂ ಮುಗಿದು ಜನರ ಬಳಕೆ ಮೇಲ್ಸೇತುವೆ ಸಿಗುತ್ತೇ ಎನ್ನೋ ಆಶಯವಿತ್ತು.
ಆದರೆ, ಲಾಕ್ ಡೌನ್ ಆಗಿದ್ದರಿಂದ ಕೆಲಸ ಮಾಡುತ್ತಿದ್ದ ಅಸ್ಸಾಂ ಕಾರ್ಮಿಕರೆಲ್ಲರೂ ಇಲ್ಲಿಂದ ತೆರಳಿದ್ದಾರೆ. ಇದೀಗ ಕಾಮಗಾರಿಗಾರಿ ಸಂಪೂರ್ಣ ಸ್ಥಗಿತವಾಗಿದೆ. ಇದರಿಂದಾಗಿ ಈ ಬಾರಿಯೂ ಬಾಗಮಂಡಲದ ಸುತ್ತಮುತ್ತಲಿನ ಹಳ್ಳಿಗಳಿಗೆ ಸಂಪರ್ಕ ಕಡಿತವಾಗೋದು ಖಚಿತ ಎಂಬಂತಾಗಿದೆ.
ಇದನ್ನೂ ಓದಿ : ಹಿಜ್ಬುಲ್-ಮುಜಾಹಿದ್ದೀನ್ ಉಗ್ರರಿಗೆ ಸಹಕರಿಸಿ ಅಮಾನತಾಗಿದ್ದ ಕಾಶ್ಮೀರದ ಡಿಎಸ್ಪಿ ದೇವಿಂದರ್ ಸಿಂಗ್ಗೆ ಜಾಮೀನು
ಒಟ್ಟಿನಲ್ಲಿ ಮಳೆಗಾಲ ಬಂತೆಂದರೆ ಹಲವು ವರ್ಷಗಳಿಂದ ಸಂಪರ್ಕ ಕಡಿತಗೊಳ್ಳುತ್ತಿದ್ದ ಬಾಗಮಂಡಲದ ಸುತ್ತಮುತ್ತಲಿನ ಗ್ರಾಮಗಳು, ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಈ ಬಾರಿಯೂ ಮತ್ತೆ ಸಂಕಷ್ಟ ಎದುರಿಸಲು ಸಿದ್ಧವಾಗಬೇಕಾಗಿರೋದಂತು ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ